ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಹತ್ತು ಬಡಿಯಿತು. ಪಣಜಿಯಿಂದ ಮೂರೂ ಮೋಟರುಗಳು ತುಂಬಿಯೇ ಬಂದದ್ದರಿಂದ ಜಾಗ ಸಿಗದೆ ಮನಸ್ಸು ಒಮ್ಮಿಗಲೆ ಹತಾಶವಾಯಿತು. ಆದರೂ ಸೊಳ್ಳೆಗಳ ಕಾಟದಿಂದ ರಾತ್ರೆ ಬಹಳ ಹೊತ್ತಿನವರೆಗೆ ನಿದ್ರೆ ಬರದಿದ್ದಾಗ ಮಾಡಿದ ಸತ್ಸಂಕಲ್ಪಕ್ಕೆ ಇನ್ನೂ ಬಲವಿತ್ತು. ‘ಹೇಗೂ ಗೋವೆಯವರೆಗೆ ಬಂದಿದ್ದೇನೆ. ಕುಲದೇವಿಯ ಸ್ಥಾನ ಇಲ್ಲಿಂದ ಬರೇ ಆರು ಮೈಲು. ದರ್ಶನ ಮಾಡಿಯೇ ನಡಿಯೋಣ’ ಎಂದು ಮುಂತಾಗಿ ಹೋಟೆಲಿನ ಮಾಳಿಗೆಯ ಮೇಲೆ ನಿದ್ದೆ ಬರದೆ ಹೊರಳಾಡುವಾಗ ವಿಚಾರವಾಗಿತ್ತು.
ಮೋಟರಿನಲ್ಲಿ ಜಾಗ ಸಿಗಲಿಲ್ಲ. ಇನ್ನು ಮೋಟಾರು ಮಧ್ಯಾಹ್ನದ ಹೊರತು ಬರುವ ಹಾಗಿಲ್ಲ. ಆರೇ ಮೈಲು! ನಡೆದು ಹೋದರೆ ತೀರಿತು. ಒಂದು ಒಂದೂವರೆ ತಾಸಿನಲ್ಲಿ ಮುಟ್ಟಬಹುದು. ಕಾಲ್ನಡಿಗೆಯಿಂದ ದೇವದರ್ಶನ ಹೆಚ್ಚು ಶ್ರೇಯಸ್ಕರ ಎಂದು ಒಂದು ಬಗೆಯ ಅಭಿಮಾನದಿಂದ ಮಾಡ್ದೋಳನ್ನು ಹಿಂದೆ ಬಿಟ್ಟು ನಡೆದೆ.
ನಡೆಯುತ್ತ ಹೋದಂತೆ ಮೈ ಬೆಚ್ಚಗಾಗಿ ಬೆವರು ಹೊರಸೂಸಹತ್ತಿತು. ಎಡಗೆನ್ನೆ ಸೂಡಿ ಹಿಡಿದಂತೆ ಸುಡಹತ್ತಿತ್ತು. ಮೂರು ಮೈಲು ಘಟ್ಟ ಏರುವಾಗಂತೂ ಕಾಲುಗಳಿಗೆ ಹೊರೆ ಕಟ್ಟಿದಂತಾಗಿ ಅವು ಭಾರವಾದವು. ದೇಹದಂಡನೆ ಮಾಡಿ ದೇವದರ್ಶನ ಮಾಡುತ್ತೇನೆ ಎಂಬ ಅಭಿಮಾನ ಮಾಯವಾಗಿ ಅದರ ಬದಲು ಬಂದದ್ದಕ್ಕೆ ಮರುಗುವಂತಾಯಿತು.
