ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಮ್ಮಂತಹ ಸಣ್ಣ ಸಣ್ಣ ಸರ್ಕಾರಿ ನೌಕರರಿಗೆ ದೊಡ್ಡದೊಡ್ಡ ಊರಿಗೆ ವರ್ಗವಾಗುವುದು ಬಹು ಕಷ್ಟ. ಅದಕ್ಕೆ ಆಗಲೇ ಮಲೆನಾಡು ಸರ್ವಿಸು ಮುಗಿದಿರಬೇಕು, ಎಷ್ಟೆಷ್ಟೋ ಸಿಫಾರಸು ಸರಬರಾಯಿ ಅಜೂಜುವಾರಿ ಆಗಬೇಕು. ಆದರೆ ನನ್ನ ಪುಣ್ಯಕ್ಕೆ ಇದಾವುದೂ ಇಲ್ಲದೆ ಈ ಊರಿಗೆ ವರ್ಗವಾಯಿತು. ದೊಡ್ಡ ಊರುಗಳಲ್ಲೇನು ಬೇಕಾದಷ್ಟು ಬಾಡಿಗೆ ಮನೆ ಸಿಕ್ಕುತ್ತೆ, ಹಳ್ಳಿಗಳಲ್ಲಿ ಹಾಗಲ್ಲ ಎಂದು ಮೈಸೂರು ಬೆಂಗಳೂರಿನಲ್ಲಿದ್ದು ಬಂದವರೆಲ್ಲರೂ ಹೇಳುತ್ತಿದ್ದರು. ಆದ್ದರಿಂದ ನನಗೆ ವರ್ಗದ ಆರ್ಡರು ಬಂದಕೂಡಲೆ ಹೆಂಗಸರು ಮಕ್ಕಳೆಲ್ಲರನ್ನೂ ಕರೆದುಕೊಂಡೇ ಹೊರಟುಬಿಟ್ಟೆ. ಯಾರೋ ಹಳೆಯ ಪರಿಚಯದವರನ್ನು ಹುಡುಕಿಕೊಂಡು ಹೋಗಿ, ಯಜಮಾನ ಮನೆಯಲ್ಲಿಲ್ಲದಿದ್ದರೂ ಆತನ ತಾಯಿಯನ್ನು ಹೆಸರು ಹಿಡಿದು ಕೂಗಿ, ಒಳಗೆ ನುಗ್ಗಿ, ಬಲವಂತವಾಗಿ ಗಂಟಿಟ್ಟು, ಊಟಮಾಡಿ ಆಯಿತು. ಕೈಗೆ ನೀರು ಬೀಳುವುದೊಂದೇ ತಡ, ಮನೆ ನೋಡುವದಕ್ಕೆ ಹೊರಟೆ; ಮನೆಗಳು ಯಾವ ಯಾವ ಮೂಲೆಗಳಲ್ಲಿ ಖಾಲಿ ಇದ್ದವೋ ಏನೋ; ಬೀದಿ ಸಾಲಾಗಿ, ಸ್ಕೂಲು ಅಂಗಡಿ ಮುಂಗಟ್ಟಿಗೆ ಹತ್ತಿರವಾಗಿ, ಲಕ್ಷಣವಾಗಿ, ಅಗ್ಗವಾಗಿ ಇರುವ ಬಾಡಿಗೆ ಮನೆಯೊಂದೂ ಕಾಣಲಿಲ್ಲ. ಹಾಗೇ ಅಲ್ಲಿ ಇಲ್ಲಿ ವಿಚಾರಿಸುತ್ತ ಅಂಗಡಿ ಬೀದಿಗೆ ಬರಲು ಅಲ್ಲಿ ಯಾರೋ ಒಬ್ಬರು ನನ್ನ ಪ್ರಶ್ನೆಗೆ ”ಬಾಡಿಗೆ ಮನೆ ಇಲ್ಲಿ ಯಾವುದೂ ಇಲ್ಲ” ಎಂದು ತಟ್ಟನೆ ಅಂದುಬಿಟ್ಟು ಆಮೇಲೆ ”ಇದರ ಹಿಂದಿನ ಸಾಲಿನಲ್ಲೇನೋ ಒಂದಿದೆ, ಆದರೆ ಅದು ನಿಮಗೆ ಸರಿಹೋಗುತ್ತದೆಯೋ ಇಲ್ಲವೋ!” ಎಂದು ನಿಧಾನವಾಗಿ ಕುಗ್ಗಿದ ಸಂದೇಹ ಸ್ವರದಲ್ಲಿ ಗೊಣಗಿದರು.
“ಅದೇಕೆ, ಹಾಗಂತೀರಿ?”
“ಆ-?” ಎಂದು ಕತ್ತೆತ್ತಿ ನನ್ನ ಮುಖವನ್ನು ಸ್ವಲ್ಪ ಹೊತ್ತು ನೋಡಿ, ಆಮೇಲೆ,
“ಯಾಕೂ ಇಲ್ಲ, ಒಳಸಂಸಾರ!”
”ಒಳಸಂಸಾರವಾದರೇನು ಚಿಂತೆಯಿಲ್ಲ ಸ್ವಾಮೀ, ನಾವು ಜಗಳವಾಡುವುದಿಲ್ಲ, ಹಳ್ಳಿಯವರು.”
“ನೊ……ಡಿ…; ನೋಡುವುದಕ್ಕೇನು!”
“ಹಾಗಾದರೆ ಆ ಮನೆ ತೋರಿಸುತ್ತೀರಾ?”
“ಇಗೋ ನೋಡಿ, ಈ ರಸ್ತೆಗೆ ಹಿಂದಿನ ರಸ್ತೆ; ಬೀದಿಸಾಲಾಗಿದೆ. ದೊಡ್ಡ ಬಂಗಲಿ; ರಸ್ತೆಯ ಕಡೆ ಬಾಗಿಲ ಮೇಲೆ To let (ಬಾಡಿಗೆಗೆ ದೊರೆಯುತ್ತೆ) ಎಂದು ಬರೆದಿದೆ.”
“ನೀವೂ ಅಲ್ಲಿಯತನಕ ಬಂದರೆ ಅನುಕೂಲ; ನಾನು ಈ ಊರಿಗೆ ಹೊಸಬ; ನೀವು ಇದೇ ಬೀದಿಯವರು ಅಂತ ಕಾಣುತ್ತೆ; ತಮಗೆ ಆ ಮನೆಯವರು ಗುರುತಿದ್ದರೂ ಇರಬಹುದು.”
”ಗುರುತೇನೋ ಇದೆ; ಆದರೆ….”
“ಮತ್ತೆ ಅಷ್ಟರಮಟ್ಟಿಗೆ ಉಪಕಾರಮಾಡಿ ಸ್ವಾಮಿ!”
ಹೀಗೆ ಬಲವಂತದಿಂದ ಆತನು ನನ್ನ ಜೊತೆಯಲ್ಲಿ ಬಂದು ಆ ಮನೆಯ ಗೇಟಿನ ಹತ್ತಿರ ನಿಂತು “ಇಗೋ ಈ ಭಾಗ ಬಾಡಿಗೆಗೆ ಕೊಡುತ್ತಾರೆ” ಎಂದು ತೋರಿಸಿದರು.
”ಬನ್ನಿ ಸ್ವಾಮಿ, ನೀವೂ ಒಳಕ್ಕೆ!”
”ಇಲ್ಲ: ನೀವೇ ಹೋಗಿ ವಿಚಾರಿಸಿ.”
ನಾನು- ಇದೇನು ಹೆಜ್ಜೆಹೆಜ್ಜೆಗೂ ಬಲವಂತ ಮಾಘಸ್ನಾನ! ಈ ಪಟ್ಟಣವಾಸದ ಜನಗಳೇ ಇಷ್ಟು; ಹಳ್ಳಿಯವರು, ಹೊಸಬರು, ಎಂದರೆ ಸ್ವಲ್ಪವೂ ಉಪಕಾರ ಬುದ್ದಿಯೇ ಇಲ್ಲ ಎಂದುಕೊಂಡು ಒಳಕ್ಕೆ ಹೋದೆ. ಇಷ್ಟರ ಮಟ್ಟಿಗಾದರೂ ಉಪಕಾರ ಮಾಡಿದನಲ್ಲ ಎಂಬ ಕೃತಜ್ಞತೆ ಇಲ್ಲ! ಅಷ್ಟು ಸಹಾಯ ತಾನೇ ಮಾಡಬೇಕೆಂದು ಏನು ಅಗತ್ಯ?
*
ಮನೆಯು ದೊಡ್ಡ ಗಾರೆಯ ಮನೆ. ಬೆಲ್ಲದ ಅಚ್ಚಿನ ಹಾಗೆ ಚಚೌಕವಾಗಿದೆ. ಮಹಡಿ ಇಲ್ಲದಿದ್ದರೂ ಎತ್ತರವಾಗಿ ಕಟ್ಟಿದ್ದರಿಂದ ಭವ್ಯವಾಗಿದೆ. ದೊಡ್ಡ ಕಾಂಪೌಂಡು; ಆದರೆ ಸುತ್ತ ತಂತಿ ಕಟ್ಟಿದೆ; ಗೋಡೆ ಇಲ್ಲ, ಎರಡು ಕಡೆಗೆ ದೊಡ್ಡ ರಸ್ತೆ; ಆ ಎರಡು ಕಡೆಗೂ ಬಾಗಿಲು; ಆದರೆ ಅವೆರಡೂ ಹಾಕಿವೆ. ಅಕ್ಕಪಕ್ಕಗಳಲ್ಲಿ ಮುಂದಕ್ಕೆ ಚಾಜಿಕೊಂಡಿರುವ ಮೂರು ಮುಖದ ಕೊಠಡಿಗಳು; ಅವೂ ಬಾಗಿಲು ಮುಚ್ಚಿವೆ. ಆದ್ದರಿಂದ ಒಂದು ಗಳಿಗೆ ಹಾಗೆ ಸುಮ್ಮನಿದ್ದು ನೋಡಿ ಆಮೇಲೆ ಧೈರ್ಯಮಾಡಿ ಬಾಗಿಲು ತಟ್ಟಿದೆ; ಉತ್ತರವಿಲ್ಲ: ಮನೆಯಲ್ಲಿ ಯಾರೂ ಇದ್ದಹಾಗೇ ಕಾಣಲಿಲ್ಲ. ಮತ್ತಷ್ಟು ಹೊತ್ತು ನೋಡಿ ಹೊರಟುಹೋಗಬೇಕೆಂದಿದ್ದೆ. ಅಷ್ಟು ಹೊತ್ತಿಗೆ, ಯಾರೋ ಒಬ್ಬಾಕೆಯು ಬಿಳಿಯ ಸೀರೆಯುಟ್ಟು ಅದೇ ಗೇಟಿನಿಂದಲೇ ಬಂದು ಮೆಲ್ಲಮೆಲ್ಲನೆ ಮನೆಯ ಹಿಂದಕ್ಕೆ ಹೋದರು. ಆಮೇಲೆ ‘ಮನೆಯ ಯಜಮಾನರು ಆಫೀಸಿಗೆ ಹೋಗಿರಬಹುದು. ಮಿಕ್ಕವರೆಲ್ಲರೂ ಹಿಂದಿರಬಹುದು’ ಎಂದು ನಾನು ಹಿಂದುಗಡೆ ಹೋದೆ. ಅಲ್ಲಿ ಒಂದು ಪಡಸಾಲೆಯಲ್ಲಿ ಮತ್ತೊಬ್ಬ ಶ್ವೇತಾಂಬರಧಾರಿಯಾದ ಮುದುಕಿ- ಮುದುಕಿಯೇನು, ವಿಧವೆ. ಅಲ್ಲಿ ಯಾರೂ ಗಂಡಸರು ಕಾಣಲಿಲ್ಲವಾಗಿ ಅನುಮಾನಿಸುತ್ತಾ ನಿಂತಿರಲು, ಆಕೆಯೇ ಸ್ವಲ್ಪ ದಪ್ಪವಾದ ದನಿಯಲ್ಲಿ “ಯಾರಪ್ಪ?” ಎಂದರು.

“ಈ ಮನೆ ಬಾಡಿಗೆಗೆ ದೊರೆಯುತ್ತೆ ಅಂತ ಹಾಕಿತ್ತು; ಅದನ್ನು ಕೇಳೋಣ ಅಂತ ಬಂದೆ.”
”ಹೌದು ದೊರೆಯುತ್ತೆ.”
“ಗಂಡಸರು ಯಾರೂ ಇಲ್ಲವೋ?”
”ಒಳಗಿದ್ದಾರೆ; ಬೇಕಾದರೆ ಹೋಗಿ ನೋಡಿ.”
ನಾನು ಕೋಟು ರುಮಾಲುಗಳನ್ನು ಸರಿಮಾಡಿಕೊಂಡು ಗಂಭೀರವಾಗಿ ಒಳಕ್ಕೆ ಹೋದೆ. ಒಳಗೆ ಚೌಕವಾಗಿ ಎತ್ತರವಾಗಿ ದೊಡ್ಡ ನಡುವೆ, ಅದರ ಮಧ್ಯೆ ಒಂದು ಪರದೆ. ಆ ಪರದೆಯ ಹಿಂದೆ ಒಬ್ಬ ನಡುವಯಸ್ಸಿನಾತನು ಒಂದು ಚಾಪೆಯ ಮೇಲೆ ಒಂದು ಕೊಳಕು ದಿಂಬನ್ನು ಹಾಕಿಕೊಂಡು ಸುರುಟಿಕೊಂಡಿದ್ದಾನೆ. ಗಡ್ಡ ಬೆಳ್ಳಗೆ ಮುಳ್ಳು ಮುಳ್ಳಾಗಿ ಬೆಳೆದಿದೆ. ಒಂದು ತುಂಡು ಸುತ್ತಿಕೊಂಡು ಮೇಲೆ ಒಂದು ಮಳೆಯಾಳದ ಚೌಕವನ್ನು ಹಾಕಿಕೊಂಡಿದ್ದಾನೆ. ಮುಖವು ಶೋಭೆ ಬಂದು ಸ್ವಲ್ಪ ಇಳಿದಿದ್ದ ಹಾಗೆ ದದ್ದರಿಸಿಕೊಂಡಿದೆ; ಅದರಲ್ಲಿ ಅಲ್ಲಲ್ಲೇ ಸಿಡುಬಿನ ಹಳ್ಳಗಳು; ಹಣೆಯಲ್ಲಿ ಒಂದು ಗಂಧದ ಬಟ್ಟು. ಆತನನ್ನು ನೋಡಿದರೆ ಯಾಕೋ ಮನೆಯ ಯಜಮಾನನೆನ್ನಿಸುವ ಹಾಗಿರಲಿಲ್ಲ. ಆದರೂ ಮತ್ತಾರೂ ಕಾಣದ್ದರಿಂದ ”ಸ್ವಾಮೀ?” ಎಂದೆ. ಆತನು ಸ್ವಲ್ಪ ತಬ್ಬಿಬ್ಬಾಗಿ ಯಾರು ಏನು ಎಂದು ವಿಚಾರಿಸಿ, ಕೊನೆಗೆ, ”ಒಳಗೆ ಹೆಂಗಸರಿದ್ದಾರೆ; ಅವರನ್ನು ಕೇಳಿ” ಎಂದುಬಿಟ್ಟನು. ಆದ್ದರಿಂದ ಯಾರನ್ನು ಹೆಂಗಸೆಂದು ಅಲಕ್ಷ್ಯಮಾಡಿ ಹೊರಟುಹೋಗಿದ್ದೆನೋ ತಿರುಗಿ ಅಲ್ಲಿಗೇ ಬೇಸ್ತು ಮುಖಹಾಕಿಕೊಂಡು ಸಂಕೋಚ ಪಟ್ಟುಕೊಳ್ಳುತ್ತಾ ಬರಬೇಕಾಯಿತು. ಆಕೆ ನಗುನಗುತ್ತಾ “ಏನು? ಏನಂದರು ಗಂಡಸರು?” ಎಂದು ಮೂದಲಿಕೆಯ ಸ್ವರದಿಂದ ಮಾತನಾಡುತ್ತಾ, ನಾವು ಎಷ್ಟು ಜನವೆಂದು ಕೇಳಿದರು.
