ಜಿ20 ಶೃಂಗಸಭೆಯ ಮೂಲಕ ಜಗತ್ತಿನೆದುರು ಭಾರತದ ಭವ್ಯ ಪರಂಪರೆ, ಆಹಾರ ಸಂಸ್ಕೃತಿ ಇತ್ಯಾದಿಗಳನ್ನು ಸಾರಲು ಮುಂದಾಗಿರುವ ಕೇಂದ್ರ ಸರ್ಕಾರ, ದೆಹಲಿಯ ಬಡವರನ್ನು ಮತ್ತು ಬಡವರು ವಾಸಿಸುವ ಪ್ರದೇಶಗಳನ್ನು ವಿದೇಶಿ ಗಣ್ಯರಿಂದ ಮರೆಮಾಚುತ್ತಿದೆ. ಶೃಂಗಸಭೆ ದೆಹಲಿಯ ಬಡವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ದೆಹಲಿಯ ಸ್ಲಮ್‌ಗಳನ್ನು ವಿದೇಶಿ ಗಣ್ಯರು ನೋಡಬಾರದು ಎಂದು ರಸ್ತೆಗಳ ಪಕ್ಕದಲ್ಲಿ ದೊಡ್ಡ ಪರದೆಗಳನ್ನು, ಪ್ಲಾಸ್ಟಿಕ್ ಶೀಟ್‌ಗಳನ್ನು ಅಳವಡಿಸಿ, ಸ್ಲಮ್‌ಗಳನ್ನು ಅಕ್ಷರಶಃ ಮುಚ್ಚಲಾಗಿದೆ. ಇದರಿಂದ ಕೊಳಚೆ ಪ್ರದೇಶಗಳ ನಿವಾಸಿಗಳ ಘನತೆಗೆ ಕುಂದುಂಟಾಗಿದ್ದು, ಅಲ್ಲಿನ ಜನ ಮಾಧ್ಯಮಗಳ ಮುಂದೆ ಬೇಸರ ಹೊರಹಾಕಿದ್ದಾರೆ.

ಡಿಜಿಟಲ್ ಮಾಧ್ಯಮ Brut ಜೊತೆಗೆ ಮಾತನಾಡಿರುವ ಕೊಳೆಗೇರಿಯ ನಿವಾಸಿ ರಾಣಿ ಎಂಬುವವರು, ನಮ್ಮನ್ನು ಸರ್ಕಾರದವರು ಕೀಟಗಳೆಂದು ತಿಳಿದುಕೊಂಡಿದ್ದಾರಾ? ನಾವು ಕೂಡ ಮನುಷ್ಯರೇ ಎಂಬುದನ್ನು ಮರೆತಿದ್ದಾರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
‘ನಾವು ವಾಸಿಸುತ್ತಿರುವ ಸ್ಥಳ ಮೊದಲೇ ಕೊಳೆಗೇರಿ. ಇಲ್ಲಿಯ ಚರಂಡಿಗಳಲ್ಲಿ ಉಂಟಾಗುತ್ತಿರುವ ಕೀಟಾಣುಗಳಿಂದ ಉಸಿರು ಬಿಡಲಾಗುತ್ತಿಲ್ಲ. ಹಸಿರು ಪರದೆ ಹಾಕಿರುವುದರಿಂದ ಗಾಳಿ ಕೂಡ ಬರುತ್ತಿಲ್ಲ. ಉಸಿರುಗಟ್ಟುವ ವಾತಾವರಣವನ್ನು ನಿರ್ಮಿಸಲಾಗಿದೆ. ನಾವು ಮುಂಚೆಯೇ ಬಡವರು, ನೀವು ಏನೂ ಸೌಕರ್ಯ ನಮಗೆ ನೀಡದೇ ಇದ್ದರೂ ಉಸಿರಾಡುವ ಸ್ವಾತಂತ್ರ್ಯವಾದರೂ ನೀಡಿ’ ಎಂದು ಸೋನಿಯಾ ಎನ್ನುವವರು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ವಿಶ್ವದ ನಾಯಕರು ನಮ್ಮನ್ನು ನೋಡಬಾರದೆಂದು ಸರ್ಕಾರದವರು ಹಸಿರು ಹೊದಿಕೆ ಹಾಕಿದ್ದಾರೆ. ನಿಮಗೆ ಅಷ್ಟೊಂದು ಭಯವಿದ್ದರೆ ನಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿದರೆ ಇದರ ಭಯವೇನಿತ್ತು” ಎಂದು ಕೊಳೆಗೇರಿಯ ವ್ಯಕ್ತಿಯೋರ್ವ ಪ್ರಶ್ನಿಸಿದ್ದಾನೆ.
ಕಾಂತಿ ಎಂಬಾಕೆ ಹಸಿರು ಪರದೆಯ ಬಗ್ಗೆ ಮಾತನಾಡಿದ್ದು, “ತಮ್ಮ ವೈಫಲ್ಯಗಳನ್ನು ಜಗತ್ತಿನ ನಾಯಕರು ನೋಡದಿರಲಿ ಎಂದು ಜನಪ್ರತಿನಿಧಿಗಳು ಹಸಿರು ಪರದೆ ಹಾಕಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಜಿ-20 ಶೃಂಗಸಭೆ ಅವರ ಘನತೆಯ ಮೇಲಷ್ಟೇ ಅಲ್ಲ, ಅವರ ದಿನದ ದುಡಿಮೆ, ಬದುಕುಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ದಕ್ಷಿಣ ದೆಹಲಿಯ ಕೂಲಿ ಕ್ಯಾಂಪ್, ಜನತಾ ಕ್ಯಾಂಪ್, ಹಾಫಿಜ್ ನಗರ ಮುಂತಾದೆಡೆ ಬಡವರು ಜಿ-20 ಶೃಂಗಸಭೆಯ ಅಡ್ಡಪರಿಣಾಮಗಳನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ. ಪೊಲೀಸರು ತಮ್ಮನ್ನು ನಾಗರಿಕರಂತೆ ನೋಡದೇ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರದ ರಾಜಧಾನಿಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, ಕಚೇರಿ, ಶಾಲಾ ಕಾಲೇಜು, ಹೋಟೆಲ್ ಮತ್ತಿತರ ಉದ್ಯಮಗಳನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ರಕ್ಷಣೆಯ ಕಾರಣಕ್ಕಾಗಿ ವಿಪರೀತ ಬಂದೋಬಸ್ತ್ ಮಾಡಲಾಗಿದ್ದು, ರಸ್ತೆಗಳಲ್ಲಿ ಜನ ಸಂಚಾರವೇ ಕಷ್ಟವಾಗಿದೆ. ಇದರಿಂದ ದೆಹಲಿಯ ಜನಜೀವನ ತತ್ತರಿಸಿದೆ. ಸರ್ಕಾರವು ಇದು ಲಾಕ್‌ಡೌನ್ ಅಲ್ಲ ಎಂದು ಹೇಳಿದ್ದರೂ, ಅದಕ್ಕಿಂತ ದುರ್ಭರವಾದ ವಾತಾವರಣ ಸೃಷ್ಟಿಯಾಗಿದೆ.