ಮಹಾರಾಷ್ಟ್ರದಲ್ಲಿ ಇಬ್ಭಾಗವಾದ ಶಿವಸೇನೆಯನ್ನು ಮತ್ತೆ ಒಂದುಗೂಡಿಸುವ ಮತ್ತು ಶಿವಸೇನೆ (ಶಿಂದೆ) ಬಣವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮಾಡುವಂತಿದೆ. “2019ರಲ್ಲಿ ಏಕನಾಥ್ ಶಿಂದೆ ಅವರನ್ನೇ ಸಿಎಂ ಮಾಡಲು ಉದ್ಧವ್ ಠಾಕ್ರೆ ಬಯಸಿದ್ದರು. ಆದರೆ ಆ ಸಂದರ್ಭದಲ್ಲಿ ಬಿಜೆಪಿಯೇ ಅಡ್ಡಬಂದಿದ್ದು” ಎಂದು ಸಂಜಯ್ ರಾವತ್ ಹೇಳಿಕೊಂಡಿದ್ದಾರೆ.
2019ರಲ್ಲಿ ಶಿವಸೇನೆ ನಾಯಕರನ್ನು ಮುಖ್ಯಮಂತ್ರಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ ಮಾತು ತಪ್ಪಿದ ಬೆನ್ನಲ್ಲೇ ಬಿಜೆಪಿ ಮೈತ್ರಿಕೂಟದಿಂದ ಶಿವಸೇನೆ ಹೊರಬಂದಿತ್ತು. ಆ ವೇಳೆ ಪಕ್ಷ ಇಬ್ಭಾಗವಾಗಿರಲಿಲ್ಲ. ಈ ಬಗ್ಗೆ ಮಾತನಾಡಿದ ಸಂಜಯ್ ರಾವತ್, “ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಆದ್ದರಿಂದಾಗಿ ಶಿಂದೆ ಸಿಎಂ ಆಗಲು ಸಾಧ್ಯವಾಗಲಿಲ್ಲ” ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ವಿರುದ್ಧ ಮೌನವಾಗಿರುವ ಅಣ್ಣಾ ಹಜಾರೆಗೆ ಕೇಜ್ರಿವಾಲ್ ಸೋಲಿನಿಂದ ಖುಷಿ: ಸಂಜಯ್ ರಾವತ್
ಬಿಜೆಪಿಯೊಂದಿಗೆ ಮೈತ್ರಿ ತೊರೆದ ಬಳಿಕ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್- ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಸರ್ಕಾರ ರಚಿಸಿತ್ತು. ಈ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಸಿಎಂ ಆಗಿದ್ದರು. ಈ ವೇಳೆ ಶಿಂದೆ ಅವರನ್ನು ಸಿಎಂ ಮಾಡುವುದಕ್ಕೆ ಎಂವಿಎ ಒಪ್ಪಿಲ್ಲ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. “ಶಿಂದೆ ಸಿಎಂ ಆಗಲು ಬಯಸಿದ್ದರು. ಅದರೆ ಅವರ ಅಡಿಯಲ್ಲಿ ಕೆಲಸ ಮಾಡಲು ಎಂವಿಎ ಒಪ್ಪಿಲ್ಲ” ಎಂದು ರಾವತ್ ತಿಳಿಸಿದ್ದಾರೆ.
“ಎನ್‌ಸಿಪಿ ಪಕ್ಷದ ಅಧ್ಯಕ್ಷರಾಗಿದ್ದ ಶರದ್ ಪವಾರ್ ಅವರು ಮತ್ತು ಅಜಿತ್ ಪವಾರ್ ಅವರು ಶಿಂದೆ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ವಿರೋಧಿಸಿದ್ದರು” ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇನ್ನು ಇತ್ತೀಚೆಗೆ ಶರದ್ ಪವಾರ್, ಶಿಂದೆ ಅವರನ್ನು ಹಾಡಿಹೊಗಳಿದ್ದರು.
ಎಂವಿಎ ಸರ್ಕಾರ ರಚನೆಯಾದ ಬಳಿಕ ಶಿಂದೆ ಬಂಡಾಯವೆದ್ದು ಪ್ರತ್ಯೇಕ ಶಿವಸೇನೆ ಪಕ್ಷವನ್ನು ಸ್ಥಾಪಿಸಿ ಬಿಜೆಪಿ ಜೊತೆ ಸೇರಿ 2022ರ ಜೂನ್‌ನಲ್ಲಿ ಸರ್ಕಾರವನ್ನು ರಚಿಸಿದರು. ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿಂದೆ ಉಪಮುಖ್ಯಮಂತ್ರಿಯಾಗಿದ್ದಾರೆ. ಎನ್‌ಸಿಪಿಯಲ್ಲಿ ಬಂಡಾಯವೆದ್ದು ಪ್ರತ್ಯೇಕ ಪಕ್ಷ ಕಟ್ಟಿದ ಅಜಿತ್ ಪವಾರ್ ಕೂಡಾ ಡಿಸಿಎಂ ಆಗಿದ್ದಾರೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದಾರೆ.
