ಕಳೆದ ಇಪ್ಪತ್ತು ವರ್ಷಗಳಿಂದ ಇವರಿಗೆ ರೇಷನ್ ಕಾರ್ಡ್ ಇಲ್ಲ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಇವರಿಗೆ ಶಾಲೆಯ ಬಿಸಿಯೂಟ ಹಸಿವು ನೀಗಿಸುತ್ತದೆ. ಹೌದು, ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಚನ್ನಳ್ಳಿ ಗ್ರಾಮದ ವೃದ್ಧರಾದ ಬಾಗಮ್ಮ (70) ಹಾಗೂ ಗುಡದಮ್ಮ (60) ಅವರ ಬದುಕು ದುಸ್ತರವಾಗಿದೆ.
ಬಾಗಮ್ಮ ಹಾಗೂ ಗುಡದಮ್ಮ ಇಬ್ಬರು ವಿಧವೆಯರು, ನೋಡಿಕೊಳ್ಳಲು ಮಕ್ಕಳಿಲ್ಲ. ಕೂಲಿ ನಾಲಿ ಮಾಡಿ ಬದುಕು ಸಾಗಿಸಲು ಮೈಯಲ್ಲಿ ಶಕ್ತಿಯಿಲ್ಲ. ಹೀಗಾಗಿ ಎಲ್ಲ ಸೌಕರ್ಯಗಳಿಂದ ವಂಚಿತರಾಗಿ ದಿನ ದೂಡುತ್ತಿದ್ದಾರೆ.
“ಪಡಿತರ ಚೀಟಿಗಾಗಿ ಅನೇಕ ಬಾರಿ ಅರ್ಜಿ ಹಾಕಿದ್ದೇವೆ, ಅಧಿಕಾರಿಗಳ ಬಾಗಿಲು ತಟ್ಟಿದ್ದೇವೆ. ಭರವಸೆಯ ಮಾತು ಹೇಳಿದರೆ, ಹೊರತು ಪರಿಹಾರ ಸಿಕ್ಕಿಲ್ಲ. ರೇಷನ್ ಕಾರ್ಡ್ ಇಲ್ಲದಿರುವುದರಿಂದ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಇತರೆ ಸೌಲಭ್ಯಗಳು ಸಿಗುತ್ತಿಲ್ಲ” ಎಂದು ನೋವು ತೋಡಿಕೊಂಡರು.

ನಮ್ಮ ಗ್ರಾಮದ ಬಾಗಮ್ಮ, ಗುಡದಮ್ಮ ಅವರಂತೆ ಇನ್ನೂ ಅನೇಕ ಬಡ ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ. ಪಡಿತರ ಕಾರ್ಡ್ ಗಾಗಿ ಅಲೆದಾಡಿ ಸಾಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡವರಿಗೆ ಸರ್ಕಾರಿ ಸೌಲಭ್ಯ ದಕ್ಕುತ್ತಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರೇಷನ್ ಕಾರ್ಡ್ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾದ ಬಡಕುಟುಂಬದ ವೃದ್ಧರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಸರ್ಕಾರವು ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಹಿರಿಯರು ಕಾಗದ ಪತ್ರಗಳ ಗೊಂದಲದಲ್ಲಿ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಂಡು ಯೋಜನೆ ಮುಟ್ಟಿಸಬೇಕುʼ ಎಂದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ದಲಿತ ಹೋರಾಟಗಾರ, ‘ಬುದ್ಧಘೋಷ’ ದೇವೇಂದ್ರ ಹೆಗ್ಗಡೆ ನಿಧನ: ಒಡನಾಡಿಗಳ ಕಂಬನಿ
ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿರೂಪಮಾ ಮಾತನಾಡಿ, ʼವೃದ್ಧರು ಶಾಲೆಯ ಬಿಸಿಯೂಟದ ಮೇಲೆ ಬದುಕು ಸಾಗಿಸುತ್ತಿರುವುದು ತುಂಬಾ ದುಃಖಕರ ಸಂಗತಿ. ಹಲವಾರು ಬಾರಿ ಅರ್ಜಿ ಹಾಕಿದರೂ ಕಾರ್ಡ್ ದೊರೆಯದೇ ಇರುವುದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ. ಕೂಡಲೇ ವೃದ್ಧರಿಗೆ ಸೌಲಭ್ಯ ಕಲ್ಪಿಸಬೇಕುʼ ಎಂದು ಆಗ್ರಹಿಸಿದರು.