ಘಟ್ಟದ ತಲೆ ಮುಟ್ಟಿದಾಗ ಏರುವ ಬಿಸಿಲಿಗೂ ಕೊರೆಯುವ ದಣಿವಿಗೂ ಅಳತೆಯಿರಲಿಲ್ಲ. ಹಸಿವೆಯಂತೂ ಅಷ್ಟಿಷ್ಟಿರಲಿಲ್ಲ. ಇದರ ಮೊದಲು ಇಂಥ ಹಸಿವಿನ ಪರಿಚಯ ನನಗಿರಲಿಲ್ಲ. ತಲೆ ತೂಗುತ್ತಿತ್ತು. ಆಗ ದೊಡ್ಡ ರಸ್ತೆಯಿಂದ ಬಲಕ್ಕೆ ಮುರಿದ ಕಿರಿದಾರಿ ಬಂದಿತು. ದೂಳಿನ ದಾರಿ. ಇಳಿತವೂ ಅದ್ಭುತವಾಗಿತ್ತು. ಇನ್ನೇನು? ಕಾಲುಗಳನ್ನು ಸಡಿಲು ಬಿಟ್ಟರಾಯಿತು. ಭರ್‍ರನೆ ಮುಟ್ಟಿದಂತೆಯೇ ಎಂದು ಪರಮಾನಂದವಾಯಿತು. ಮರುಕ್ಷಣದಲ್ಲಿಯೇ ಬರುವಾಗ ಈ ಘಟ್ಟ ತಿರುಗಿ ಏರಬೇಕು ಎಂಬ ವಿಚಾರದಿಂದ ನಾಲಿಗೆ ಒಣಗಿ ಮುಂದೆ ಕಾಲಿಡುವುದೇ ಬೇಡವಾಯಿತು. ಆದರೂ ಬರುವಾಗ ಬಯಲಿನಿಂದ ಮಾಡ್ದೋಳಿಗೆ ಹೋಗಲಿಕ್ಕೆ ಬೇರೆ ದಾರಿಯಿದ್ದೀತು ಎಂಬ ಕಲ್ಪನೆಯಿಂದ ಇಳಿದು ಬಂದೆ.
ಆ ದಾರಿ ದೇಗುಲದ ಹಿಂಬದಿಯಿಂದ ಒಳಸೇರಿದೆ. ದೇಗುಲ ಕಂಡಾಗ ಶ್ರದ್ದೆ ಭಕುತಿಗಳೆಲ್ಲ ಉಗಿಯಾಗಿ ಹಾರಿಹೋಗಿದ್ದವು. ಆಚಾರ ನಿಯಮಗಳನ್ನು ಲೆಕ್ಕಿಸದೆ ನನ್ನ ಕಾಲ್ಗಳು ನನ್ನನ್ನು ಪ್ರಾಂಗಣದ ಕಿರಿಬಾಗಿಲಿನಿಂದ ಒಳತಂದವು. ನಿಯಮದಂತೆ ಹೆಬ್ಬಾಗಿಲಿನಿಂದ ದೇವರಿಗೆ ಸಮ್ಮುಖವಾಗಿ ಒಳಬರಬೇಕಾಗಿತ್ತು ಎಂದು ಸತ್ಪಕ್ಷಪಾತಿ ಆಂತರ್ಯಕ್ಕೆ ಹೊಳೆದು ಏನೋ ಅನುಚಿತವಾಯಿತು ಎಂದನಿಸುವಾಗಲೇ ದಾರಿ ಬೇರೆಯಾದರೂ ಗುರಿ ಒಂದೇ ಎಂದು ಬುದ್ದಿ ಸಮಾಧಾನ ಕೊಟ್ಟಿತು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಪೂಜಾರಿಗಳು ನನ್ನನ್ನು ನೋಡಿ ಹೊರಬಂದರು. ದೇವರಿಗೆ ಕೈಮುಗಿದು ದೊಡ್ಡ ಸುತ್ತುಗಂಬಕ್ಕೆ ಆನಿಸಿ ನಾನು ನಿಂತಿದ್ದೆ. ‘ಯಾವ ಊರು?’ ಅಂದರವರು. ‘ಅಂಕೋಲೆ’ ಎಂದು ಉತ್ತರ ಕೊಟ್ಟೆ. ಇನ್ನು ಊಟದ ವ್ಯವಸ್ಥೆ ಎಲ್ಲಿಯಾದೀತು ಎಂಬ ವಿಚಾರ ಮನಸ್ಸಿನಲ್ಲಿ ಒಂದೇಸವನೆ ತಿರುಗುತ್ತಿತ್ತು.
