ಸ್ವತಂತ್ರ ಭಾರತದ ಇತಿಹಾಸದಲ್ಲಿ 1950 ಜನವರಿ 26 ಭಾರತೀಯರಾದ ನಾವೆಲ್ಲರೂ ಅತ್ಯಂತ ಹೆಮ್ಮೆ ಪಡುವಂತಹ ದಿನ. ಭಾರತ ಸರ್ವತಂತ್ರ ಸ್ವತಂತ್ರ್ಯವಾದ ದಿನ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲಾಡಳಿತದಿಂದ ನಗರದ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಭಾರತೀಯರ ಸ್ವತಂತ್ರದ ಕನಸನ್ನು ನನಸಾಗಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಭಾರತೀಯರೆಲ್ಲರಿಗೂ ಸರ್ವಸಮ್ಮತವಾಗುವಂತೆ ರೂಪಿಸಿ, ಸಂವಿಧಾನದ ರೂಪದಲ್ಲಿ ಜಾರಿಗೊಳಿಸಿದ ದಿನವಾಗಿದೆ. ಉತ್ತಮ ಆದರ್ಶಗಳು, ಮೌಲ್ಯಗಳನ್ನು ಹೊಂದಿರುವ ಒಂದು ಬೃಹತ್ ಸಂವಿಧಾನವನ್ನು ಅಂಗೀಕರಿಸಿ ಸ್ವಾತಂತ್ರ್ಯ ದೇಶವಾಗಿ ಭಾರತವು ರೂಪುಗೊಂಡಿದೆ” ಎಂದು ತಿಳಿಸಿದರು.
“ಮಹಾನ್ ಆಶಯವನ್ನು ಹೊಂದಿರುವ ಬೃಹತ್ ಸಂವಿಧಾನವನ್ನು ರೂಪಿಸಿಕೊಟ್ಟ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಕಾರ್ಯ ಚಿರಸ್ಮರಣೀಯ. ಜಾತಿ ಪದ್ಧತಿ, ಆರ್ಥಿಕ ಅಸಮಾನತೆ, ಭಾಷಾ ವೈವಿಧ್ಯತೆ, ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರಗಳು, ಗಡಿ ಸಮಸ್ಯೆ, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕಠಿಣ ಸವಾಲುಗಳಾಗಿದ್ದವು. ಇಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಭಾರತದ ಸಂವಿಧಾನ ಯಶಸ್ವಿಯಾಗಿದೆ” ಎಂದರು.
“ಮಾನವ ಸಂಪನ್ಮೂಲಗಳ ಅಭಿವೃದ್ಧಿ, ನಗರಗಳ ವ್ಯವಸ್ಥಿತ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಕನ್ನಡ ನುಡಿ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಜ್ಯದ ಜನತೆಯ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಭವಿಷ್ಯದ ಬೆಳವಣಿಗೆಗಾಗಿ ಅಗತ್ಯವಿರುವ ತಳಹದಿಯನ್ನು ನಿರ್ಮಿಸಲು ನಮ್ಮ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆಯೆಂದು ತಿಳಿಸಲು ಹೆಮ್ಮೆಪಡುತ್ತೇನೆ” ಎಂದರು.
“ಕರ್ನಾಟಕ ರಾಜ್ಯ ಘನ ಸರ್ಕಾರದ ಆದೇಶದಂತೆ ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರಗಳೊಂದಿಗೆ ಸಂವಿಧಾನದ ಮಹತ್ವ, ಆಶಯ ಮತ್ತು ಸಮಾನತೆ, ತತ್ವಗಳ ಬಗ್ಗೆ ಸಮಾಜದ ಸರ್ವರಿಗೂ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲ 330 ಗ್ರಾಮ ಪಂಚಾಯತಿಗಳಲ್ಲಿ ಇಂದಿನಿಂದ ಫೆಬ್ರವರಿ 23ರವರೆಗೆ ಜಾಥಾ ಸಂಚರಿಸಲಿದೆ. ಈ ಅವಿಸ್ಮರಣೀಯ ಜಾಥಾಕ್ಕೆ ಇಂದು ತುಮಕೂರು ಜಿಲ್ಲೆಯಲ್ಲಿ ತಾವು ಚಾಲನೆ ನೀಡಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ವಿಶ್ವಶ್ರೇಷ್ಠ ಭಾರತ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ” ಎಂದರು.
“ರಾಜ್ಯದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅದರಂತೆ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗಾಗಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಿ ನುಡಿದಂತೆ ನಡೆದಿದೆ. ಯುವನಿಧಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಯ ಲಾಭವನ್ನು ರಾಜ್ಯದ ಅರ್ಹ ಫಲಾನುಭವಿಗಳು ಪಡೆಯುವ ಮೂಲಕ ನೆಮ್ಮದಿಯ ಜೀವನವನ್ನು ಕಂಡುಕೊಂಡಿದ್ದಾರೆ” ಎಂದು ತಿಳಿಸಿದರು.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ತನ್ನ ಐದನೇ ಮಹತ್ವಾಕಾಂಕ್ಷಿ ಯೋಜನೆ ‘ಯುವನಿಧಿ’ಯನ್ನು ಜಾರಿಗೊಳಿಸಿದ್ದು, ತುಮಕೂರು ಜಿಲ್ಲೆಯಲ್ಲಿ ನಿರುದ್ಯೋಗಿಗಳಿಂದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ತಾಲೂಕುಗಳಲ್ಲೂ ಯುವನಿಧಿ ನೋಂದಣಿ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಉತ್ತಮ ಸ್ಪಂದನೆ ದೊರಕಿದೆ. ಈ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 2,600ಕ್ಕೂ ಹೆಚ್ಚಿನ ಪದವೀಧರರು, ಡಿಪ್ಲೋಮಾ ಪಡೆದ ನಿರುದ್ಯೋಗಿಗಳು ನೋಂದಾಯಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಾನತೆ ಅನುಷ್ಠಾನವೇ ಸಂವಿಧಾನದ ಆಶಯ: ಶಾಸಕ ಎಸ್ ಆರ್ ಶ್ರೀನಿವಾಸ್
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಬಿ ವಿ, ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ ಎಂ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು, ಹಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.