ಕೆಲ ತಿಂಗಳ ಹಿಂದೆಯಷ್ಟೇ ತಂದೆ ಕಳೆದುಕೊಂಡ ಸಹಪಾಠಿಯೋರ್ವಳಿಗೆ ಆಕೆಯ ಸ್ನೇಹಿತರ ಬಳಗ ಯಾರಲ್ಲೂ ಕೈಚಾಚದೆಯೇ ಸುಮಾರು 8 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟು, ಮಾದರಿಯಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ.
ತಿರುವನಂತಪುರಂ ಜಿಲ್ಲೆಯ ನೆಡುಮಂಗಾಡ್ ಸಮೀಪದ ವಿಥುರಾ ಸರ್ಕಾರಿ ವಿಎಚ್‌ಎಸ್‌ಎಸ್ ಶಾಲೆಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಈ ಸುದ್ದಿಯ ಹೀರೋಗಳು. ಕೇವಲ ನೂರು ದಿನದಲ್ಲಿ ಯಾರಲ್ಲೂ ಕೈಚಾಚದೆಯೇ ಇದನ್ನು ನಿರ್ಮಿಸಿದ್ದಲ್ಲದೇ, ಮಕ್ಕಳ ದಿನಾಚರಣೆಯ ದಿನವೇ ಮನೆಯ ಕೀಯನ್ನು ಸಹಪಾಠಿ ಅನಸ್ಯ ಅಜಯನ್ ಅವರಿಗೆ ಹಸ್ತಾಂತರಿಸಿ, ಸುದ್ದಿಯಾಗಿದ್ದಾರೆ.
ವಿದ್ಯಾರ್ಥಿಗಳು ಮಾಡಿದ್ದಾದರೂ ಏನು?
ಇದೊಂಥರಾ ಎಲ್ಲರಿಗೂ ಮಾದರಿಯಾಗುವ ಕೆಲಸ ಎಂದರೆ ಅತಿಶಯೋಕ್ತಿ ಎನಿಸದು. ವಿಥುರಾ ಸರ್ಕಾರಿ ವಿಎಚ್‌ಎಸ್‌ಎಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಅನಸ್ಯ ಅಜಯನ್ ಎಂಬಾಕೆಯ ತಂದೆ, ದಿನಗೂಲಿ ನೌಕರರಾಗಿದ್ದರು. ಕಳೆದ ಜುಲೈನಲ್ಲಿ ಅನಾರೋಗ್ಯಕ್ಕೀಡಾಗಿ, ಮರಣ ಹೊಂದಿದ್ದರು.
ಈ ವಿಷಯ ಅರಿತ ಅನಸ್ಯ ಅಜಯನ್ ಸ್ನೇಹಿತರು ಮನೆಗೆ ಭೇಟಿ ನೀಡಿದ್ದರು. ಮರಣ ನೋಡಲು ಹೋದವರಿಗೆ ಕಂಡದ್ದು ತಮ್ಮ ಸಹಪಾಠಿಯ ಮನೆಯ ಶೋಚನೀಯ ಅವಸ್ಥೆ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ, ಕೇವಲ ಟಾರ್ಪಾಲು ಹೊದಿಸಿದ್ದ ಹಾಗೂ ಸರಿಯಾಗಿ ಯಾವುದೇ ಕಿಟಕಿಯೂ ಇಲ್ಲದ, ಮನೆ ಅಂತ ಕರೆಯಲೂ ಆಗದ ಒಂದು ವಾಸಸ್ಥಾನವಾಗಿತ್ತು ಅಷ್ಟೇ. ಈ ಮನೆಯಲ್ಲಿ ತನ್ನ ಹೆತ್ತವರ ಸಹಿತ ಅಕ್ಕ ಹಾಗೂ ಅಜ್ಜ-ಅಜ್ಜಿಯೊಂದಿಗೆ ಅನಸ್ಯ ವಾಸಿಸುತ್ತಿದ್ದಳು. ತಮ್ಮ ಸಹಪಾಠಿಯ ಸ್ಥಿತಿಯನ್ನು ಕಂಡು ಮರಣ ನೋಡಲು ಬಂದಿದ್ದ ವಿದ್ಯಾರ್ಥಿಗಳು ಮರುಗಿದರು.
