- ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ‘ವರ್ಕ್ ಫ್ರಂ ಹೋಮ್’
- ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಯಮುನಾ; 208.62 ಮೀಟರ್ ಮಟ್ಟಕ್ಕೆ ನೀರು
ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಯಮುನಾ ನದಿಯ ನೀರಿನ ಮಟ್ಟವು ಮತ್ತಷ್ಟು ಏರಿಕೆಯಾಗಿದೆ.
ಇದರಿಂದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹದ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಮನೆ ಮತ್ತು ರಸ್ತೆಗಳು ಜಲಾವೃತಗೊಂಡಿದೆ.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನಿಂದ ಯಮುನಾ ನದಿಗೆ ನೀರನ್ನು ಹರಿಬಿಡುತ್ತಿರುವುದರಿಂದ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನೀರಿನ ಮಟ್ಟ 208.62 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಮೂರು ಮೀಟರ್ಗಳಷ್ಟು ಹೆಚ್ಚಿದೆ.
ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರಿದ್ದು, ಹಲವೆಡೆ ವಿಪರೀತ ಟ್ರಾಫಿಕ್ ಜಾಮ್ಗೆ ಸಿಲುಕಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ, ಹಲವಾರು ಗಣ್ಯರ ಸಮಾಧಿ ಇದ್ದ ಸ್ಥಳ ಕೂಡ ನೀರಿನಿಂದ ಆವೃತವಾಗಿದೆ.
ಪ್ರವಾಹ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ ಬಳಿಕ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, “ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಭಾನುವಾರದವರೆಗೆ ಮುಚ್ಚಲ್ಪಡುತ್ತವೆ. ಅಗತ್ಯ ಸೇವೆಗಳನ್ನು ಒದಗಿಸುವ ಹೊರತುಪಡಿಸಿ ಉಳಿದ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ‘ವರ್ಕ್ ಫ್ರಂ ಹೋಮ್’ ಮಾಡುವಂತೆ ಸೂಚನೆ ನೀಡಲಾಗಿದೆ. ಮೂರು ನೀರು ಸಂಸ್ಕರಣಾ ಘಟಕಗಳು ಮುಚ್ಚಿರುವುದರಿಂದ ಈಗ ಶೇ.50ರಷ್ಟು ಮಾತ್ರ ನೀರಿನ ಶೇಖರಣೆ ಲಭ್ಯವಿದೆ. ಒಂದು ಅಥವಾ ಎರಡು ದಿನಗಳವರೆಗೆ ನೀರಿನ ಸಮಸ್ಯೆ ಎದುರಿಸಬೇಕಾಗಬಹುದು. ಈಗಾಗಲೇ ಆರಂಭಿಸಿರುವ ಶಿಬಿರಗಳಲ್ಲಿ ಶೌಚಾಲಯ ಮತ್ತು ಸ್ನಾನಗೃಹಗಳ ಸಮಸ್ಯೆಗಳಿವೆ. ಆದ್ದರಿಂದ ಶಿಬಿರಗಳನ್ನು ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.