‘ಓಹೋ! ಕರ್ಣಾಟ್ಕಿ!’ ಎಂದು ಅವರು ಉದ್ಗರಿಸುವಷ್ಟರಲ್ಲಿ ಬಿಳಿಯ ಮಸುಕು ಪತ್ತಲ ಉಟ್ಟು ಕೈಯೊಳಗೆ ಅರ್ಧ ಅದ್ದಿದ ನೆಣೆಯನ್ನು ಹಿಡಕೊಂಡು ಹೆಂಗಸೊಬ್ಬಳು ಭಟ್ಟರಾಚೆ ನಿಂತು ನನ್ನ ಕಡೆಗೆ ನೋಡಿದಳು.

‘ಮೊದಲು ನನಗೆ ಊಟವಾಗಬೇಕು. ಇಲ್ಲಿ ಹತ್ತರವೇ ಖಾನಾವಳಿಯಿದೆಯೆ?’ ಕೇಳಿದೆ.
ಅವರು ನಕಾರದಲ್ಲಿ ಉತ್ತರ ಕೊಡುತ್ತ ಅಂದರು, ‘ಮೋರೆಯಿಂದಲೇ ಪರೀಕ್ಷೆಯಾಗುತ್ತದೆ. ನೀವು ನಾರಾಯಣರಾಯರ ಮನೆಯವರಲ್ಲವೆ?’
ನಾನು ನಾರಾಯಣರಾಯರ ಮೇಲೆ ರೇಗಿಹೋದೆ. ಹೀಗವರು ನನ್ನ ಮೋರೆಯ ಮೇಲೆ ಯಾವ ಸೂಕ್ಷ್ಮ ಬಿಟ್ಟಿದ್ದಾರೋ ಕಾಣೆ! ‘ಹಾಗಾದರೆ ಇಲ್ಲಿ ನಮ್ಮವರ ಮನೆಗಳೂ ಇಲ್ಲವೆ?’ ಎಂದೆ.
‘ಇಲ್ಲಿಂದ ಮೈಲಾಚಿ ರಾಮನಾಥಿಯಿದೆ. ಅಲ್ಲಿಯ ಪೂಜಾರಿಗಳು ನಿಮ್ಮವರು. ದೇವಿಯ ಪೂಜೆಗೀಜೆ ಆಗಬೇಕೇ ನಿಮಗೆ?’ ಭಟ್ಟರು ಕೇಳಿದರು.
‘ಆದರೆ ನಾನು ನಿಲ್ಲುವ ಹಾಗಿಲ್ಲ, ಆಗುತ್ತದಾದರೆ ಒಂದು ಕುಂಕುಮಾರ್ಚನೆ ಮಾಡಿಬಿಡಿ. ನಾನು ಊಟ ಮಾಡಿ ಬರುತ್ತೇನೆ. ಆಗ ಪ್ರಸಾದ ಒಯ್ಯುವೆ. ಮಾಡ್ದೋಳಿಗೆ ಈ ದಾರಿ ಬಿಟ್ಟು ಬೇರೆ ದಾರಿಯಿದೆಯೇ?’
‘ನೀವು ಬಂದ ದಾರಿಯೇ. ಬೇರೆ ದಾರಿ ಇಲ್ಲ. ಹಾಗಾದರೆ ನಿಮಗೆ ಕುಂಕುಮಾರ್ಚನೆಯಾಗಬೇಕು; ಸರಿ!’ ಎಂದರು ಭಟ್ಟರು. ‘ಇನ್ನು ಮತ್ತೆ ಸಾಯಂಕಾಲ ಹತ್ತಬೇಕು!’ ವಿಚಾರವಾಯಿತು.