”ಗಂಡ, ಹೆಂಡತಿ, ಎರಡು ಮಕ್ಕಳು- ನಾಲ್ವೇ ಜನ” ಎಂದು ಉತ್ತರ ಕೊಟ್ಟೆ.
ಅದನ್ನು ಕೇಳಿ ಆಕೆಗೆ ಸಮಾಧಾನವಾದಂತೆ ತೋರುತ್ತದೆ. “ಸರಿ, ನಮಗೆ ಹೆಚ್ಚು ಜನವಿದ್ದು ಗಲಾಟೆ ಯಾಗಕೂಡದು” ಎಂದು ಹೇಳಿ ಬಾಡಿಗೆಯನ್ನು ಗೊತ್ತುಮಾಡಿದರು.
ಕೂಡಲೇ ನಮ್ಮ ಹೆಂಗಸರನ್ನು ಕರೆತಂದು ಆ ಮನೆಯನ್ನು ತೋರಿಸಿದೆ. ಅದನ್ನು ನೋಡುತ್ತಿದ್ದ ಹಾಗೆ ಅವಳು ”ಇಷ್ಟು ದೊಡ್ಡ ಮನೆ ಯಾಕೇಂದ್ರೆ? ಬಾಡಿಗೆ ಹೆಚ್ಚಲ್ಲವೇ?” ಎಂದು ಕೇಳಿದಳು.
”ಇಲ್ಲ ಹತ್ತೇ ರೂಪಾಯಿ! ಈ ಊರಿಗೆ ಇದೇ ಬಹಳ ಕಮ್ಮಿ” ಎಂದೆ. ಅಷ್ಟು ಹೊತ್ತಿಗೆ ಮನೆಯೊಳಕ್ಕೆ ಹಿಂದಿನಿಂದಲೇ ಹೋದೆವು. ನಡುಮನೆ, ಕೊಠಡಿ, ಅಡಿಗೆಮನೆ, ಬಿಸಿಲು ಮಚ್ಚು, ಹಿತ್ತಿಲು ಎಲ್ಲಾ ನೋಡಿದೆವು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
“ಹಾಲ್ ದೊಡ್ಡದಾಗಿದೆ; ಇದರ ಮಧ್ಯದ ಪರದೆ ತೆಗೆದುಹಾಕಿದರೆ ನಮ್ಮ ಅಮ್ಮಯ್ಯನ ಮದುವೆ ಇಲ್ಲೇ ಮಾಡಬಹುದು” ಎಂದಳು ನನ್ನ ಹೆಂಡತಿ. “ಬಿಸಿಲು ಮಚ್ಚು ಚೆನ್ನಾಗಿದೆ- ಬೆಳದಿಂಗಳ ಊಟ ಮಾಡಬಹುದು” ಎಂದಳು ನನ್ನ ಮಗಳು. “ಸುತ್ತ ದೊಡ್ಡ ಕಾಂಪೌಂಡು ಇದೆ-ಬೇಕಾದ ಹಾಗೆ ಗಾಳಿ ಬೆಳಕು ಬರುತ್ತದೆ. ಗಿಡ, ಗಂಟೆ, ತರಕಾರಿ ಬೆಳೆದುಕೊಳ್ಳಬಹುದು” ಎಂದೆ ನಾನು. ನೀರಿಗೂ ತುಂಬಾ ಅನುಕೂಲವಾಗಿತ್ತು; ನಮ್ಮ ಅಡಿಗೆಮನೆಗೇ ಒಂದು ಬೇರೆ ನಲ್ಲಿ ಇತ್ತು. ಬಚ್ಚಲುಮನೆ ಬೇರೆ ಬೇರೆ ಇತ್ತು. ಅಲ್ಲಿಗೂ ನಲ್ಲಿ ಇದ್ದು, ಒಂದರಿಂದಲೇ ಎರಡು ಬಚ್ಚಲುಮನೆಗೂ ಎರಡು ಕಡೆಯಿಂದ ನೀರು ಬರುತ್ತಿತ್ತು. ಆದ್ದರಿಂದ ಎಲ್ಲಾ ಅನುಕೂಲವಾಗಿದೆಯೆಂದೂ ಈ ಊರಿನಲ್ಲಿರುವವರೆಗೂ ಆ ಮನೆ ಬಿಟ್ಟು ಬೇರೆ ಮನೆಗೆ ಹೋಗಬೇಕಾದ್ದಿಲ್ಲವೆಂದೂ ನಿರ್ಧಾರ ಮಾಡಿಕೊಂಡೆವು.
ರಾತ್ರಿ ಅಲ್ಲಿಯೇ ಅಡಿಗೆ ಊಟವಾಯಿತು. ಸಾಮಾನುಗಳನ್ನು ಸಾಗಿಸಿ ಹೊಂದಿಸಿ ಜೋಡಿಸಿಕೊಂಡು ಮಾಡಬೇಕಾದ್ದರಿಂದ ಸ್ವಲ್ಪ ಹೊತ್ತಾಯಿತು. ಕೃಷ್ಣಪಕ್ಷವಾದ್ದರಿಂದ ಆಗತಾನೆ ಕೆಂಪಗೆ ಚಂದ್ರೋದಯವಾಗುತ್ತಿತ್ತು. ಮನೆಯವರೆಲ್ಲರೂ ಮಲಗಿದ್ದರು. ಹೊರಗೂ ಜನಸಂಚಾರವಿರಲಿಲ್ಲ. ಮಕ್ಕಳೂ ಮಲಗಿದ್ದವು. ಆದ್ದರಿಂದ ನಾವು ಆ ಮಬ್ಬು ಬೆಳದಿಂಗಳಲ್ಲಿ ಎಲೆಯಡಿಕೆ ಹಾಕಿಕೊಳ್ಳುತ್ತಾ ಜಗುಲಿಯ ಮೇಲೆ ಕುಳಿತುಕೊಂಡೆವು. ಸುತ್ತಲೂ ದೊಡ್ಡ ಕಾಂಪೌಂಡು; ಅದರಲ್ಲಿ ಎಲ್ಲೋ ಎರಡು ಮೂರು ಮಾತ್ರ ಎತ್ತರವಾದ ಪ್ರೇತಾಕಾರದ, ಬಡಕಲು ಮರಗಳು. ಅವುಗಳಲ್ಲಿ ಹೆಚ್ಚು ಕೊಂಬೆಗಳೂ ಎಲೆಗಳೂ ಇಲ್ಲ-ಅವು ಉದುರಿ ಕೆಳಗೆ ಬಿದ್ದು ಒಣಗಿಹೋಗಿದ್ದವು; ಸ್ವಲ್ಪ ಗಾಳಿ ಬಂದರೂ ಅವು ಸರಿಯುತ್ತ ಮರಮರ ಶಬ್ದ ಮಾಡುತ್ತಿದ್ದುವು. ಎದುರಿಗೆ ಯಾವಾಗಲೋ ಹುವ್ವಿನ ಗಿಡಗಳನ್ನು ಹಾಕಿದ್ದು ಅವುಗಳ ಗುರುತುಗಳು ಕಾಣುತ್ತಿದ್ದುವು; ಒಂದು ಜಾಜಿಯ ಬಳ್ಳಿ ಮಾತ್ರ ಪೊದೆಪೊದೆಯಾಗಿ ಗಂಟುಗಂಟಾಗಿ ನಿಂತಿತ್ತು. ಅದರಲ್ಲಿ ಹೂ ಇಲ್ಲ; ಹೂವು ಬಿಟ್ಟು ಆ ಬೆಳದಿಂಗಳಲ್ಲಿ ಗಂಟಾಗಿ ಅರಳುತ್ತಿದ್ದರೆ ನಾವು ಕುಳಿತಿದ್ದ ಸ್ಥಳಕ್ಕೆ ಸುವಾಸನೆಯು ಬರಬೇಕಾಗಿತ್ತು. ದೂರದಲ್ಲಿ, ಆ ಕಾಂಪೌಂಡಿನ ಒಂದು ಮೂಲೆಯಲ್ಲಿ ಒಂದು ಅರಳಿಯ ಮರ; ಎಳೆಯ ಬೆಳದಿಂಗಳು ಅದರೊಳಗೆ ನುಸಿದು ಕೆಳಗೆ ನೆರಳು ನೆರಳಾಗಿತ್ತು. ಸ್ವಲ್ಪಹೊತ್ತಿನ ಮೇಲೆ ಮೋಡ ಮುಚ್ಚಿಕೊಂಡು ಆ ಬೆಳದಿಂಗಳೂ ಮಂಕಾಯಿತು. ಇದ್ದಕ್ಕಿದ್ದ ಹಾಗೆ ನನ್ನ ಹೆಂಡತಿ ಆ ಕಡೆ ದೃಷ್ಟಿಸಿ ನೋಡುತ್ತ “ಅಲ್ಲಿ ನೋಡಿ ಅಂದ್ರೆ! ಯಾರೋ ಕೂತ ಹಾಗಿದೆ! ಅಲ್ಲವೆ?” ಎಂದಳು.
”ಎಲ್ಲಿ?”
“ಆ ಅರಳೀ ಮರದ ಕೆಳಗೆ!”
“ಸರಿ ಸರಿ, ಹೆಂಗಸರಿಗೆ ಇನ್ನೇನೂ ಯೋಚನೆಯೆ ಇಲ್ಲ! ಹೋಗು ಒಳಗೆ.”
“ನಿಜವಾಗಿ, ನೋಡಿ ಅಂದ್ರೆ!”
ನನಗೂ ಯಾಕೋ ಹಾಗೇ ತೋರಿತು. ನೆರಳಿನಲ್ಲಿ ಕತ್ತು ಅಲ್ಲಾಡಿಸುತ್ತಾ ಇರುವಂತೆ ಕಂಡಿತು.
ಹೋಗಲಿ, ಇಷ್ಟು ಹೊತ್ತಿನಲ್ಲಿ ಇದರ ವಿಚಾರವೇನು-ಎಂದು ಬೆಳದಿಂಗಳ ವಿಹಾರವನ್ನು ಅಷ್ಟಕ್ಕೇ ಮುಕ್ತಾಯ ಮಾಡಿ ಒಳಗೆ ಹೋಗಿ ಮಲಗಿಕೊಂಡೆವು. ರಾತ್ರಿ ನಿದ್ರೆ ಚೆನ್ನಾಗಿ ಬರಲಿಲ್ಲ; ಹುಡುಗರು ಕನವರಿಸಿಕೊಳ್ಳುತ್ತಿದ್ದುವು. “ಹೊಸ ಜಾಗ; ಕ್ರಮೇಣ ಎಲ್ಲ ಸರಿಹೋಗುತ್ತದೆ” ಎಂದು ಸಮಾಧಾನ ಮಾಡಿಕೊಂಡೆವು.
*
ಮರುದಿನ, ಮನೆಯ ಯಜಮಾನರಾರೋ ನೋಡಬೇಕೆಂದು ಪ್ರಯತ್ನಪಟ್ಟೆ. ಮುನ್ನಿನ ದಿನ ಕಂಡಾತನೇ ಯಜಮಾನನೆಂದು ನಂಬುವ ಹಾಗಿರಲಿಲ್ಲ. ಆದರೆ ವಿಚಾರ ಮಾಡಿದ ಮೇಲೆ ಆತನೇ ಯಜಮಾನನೆನಿಸಿಕೊಂಡಿದ್ದನೆಂದೂ, ಆ ಮನೆಯಲ್ಲಿದ್ದ ಮುತ್ತೈದೆ ಆತನ ಹೆಂಡತಿಯೆಂದೂ, ವಿಧವೆ ಅತ್ತೆಯೆಂದೂ ಮನೆಯಲ್ಲಿ ಮತ್ತಾರೂ ಇರಲಿಲ್ಲವೆಂದೂ ಗೊತ್ತಾಯಿತು. ಹೀಗೆ ಮಾತನಾಡುತ್ತಾ ಇರುವಾಗ ಕಿಟಕಿಗಳು ಢಬಢಬನೆ ಬಡಿಯುತ್ತಿದ್ದವು. ಅದನ್ನು ಕೇಳಿ ಆತನು ಅಶಾಂತನಾಗಿ “ಯಾಕೆ? ನಿಮ್ಮ ಕಡೆ ಕಿಟಕಿಗಳನ್ನು ತೆಗೆದಿದ್ದೀರೇನು?” ಎಂದು ಕೇಳಿದನು.
“ಹೌದು; ಗಾಳಿ ಬೆಳಕು ಬೇಡವೆ? ಒಳಗೆಲ್ಲಾ ಏನೋ ಮಣಕು ವಾಸನೆ ಇಟ್ಟುಕೊಂಡಿತ್ತು.”
“ಗಾಳಿ ಬೆಳಕು ಎಷ್ಟಾಗಬೇಕು? ಬೇಕಾದಾಗ ಒಂದು ಕಿಟಕಿ ತೆಗೆದುಕೊಂಡರೆ ಸಾಕು. ನಾವು ನೋಡಿ, ಕಿಟಕಿ ಬಾಗಿಲನ್ನೇ ತೆರೆಯುವುದಿಲ್ಲ.”
ಆತ ಹೇಳಿದ್ದು ನಿಜ. ಬೆಳಿಗ್ಗೆ ಹತ್ತು ಗಂಟೆಯಾಗಿದ್ದರೂ ಕೊಠಡಿಯ ಕಿಟಕಿ ಬಾಗಿಲನ್ನು ತೆರೆದಿರಲಿಲ್ಲ. “ಹಾಗಾದರೆ ಇಲ್ಲಿ ಕತ್ತಲೆಯಲ್ಲವೆ?” ಎಂದು ನಾನು ಒಳಕ್ಕೆ ಬಗ್ಗಿ ನೋಡಿದೆ. ಆತನು “ಕತ್ತಲೆಯೂ ಇಲ್ಲ, ಏನೂ ಇಲ್ಲ: ಬೆಳಕಿನಲ್ಲಿ ಏನು ಮಾಡಬೇಕು? ನಡುವೆಯ ಮಾಳಿಗೆ ಬೆಳಕು ಬೇಕಾದಷ್ಟು ಕಾಣಿಸುತ್ತದಲ್ಲ!” ಎಂದನು.
ಬೇಕಾದಷ್ಟೂ ಇಲ್ಲ, ಏನೂ ಇಲ್ಲ; ಮಧ್ಯದಲ್ಲಿ ಮಾತ್ರ ಮಸುಕು ಮಸುಕಾಗಿ ಸ್ವಲ್ಪ ಬೆಳಕು ಬೀಳುತ್ತಿತ್ತು. ಅದರಲ್ಲಿ ನೋಡಲು, ಆ ಕೊಠಡಿಯಲ್ಲಿ ಕರಿಯ ಮರದ ಮಂಚ, ಸೋಫಾ, ಕುರ್ಚಿ, ಮೇಜು, ಬೀರು, ಎತ್ತರವಾದ ಒಂದು ಕೀಲಿನ ನಿಲುಗನ್ನಡಿ ಇವೆಲ್ಲಾ ಇದ್ದುವು. ಆದರೆ ಮಂಚದ ಮೇಲೆ ಹಾಸಿಗೆ ಇಲ್ಲ, ಸೊಳ್ಳೆಪರದೆ ಇಲ್ಲ; ನಿಲುವುಗನ್ನಡಿಯ ಮೇಲೆ ಒಂದು ದೊಡ್ಡ ರಗ್ಗು ಕವಿದಿತ್ತು. “ಇದೇಕೆ ಇದನ್ನು ಮುಚ್ಚಿದ್ದೀರಿ?” ಎಂದು ಕೇಳಿದೆ.