ಈ ಹಿನ್ನೆಲೆಯಲ್ಲಿ ಜೊತೆಗೂಡಿ ತೀರ್ಮಾನ ತೆಗೆದುಕೊಂಡ ಎನ್‌ಎಸ್‌ಎಸ್(ರಾಷ್ಟ್ರೀಯ ಸೇವಾ ಯೋಜನೆ)ಯ ವಿದ್ಯಾರ್ಥಿಗಳು, ಹೇಗಾದರೂ ಮಾಡಿ ತಮ್ಮ ಸಹಪಾಠಿಗೆ ಒಂದು ಸುಸಜ್ಜಿತ ಮನೆಯೊಂದನ್ನು ನಿರ್ಮಿಸುವ ಬಹುದೊಡ್ಡ ತೀರ್ಮಾನವನ್ನು ಕೈಗೊಂಡರು. ಬಳಿಕ ಅದನ್ನು ತಮ್ಮ ಶಾಲೆಯ ಪ್ರಾಂಶುಪಾಲೆ ಮಂಜೂಷಾ ಎ ಆರ್ ಅವರಿಗೆ ತಿಳಿಸಿದ್ದಾರೆ. ಅವರು ಮಕ್ಕಳ ಉತ್ಸಾಹಕ್ಕೆ ತಣ್ಣೀರು ಎರಚದೆ, ಬೆಂಬಲವಾಗಿ ನಿಂತರು.
ಈ ವೇಳೆ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯವರು, ‘ಯಾರಲ್ಲೂ ಕೈ ಚಾಚದೆಯೇ ಇದನ್ನು ನಿರ್ಮಿಸೋಣ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಹೀಗಾಗಿ, ನೂರು ದಿನಗಳ ಒಳಗೆ ಮನೆ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು, ಆಹಾರ ಮೇಳ(ಫುಡ್ ಫೆಸ್ಟಿವಲ್), ರಕ್ತದಾನ ಶಿಬಿರ ಸೇರಿದಂತೆ ರಜಾದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ಅದರಲ್ಲಿ ಬಂದ ಲಾಭವನ್ನು ಒಟ್ಟುಗೂಡಿಸಿದ್ದಾರೆ. ಅಲ್ಲದೇ, ‘ಹಸಿವು ಮುಕ್ತ ವಿಥುರ’ ಯೋಜನೆಯ ಭಾಗವಾಗಿ, ಎನ್‌ಎಸ್‌ಎಸ್ ಸ್ವಯಂಸೇವಕರು ಅಗತ್ಯವಿರುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದರು. ಪಂಚಾಯತ್‌ನ 25 ಆಯ್ದ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮತ್ತು ನಿರ್ವಹಿಸುವುದನ್ನು ಕೂಡ ಮಾಡಿದ್ದರು.

ಹೀಗೆ ಆರ್ಥಿಕ ಲಾಭ ಬರುವ ನಾನಾ ಹೊಸ ಹೊಸ ವ್ಯವಹಾರಗಳನ್ನು ಬೇರೆ ಬೇರೆ ಕಡೆ ನಡೆಸುವ ಮೂಲಕ ಸುಮಾರು 8 ಲಕ್ಷ ಹಣವನ್ನು ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಈ ಉತ್ಸಾಹಕ್ಕೆ ಶಿಕ್ಷಕರು, ಸ್ಥಳೀಯರು ಕೂಡ ಕೈಜೋಡಿಸಿ ಆ ಮೂಲಕ ಕೇವಲ ನೂರು ದಿನಗಳಲ್ಲಿ ವಿದ್ಯಾರ್ಥಿಗಳಲ್ಲೇ, ಹಿಂದೆ ಇದ್ದ ಮನೆಯ ಐದು ಸೆಂಟ್ಸ್ ಜಾಗದಲ್ಲೇ 8 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಕ್ಕಳ ದಿನಾಚರಣೆಯ ದಿನದಂದೇ ಮನೆ ಹಸ್ತಾಂತರಿಸಿದ ಶಾಸಕ
ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ಆಯೋಜಿಸಿದ ವಿಥುರಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಅರಿವುಕ್ಕರ ವಿಧಾನಸಭಾ ಕ್ಷೇತ್ರದ ಶಾಸಕ ಅಡ್ವೊಕೇಟ್ ಜಿ ಸ್ಟೀಫನ್ ಅವರ ಮೂಲಕ ಫಲಾನುಭವಿ ವಿದ್ಯಾರ್ಥಿನಿ ಅನಸ್ಯ ಅಜಯನ್ ಅವರ ಕುಟುಂಬಕ್ಕೆ ಮನೆಯ ಕೀ ಹಸ್ತಾಂತರಿಸಿದರು.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸಿಪಿಐಎಂ ಶಾಸಕ ಸ್ಟೀಫನ್, ‘ಈ ವರ್ಷದ ಮಕ್ಕಳ ದಿನಾಚರಣೆ ಬಹಳ ವಿಶೇಷವಾಗಿತ್ತು. ವಿಥುರಾ ಶಾಲೆಯ ವಿದ್ಯಾರ್ಥಿನಿ ಅನಸ್ಯ ಅಜಯನ್ ಅವರ ಬದುಕಿನಲ್ಲಿ ಕಾಳಜಿ, ವಾತ್ಸಲ್ಯದ ಧಾರೆ ಆವರಿಸಿದ ದಿನ. ಸ್ನೇಹಿತರು ಮತ್ತು ಶಿಕ್ಷಕರ ನೆರವಿನಿಂದ ಕೇವಲ 100 ದಿನಗಳ ಒಳಗೆ ಅವರಿಗೊಂದು ಸುಭದ್ರ ಮನೆಯೊಂದು ದೊರಕಿದೆ. ಅದನ್ನು ನನ್ನ ಕೈಯ್ಯಲ್ಲಿ ಹಸ್ತಾಂತರಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ತುಂಬಾ ಪ್ರೀತಿಯ ಕ್ಷಣಗಳಾಗಿತ್ತು ಅದು’ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲೆ ಮಂಜೂಷಾ ಎ ಆರ್, ‘ವಿದ್ಯಾರ್ಥಿಗಳು ತಮ್ಮ ಸಹಪಾಠಿಗಾಗಿ ಈ ಯೋಜನೆ ಹಾಕಿರುವ ಬಗ್ಗೆ ತಿಳಿಸಿದಾಗ ನಾವೂ ಕೂಡ ಪ್ರೋತ್ಸಾಹ ನೀಡಿದೆವು. ಅಸಾಧ್ಯ ಎನ್ನುವ ಮಾತನ್ನು ಬದಿಗಿಟ್ಟು ಸಾಧಿಸಿದ್ದಾರೆ. ಅವರ ಶಿಕ್ಷಕರು ನಾವು ಎನ್ನುವುದಕ್ಕೆ ಖುಷಿ ಇದೆ’ ಎಂದು ತಿಳಿಸಿದ್ದಾರೆ.
‘ನಮ್ಮ ಸಹಪಾಠಿಗೆ ‘ಸ್ನೇಹ ವೀಡು(ಪ್ರೀತಿಯ ಮನೆ) ನಿರ್ಮಿಸುವ ಯೋಜನೆ ಹಾಕಿಕೊಂಡಾಗ ಬಂದ ಮೊದಲ ಸವಾಲು ಹಣದ ಬಗ್ಗೆ. ಯಾರಲ್ಲೂ ಕೈ ಚಾಚದೆಯೇ ಈ ಮನೆಯನ್ನು ನಿರ್ಮಿಸೋಣ ಎಂದು ಮಾರ್ಗದರ್ಶಕರು ನಮಗೆ ತಿಳಿಸಿದ್ದರು. ಹಾಗಾಗಿ, ಶಾಲಾ ವಿದ್ಯಾರ್ಥಿಗಳು ನಾನಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹಣ ಸಂಗ್ರಹಿಸಿ, 100 ದಿನದಲ್ಲಿ ನಮ್ಮ ಯೋಜನೆಯನ್ನು ಪೂರ್ತಿ ಮಾಡಿದ್ದೇವೆ’ ಎಂದು ಎನ್‌ಎಸ್‌ಎಸ್ ವಿದ್ಯಾರ್ಥಿಯೋರ್ವಳು ‘ಮೀಡಿಯಾ ವನ್’ ಚಾನೆಲ್‌ನೊಂದಿಗೆ ಮಾತನಾಡುತ್ತಾ ತಿಳಿಸಿದ್ದಾಳೆ.
ತಂದೆಯನ್ನು ಕಳೆದುಕೊಂಡ ತಮ್ಮ ಸಹಪಾಠಿ ಅನಸ್ಯ ಅಜಯನ್ ಅವರ ಕಷ್ಟಕ್ಕೆ ಮರುಗಿದ್ದು ಮಾತ್ರವಲ್ಲದೇ, ಆಕೆಯ ಜೊತೆಗೆ ಬೆಂಗಾವಲಾಗಿ ನಿಂತು ಆಕೆಯ ಕುಟುಂಬಕ್ಕೊಂದು ಮನೆ ನಿರ್ಮಿಸುವ ಮೂಲಕ ಮಾದರಿಯಾದ ತಿರುವನಂತಪುರಂ ಜಿಲ್ಲೆಯ ವಿಧುರಾ ಸರ್ಕಾರಿ ವಿಎಚ್‌ಎಸ್‌ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ‘ಭೇಷ್’ ಅನ್ನುತ್ತಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.