- ಕಳೆದ ಮೇ 4ರಂದು ನಡೆದಿದ್ದ ಅಮಾನವೀಯ ಘಟನೆಯ ವಿಡಿಯೋ ವೈರಲ್
- ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಘಟನೆಗೆ ಸಂಬಂಧಿಸಿ ಹರಿದಾಡುತ್ತಿರುವ ವಿಡಿಯೋವನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಟ್ವಿಟರ್ ಸಹಿತ ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಸರ್ಕಾರದ ಮೂಲವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುದ್ದಿ ಸಂಸ್ಥೆ ಎಎನ್ಐ, ಮಣಿಪುರದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ವಿಡಿಯೋವನ್ನು ಶೇರ್ ಮಾಡದಂತೆ ಸರ್ಕಾರವು ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಿದೆ. ಈ ವಿಷಯವು ಪ್ರಸ್ತುತ ತನಿಖೆಯಲ್ಲಿರುವುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ದೇಶದ ಕಾನೂನುಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಪ್ರಸಾರ ಮಾಡದಂತೆ ಸೂಚಿಸಿದೆ ಎಂದು ತಿಳಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | ಮಹಿಳೆಯರನ್ನು ಬೆತ್ತಲೆಗೊಳಿಸಿ ವಿಕೃತಿ ಮೆರೆದ ದುಷ್ಟರ ಗುಂಪು; ದೇಶಾದ್ಯಂತ ಆಕ್ರೋಶ
ಈ ಘಟನೆಯ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಕಂಡು ಆಘಾತಕ್ಕೊಳಗಾಗಿದ್ದೇನೆ. ಮಣಿಪುರದ ಹೆಣ್ಣು ಮಕ್ಕಳಿಗೆ ಏನಾಗಿದೆಯೋ ಅದನ್ನು ಕ್ಷಮಿಸಲು ಸಾಧ್ಯವಿಲ್ಲ.ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಾನು ಭಾರತದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ವಿಕೃತ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಮೆರವಣೆಗೆ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಳೆದ ಮೇ ತಿಂಗಳಲ್ಲಿ ನಡೆದಿತ್ತು.

ಮೇ 4ರಂದು ಕಾಂಗ್ಪೊಕ್ಪಿ ಜಿಲ್ಲೆಯ ಬಿ ಫೈನೋಮ್ ಎಂಬ ಹಳ್ಳಿಯ ಬಳಿ ಮೇತೀ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.
ಸಂತ್ರಸ್ತ ಮಹಿಳೆಯರು ಕುಕಿ-ಜೋ ಬುಡಕಟ್ಟಿಗೆ ಸೇರಿದವರಾಗಿದ್ದು, ವಿಕೃತ ಮನಸ್ಸಿನ ಪುರುಷರ ಗುಂಪು ಅವರ ಮೇಲೆ ದೌರ್ಜನ್ಯ ಎಸಗಿ, ವಿಡಿಯೋವನ್ನು ಹರಿಬಿಟ್ಟಿದೆ. ವಿಡಿಯೋದಲ್ಲಿ ಮಹಿಳೆಯರು ಅಸಹಾಯತೆಯಿಂದ ಅಂಗಲಾಚುತ್ತಿದ್ದರೂ, ಅವರನ್ನು ಆ ದುರುಳರು ಎಳೆದೊಯ್ಯುತ್ತಿರುವುದು ಕಂಡುಬಂದಿದೆ.