”ಮುಚ್ಚದೆ ಇದನ್ನು ಉಪಯೋಗಿಸುವವರು ಯಾರು?”
“ಮತ್ತೆ, ಮೇಜು ಮಂಚ ಎಲ್ಲಾ ಉಪಯೋಗಿಸುವವರು ಯಾರು?”
“ಯಾರೂ ಇಲ್ಲ.”
”ನೀವು?”
“ನಾವು ಯಾರೂ ಆ ಚಿಕ್ಕ ಮನೆಯಲ್ಲಿ ಕೂತು ಮಲಗಿ ಮಾಡುವುದಿಲ್ಲ; ನಾನು ಮಲಗಿಕೊಳ್ಳುವುದು ನಡುವೆಯಲ್ಲಿಯೇ.”
”ಏಕೆ?”
ಆತನು ಇದಕ್ಕೆ ಯಾವ ಉತ್ತರವನ್ನೂ ಕೊಡದೆ ಕೊಠಡಿಯ ಬಾಗಿಲನ್ನು ಹಾಕಿಕೊಂಡು ಬಿಟ್ಟನು.
ಹಾಲ್ನಲ್ಲಿ ಬೆಳಕು ಚೆನ್ನಾಗಿತ್ತು. ಅಲ್ಲಿ ಹೆಚ್ಚು ಸಾಮಾನಿಲ್ಲ. ಕೆಳಗೆ ಒಂದು ಚಾಪೆ, ಪಕ್ಕದಲ್ಲಿ ಒಂದ ಒಣಕಲು ಬೆಂಚು. ಗೋಡೆಯ ಮೇಲೆ ಎದುರು ಬದರಾಗಿ ಎರಡು ಪಟಗಳು; ಒಂದು ಹೆಂಗಸಿನದು, ಮತ್ತೊಂದು ಗಂಡಸಿನದು. ”ಇದು ಯಾರದ್ದು ಪಟ, ನಿಮ್ಮ ಮಗನದೋ?” ಎಂದು ಕೇಳಿದೆ.
“ಅಲ್ಲ- ನನಗೆ ಗಂಡುಮಕ್ಕಳಿಲ್ಲ ಎಂದು ಹೇಳಿದೆನಲ್ಲ ಆಗಲೆ!”
“ಹೌದು ಹೌದು; ಯಾರಾದರೂ ಇದ್ದಿದ್ದು ಹೋಗಿರಬಹುದು ಎಂದು ಕೇಳಿದೆ. ಈಕೆ ಯಾರು, ಆತನ ಹೆಂಡತಿಯೋ?”
“ಅಲ್ಲ; ಅದು ನನ್ನ ಮಗಳ ಪಟ.”
“ಆಕೆ ಎಲ್ಲ?”
”ಮದರಾಸಿಗೆ ಕೊಟ್ಟಿದೆ.”
”ಆಕೆಗೆ ಮಕ್ಕಳೋ?”
“ಮಕ್ಕಳೂ ಇಲ್ಲ ಏನೂ ಇಲ್ಲ. ಹೋದ ವರ್ಷ ಇಲ್ಲಿಗೆ ಕರೆದುಕೊಂಡು ಬಂದು ನಾಗರಪ್ರತಿಷ್ಠೆ ಮಾಡಿಸಿದೆವು.”
ಈಗ ಜ್ಞಾಪಕಕ್ಕೆ ಬಂತು. ನಿನ್ನ ರಾತ್ರಿ ನಾವು ಅರಳೀಮರದ ಕೆಳಗೆ ನೋಡಿದ್ದು ನಾಗರಕಲ್ಲಿರಬಹುದು! ಆದರೂ ನಾಗರಕಲ್ಲು ಅಷ್ಟು ಎತ್ತರ ಇರುತ್ತದೆಯೆ?
“ಈತ ಯಾರು ಹಾಗಾದರೆ?? ಈತನನ್ನು ಎಲ್ಲಿಯೋ ನೋಡಿದ ಹಾಗಿದೆ!”
”ಆತನನ್ನು ನೀವು ಕಂಡಿರಲಾರಿರಿ; ಆತ ನಮ್ಮ ಅತ್ತೆ ಇದ್ದಾರಲ್ಲ, ಅವರ ಭಾವನವರ ಮಗ.”
”ಅವರೆಲ್ಲಿದಾರೆ?”

”ಅವರು ಈಗ ಇಲ್ಲ; ನಾನು ಈ ಮನೆಗೆ ಬಂದ ಹೊಸದರಲ್ಲಿಯೇ ಹೋಗಿಬಿಟ್ಟರು” ಹೀಗೆಂದು ಹೇಳಿ ಒಂದು ಸಾರಿ ಆ ಪಟವನ್ನು ಕತ್ತೆತ್ತಿ ನೋಡಿ, ನನ್ನ ಮುಖವನ್ನು ನೋಡಿ, ಏನೋ ಕೆಲಸವಿರುವಂತೆ ಹೊರಟು ಹೋದರು. ನಾನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದು ‘ಈ ಪಟವು ಯಾರ ಹಾಗೆ?’ ಎಂದು ಎಷ್ಟೆಷ್ಟೋ ಜ್ಞಾಪಿಸಿಕೊಂಡು ಕೊನೆಗೆ ನಿರ್ಧರಿಸಲಾರದೆ ಹೊರಟುಹೋದೆ.
*
ಹಾಗೆ ಎರಡು ಮೂರು ದಿನಗಳು ಕಳೆದವು. ಪರಸ್ಥಳವಾದ್ದರಿಂದ ಮನೆಯಲ್ಲಿ ಒಂದಿದ್ದರೆ ಮತ್ತೊಂದಿರಲಿಲ್ಲ. ಘಳಿಗೆಗೆ ಒಂದು ಸಲ ಅದಿಲ್ಲ ಇದಿಲ್ಲ ಎಂದು ಹೆಂಗಸರು ಹೇಳುವುದು-ನಾನು ಅಂಗಡಿಗೆ ಓಡುವುದು-ಹೀಗೆ ಕಳೆಯಿತು. ಬೆಳಿಗ್ಗೆ ಸಾಯಂಕಾಲ ಇದೇ ಕೆಲಸ. ಇದು ಸ್ವಲ್ಪ ತಹಬಂದಿಗೆ ಬಂದಮೇಲೆ ಒಂದೆರಡು ದಿನ ಸಿನಿಮ, ವಾಕಿಂಗು, ಎಂದು ಅಲ್ಲಿ ಇಲ್ಲಿ ತಿರುಗಿ ಮನೆಗೆ ಹೊತ್ತಾಗಿ ಬಂದೆ.
“ಇಷ್ಟು ಹೊತ್ತುಮಾಡಿಕೊಂಡು ಬಂದರೆ ಹ್ಯಾಗೆ? ಇಲ್ಲೇನು ನೆರೆಯೇ ಹೊರೆಯೇ? ಅಗ್ರಹಾರದ ಮನೆಯೇ ಬಾಗಿಲಲ್ಲಿ ಕುಳಿತುಕೊಂಡರೂ ಹೊತ್ತು ಹೋಗುವುದಕ್ಕೆ? ಮಕ್ಕಳು ಕತ್ತಲೆಗೆ ಮುಂಚೆ ಮಲಗಿ ಬಿಡುತ್ತಾರೆ. ಇದೊಂದು ದೆವ್ವದಂತ ಮನೆಗೆಲ್ಲಾ ನಾನೊಬ್ಬಳೇ ಬಿಕೋ ಅಂತ ಕೂತಿರಬೇಕು…” ಎಂದು ಆರಂಭವಾಯಿತು.
“ಮನೆಯವರಿದ್ದಾರಲ್ಲ, ಜೊತೆಗೆ!”
“ಸರಿ, ಸರಿ; ಅವರೂ ಕತ್ತಲೆಗೆ ಮುಂಚೆ ಜೈನರ ಹಾಗೆ ಊಟ ಮಾಡಿ ಮಲಗಿಬಿಡುತ್ತಾರೆ; ಯಾಕೆ ಇಷ್ಟು ಹೊತ್ತು ದೀಪ ಉರಿಸಿ ಖರ್ಚು ಮಾಡುತ್ತೀರಿ- ಎಂದು ನನಗೆ ನೀತಿ ಹೇಳುತ್ತಾರೆ. ಅವರು ರಾತ್ರಿಯಾದ ಮೇಲೆ ಹೊರಕ್ಕೆ ಬರುವುದಿಲ್ಲ; ಅವರಿಗೆ ಕತ್ತಲೆಯಲ್ಲಿ ದಿಗಿಲಂತೆ!”
ಮರುದಿನ ಮುಂಚೆಯೇ ಮನೆಗೆ ಬರಬೇಕೆಂದು ನಿಶ್ಚಯಿಸಿದೆ. ಕಚೇರಿಯಿಂದ ಹೊರಡುವಾಗ ಮಳೆ ಬರುವ ಹಾಗಿತ್ತು. ಆದ್ದರಿಂದ ಎಲ್ಲಿಯೂ ನಿಲ್ಲದೇ ಮನೆಗೆ ಬಂದುಬಿಟ್ಟೆ. ಆದರೂ ಆಗಲೇ ಕತ್ತಲೆಯಾಗುತ್ತಾ ಬಂದಿತ್ತು. ಬೈಸಿಕಲ್ಲು ಮೋಟಾರು ಇಲ್ಲದವರಿಗೆ ಈ ಹಾಳು ಊರಿನಲ್ಲಿ ಬರುವ ಸಂಬಳವೆಲ್ಲಾ ಆಯಾಸ ಪರಿಹಾರಕ್ಕೆ ದೇಹಪೋಷಣೆಗೇ ಸರಿಹೋಗುತ್ತೆ. ಬಂದವನು ಬಿಸಿಲು ಮಚ್ಚಿನ ಮೇಲಕ್ಕೆ ಹೋದೆ-ಗಾಳಿಯಲ್ಲಿ ತಿರುಗಾಡುತ್ತಿರೋಣ ಎಂತ. ಅಲ್ಲಿ ಯಾರೋ ಒಬ್ಬರು ಆಗಲೇ ತಿರುಗಾಡುತ್ತಿದ್ದರು. ಅವರನ್ನು ನೋಡಿದಾಗ ನನ್ನ ಭಾವಮೈದುನನ ಜ್ಞಾಪಕ ಬಂದಿತು. ತಟ್ಟನೆ ‘ಏನೋ ಇಲ್ಲಿ…?’ ಎಂದವನು ಇಲ್ಲೆಲ್ಲಿ ಬಂದಾನು ಎಂದುಕೊಂಡು ಹಿಂತಿರುಗಿ ಬಂದು ಒಳಗೆ ಚಾಪೆ ಹಾಕಿಕೊಂಡು ಉರುಡಿಕೊಂಡೆ.
“ನೋಡೀಂದ್ರೆ…!”
“ಏನಾಶ್ಚರ್ಯ? ಏನು ಆಕಾಶ ಕಳಚಿಕೊಂಡಿತೋ ಭೂಮಿ ತಲೆಕಳಗಾಯಿತೋ?”
“ಇದಕ್ಕೇ ನಾನು ಯಾವುದನ್ನೂ ಹೇಳುವುದಕ್ಕೆ ಬರುವುದಿಲ್ಲ. ನಮ್ಮ ಮಾತು ನಿಮಗಾಗುವುದಿಲ್ಲ, ನಿಮ್ಮ ಮಾತು ನಮಗಾಗುವುದಿಲ್ಲ.”
”ಹೋಗಲಿ! ಏನು ಹೇಳಿಬಿಡು.”
”ಅಲ್ಲಿ ನೋಡಿ, ಆ ಮುದುಕನನ್ನ ಕಾಲಿನ ಕಸವಾಗಿ ಕಾಣ್ತಾರಲ್ಲ!”
”ಹೌದು, ವಯಸ್ಸಾದ ಮೇಲೆ ಹಾಗೇ! ನಾಳೆ ನಾನು ಮುದುಕನಾದರೂ ನನ್ನನ್ನು ನೀನೂ ಹಾಗೇ ಕಾಣುತೀಯೆ.”
”ಹೀಗೆ ಯಾರಾದರೂ ಮಾಡುತಾರೆಯೇ ಅಂದ್ರೆ!”
“ಹ್ಯಾಗೆ?”
“ಆತ ಮುಟ್ಟಿದ್ದು ಮನೆಯಲ್ಲಿ ಮತ್ತೊಬ್ಬರು ಮುಟ್ಟುವುದಿಲ್ಲ. ಆತ ಊಟ ಮಾಡಿದ ತಟ್ಟೆ, ನೀರು ಕುಡಿದ ಲೋಟಾ, ಇವುಗಳನ್ನು ಮತ್ತೊಂದಕ್ಕೆ ಸೋಕಿಸುವುದಿಲ್ಲ. ಅವಕ್ಕೇ ಒಂದು ಗೂಡು ಮಾಡಿಟ್ಟಿದ್ದಾರೆ. ಹೆಂಡತಿ ಅನ್ನಿಸಿಕೊಂಡವಳು, ಆತನ ಊಟವಾದ ಮೇಲೆ ಅವುಗಳನ್ನೆಲ್ಲಾ ತೊಳೆದು ಬೇರೆ ಇಟ್ಟು ಆಮೇಲೆ ಮಡಿ ಉಟ್ಟುಕೊಂಡು ತಾನು ಊಟ ಮಾಡುತ್ತಾಳಲ್ಲ!”
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
“ಮಾಡಲಿ; ಯಾಕೆ ಮಾಡಬಾರದು?”
“ಆತನೇನು ಕಾಯಿಲೆಯವನೇ, ಕ್ಷಯ ರೋಗದವನೇ?”
“ಇರಬಹುದು.”
”ಆತನಿಗೇನು ಅಂದ್ರೆ ಖಾಯಿಲೆಯಾಗುವುದಕ್ಕೆ?”
“ಏನೋ ಯಾರಿಗೆ ಗೊತ್ತು?”
“ಸರಿ, ನೀವು ಏನಾದರೂ ಒಂದು ಹಿಡಿದರೆ ಹೀಗೇ; ನೀವು ಆಡಿದ್ದೇ ಮಾತು!”
“ಇಲ್ಲ, ಆಕೆ ಮಾಡಿದ್ದು ಅನ್ಯಾಯ; ಅವಳು ನಿನ್ನ ಹಾಗೆ ಮಹಾ ಪತಿವ್ರತೆಯಲ್ಲ; ಆತ ಅಮೃತ ಕುಡಿದಿದ್ದಾನೆ. ದೇವೇಂದ್ರನ ಮೊಮ್ಮಗ; ಮುಖ ಎಸಳೆಸಳಾಗಿ ತಳತಳನೆ ಹೊಳೆಯುತ್ತಾ ಇದೆ!-ಸರಿಯೆ?”
