ಕಳೆದೊಂದು ವರ್ಷದಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ. ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದ್ದು, ಕುಕಿ ಸಮುದಾಯದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಘರ್ಷಣೆ ಪೀಡಿತ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯೊಳಗೆ ಆಂತರಿಕ ಸಂಘರ್ಷ, ಬಂಡಾಯ ಭುಗಿಲೆದ್ದಿದೆ. ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಪದಚ್ಯುತಿಗೊಳಿಸಬೇಕೆಂದು 19 ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.
ಬಂಡಾಯ ಎದ್ದಿರುವ 19 ಶಾಸಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದ ಕೆಲವು ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರ ಒಂದು ಪುಟದಲ್ಲಿ ವಿಧಾನಸಭಾ ಸ್ಪೀಕರ್ ಸತ್ಯಬ್ರತ ಸಿಂಗ್, ಹಿರಿಯ ಸಚಿವ ಬಿಶ್ವಜಿತ್ ಸಿಂಗ್ ಹಾಗೂ ವೈ ಖೇಮಚಂದ್ ಸಿಂಗ್ ಅವರ ಸಹಿ ಇದೆ.
ಅಗತ್ಯ ವಸ್ತುಗಳ ಕೊರತೆ, ಬೆಲೆ ಏರಿಕೆ, ತೆರಿಗೆ ಸಂಗ್ರಹದಲ್ಲಿನ ಅಡಚಣೆ ಹಾಗೂ ಮಣಿಪುರ ಹಿಂಸಾಚಾರದ ಬಗ್ಗೆ ಬಂಡಾಯ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಸೇರಿದಂತೆ ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಶಾಸಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
“ಮಣಿಪುರದಲ್ಲಿ ಶಾಂತಿ ಮತ್ತು ಸಹಜತೆಯನ್ನು ಯಾಕೆ ಪುನಃಸ್ಥಾಪಿಸಲು ಸಾಧ್ಯವಾಗಿಲ್ಲ. ಜನರ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲವೆಂದು ರಾಜ್ಯದ ಜನರು ಪ್ರಶ್ನಿಸುತ್ತಿದ್ದಾರೆ. ಸಮಸ್ಯೆಗಳಿಗೆ ಶೀಘ್ರ ಪರಿಹಾಋ ನೀಡದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ” ಎಂದು ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ.
“ಮಣಿಪುರವನ್ನು ಉಳಿಸಲು ಮಧ್ಯಸ್ಥಗಾರರೊಂದಿಗೆ ಶಾಂತಿ ಸಂವಾದ ನಡೆಸಬೇಕು. ಅದಕ್ಕಾಗಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.