- ‘ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಬೇಕು’
- ‘ಬೆಂಗಳೂರು ಬಂದ್ ಸಂಪೂರ್ಣವಾಗಿ ಬಂದ್ ಆಗಲೇಬೇಕು’
ಕಾವೇರಿ ವಿಚಾರದಲ್ಲಿ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ ಹೋಟೆಲ್, ಅಂಗಡಿ, ಮುಂಗಟ್ಟುಗಳ ಮಾಲೀಕರು ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಬೇಕು. ಒಂದು ವೇಳೆ ಯಾರಾದರೂ ಬಾಗಿಲು ತೆರೆದು ವ್ಯವಹಾರ ನಡೆಸಲು ಪ್ರಯತ್ನಿಸಿದರೆ ಮುಂದಾಗುವ ತೊಂದರೆಗಳಿಗೆ ಅವರೇ ಹೊಣೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಎಚ್ಚರಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಮಂಗಳವಾರದ ಬೆಂಗಳೂರು ಬಂದ್ ಸಂಪೂರ್ಣವಾಗಿ ಬಂದ್ ಆಗಲೇಬೇಕು. ಬಂದ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ” ಎಂದರು.
“ಬೆಂಗಳೂರು ಬಂದ್ ಬೆಂಬಲಿಸಿ ಬಿಜೆಪಿ ಶಾಸಕರು ಮತ್ತು ಸಂಸದರು ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? Live Updates | ಬೆಂಗಳೂರು ಬಂದ್‌ಗೆ ಅವಕಾಶವಿಲ್ಲ: ನಗರ ಪೊಲೀಸ್ ಕಮಿಷನರ್ ದಯಾನಂದ್ ಸ್ಪಷ್ಟನೆ
“ಈಗ ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಮಿಳುನಾಡಿನ ಏಜೆಂಟರಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಕಾವೇರಿ ಕಣಿವೆಯ ಜಲಾಶಯಗಳಲ್ಲಿ 59 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಕಾಂಗ್ರೆಸ್ ಸರ್ಕಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಹನಿ ನೀರು ಕೂಡ ತಮಿಳುನಾಡಿಗೆ ಹರಿಯದಂತೆ ತಡೆಯಬೇಕು” ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪತ್ರ ಬರೆದಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, “ಪತ್ರ ಬರೆದಿರುವುದು ಗೊತ್ತಿದೆ. ಆ ಬಗ್ಗೆ ಈಗ ಮಾತನಾಡುವುದಿಲ್ಲ” ಎಂದಷ್ಟೇ ಹೇಳಿದರು.