ಹೀಗೆಂದು ಪುನಃ ಮಹಡಿಯ ಮೇಲಕ್ಕೆಂದು ಹೋದೆ. ಈಗಲೂ ಅದೇ ಮನುಷ್ಯ ಅಲ್ಲಿಯೇ ಇದ್ದಾನೆ! ಆದ್ದರಿಂದ ಕೆಳಕ್ಕಿಳಿದು ಬಂದು ಆಚೆ ಕಡೆಯ ಬಾಗಿಲಿಗೆ ಹೋಗಿ ಅಲ್ಲಿ ನಿಂತಿದ್ದ ಯಜಮಾನನನ್ನು ಕುರಿತು “ಬಿಸಿಲು ಮಚ್ಚಿನ ಮೇಲೆ ಯಾರು ಇರುವವರು? ನಿಮ್ಮ ಮನೆಯವರು ಇನ್ನಾರು ಗಂಡಸರಿಲ್ಲ!” ಎಂದು ಮಾತು ತೆಗೆದೆ- ಆತನಿಗೆ ಅದೇಕೋ ರುಚಿಸಲಿಲ್ಲ. ಸ್ವಲ್ಪ ಗಾಬರಿಯಾದವನಂತಾಗಿ “ಯಾಕೆ? ಯಾಕೆ? ಏನಾಯಿತು?” ಎಂದು ನನ್ನನ್ನೇ ಕೇಳಿ ಹೊರಟುಹೋದನು. ಇದೇಕೆಂಬುದು ಅರ್ಥವಾಗಲಿಲ್ಲ. ಮರುದಿನ ನೋಡಲು ಮಹಡಿ ಮೆಟ್ಟಿಲ ತುಂಬ ಅಡ್ಡಲಾಗಿ ಎರಡು ಮೂರು ಕ್ರೋಟನ್ ಗಿಡಗಳ ದಪ್ಪ ದಪ್ಪ ಕುಂಡಗಳನ್ನು ಇಟ್ಟುಬಿಟ್ಟಿದ್ದರು. ಅದೇಕೆಂದು ಕೇಳಿದ್ದಕ್ಕೆ “ಹುಡುಗರು ಮಚ್ಚಿನ ಮೇಲೆ ಹತ್ತಿ ಕುಣಿಯುತ್ತಿದ್ದರು; ಬಿದ್ದಾರು ಎಂದು ಸ್ವಲ್ಪ ತಡೆಯಾಗಿಟ್ಟಿದ್ದೇನೆ” ಎಂದು ಉತ್ತರ ಬಂತು.
ಆವೊತ್ತು ರಾತ್ರಿ ಒಂದು ಹೊತ್ತಿನಲ್ಲಿ ಯಾರೋ ವಿಕಾರವಾಗಿ ಅರಚಿಕೊಂಡ ಹಾಗಾಗಿ ಎಚ್ಚರವಾಯಿತು. ಹಾಗೇ ಕಣ್ಣು ಬಿಟ್ಟುಕೊಂಡು ಮಲಗಿ ಕೇಳುತ್ತಿದ್ದೆ; ಪುನಃ ಒಂದರೆಡು ನಿಮಿಷಗಳ ಮೇಲೆ ಅದೇ ವಿಕಾರವಾದ ಧ್ವನ ರಿಪೀಟರ್ ಅಲಾರಂ ಟೈಂಪೀಸಿನಂತೆ ಅರ್ಧರ್ಧ ನಿಮಿಷ ಬಿಟ್ಟು ಬಿಟ್ಟು ಅದೇ ವಿಕಾರವಾದ ಕಿರಿಚಲು! ಈಗ ನನ್ನ ಹೆಂಡತಿ ಮಕ್ಕಳೂ ಅದನ್ನು ಕೇಳಿ ಕಿಟ್ಟನೆ ಕಿರಿಚಿಕೊಂಡು ಎದ್ದರು. ನಾನು ಅವರನ್ನು ಸಮಾಧಾನ ಮಾಡಿ, ಧೈರ್ಯ ಹೇಳಿ, ದೀಪ ಹಚ್ಚೋಣವೆಂದು ಸ್ವಿಚ್ ಹಾಕಿದರೆ ದೀಪ ಹತ್ತದು! ಹೊರಗೆ ಹೋಗಿ ಬಗ್ಗಿ ನೋಡಲು ರಸ್ತೆಯ ದೀಪವೂ ಹೋಗಿಬಿಟ್ಟಿತ್ತು; ಕುಟುಕಲು ಮಳೆ, ಕತ್ತಲೆ. ಎಲೆಕ್ಟಿಕ್ ದೀಪವಿದೆಯೆಂದು ದೀಪದ ಕಡ್ಡಿ ಲ್ಯಾಂಪುಗಳನ್ನು ಅಸಡ್ಡೆ ಮಾಡಿ ಎಲ್ಲೋ ಹಾಕಿದ್ದೆವು; ಅವು ಸಿಕ್ಕುವಂತಿರಲಿಲ್ಲ. ಹೊರಗೆ ಎದ್ದು ಹೋಗುವುದಕ್ಕೂ ಏನೋ ಹೆದರಿಕೆ! ನಾನು ಮನೆಗೆ ಕಳ್ಳರು ಬಿದ್ದಿರಬಹುದೆಂದು ಊಹಿಸಿದೆ: ಆದ್ದರಿಂದ ಬಾಗಿಲು ಅಗಣಿಗಳನ್ನು ಭದ್ರಮಾಡಿ ಅವಕ್ಕೆ ಬೆಂಬಲವಾಗಿ ಪೆಟ್ಟಿಗೆಗಳನ್ನೆಳೆದು ಗಟ್ಟಿಯಾಗಿ ಮಾತನಾಡುತ್ತ ಮಲಗಿದೆವು. ಎಷ್ಟು ಹೊತ್ತಾಗಿತ್ತೋ ಅದೂ ಗೊತ್ತಾಗುವ ಹಾಗಿರಲಿಲ್ಲ. ಪುನಃ ಆ ಕೂಗು ಕೇಳದಿದ್ದರೂ, ಅದು ಜ್ಞಾಪಕಕ್ಕೆ ಬಂದಾಗಲೆಲ್ಲಾ ಮೈ ಜುಮ್ಮೆಂದು ನಡುಗುತ್ತಿತ್ತು; ಬೆಳಗಿನ ಜಾವದಲ್ಲಿ ನಿದ್ದೆ ಹತ್ತಿರಬೇಕು. ಎಚ್ಚರವಾದಾಗ ಬಿಸಿಲು ಬಂದು ಹಾಲಿನವನು ಕೂಗುತ್ತಿದ್ದನು.
ರಾತ್ರಿಯ ವಿದ್ಯಮಾನಗಳಿಂದ ನಮ್ಮ ಮುಖಗಳು ಬೆಂಡುತೇಲುತ್ತ, ಕಣ್ಣು ಗುಂಡಿ ಬಿದ್ದು ತೂಕಡಿಸುವವರಂತೆ ಜೋಲುಮುಖ ಹಾಕಿಕೊಂಡು ಓಡಾಡುತ್ತಿದ್ದೆವು. ಹಗಲು ಹೊತ್ತಾದರೂ ಹಿಂದಿನ ರಾತ್ರಿ ಕೇಳಿದ ವಿಕಾರನ ಕೂಗನ್ನು ನೆನೆಸಿಕೊಂಡರೆ ಮೈ ನಡುಗುವುದು. ಅದು ಕಳ್ಳತನವಾದ್ದಕ್ಕೆ ಕೂಗಿಕೊಂಡಿದ್ದಲ್ಲವೆಂದು ಬೆಳಗಾದ ಮೇಲೆ ನಿರ್ಧಾರವಾಯಿತು. ಆದರೆ ಈ ವಿಚಾರವನ್ನು ಯಾರೊಡನೆಯೂ ಕೆದಕಿ ಕೇಳುವುದಕ್ಕೆ ಇಷ್ಟವಿಲ್ಲ. ಆದ್ದರಿಂದ ನಾನು ಬಾಯಿ ಬಿಗಿ ಹಿಡಿದುಕೊಂಡು ಸುಮ್ಮನಿದ್ದೆ. ನನ್ನ ಹೆಂಡತಿ ಮಾತ್ರ ಸುಮ್ಮನಿರಲಿಲ್ಲ. ಮನೆಯ ಹೆಂಗಸರು ಹಿತ್ತಿಲ ಕಡೆಗೂ ಅಡಿಗೆಮನೆಗೂ ತಿರುಗಾಡುತ್ತಿದ್ದಾಗ ಹಿಡಿದು ಆ ವಿಚಾರವನ್ನೆತ್ತಿದಳು. ಯಜಮಾನಿಯು ಅಲಕ್ಷ್ಯವಾಗಿ ”ಅದೇ? ನಿಮಗೆ ಹೊಸದು ಅಷ್ಟೇಯೆ!” ಎಂದರು.
“ಕಳ್ಳರು ಬಿದ್ದರೇನೋ ಎಂದು ಮಾಡಿಕೊಂಡಿದ್ದೆವು.”
“ಕಳ್ಳರೂ ಇಲ್ಲ ಕಾಕರೂ ಇಲ್ಲ!”
”ಮತ್ತೆ ಯಾರು ಹಾಗೆ ಕೂಗಿಕೊಂಡವರು? ಯಾಕೆ?”
“ನಮ್ಮ ಅಳಿಯ ಕನವರಿಸಿಕೊಂಡರು ಅಂತ ಕಾಣುತ್ತೆ.”
“ಕನವರಿಸಿಕೊಂಡರೆ ಹಾಗೆ ವಿಕಾರವಾಗಿ ಕೂಗಿಕೊಳ್ಳುತ್ತಾರೆಯೇ? ಅದ್ಯಾಕೆ?”
”ಯಾಕೇ? ಪುಕುಲುಜೀವ, ಅದಕ್ಕೆ; ನಾವು ಹೆಣ್ಣು ಹೆಂಗಸರು ಎಷ್ಟೋ ವಾಸಿ; ಆತನದು ಗೋಳು: ಅನ್ನಕ್ಕೆ ಗೋಳು, ನೀರಿಗೆ ಗೋಳು, ನಿದ್ರೆಗೆ ಗೋಳು. ಕತ್ತಲೆಯಾದರೆ ಹೊರಕ್ಕೆ ಬಾರ, ಅಲಂಕಾರಕ್ಕೆ ಗಂಡಸು.”
ಅಲಂಕಾರವೋ, ಚಮತ್ಕಾರವೋ, ಸದ್ಯ ಕಳ್ಳತನವಲ್ಲವೆಂದು ಧೈರ್ಯವಾಯಿತು. ಪರಸ್ಥಳಕ್ಕೆ ಬಂದು ಬಂಗಲಿ ವಾಸಕ್ಕೆ ಆಸೆಪಟ್ಟು ಇರುವುದೊಂದೆರಡು ಪಾತ್ರಪರಟಿ ಬಟ್ಟೆಬರೆಗಳನ್ನು ಕಳೆದುಕೊಂಡು ಬಿಟ್ಟರೆ ಆಮೇಲೇನು ಗತಿ!
ಇನ್ನು ಕೆಲವು ದಿನಗಳು ಕಳೆದವು. ಈಗ ಆ ವಿಕಾರಸ್ವರದ ವಿಚಾರವಾಗಿ ಮಾತನಾಡುವಷ್ಟು ಧೈರ್ಯವಾಯಿತು; ಆಮೇಲೆ ಕ್ರಮೇಣ ಆ ಮಾತನ್ನೆತ್ತಿ ಹಾಸ್ಯಮಾಡಿ ನಗುವ ಹಾಗಾಯಿತು. ಅಷ್ಟು ಹೊತ್ತಿಗೆ ಮತ್ತೊಂದು ರಾತ್ರಿ ಅದೇ ಕೂಗು, ಅದೇ ವಿಕಾರ ಸ್ವರ; ಆದರೆ ಈಗ ನಮಗೆ ಅಷ್ಟೊಂದು ಹೆದರಿಕೆ ಇಲ್ಲ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ಗೌರಿ ಹಬ್ಬದ ದಿವಸ ನನ್ನ ಭಾವಮೈದ ಮದರಾಸಿನಿಂದ ಬಂದು ಇಳಿದ. ನನ್ನ ಭಾವಮೈದನು ಬಹಳ ದಿನದಿಂದ ಮದರಾಸಿನಲ್ಲಿಯೇ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದು ಅಲ್ಲಿಯವರ ಹಾಗೇ ಆಗಿ ಬಿಟ್ಟಿದ್ದಾನೆ-ಲುಂಗಿ, ಕೋಟು, ಉತ್ತರೀಯ, ತಲೆಗೆ ಕುಚ್ಚುಬಿಟ್ಟಿರುವ ಲಪ್ಪಟೆ, ಬಾಯಿಗೆ ಎಲೆಅಡಿಕೆ ಹೊಗೆಸೊಪ್ಪು; ಮಾತಿನಲ್ಲಿ ತಮಿಳುಸ್ವರ ಇತ್ಯಾದಿ. ಮದರಾಸಿನವರಿಗೆ, ನಮ್ಮ ದೇಶ ರಸಬಾಳೆಯ ಹಣ್ಣಿನ ಹಾಗೆ. ಆದ್ದರಿಂದ ನಾವು ಇಲ್ಲಿಗೆ ಬಂದಮೇಲೆ ಮೊದಲನೆಯ ಹಬ್ಬಕ್ಕೇ ಬಂದುಬಿಟ್ಟನು.
ಗಾಡಿ ಗೇಟಿನ ಹತ್ತಿರ ನಿಂತಿತು. ನನ್ನ ಭಾವಮೈದುನನು ಇಳಿದು ಬಾಗಿಲ ಹತ್ತಿರ ಬರೆದಿದ್ದ ಹೆಸರನ್ನು ಓದುತ್ತಿದ್ದನು. ಮನೆಯ ಯಜಮಾನನು, ಅಲ್ಲಿ ನಿಂತಿದ್ದವನು, ಅವನನ್ನು ಕಂಡೊಡನೆಯೇ ಬಾಗಿಲು ಹಾಕಿಕೊಂಡು ಹಿಂತಿರುಗಿ ಹಿಂತಿರುಗಿ ನೋಡುತ್ತ ಓಡಿ ಬಂದು ಬಿಡೋಣವೇ? ನಾನು ಕಿಟಕಿಯಿಂದ ಕಂಡು ಹೋಗಿ ಕರೆದುಕೊಂಡು ಬಂದೆ.
“ಅದೇಕಯ್ಯ ಹಾಗೆ ಓಡಿಹೋಯಿತು ಆ ಗೂಬೆ? ಪೊಲೀಸಿನವರನ್ನು ಕಂಡ ಕಳ್ಳನ ಹಾಗೆ?” ಎಂದು ನನ್ನ ಭಾವಮೈದುನ ಕೇಳಿದ.
”ಯಾಕೋಪ್ಪ, ಗೊತ್ತಿಲ್ಲ. ಆತ ಇರುವುದೇ ಹಾಗೆ” ಎಂದೆ ನಾನು.
ಆವೊತ್ತೆಲ್ಲಾ ಆತನು ಹೊರಗೆ ಬಂದದ್ದೇ ಇಲ್ಲ. ಆತನನ್ನು ಕೆಣಕಬೇಕೆಂದು ನನ್ನ ಭಾವಮೈದುನನಿಗೆ ಆಸೆ. ನಾನು ‘ಹೋಗಲಿ ಬಿಡೊ!’ ಎಂದೆ. ಮನೆಯ ಯಜಮಾನಿ ಮಾತ್ರ ಎರಡುಮೂರು ಸಾರಿ ನಮ್ಮ ಮನೆಯ ಮುಂದೆ ಸುಳಿದಾಡಿ, ಎಂದೂ ಒಳಕ್ಕೆ ಬರದಿದ್ದವಳು ಆವೊತ್ತು ಏನೋ ನೆವ ಹಾಕಿಕೊಂಡು ಒಳಕ್ಕೆ ಬಂದು ನಮ್ಮ ಯಜಮಾನತಿಯನ್ನು ಕುರಿತು ಆ ಮಾತು ಈ ಮಾತು ಆಡುತ್ತಾ ಬಂದವರು ಯಾರು ಏನು ಎಂದು ವಿಚಾರಿಸಿಕೊಂಡು ಹೋದಳು.
