ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೊ ಬೆಲೆ ಕೆ ಜಿ ಗೆ 100ರ ಗಡಿ ದಾಟಿದೆ. ತರಕಾರಿ ವ್ಯಾಪಾರ ಮಾಡುವವರು ಕಳ್ಳತನ ತಡೆಯಲು ಸಿಸಿ ಕ್ಯಾಮೆರಾ ಸೇರಿದಂತೆ ಬೇರೆ ಬೇರೆ ಉಪಾಯದ ಮೊರೆ ಹೋದರೆ, ಉತ್ತರ ಪ್ರದೇಶದ ವ್ಯಾಪಾರಿಯೋರ್ವ ‘ಬೌನ್ಸರ್’ಗಳನ್ನು ನೇಮಿಸಿರುವುದಾಗಿ ಸುದ್ದಿಸಂಸ್ಥೆ ‘ಪಿಟಿಐ’ ವರದಿ ಮಾಡಿದೆ.
ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ, ಟೊಮ್ಯಾಟೋಗೆ ರಕ್ಷಣೆ ನೀಡಲು ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾರೆ.
ಈ ಬಗ್ಗೆ ಪಿಟಿಐನೊಂದಿಗೆ ಮಾತನಾಡಿರುವ ವ್ಯಾಪಾರಿ ಅಜಯ್, “ಮೋದಿಯವರ ಆಡಳಿತ ಇರುವಾಗಲೇ ಟೊಮ್ಯಾಟೊ ಬೆಲೆ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಜನರು ಹಿಂಸಾಚಾರದಲ್ಲಿ ತೊಡಗಿಕೊಂಡು ಟೊಮ್ಯಾಟೋವನ್ನು ಲೂಟಿ ಮಾಡುತ್ತಿರುವ ಸುದ್ದಿ ಬರುತ್ತಿದೆ. ಹಾಗಾಗಿ, ಟೊಮ್ಯಾಟೊ ಬೆಲೆ ಜಾಸ್ತಿಯಾಗಿರುವುದರಿಂದ ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದೇನೆ. ನಮ್ಮ ಅಂಗಡಿಯಲ್ಲಿ ಟೊಮ್ಯಾಟೊ ಇರುವುದರಿಂದ ಇಲ್ಲಿ ಜಗಳವಾಗಬಾರದು ಎಂದು ಈ ರೀತಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.
“ನಮ್ಮ ಪ್ರದೇಶದಲ್ಲಿ ಟೊಮ್ಯಾಟೊ ಪ್ರತಿ ಕೆ.ಜಿ.ಗೆ 160ಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಜಿಗಟ್ಟಲೇ ಖರೀದಿಸುತ್ತಿದ್ದ ಜನರು ಬೆಲೆ ಹೆಚ್ಚಾಗಿರುವುದರಿಂದ 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ” ಎಂದು ವ್ಯಾಪಾರಿ ಅಜಯ್ ಫೌಜಿ ತಿಳಿಸಿದ್ದಾರೆ.