ಊಟವಾದ ಮೇಲೆ ಅದು ಇದು ಹರಟೆ ಹೊಡೆಯುತ್ತಾ ಹಾಲಿನಲ್ಲಿ ಕುಳಿತಿದ್ದೆವು. ಇವೊತ್ತು ಇನ್ನೂ ಹಗಲಿನಲ್ಲಿಯೇ, ಹಿಂದಿನಂತೆ ಘೋರವಾದ ಕೂಗು- “ಅಯ್ಯೋ! ಅಯ್ಯೋ!” ಎಂದು ಉಸಿರು ಸಿಕ್ಕಿಕೊಂಡು ಸಂಕಟಪಡುತ್ತಿರುವವರಂತೆ ಕೂಗು! ನನ್ನ ಭಾವಮೈದುನನು ತಟ್ಟನೆ ಪರದೆಯನ್ನು ತಳ್ಳಿಕೊಂಡು ಆಚೆ ಕಡೆಗೆ ನುಗ್ಗಿದ. ನೋಡುತ್ತಾನೆ! -ಹಿಂದೆ ನಾನು ಮೊದಲ ಸಾರಿ ಕಂಡಂತೆಯೇ ಆ ಮುದುಕ ಒಂದು ಚಾಪೆಯ ಮೇಲೆ ಒಂದು ಬೆಂಡುಮರದ ತುಂಡನ್ನು ತಲೆ ದಿಂಬಿಗೆ ಇಟ್ಟುಕೊಂಡು ಮಲಗಿದ್ದಾನೆ!- ಕೂಗಿಕೊಳ್ಳುತ್ತಿದ್ದಾನೆ! “ಸ್ವಾಮೀ, ಸ್ವಾಮೀ, ಯಾಕೆ ಕೂಗಿಕೊಳ್ಳುತ್ತೀರಿ, ಎಚ್ಚರ ಮಾಡಿಕೊಳ್ಳಿ, ಕನವರಿಕೆಯೇನು?” ಎಂದು ಅಲ್ಲಾಡಿಸಿ ನನ್ನ ಭಾವಮೈದುನನು ಎಚ್ಚರ ಮಾಡಿದನು. ಮುದುಕನು ಕಣ್ಣು ಬಿಟ್ಟದ್ದೇ ತಡ! ನೋಡಿ ಕಿರಿಚಿಕೊಂಡು ಪುನಃ ಕಣ್ಣು ಮುಚ್ಚಿಕೊಂಡು ಮಖಾಡೆಯಾಗಿ ಮಲಗಿಬಿಟ್ಟನು. ಅಷ್ಟು ಹೊತ್ತಿಗೆ ಆತನ ಅತ್ತೆಯು ”ಏನಿದು ಹುಡುಗಾಟ, ಎಚ್ಚರ ಮಾಡಿಕೋಬಾರದೆ! ಹಗಲು ಹೊತ್ತೂ ಆರಂಭವಾಗಿ ಹೋಯಿತಲ್ಲ ನಿಮ್ಮ ಅವಾಂತರ!” ಎಂದು ಕೂಗಿಕೊಂಡು ಬಂದು, ಅವರ ಹತ್ತಿರ ನನ್ನ ಭಾವಮೈದುನ ನಿಂತಿರುವುದನ್ನು ನೋಡಿದಳು. ನಾಲ್ಕು ಕಣ್ಣುಗಳೂ ಸೇರಿದವು. ಆಕೆ ಸುಮ್ಮನೆ ನಿಂತುಬಿಟ್ಟಳು. ‘ಪುಕಲು’ ಎಂದು ಇತರರನ್ನು ಅಲ್ಲಗಳೆದವಳು ತಾನೇ ನಿಂತ ಕಡೆಯಲ್ಲಿಯೇ ನೀರು ನೀರಾದಳು. ಕೊನೆಗೆ ಧೈರ್ಯವನ್ನು ತೆಗೆದುಕೊಂಡು, “ಅವರನ್ನೇನು ಮಾಡುತ್ತೀರಪ್ಪ? ಹೋಗಿ ನಿಮ್ಮಷ್ಟಕ್ಕೆ ನೀವು!” ಎಂದಳು. ನನ್ನ ಭಾವಮೈದುನನೂ “ನಾನೇನು ಮಾಡುತ್ತೇನಮ್ಮ ಅವರನ್ನ?” ಎಂದುಕೊಳ್ಳುತ್ತ ಬಂದು ಬಿಟ್ಟನು. ಬರುತ್ತಾ ಅಲ್ಲಿದ ಪಠಗಳು ಕಣ್ಣಿಗೆ ಬಿದ್ದವು. ಅವುಗಳನ್ನು ನೋಡಿಕೊಂಡು ಬರುತ್ತಾ, “ಅಲ್ಲಿರುವ ಪಠ ನೋಡಿದೆಯಾ ಭಾವ? ಅದು ನನ್ನ ಮುಖದ ಹಾಗೇ ಇಲ್ಲವೇ?” ಎಂದು ಕೇಳಿದ. ”ಹೌದು ಹೌದು, ನಾನು ಬಂದ ದಿನವೇ ಅಂದುಕೊಂಡೆ. ಈ ಮುಖವನ್ನು ಎಲ್ಲಿಯೋ ನೋಡಿದ್ದೇನೆ ಅಂತ. ನೀನು ಚುಕ್ಕಿಬಟ್ಟನ್ನು ಬಿಟ್ಟು ಹಣೆಯಲ್ಲಿ ದಪ್ಪಕ್ಕೆ ಗಂಧದ ಗೀರನ್ನು ಎಳೆದುಕೊಂಡರೆ ನೀನು ಹಾಗೇ ಕಾಣುತ್ತೀಯೇ!” ಎಂದು ನಾನು ಉತ್ತರಕೊಟ್ಟೆ.
*
ಗಣೇಶನ ಹಬ್ಬ ಮಾಡಿಕೊಂಡು ನನ್ನ ಭಾವಮೈದುನನು ಊರಿಗೆ ಹೊರಟುಹೋದನು. ಅಷ್ಟು ಹೊತ್ತಿಗೆ ನಾವು ಆ ಮನೆಗೆ ಬಂದು ಒಂದು ತಿಂಗಳಾಯಿತು. ನಾನು ಬಾಡಿಗೆಯನ್ನು ತೆಗೆದುಕೊಂಡು ಹೋಗಿ ಕೊಟ್ಟು ರಸೀದಿಯನ್ನು ಕೇಳಿದೆ. ಮುದುಕನು ಬಾಡಿಗೆ ತೆಗೆದುಕೊಳ್ಳಲಿಲ್ಲ. ನಾನು “ಏಕೆ?” ಎಂದು ಕೇಳಿದೆ.
“ನೀವು ಕೊಟ್ಟ ಒಂದು ತಿಂಗಳ ಅಡ್ವಾನ್ನು ಬಾಡಿಗೆ ಇದೆಯಲ್ಲಾ!”
“ಅದು ಅಡ್ವಾನ್ನು; ನಿಮ್ಮ ಮೇಲಿರಲಿ; ತಿಂಗಳು ತಿಂಗಳಿಗೆ ಬೇರೆ ಕೊಡುತ್ತಾ ಹೋಗಬೇಕಲ್ಲ!”
“ಹಾಗಂದರೆ ?”
“ನೀವು ಮನೆ ಬಿಟ್ಟು ಬಿಡಿ!”
”ಇದೇನು ಸ್ವಾಮಿ ಹೀಗಂತೀರಿ? ಇನ್ನೂ ನಾವು ಈ ಮನೆಗೆ ಬಂದು ಒಂದು ತಿಂಗಳು; ಆಗಲೇ ಹೊರಡು ಅಂತೀರಿ?”
“ಇಲ್ಲ, ನಮಗೇ ಬೇಕಾಗಿದೆ.”
“ಹಾಗಿದ್ದರೆ ನೀವೇ ಇಟ್ಟುಕೊಂಡಿರಬಹುದಾಗಿತ್ತಲ್ಲ. ಯಾಕೆ ಬಾಡಿಗೆಗೆ ಕೊಟ್ಟಿರಿ?”
“ಯಾಕಾದರೂ ಆಗಲಿ; ನೀವು ಬಿಟ್ಟುಬಿಡಿ. ನಮ್ಮ ಅತ್ತೆಯವರು ಹಾಗೆ ಹೇಳಿದ್ದಾರೆ: ಅವರದು ಮನೆ.”
ನಾವು ಮಾಡಿದ ಅಪರಾಧವೇನು ಗೊತ್ತಾಗಲಿಲ್ಲ; ನನ್ನ ಭಾವಮೈದುನನೂ ಏನೂ ಅಂದಿರಲಾರ; ಆದರೆ ಅವನು ಬಂದಾಗಿನಿಂದ ಮನೆಯವರ ನಡತೆಯೇ ಒಂದು ಬಗೆಯಾಗಿಹೋಗಿತ್ತು. ನಾನು ಮನೆಯಾಕೆಗೆ ಎಷ್ಟೆಷ್ಟೋ ಹೇಳಿದೆ- ನನಗೆ ಪುರುಸೊತ್ತಿಲ್ಲ; ಮತ್ತೊಬ್ಬರ ಸಹಾಯವಿಲ್ಲ; ಮತ್ತೊಂದು ಮನೆ ನೋಡಿಕೊಂಡು ಹೋಗುತ್ತೇನೆ; ಇಲ್ಲದಿದ್ದರೆ ನವರಾತ್ರಿ ರಜ ಬರಲಿ, ನಮ್ಮ ಹಳ್ಳಿಗಾದರೂ ಹೊರಟುಹೋಗುತ್ತೇನೆ… ಎಂದು ಮುಂತಾಗಿ ಏನೇನೋ ಹೇಳಿದೆ. ಆಕೆ ಯಾವ ಮಾತಿಗೂ ಒಪ್ಪಲಿಲ್ಲ. ಆವೊತ್ತಿನಿಂದ ಮೂರು ದಿನದಲ್ಲಿ ಮುವ್ವತ್ತು ಸಲ ”ಯಾವಾಗ ಮನೆ ಬಿಡುತ್ತೀರಿ?” ಎಂದು ಕೇಳಿದಳು. ನಾನು ಸ್ವಲ್ಪ ಸುಳ್ಳಿಗೆ ಆರಂಭ ಮಾಡಿ, ಮನೆ ನೋಡುತ್ತೇನೆ, ನೋಡುತ್ತಿದ್ದೇನೆ, ನೋಡಿದ್ದೇನೆ ಎಂದು ಹೇಳುತ್ತಲೆ ಬಂದೆ. ಕೊನೆಗೆ ಮಾತಿಗೆ ಮಾತು ಬೆಳೆದು, ”ಹೋಗುವಷ್ಟರಲ್ಲೇ ಆತುರವಾದರೆ ಹೇಗೆ ಮಾಡುವುದು! ಹೋಗುವುದಿಲ್ಲ ಎಂದರೆ ಏನು ಮಾಡುತ್ತೀರಿ?” ಎನ್ನಬೇಕಾಯಿತು. ಆಕೆ ಮಾತಿನವಳಲ್ಲ, ಕೆಲಸದವಳು; ಆದ್ದರಿಂದ ಮಾತು ಅಲ್ಲಿಗೇ ನಿಂತಿತು.
ಮರುದಿನ ಕಛೇರಿಯಿಂದ ಮನೆಗೆ ಬರುವ ಹೊತ್ತಿಗೆ ಅಡಿಗೆ ಮನೆಯ ನಲ್ಲಿ ಮುಚ್ಚಿಹೋಗಿತ್ತು. ವಿಚಾರಿಸಿದ್ದರಲ್ಲಿ, ಮನೆಯಾಕೆಯು ಯಾರೋ ನಲ್ಲಿಯ ಕೆಲಸದವರನ್ನು ಕರೆದುಕೊಂಡು ಬಂದು ಅದನ್ನು ಕೀಳಿಸಿ ಮುಚ್ಚಿಸಿಬಿಟ್ಟಿದ್ದಳೆಂದು ಗೊತ್ತಾಯಿತು. ಬಚ್ಚಲ ಮನೆಯಲ್ಲಿ ಕೈಕಾಲು ತೊಳೆದುಕೊಳ್ಳೋಣವೆಂದು ಹೋಗಿ ನಲ್ಲಿ ತಿರುಗಿಸಿದರೆ ಅದರಲ್ಲಿ ನೀರಿಲ್ಲ. ಅದರ ಆಚೆಯ ಬಾಯಿಯು ಇನ್ನೊಂದು ಬಚ್ಚಲು ಮನೆಯಲ್ಲಿತ್ತು. ಅದನ್ನು ತಿರುಗಿಸಿ ನೀರು ಬಿಟ್ಟು ಆ ಬಾಗಿಲಿಗೆ ಬೀಗಹಾಕಿತ್ತು. ಆ ನಲ್ಲಿ ಸ್ವಲ್ಪ ತಗ್ಗಿನಲ್ಲಿದ್ದದ್ದರಿಂದ ನಮ್ಮ ಬಚ್ಚಲು ಮನೆಗೆ ನೀರಿಲ್ಲ. ನನಗೆ ಬ್ರಹ್ಮತಿ ಸಿಟ್ಟು ಬಂತು! ಕಾಲನ್ನು ತೊಳೆದುಕೊಳ್ಳದೇ ಹಾಗೇ ಮನೆಗೆ ನುಗ್ಗಿ ಆ ಯಜಮಾನತಿಯನ್ನು ಹಿಡಿದು “ಏನಮ್ಮ ಹೀಗೆ ಮಾಡುವುದೇ? ಒಳ್ಳೆಯ ಮಾತಿನಲ್ಲಿ ‘ಹೋಗಿ’ ಎಂದರೆ ಹೋಗುವುದಿಲ್ಲವೇ? ನೀರು ನಿಲ್ಲಿಸಿ ಓಡಿಸಬೇಕೆ? ನಾಳೆ ದಿನ ಉಸಿರುಕಟ್ಟಿ ಕೊಲ್ಲಿ, ವಿಷ ಹಾಕಿಬಿಡಿ!” ಎಂದೆ.
”ಒಳ್ಳೇ ಮಾತಿನಲ್ಲಿ ಹೋಗಬೇಡಿ ಎಂದು ಹೇಳಿದೆನೇ? ಹೋಗಿ ಹೋಗಿ ಅಂತ ಈಗ ಒಂದು ತಿಂಗಳಿಂದ ಗಂಟಲು ಕಿತ್ತುಕೊಳ್ಳುತ್ತಿದ್ದೇನೆ!”
“ಇರುವತನಕ ನೀರಿಲ್ಲದಿದ್ದರೆ ಹೇಗೆ ಮಾಡುವುದು?”
“ಹೇಗಾದರೂ ಮಾಡಿ; ನಲ್ಲಿ ಸೋರಿ ಸೋರಿ ಗೋಡೆಯೆಲ್ಲಾ ಬಿದ್ದುಹೋಗುವ ಹಾಗಿತ್ತು. ನಮ್ಮ ಯೋಚನೆ ನಮಗೆ.”
ಇದು ಒಳ್ಳೇ ‘ಪ್ಯಾದೆ ಮಾತು’ ಆಯಿತೆಂದು ಮರುದಿನ ಪುನಃ ಯಾತ್ರೆ ಹೊರಟಿದ್ದೇ! ದೊಡ್ಡ ಊರಿನಲ್ಲಿ ನಲ್ಲಿ ಮುಚ್ಚಿಹೋದರೆ ಏನು ಗತಿ? ಹತ್ತಿರದಲ್ಲಿ ಭಾವಿಯೇ? ಕೆರೆಯೇ? ಇದ್ದರೆ ತಾನೆ, ನಲ್ಲಿಯನ್ನು ಉಪಯೋಗಿಸಿ ದುರಭ್ಯಾಸವಾಗಿ ಮೈ ಬೆಳಸಿದವರು ದೂರದ ನೀರು ಹೊರುವುದು ನಿಜವೊ?
ಆ ಮನೆಯನ್ನೇನೋ ಬಿಟ್ಟುಬಿಟ್ಟೆವು. ಕಟ್ಟಿಸಿದವರಿಗೆ ಒಂದೇ ಮನೆಯಾದರೆ, ಕಟ್ಟಿಸದಿದ್ದವರಿಗೆ ಊರೆಲ್ಲಾ ಮನೆ. ಪುನಃ ಒಂದು ಒಳ ಸಂಸಾರ! ಬಡವರಿಗೆ ಸ್ವಂತ ಮನೆ, ಸ್ವತಂತ್ರವಾದ ಮನೆ, ಎಲ್ಲಿ ಬರಬೇಕು? ಅವರ ಸಂಬಳವೆಲ್ಲಾ ಹಾಕಿದರೂ ಇಲ್ಲ!
ಒಂದು ದಿನ ಆ ಮಾತು ಈ ಮಾತು ಬಂದು ಈ ಮನೆಯ ಆಕೆ ನಮ್ಮ ಆಕೆಯನ್ನು ಕುರಿತು ಇದಕ್ಕಿಂತ ಹಿಂದೆ ಯಾವ ಮನೆಯಲ್ಲಿದ್ದೆವೆಂದು ಕೇಳಿದಳು. ಇಂಥ ಮನೆಯೆಂದು ಹೇಳಿದಮೇಲೆ ಆಕೆ ಅಸಹ್ಯ ಪಟ್ಟುಕೊಂಡು ”ಆ ಮನೆಯೇ? ಆ ಮಗನನ್ನ ತಿಂದುಕೊಂಡವಳ ಮನೆ?” ಎಂದು ಕೇಳಿದಳು. ನಮ್ಮವಳು ಅವಿಶ್ವಾಸದಿಂದಲೂ ಆಶ್ಚರ್ಯದಿಂದಲೂ “ಆಕೆಗೆ ಗಂಡುಮಕ್ಕಳೇ ಇಲ್ಲವಂತೆ; ಒಬ್ಬಳೇ ಹೆಣ್ಣು ಮಗಳಂತೆ?” ಎಂದು ಪ್ರಶ್ನೆಮಾಡುವ ಸ್ವರದಲ್ಲಿ ಕೇಳಿದಳು. ಅದಕ್ಕೆ ಆಕೆ-
”ತನ್ನ ಮಗನಲ್ಲ- ತನ್ನ ಭಾವನ ಮಗ. ಯಾರಾದರೇನು? ಸತ್ತಾಗ ಹತ್ತು ದಿನ ಸೂತಕ ಬಿದ್ದಿರಲಿಲ್ಲವೇ? ಅವನು ಬದುಕಿದ್ದರೆ ಆಕೆ ತಿನ್ನುತ್ತಿರುವ ಆಸ್ತಿಯನ್ನೆಲ್ಲಾ ಅನುಭವಿಸಿಕೊಂಡಿರುತ್ತಿದ್ದ.”
“ಸರಿಸರಿ! ಏನು ಹಾಗೆಂದರೆ? ಜನಗಳು ಏನಾದರೂ ಒಂದು ಹೆಸರಿಡುತ್ತಾರೆ! ಅವನ ಆಯುಸ್ಸು ತೀರಿತು, ಅವನು ಹೋದ…”
“ನೀವು ಏನಾದರೂ ಅಂದುಕೊಳ್ಳಿ! ಕಂಡವರೇ ಹೇಳುತ್ತಾರೆ:- ಆ ಮನೆಯಲ್ಲಿ ಈಗಲೂ ಹಗಲು ಹೊತ್ತೇ ಆ ಹುಡುಗ ಕಾಣಿಸಿಕೊಳ್ಳುತ್ತಾನಂತೆ. ಮಹಡಿಯ ಮೇಲೆ ನಿಂತಹಾಗೆ ಇರುತ್ತಂತೆ, ಚಿಕ್ಕ ಮನೆಯಲ್ಲಿ ಕೂತ ಹಾಗಿರುತ್ತಂತೆ, ಮಂಚದ ಮೇಲೆ ಮಲಗಿರುವ ಹಾಗಿರುತ್ತಂತೆ; ಮನೆಯವರನ್ನು ಅನ್ನ ತಿನ್ನಗೊಡಿಸುವುದಿಲ್ಲವಂತೆ, ನೀರು ಕುಡಿಯಗೊಡಿಸುವುದಿಲ್ಲವಂತೆ, ರಾತ್ರಿ ಮಲಗಿದ್ದರೆ ಎದೆಯ ಮೇಲೆ ಕೂತುಕೊಂಡು ಕತ್ತು ಮಿಸುಕುತ್ತಾನಂತೆ! ಅದಕ್ಕೇ, ಯಾರಾದರೂ ಜೊತೆಗೆ ಇರಲಿ ಅಂತ, ಮತ್ತು ದೊಡ್ಡದು ಎಂಬ ನೆವ ಹೇಳಿಕೊಂಡು, ಆಕೆ ಸಂಸಾರಕ್ಕೆ ಬಾಡಿಗೆಗೆ ಕೊಡುತ್ತಿರುವುದು. ಯಾರು ಬಂದರೂ ಆ ಮನೆಯಲ್ಲಿರುವುದು ತಿಂಗಳೊ ಹದಿನೈದು ದಿನವೊ ಅಷ್ಟೆಯೆ. ಒಬ್ಬರು ಮಾತ್ರ ಯಾರೋ ಒಂದು ವರ್ಷವಿದ್ದರು. ಅವರು ಇರುವ ತನಕ ಯಾವ ಕಾಟವೂ ಇರಲಿಲ್ಲವಂತೆ…”
“ಯಾಕೆ?”
”ಯಾಕೆ? ಅವರು ತುಂಬ ಒಳ್ಳೆಯವರಂತೆ, ಸತ್ಯವಂತರಂತೆ, ಆಚಾರವಂತರಂತೆ.”
“ಮತ್ತೆ ಅವರನ್ನೂ ಯಾಕೆ ಹೊರಡಿಸಿದರು?”
“ವರ್ಗವಾಯಿತಂತೆ ಇನ್ಯಾವುದೊ ಊರಿಗೆ. ಅದನ್ನು ಕೇಳಿ, ಕಾಸು ಅಂದರೆ ಕಿಸಬಾಯಿ ಆಗುವ ಆ ಮನೆಯವರು, ‘ಬೇಕಾದರೆ ಇನ್ನೂ ಎರಡು ರೂಪಾಯಿ ಬಾಡಿಗೆ ಕಮ್ಮಿಮಾಡಿಕೊಡುತ್ತೇವೆ, ಈ ಊರಿನಲ್ಲೇ ಇದ್ದುಬಿಡಿ’ ಎಂದು ಹೇಳಿದರಂತೆ. ಸರ್ಕಾರ ನಮ್ಮ ಅಧೀನವೇ? ಯಾವುದೋ ಊರಿಗೆ ಹಾಕಿಬಿಟ್ಟರು.”
”ಇದೆಲ್ಲಾ ಬರೀ ಅಂತೆ ಕಂತೆಯೋ ಯಾರಾದರೂ ನೋಡಿದವರಿದ್ದಾರೆಯೋ?”
“ಸರಿಬಿಡಿ! ಎಲ್ಲರೂ ಹೇಳುತ್ತಾರೆ.”
“ಏನು ಹೇಳುತ್ತಾರೆ?”
“ಏನೇನೋ ಹೇಳುತ್ತಾರೆ!”
“ಹೇಳಿ! ನಾವೂ ಸ್ವಲ್ಪ ಕೇಳೋಣ.”

”ಆ ಮನೆಯಲ್ಲಿದ್ದಾಳಲ್ಲ, ರಾಕ್ಷಸಿ, ಮಡಿ ಹೆಂಗಸು ಅನ್ನಿಸಿಕೊಂಡವಳು, ಅವಳು ಆ ಹುಡುಗನಿಗೆ- ನಮಗೆ ಯಾಕಮ್ಮ ಆ ಮಾತು, ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತ! ಅಷ್ಟೇಕಮ್ಮ ಆ ಮನೆಯ ಹುಟ್ಟೇ ನೋಡಿ ಹೇಗಿದೆ!”
“ಹೇಗಿದೆ? ಗಾರೆಗಚ್ಚಿನ ತಾರಸಿಮನೆ; ಲಕ್ಷಣವಾಗಿಯೇ ಇದೆ!”
“ಗಾರೆಗಚ್ಚಾದರೇನು ಮುಖದಲ್ಲಿ ಗೋಳು ಸುರಿಯುತ್ತಿದೆ!”
“ಅದು ಇರುವುದೇ ಹಾಗೆ! ಕಟ್ಟಿಸಿದಾಗಿನಿಂದಲೂ ಸುಣ್ಣಬಣ್ಣ ಬಳಿಸಿಲ್ಲ, ಮಳೆನೀರು ಬಿದ್ದು ಬಿದ್ದ ಬೂದುಗಟ್ಟಿಕೊಂಡಿದೆ.”
”ಅದೂ ಹೋಗಲಿ! ಆ ಭೂಮಿಯಲ್ಲಿ ಬಿತ್ತಿದ ಬೆಳೆ ಕೂಡ ಬೆಳೆಯುವುದಿಲ್ಲವಲ್ಲ! ಹಿಂದೆ ಆ ಹುಡುಗಿ ಇದ್ದಾಗ ಕಾಂಪೌಂಡು ತುಂಬ ಹೂವೋ, ಹಣ್ಣೋ, ಅಷ್ಟು ಚೆನ್ನಾಗಿತ್ತು! ಈಗ ಕಾಂಪೌಂಡು ತುಂಬ ನೆಗ್ಗಲುಮುಳ್ಳು, ಮುಟ್ಟಿದರೆ ಮುನಿಯ! ರಾಗಿ ಜೋಳ ಕೂಡ ಬೆಳೆಯುವುದಿಲ್ಲ; ಗುತ್ತಿಗೆ ತಗೊಂಡವನೇ ಉಳಿಯುವುದಿಲ್ಲವಂತೆ!”
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
“ಇದೆಲ್ಲಾ ಹುಚ್ಚು. ಹಿತ್ತಲಲ್ಲಿ ಎಂಥ ಒಳ್ಳೆಯ ಚಕ್ಕೋತನ ಗಿಡವಿದೆ! ಗಿಡದ ತುಂಬ ಹಣ್ಣು! ಒಂದೊಂದು ಕಾಯಿ ಒಂದೊಂದು ತಲೆಬುರುಡೆಯ ಗಾತ್ರ!”
”ಆ ಹಣ್ಣು ತಿಂದವರು ಮಾತ್ರ ಇಲ್ಲ; ಅದರಲ್ಲಿ ಹಣ್ಣಾಗುವುದಕ್ಕೆ ಮುಂಚೆ ಕಾಯೇ ಕೊಳೆತು ಕೊಳೆತು ಬಿದ್ದು ಹೋಗುತ್ತೆ: ಇಲ್ಲ, ಹಣ್ಣಾದರೆ, ಅದರ ತುಂಬ, ಇಷ್ಟಿಷ್ಟು ಗಾತ್ರಕ್ಕೆ, ಅವರೆಕಾಯಿ ಹುಳುವಿನ ಹಾಗೆ ಹುಳು!”
“ಯಾವುದಕ್ಕೆ ಯಾವುದು ಸಂಬಂಧ? ಹುಡುಗ ಹೋದರೆ ಹೀಗೆಲ್ಲ ಆಗಬೇಕೆ?”
“ನನಗೇನು ಗೊತ್ತು? ಎಲ್ಲರೂ ಆಡಿಕೊಳ್ಳುತ್ತಿರುವುದನ್ನು ಹೇಳಿದೆ. ನೀವೂ ಇನ್ನೆರಡು ದಿನ ಅಲ್ಲಿಯೇ ಇದ್ದಿದ್ದರೆ ನಿಮಗೇ ಎಲ್ಲಾ ಗೊತ್ತಾಗುತ್ತಿತ್ತೇನೋ!”
*
ನನಗೆ ದೆವ್ವಭೂತಗಳೆಂದರೆ ನಂಬಿಕೆಯೇನೂ ಇಲ್ಲ. ಆದರೆ ಇದನ್ನೆಲ್ಲಾ ಕೇಳಿದಮೇಲೆ ಹಿಂದೆ ನಡೆದದ್ದೆಲ್ಲಾ ಒಂದೊಂದಾಗಿ ಜ್ಞಾಪಕಕ್ಕೆ ಬಂದು, ಆ ಮನೆಗೆ ‘ಸುಮ್ಮನೆ ಬಂದು ಇರು’ ಎಂದರೂ ಪುನಃ ಅಲ್ಲಿಗೆ ಹೋಗುವುದಿಲ್ಲ ಎಂದು ನಿರ್ಧಾರ ಮಾಡಿಕೊಂಡುಬಿಟ್ಟೆ. ಈಗಲೂ ಕತ್ತಲೆಯ ಕಾಲದಲ್ಲಿ ಆ ಕಡೆ ಹೋದಾಗ ಅಲ್ಲಿ ಬಗ್ಗಿ ನೋಡಬೇಕೆಂಬ ಕುತೂಹಲವುಂಟಾಗುತ್ತದೆ; ಜೊತೆಯಲ್ಲಿಯೇ ಏನೋ ಹೆದರಿಕೆ, ಅಧೈರ್ಯ; ಉತ್ತರ ಕ್ಷಣದಲ್ಲಿಯೇ, ನಾನು ಯಾರಿಗೆ ಏನು ಅನ್ಯಾಯ ಮಾಡಿದ್ದೇನೆ? ನನ್ನನ್ನು ಯಾವ ದೆವ್ವ ಏನು ಮಾಡೀತು? ಹಾಗಿದ್ದರೆ ಆ ಮನೆಯಲ್ಲಿದ್ದಾಗಲೇ ನನ್ನನ್ನು ಪೀಡಿಸಬಾರದಾಗಿತ್ತೇನು? -ಎಂದು ಮನಸ್ಸಿನಲ್ಲಿಯೇ ಒಂದು ಒಣ ಧೈರ್ಯ. ಈ ಮಧ್ಯೆ ಕಾಲು ಮಾತ್ರ ಹೇಳಿದ ಮಾತು ಕೇಳದೆ, ಸರಸರನೆ ಮುಂದೆ ಹೋಗಿಬಿಡುವುದು. ಈಗಲೂ ನಾವಿದ್ದ ಕಡೆಯ ಬಾಗಿಲಿನ ಮೇಲೆ To let ಎಂದು ಬರೆದೇ ಇದೆ. ಬಾಗಿಲು ಕಿಟಕಿ ಯಾವಾಗಲೂ ಹಾಕಿಯೇ ಇರುವುದರಿಂದ, ಈಚೆಗೆ ಯಾರಾದರೂ ಬಂದಿದ್ದರೋ ಇಲ್ಲವೋ ತಿಳಿಯದು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಶ್ರೀಪತಿಯ ಕಥೆಗಳು’, ಕಾವ್ಯಾಲಯ, ಮೈಸೂರು, 1948)

ಎ.ಆರ್. ಕೃಷ್ಣಶಾಸ್ತ್ರಿಗಳ ‘ಬಂಗಲಿಯ ವಾಸ’
ದಿ. ಎ.ಆರ್. ಕೃಷ್ಣಶಾಸ್ತ್ರಿಗಳವರು (ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ 1890-1968) ಕನ್ನಡದಲ್ಲಿ ಪ್ರಸಿದ್ಧ ವಿದ್ವಾಂಸರೆಂದು, “ಪ್ರಬುದ್ಧ ಕರ್ನಾಟಕ’ದ ಹಿರಿಮೆಯ ದಿನಗಳಲ್ಲಿ ಅದರ ಸಂಪಾದಕರೆಂದು, ಕನ್ನಡ ಭಾಷೆಯ ಗೌರವಕ್ಕಾಗಿ ಹೋರಾಡಿದವರೆಂದು ಸಾಕಷ್ಟು ಪರಿಚಿತರಾಗಿದ್ದಾರೆ. ಕನ್ನಡದ ಶ್ರೇಷ್ಠ ಕತೆಗಾರರಲ್ಲೊಬ್ಬರೆಂದು ಕೂಡ ಅವರು ಗುರುತಿಸಲ್ಪಟ್ಟಿದ್ದಾರೆ. 1923ರಿಂದ 1944ರ ನಡುವಿನ ಅವಧಿಯಲ್ಲಿ ಅವರು ”ಪ್ರಬುದ್ಧ ಕರ್ನಾಟಕ”ದಲ್ಲಿ ಕಾಲಕಾಲಕ್ಕೆ ಶ್ರೀಪತಿ, ಕಮಲ, ಕಪ್ಪಣ್ಣ, ರಾಮಣ್ಣ, ಗೋಪಾಲ ಮುಂತಾದ ಹೆಸರುಗಳಿಂದ ಪ್ರಕಟಿಸಿದ ಹನ್ನೆರಡು ಕತೆಗಳು “ಶ್ರೀಪತಿಯ ಕಥೆಗಳು” (1948) ಎಂಬ ಸಂಕಲನದಲ್ಲಿ ಒಟ್ಟಾಗಿ ಬಂದಿವೆ. ಈಚೆಗೆ ಈ ಸಂಕಲನದ ಎರಡನೆಯ ಮುದ್ರಣದಲ್ಲಿ (1966) ಇನ್ನೊಂದು ಹೊಸ ಕಥೆ (1949) ಸೇರಿದೆ. ಇವುಗಳಲ್ಲಿ ಮೊದಲ ಒಂಬತ್ತು ಕಥೆಗಳು ಶ್ರೀಪತಿಯ ಹೆಸರಿನಲ್ಲಿ 1930ಕ್ಕಿಂತ ಮುಂಚೆ ಬಂದುವು.
ಕೃಷ್ಣಶಾಸ್ತ್ರಿಗಳಿಗೆ ಉತ್ತಮ ಕತೆಗಾರರೆಂದು ಮನ್ನಣೆ ಸಿಕ್ಕದ್ದು ಸ್ವಲ್ಪ ತಡವಾಗಿ ಎಂದೇ ಹೇಳಬೇಕು. ಆ ವೇಳೆಗೆ ಅವರ ಸಾಕಷ್ಟು ಕತೆಗಳು ಪ್ರಕಟವಾಗಿದ್ದರೂ ಅ.ನ.ಕೃ. ಅವರ “ಕಾಮನಬಿಲ್ಲು”(1933)ದಲ್ಲಿ ಅವರ ಕತೆ ಸೇರಿಲ್ಲ. ತ.ಸು. ಶಾಮರಾಯರ “ಬೇವು-ಬೆಲ್ಲ”ದ ಪೀಠಿಕೆ (1951)ಯಲ್ಲಾಗಲಿ, ಕುರ್ತಕೋಟಿಯವರ “ಯುಗಧರ್ಮ ಹಾಗೂ ಸಾಹಿತ್ಯದರ್ಶನ”(1962)ದಲ್ಲಾಗಲಿ ಅವರ ಹೆಸರಿನ ಉಲ್ಲೇಖವಿಲ್ಲ. ಆದರೆ ಅವರ ಕಥೆಗಳನ್ನು ಕುರಿತು ರಂ.ಶ್ರೀ. ಮುಗಳಿ (ವಿಮರ್ಶೆಯ ವ್ರತ), ಎಸ್.ವಿ. ಪರಮೇಶ್ವರ ಭಟ್ಟ (ಅಭಿವಂದನೆ), ಎಚ್.ಜೆ. ಲಕ್ಕಪ್ಪಗೌಡ (ಎ.ಆರ್.ಕೃ. ಜೀವನ ಮತ್ತು ಕೃತಿಗಳು) ಮೊದಲಾದವರ ಲೇಖನಗಳು ಬಂದಿವೆ. ದೇ.ಜ.ಗೌ. ಸಂಪಾದಿಸಿದ “ಹೊಸಗನ್ನಡ ಕಥಾಸಂಗ್ರಹ”(1957)ದಲ್ಲಿ ಅವರ ‘ಗೋಟಿನಲ್ಲಿ ಸಿಕ್ಕಿಕೊಂಡ ಕತ್ತರಿ’ ಎಂಬ ಕಥೆಗೆ ಪ್ರಾತಿನಿಧ್ಯ ಸಿಕ್ಕಿದೆ. ಎಲ್.ಎಸ್. ಶೇಷಗಿರಿರಾಯರ ಸಾಹಿತ್ಯ ಅಕಾಡೆಮಿಯ ಸಂಕಲನದಲ್ಲಿ (1962) ‘ಗುರುಗಳ ಮಹಿಮೆ’ ಸೇರಿತು. ಆದರೂ ಈಚೆಗೆ ಎಂ.ಜಿ. ಕೃಷ್ಣಮೂರ್ತಿಯವರು ತಮ್ಮ Modern Kannada Fiction (1967)ದಲ್ಲಿ ‘ಗುರುಗಳ ಮಹಿಮೆ’ಯನ್ನು ಸೇರಿಸಿ ಅದಕ್ಕೆ ಬರೆದ ವಿಶ್ಲೇಷಣೆ-ವಿಮರ್ಶೆಗಳು ಅವರ ಕಥೆಗಳ ಅಭ್ಯಾಸಕ್ಕೆ ಹೊಸ ತಿರುವನ್ನು ಕೊಟ್ಟವೆಂದು ಹೇಳಬೇಕು. ಅಲ್ಲಿಂದ ‘ಗುರುಗಳ ಮಹಿಮೆ’ ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಒಂದೆಂದು ಸ್ಥಾಪಿತವಾದಂತಾಗಿದೆ. ಅನಂತರವೇ ಜಿ.ಎಚ್. ನಾಯಕರ “ಕನ್ನಡ ಸಣ್ಣಕತೆಗಳು” (1978) ಮತ್ತು ಎಲ್.ಎಸ್. ಶೇಷಗಿರಿರಾಯರು ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿಕೊಟ್ಟಿರುವ Sixty Years of the Kannada Short Story (1978)ಗಳಲ್ಲಿ ಅದಕ್ಕೆ ಪ್ರಾತಿನಿಧ್ಯ ಸಿಕ್ಕಿದ್ದು. ಇತ್ತೀಚಿಗೆ ‘ಪ್ರಿಸಂ’ ಪ್ರಕಟಿಸಿರುವ ‘ಶತಮಾನದ ಸಣ್ಣಕತೆಗಳು’ (ಸಂ: ಎಸ್. ದಿವಾಕರ್) ಸಂಕಲನದಲ್ಲೂ ಇದಕ್ಕೆ ಸ್ಥಾನ ದೊರೆತಿದೆ.
ಆದರೂ ಕೃಷ್ಣಶಾಸ್ತ್ರಿಗಳ ಇನ್ನುಳಿದ ಕತೆಗಳ ಕಡೆಗೆ ವಿಮರ್ಶಕರ ಗಮನ ಅಷ್ಟಾಗಿ ಹೋಗಿಲ್ಲ. ಈ ದೃಷ್ಟಿಯಿಂದಲೂ, ಮತ್ತು ಪುನರ್ವಿಮರ್ಶೆಯ ದೃಷ್ಟಿಯಿಂದಲೂ ಅವರ ಅಷ್ಟು ಪರಿಚಿತವಲ್ಲದ ಕತೆಯೊಂದನ್ನು ಇಲ್ಲಿ ಆರಿಸಲಾಗಿದೆ.
ಕೃಷ್ಣಶಾಸ್ತ್ರಿಗಳ ಕತೆಗಳೆಲ್ಲ ಬದುಕಿನ ಗಂಭೀರ ಸಮಸ್ಯೆಗಳನ್ನು ಕುರಿತವುಗಳಾಗಿವೆ. ಕಥೆಗಳ ಮುನ್ನುಡಿಯಲ್ಲಿ ಅವರೇ ಪ್ರಸ್ತಾಪಿಸಿರುವಂತೆ ಬದುಕಿನಲ್ಲಿಯ ದುಃಖದ ಹಿಂದಿನ ಕಾರಣಗಳನ್ನು ಇಲ್ಲಿ ಅವರು ಹುಡುಕಲೆತ್ನಿಸಿದ್ದಾರೆ. ‘ಗೋಟಿನಲ್ಲಿ ಸಿಕ್ಕಿಕೊಂಡ ಕತ್ತರಿ’ಯಂಥ ಅಪವಾದವಿದ್ದರೂ, ‘ಅತ್ತೆ’, ‘ಊಟದಲ್ಲಿ ಉಪಚಾರ’ದಂಥ ಹಾಸ್ಯಪ್ರಧಾನ ಬರೆಹಗಳಲ್ಲೂ (ಇವೆರಡೂ ಹರಟೆಯ ಪ್ರಕಾರದಲ್ಲಿ ಸೇರಬೇಕಾದುವು) ವಿರಸ, ನೋವುಗಳ ದನಿ ಇದೆ. ಆದರೆ ಈ ನೋವನ್ನು ಸೌಮ್ಯಗೊಳಿಸಬಲ್ಲ ಮೃದುಹಾಸ್ಯ ಅವರ ಬರವಣಿಗೆಯಲ್ಲಿದೆ. ‘ಬಂಗಲಿಯ ವಾಸ'(1930)ವೂ ಇಂಥ ದುಃಖದ ಹಿಂದಿನ ಕಾರಣಗಳನ್ನು ಹುಡುಕುವ ಕಥೆಯೇ ಆಗಿದೆ
‘ಬಂಗಲಿಯ ವಾಸ’ ಒಂದು ‘ದೆವ್ವದ ಕಥೆ’. ಕನ್ನಡ ನವೋದಯ ಸಾಹಿತ್ಯದಲ್ಲಿ ದೆವ್ವದ ಕತೆಗಳು ಬಹಳ ಹಿಂದಿನಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತ ಬಂದಿರುವುದು ಕುತೂಹಲಕರವಾಗಿದೆ. ಶ್ರೀನಿವಾಸ, ಭಾರತೀಪ್ರಿಯ, ಕೆ.ವಿ. ಅಯ್ಯರ್, ಕುವೆಂಪು, ಚದುರಂಗ ಮೊದಲಾದವರೆಲ್ಲ ಇಂಥ ಕುತೂಹಲಕರವಾದ ದೆವ್ವದ ಕತೆಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ದೆವ್ವದ ಕತೆಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು. 1) ದೆವ್ವದ ಅಸ್ತಿತ್ವದಲ್ಲಿ ನಂಬಿಕೆ ಸ್ಥಾಪಿಸುವಂಥವು 2) ಅಂಥ ನಂಬಿಕೆ ಸುಳ್ಳೆಂದು ಸ್ಥಾಪಿಸುವಂಥವು 3) ನಂಬಿಕೆಯನ್ನು ಸಂದಿಗ್ಧ ಸ್ಥಿತಿಯಲ್ಲಿ ಕೈಬಿಡುವಂಥವು 4) ನಂಬಿಕೆಯ ಪ್ರಶ್ನೆ ಅಮುಖ್ಯವಾಗಿ ದೆವ್ವ-ಪಿಶಾಚಿಗಳನ್ನು ಸಾಂಕೇತಿಕ ಉದ್ದೇಶಕ್ಕಾಗಿ, ಇಲ್ಲವೆ ತಾಂತ್ರಿಕ ಅನುಕೂಲಕ್ಕಾಗಿ ಬಳಸುವಂಥವು. ‘ಬಂಗಲಿಯ ವಾಸ’ ಇವುಗಳಲ್ಲಿ ಮೂರು ಮತ್ತು ನಾಲ್ಕನೆಯ ಗುಂಪುಗಳಿಗೆ ಏಕಕಾಲಕ್ಕೆ ಸೇರುವ ಒಂದು ವಿಶಿಷ್ಟವಾದ ಕಥೆ.
ದೆವ್ವದ ಕಥೆಗಳಲ್ಲಿ ಬರವಣಿಗೆಯ ದೃಷ್ಟಿಯಿಂದ ಮುಖ್ಯವಾದದ್ದು ರಹಸ್ಯಮಯವಾದ ವಾತಾವರಣವನ್ನು ನಿರ್ಮಿಸಿ ಓದುಗನ ಮೈ ನವಿರೇಳಿಸುವುದು ಮತ್ತು ಕುತೂಹಲವನ್ನು ಕಾಯ್ದುಕೊಂಡು ಹೋಗುವುದು. ಅನೇಕ ಕತೆಗಳು ಈ ಗುಣಗಳನ್ನು ಕಲಾತ್ಮಕವಾಗಿ ಸಾಧಿಸಿ ಆಕರ್ಷಕ ಪರಿಣಾಮ ಬೀರುತ್ತವೆ. ಆದರೆ ಹೆಚ್ಚಿನ ದೆವ್ವದ ಕತೆಗಳಲ್ಲಿ ಇದಕ್ಕಿಂತ ಹೆಚ್ಚಿನದೇನೂ ಇರುವುದಿಲ್ಲ. ಜೀವನವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇವು ಗೌಣವಾಗುತ್ತವೆ. ಅಂತೆಯೇ ಶ್ರೇಷ್ಠ ಸಾಹಿತ್ಯದಲ್ಲಿ ಇವುಗಳಿಗೆ ಸ್ಥಾನ ಸಿಗುವುದು ಅಪರೂಪ.
‘ಬಂಗಲಿಯ ವಾಸ’ದಲ್ಲೂ ಉತ್ತಮ ದರ್ಜೆಯ ರಹಸ್ಯಮಯವಾದ ವಾತಾವರಣದ ನಿರ್ಮಾಣವಿದೆ, ಕುತೂಹಲ ಕೆರಳಿಸುವ ನಿರೂಪಣೆ ಇದೆ. ವಿಮರ್ಶಕರು ಇದನ್ನು ಈಗಾಗಲೇ ಸರಿಯಾಗಿ ಗುರುತಿಸಿದ್ದಾರೆ. ಮುಗಳಿಯವರ ಈ ಮಾತುಗಳನ್ನು ನೋಡಿ: “ಕಥನ ಕುತೂಹಲ ದೃಷ್ಟಿಯಿಂದ ಈ ಸಂಗ್ರಹದಲ್ಲಿ ಇದು ಮೇಲಾದ ಕತೆಯೆನ್ನಲು ಅಡ್ಡಿಯಿಲ್ಲ… ಈ ಕಥಾ ವಸ್ತುವಿನಲ್ಲಿಯ ಗೂಢ ರಹಸ್ಯವು ಸ್ವಲ್ಪಸ್ವಲ್ಪವಾಗಿ ಬಿಚ್ಚುತ್ತಿರುವ ಬಿಗಿದ ಮುಷ್ಟಿಯಂತೆ ಹೊರಬೀಳುತ್ತದೆ. ಈ ಸಂಗ್ರಹದಲ್ಲಿ ಮಾತ್ರವಲ್ಲ, ಕನ್ನಡ ಸಣ್ಣಕತೆಗಳ ವಿಶಾಲ ಪ್ರಪಂಚದಲ್ಲಿಯೂ ರಹಸ್ಯಾತ್ಮಕ ಕಥೆಗಳಲ್ಲಿ ‘ಬಂಗಲಿಯ ವಾಸ’ವು ಮನ್ನಣೆಯ ಸ್ಥಾನವನ್ನು ಪಡೆಯಬಲ್ಲದು.” (ವಿಮರ್ಶೆಯ ವ್ರತ, ಪುಟ: 55-56). ಆ ಬಂಗಲಿಯ ಬಗೆಗೆ ಸುತ್ತಲಿನ ಜನರ ಪ್ರತಿಕ್ರಿಯೆಗಳು, ಹಾಳು ಸುರಿಯುವ ಮನೆಯ ವಾತಾವರಣ, ವಿಚಿತ್ರ ರೀತಿಯಲ್ಲಿ ವರ್ತಿಸುವ ಮನೆಯ ಜನ, ಬೆಳದಿಂಗಳಲ್ಲಿ ಗಿಡದ ಕೆಳಗೆ ಮತ್ತು ಬಿಸಿಲು ಮಚ್ಚಿನ ಮೇಲೆ ಆಗಾಗ ಕಾಣಿಸಿಕೊಳ್ಳುವ ಸ್ಪಷ್ಟ-ಅಸ್ಪಷ್ಟ ವ್ಯಕ್ತಿ, ಮಾಲೀಕನ ಹೊತ್ತು-ಗೊತ್ತಿಲ್ಲದ ಚೀರಾಟಗಳು, ಆ ಮನೆಯಲ್ಲಿ ಆಗಿಹೋಗಿರುವ ಸಾವಿನ ಬಗೆಗಿರುವ ವದಂತಿಗಳು-ಇವೆಲ್ಲ ಕಥೆಯ ನಿಗೂಢತೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.
ಕಥೆಯ ಉದ್ದಕ್ಕೂ ವಿವರಗಳೆಲ್ಲ ಭೂತದ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತ ಹೋಗುವ ಪ್ರಕ್ರಿಯೆಗೂ ಭೂತದ ಅಸ್ತಿತ್ವದಲ್ಲಿ ನಂಬಿಕೆಯಿಲ್ಲವೆಂದುಕೊಂಡಿರುವ ನಿರೂಪಕ ಈ ಪ್ರಕ್ರಿಯೆಗೆ ಒಡ್ಡುತ್ತ ಹೋಗುವ ಪ್ರತಿರೋಧಕ್ಕೂ ನಡುವೆ ಒಂದು ಬಗೆಯ ಕರ್ಷಣವೇರ್ಪಡುವುದು ಈ ಕತೆಯ ಒಂದು ವಿಶಿಷ್ಟ ಗುಣವಾಗಿದೆ. ದೆವ್ವದ ಅಸ್ತಿತ್ವದ ಬಗ್ಗೆ ನಮಗಿರಬಹುದಾದ ನಂಬಿಕೆ-ಅಪನಂಬಿಕೆಗಳು ಕಥೆಯ ಅಸ್ತಿವಾರಕ್ಕೇ ಸವಾಲನ್ನೊಡ್ಡುವ ಪ್ರಶ್ನೆ ಇಲ್ಲಿ ಏಳುವುದಿಲ್ಲ. ಯಾಕೆ ಅಂದರೆ ದೆವ್ವದ ಅಸ್ತಿತ್ವದಲ್ಲಿ ನಮಗೆ ನಂಬಿಕೆ ಇದ್ದರೆ ಕಥೆಯ ವಿವರಗಳಲ್ಲಿ ಅದಕ್ಕೆ ಪುಷ್ಟಿ ದೊರೆಯುತ್ತದೆ; ನಂಬಿಕೆ ಇರದಿದ್ದರೆ ಈ ವಿವರಗಳ ಬಗ್ಗೆ ನಿರೂಪಕ ತಳೆಯುವ ಧೋರಣೆ ನಮಗೆ ಸಮಾಧಾನ ನೀಡುತ್ತದೆ. ದೆವ್ವದ ಬಗೆಗಿನ ಈ ಸಂದಿಗ್ಧತೆ ಉದ್ದೇಶಪೂರ್ವಕವಾಗಿದ್ದು, ಇದು ಕಥೆಯ ರಹಸ್ಯಾತ್ಮಕತೆಯನ್ನು ಹೆಚ್ಚಿಸುವದಷ್ಟೇ ಅಲ್ಲ, ಉದ್ದಿಷ್ಟ ಪರಿಣಾಮದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಕಥೆಯಲ್ಲಿ ದೆವ್ವವಾಗಿದ್ದಾನೆಂದು ಸೂಚಿಸಲ್ಪಟ್ಟಿರುವ ವ್ಯಕ್ತಿಯ ಸಾವು, ಅದಕ್ಕೆ ಕಾರಣರಾದವರು ಯಾರು-ಎಂಬುದೆಲ್ಲಾ ಸಂದಿಗ್ಧವಾಗಿಯೇ ಇದೆ. ಇದು ಕಥೆಯ ಉದ್ದೇಶಪೂರ್ವಕ ಸಂದಿಗ್ಧತೆಯ ಒಂದು ಭಾಗವೇ ಆಗಿದೆ. ಕೊಲೆಯ ಪಾತಕಕ್ಕೆ ಸಂಬಂಧವಿಲ್ಲದ, ಅದು ಸಂಭವಿಸಿ ಅನೇಕ ವರ್ಷಗಳಾದ ಮೇಲೆ ಅದು ನಡೆದಿರುವ ಮನೆಗೆ ವಾಸಕ್ಕೆ ಬಂದಿರುವ ಅಪರಿಚಿತನೊಬ್ಬನನ್ನು ನಿರೂಪಕನನ್ನಾಗಿ ಮಾಡಿರುವುದು ಈ ಉದ್ದೇಶಪೂರ್ವಕವಾದ ಸಂದಿಗ್ಧತೆಗೆ ಪೂರಕವಾಗಿದೆ. ಈ ಘಟನೆಗೆ ಪೂರ್ತಿ ಹೊಸಬನಾಗಿ ಆಗಮಿಸುವ ನಿರೂಪಕ ಒಂದೊಂದೇ ವಿವರಗಳ ಅರ್ಥದಲ್ಲಿ ಪ್ರವೇಶ ಪಡೆಯುತ್ತ ಹೋದಂತೆ ಕಥೆಯ ನಿಗೂಢತೆ ಕುತೂಹಲಕಾರಿಯಾಗಿ ಬಿಚ್ಚುತ್ತ ಬೆಳೆಯುತ್ತ ಹೋಗುತ್ತದೆ. ಕಥೆ ಮುಗಿದ ಮೇಲೂ ಕೂಡ ಈ ಸಂದಿಗ್ಧತೆ ಪೂರ್ತಿಯಾಗಿ ನಿವಾರಣೆಯಾಗುವುದಿಲ್ಲ, ಈ ನಿಗೂಢತೆಯನ್ನು ಇನ್ನುಳಿದ ವಾಸ್ತವತಾವಾದೀ ಶೈಲಿಯ ವಿವರಗಳ ನಡುವೆ ಇಡುವುದರ ಮೂಲಕ ಕತೆಗಾರ ಅದಕ್ಕೊಂದು ನೈಜತೆಯನ್ನು ಒದಗಿಸಿದ್ದಾನೆ.
ಕತೆಯಲ್ಲಿ ಇಷ್ಟೆಲ್ಲಾ ದೆವ್ವದ ಪ್ರಾಬಲ್ಯವಿದ್ದೂ ಇದರ ವಸ್ತು ದೆವ್ವವಲ್ಲ. ಈ ಅರ್ಥದಲ್ಲಿ ಇದು ‘ದೆವ್ವದ ಕತೆ’ಯೂ ಅಲ್ಲ. ನಮ್ಮ ಹೆಚ್ಚಿನ ವಿಮರ್ಶಕರು ಕಥೆಯ ಹೊರ ಮೈಯ ಅರ್ಥವನ್ನಷ್ಟೇ ತೆಗೆದುಕೊಂಡಿದ್ದಾರೆ. ಮುಗಳಿಯವರು “‘ಬಂಗಲಿಯ ವಾಸ’ದಲ್ಲಿ ತನ್ನ ಭಾವನ ಮಗನನ್ನು ಕೊಂದು ಅವನ ಆಸ್ತಿಯನ್ನು ನುಂಗಿದವಳ ಮನೆಯಲ್ಲಿ ಅವನು ಭೂತವಾಗಿ ಹೇಗೆ ಕಾಡುತ್ತಾನೆಂಬುದನ್ನು ಬಣ್ಣಿಸಲಾಗಿದೆ” ಎಂದಿರುವ ಮಾತು ಕಥೆಯ ಸಾರಾಂಶವಾಗಿದೆಯೇ ಹೊರತು, ಅದರ ವಸ್ತುವಿನ ಮೇಲೆ ಬೆಳಕು ಚೆಲ್ಲುವುದಿಲ್ಲ. ಆದರೆ ಎಸ್.ವಿ. ಪರಮೇಶ್ವರ ಭಟ್ಟರು ಈ ಕಥೆಯಲ್ಲಿ “ದುರಾಶಾಗ್ರಸ್ತರಾಗಿ ಕರ್ಮಸೂತ್ರವನ್ನು ತಾವೇ ಕತ್ತರಿಸಿಕೊಂಡು ಸುಖಪಡುತ್ತೇನೆಂದು ಹೊರಟವರಿಗೆ ದೊರಕುವುದು ಸ್ವರ್ಗಸುಖವಲ್ಲ, ನಾಯಕನರಕ” (ಅಭಿವಂದನೆ, ಪುಟ: 39) ಎಂದು ಹೇಳಿರುವುದು ಸ್ವಲ್ಪ ಧಾರ್ಮಿಕ ಪರಿಭಾಷೆಯೆನಿಸಿದರೂ ಕಥೆಯ ವಸ್ತುವಿಗೆ ಅತಿ ಸಮೀಪದ ಮಾತಾಗಿದೆ. ಇದನ್ನೇ ಆಧುನಿಕ ಪರಿಭಾಷೆಯಲ್ಲಿ ಹೇಳುವದಾದರೆ, ಇದು ಪಾಪ ಮತ್ತು ಅದು ಮನುಷ್ಯನ ಸದಸದ್ವಿವೇಕದ ಮೇಲೆ ಮಾಡುವ ಪರಿಣಾಮ ಎಂದು ಹೇಳಬಹುದು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಒಂದು ದೃಷ್ಟಿಯಿಂದ ಇದು ಮ್ಯಾಕ್ ಬೆಥ್ ನಾಟಕದಲ್ಲಿ ನಡೆಯುವ ಕೊಲೆ ಮತ್ತು ಲೇಡಿ ಮ್ಯಾಕ್ ಬೆತ್ಳ ಮನಸ್ಸಿನ ಮೇಲಾಗುವ ಅದರ ಪರಿಣಾಮಗಳನ್ನು ನೆನಪಿಗೆ ತರುತ್ತದೆ. ದುರಾಶೆ, ಮಹತ್ವಾಕಾಂಕ್ಷೆಗಳು ಕೊಲೆಯಂಥ ಪಾತಕಗಳಿಗೆ ಪ್ರೇರಿಸಿದರೂ ಸಂವೇದನಾಶೀಲ ವ್ಯಕ್ತಿಗಳಿಗೆ ಅದರಿಂದಾಗುವ ಮಾನಸಿಕ ಯಾತನೆಯಿಂದ ತಪ್ಪಿಸಿಕೊಳ್ಳುವುದು ಸುಲಭಸಾಧ್ಯವಲ್ಲ. ‘ಬಂಗಲಿಯ ವಾಸ’ದಲ್ಲಿ ಕೇಂದ್ರಸಂಗತಿಯಾದ ಕೊಲೆಗೆ ಸಂಬಂಧಿಸಿದಂತೆ ಅದರ ಪರಿಣಾಮ ಬೇರೆಬೇರೆ ವ್ಯಕ್ತಿಗಳ ಮೇಲೆ ಬೇರೆಬೇರೆ ರೀತಿಯಿಂದ ಆಗುತ್ತದೆ. ನಿರೂಪಕನಿಗಿಂತ ಮುಂಚೆ ಆ ಮನೆಯಲ್ಲಿ ಒಮ್ಮೆ ಬಾಡಿಗೆ ಇದ್ದ ಕುಟುಂಬವೊಂದಕ್ಕೆ ಭೂತ ಕಾಣಿಸಿಕೊಂಡೇ ಇರಲಿಲ್ಲವಂತೆ. ನಿರೂಪಕನ ಕುಟುಂಬಕ್ಕೆ ಕಾಣಿಸಿಕೊಂಡರೂ ಅದು ಯಾವ ಅಪಾಯವನ್ನೂ ಮಾಡುವುದಿಲ್ಲ. ಬಹುಶಃ ಅತ್ತೆಯ ಚಿತಾವಣೆಯಿಂದ ಸ್ವತಃ ಕೊಲೆ ಮಾಡಿರಬಹುದಾದ ಮನೆಯ ಮಾಲೀಕನ ಮೇಲೆ ಅದರ ಪರಿಣಾಮದ ತೀವ್ರತೆ ಹೆಚ್ಚಾಗಿದೆ. ಅವನದು ಪುಕ್ಕಲು ಸ್ವಭಾವ, ದುರ್ಬಲ ಮನಸ್ಸು ಎಂದರೂ ಅವನ ಸದಸದ್ವಿವೇಕ ಹೆಚ್ಚು ಜಾಗ್ರತವೂ ಸೂಕ್ಷ್ಮವೂ ಆಗಿದೆ. ಅಂತೆಯೇ ಅವನ ಪಾಪ ಅವನನ್ನು ಹೆಚ್ಚು ತೀವ್ರವಾಗಿ ಬಾಧಿಸುತ್ತದೆ. ಹೊತ್ತಲ್ಲದ ಹೊತ್ತಿನಲ್ಲಿ ಯಾರೋ ಎದೆಯ ಮೇಲೆ ಕುಳಿತು ಕತ್ತು ಹಿಚುಕಿದಂತಾಗಿ ಚೀರಿಕೊಳ್ಳುತ್ತಾನೆ. ಅತ್ತೆ ಗಟ್ಟಿಗಿತ್ತಿ; ಒರಟು ಸ್ವಭಾವದ ಕಠಿಣ ಮನಸ್ಸಿನ ಹೆಂಗಸು. ಮೇಲುನೋಟಕ್ಕೆ ತನ್ನ ಪಾಪವನ್ನು ಆಕೆ ಯಶಸ್ವಿಯಾಗಿ ದಕ್ಕಿಸಿಕೊಂಡಿದ್ದಾಳೆಂದೇ ತೋರುತ್ತದೆ. ಆದರೆ ಕೊಲೆಯಾದ ವ್ಯಕ್ತಿಯನ್ನೇ ಹೋಲುವ ಇನ್ನೊಬ್ಬನನ್ನು ನೋಡಿದಾಗ ಅವಳ ಧೈರ್ಯವೂ ಕುಸಿಯುತ್ತದೆ.
ಹೀಗೆ ಇಲ್ಲಿಯ ಭೂತ ಸಾಂಕೇತಿಕ ನೆಲೆಯಲ್ಲಿಯೂ ಕೆಲಸ ಮಾಡುತ್ತದೆ. ವರ್ತಮಾನವನ್ನೂ ಆಕ್ರಮಿಸುವ ಭೂತಕಾಲವಾಗಿ, ಮುಚ್ಚಿಡಲಾಗದ ಪಾಪವಾಗಿ, ಅನಿರೀಕ್ಷಿತ ಕ್ಷಣಗಳಲ್ಲಿ ಎಚ್ಚೆತ್ತುಕೊಳ್ಳುವ ಅಜಾಗ್ರತ ಚಿತ್ತದ ಅನುಭವವಾಗಿ ಕಾಣಿಸಿಕೊಳ್ಳುತ್ತದೆ.
ಇಂಥ ವಿಶೇಷ ಅರ್ಥದ ಮೂಲಕ ಕಥೆ ಕೇವಲ ಕುತೂಹಲಕಾರಿಯಾದ ಸಾಮಾನ್ಯ ದೆವ್ವದ ಕತೆಯಾಗಿ ಉಳಿಯದೆ ಒಂದು ಮಹತ್ವದ ಕಥೆಯಾಗುತ್ತದೆ. ಕೇವಲ ಕನ್ನಡದ ರಹಸ್ಯಾತ್ಮಕ ಕಥೆಗಳಲ್ಲಿ ಮಾತ್ರವಲ್ಲ ಕನ್ನಡ ಸಣ್ಣಕತೆಗಳಲ್ಲೇ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)