ಅಷ್ಟರಲ್ಲಿ ಆ ಹೆಂಗಸು ಒಂದು ಹರಿವಾಣದಲ್ಲಿ ವೀಳ್ಯದ ಪಟ್ಟಿಯನ್ನಿಟ್ಟು ಆ ತಬಕವನ್ನು ನನ್ನ ಕಾಲ್ಬಳಿ ಇಟ್ಟು ದೂರ ಸರಿದು ನಿಂತಳು. ಇದರರ್ಥ ತಿಳಿಯದೆ ನಾನು ಭಟ್ಟರನ್ನು ನೋಡಿದೆ. ‘ಇದೊಂದು ದೇವದಾಸಿಯರ ರಿವಾಜು, ಕುಳಾವಿಗಳು ವೀಳ್ಯ ಕೊಂಡು ಯಥಾಶಕ್ತಿ… ತಿಳಿಯಲಿಲ್ಲವೇ?’ ಮುಗುಳು ನಗುತ್ತ ಭಟ್ಟರು ಹೇಳಿದರು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ನಾನು ಹಣದ ಚೀಲ ಹೊರಗೆ ತೆಗೆದೆ. ಎರಡಾಣೆ ಮೂರು ಬಿಲ್ಲಿ ಚಿಲ್ಲರೆಯಿದ್ದವು. ಎರಡಾಣೆಯ ಬೆಳ್ಳಿ ಹಾಕಿ ನಡಿಯೋಣ ಎನಿಸಿತೊಮ್ಮೆ. ಆದರೆ ಮರುಕ್ಷಣ ನಾರಾಯಣರಾಯರು ನನ್ನ ಮೋರೆಯ ಮೇಲೆ ಬಿಟ್ಟ ಟ್ರೇಡ್‌ಮಾರ್ಕಿನ ನೆನಪಾಯಿತು. ಒಂದು ರೂಪಾಯಿಯನ್ನು ತಬಕದಲ್ಲಿ ಇಟ್ಟು ವೀಳ್ಯಕೊಳ್ಳದೆ ನಾನೆಂದೆ, ‘ಹೀಗೆಯೇ ರಾಮನಾಥಿ ಮುಂದಿದೆಯಲ್ಲವೇ?’ ‘ಸರಿ! ಹಿಂದೊಮ್ಮೆ ಬಂದಂತೆ ಕಾಣುತ್ತದೆ?’ ಎಂದರು ಭಟ್ಟರು. ‘ಅವರು ವೀಳ್ಯ ಹಾಕುವ ಜನವಲ್ಲ. ಚಿಂತೆಯಿಲ್ಲ. ನೀನು ತಬಕ ತೆಗೆ’ ದೇವದಾಸಿಗೆ ಅಂದರವರು.
ವೀಳ್ಯದ ತಬಕವನ್ನು ಎತ್ತಿಕೊಂಡು ದೇವದಾಸಿ ನನ್ನನ್ನು ತನ್ನ ನಿಸ್ತೇಜ ನಸುಗಂಪು ಕಣ್ಣುಗಳಿಂದ ನೋಡುತ್ತ ನಿಂತಿದ್ದಳು.
ಆಕೆಯ ಕಾಂತಿಹೀನ ಮೋರೆ, ಸೊರಗಿದ ದೇಹ, ಶುಷ್ಕವಾದ ಬೆಳ್ಳಗಿನ ತುಟಿಗಳು, ಹಣೆಯ ಮೇಲಿನ ಸೂಕ್ಷ್ಮ ರೇಖೆಗಳನ್ನು ನೋಡಿ ದೇವಸೇವೆಯನ್ನು ಕಸರು ಬಿಡದೆ ಮಾಡಿದ್ದಾಳೆ ಎಂಬುದರಲ್ಲಿ ನೋಡುವವರಿಗೆ ಸಂದೇಹ ಬರುತ್ತಿರಲಿಲ್ಲ. ಬಾಚದ ತಲೆ, ತುಸು ಗಲ್ಲಬಿದ್ದ ಉದ್ದನ್ನ ಮೋರೆ ಅಕಾಲ ವೃದ್ಧಾಪ್ಯವನ್ನು ಸೂಚಿಸುತ್ತಿದ್ದವು.
‘ವೀಳ್ಯ ಕೊಳ್ಳಿ. ಇಲ್ಲದಿದ್ದರೆ ಅವಳಿಗೆ ಸಮಾಧಾನವಾಗದು’ -ಎಂದು ಭಟ್ಟರು ವಾದಿಸಿದರು.
ನಾನು ವೀಳ್ಯ ಕೊಂಡು ಅವಳನ್ನು ನೋಡಿದೆ. ಅವಳು ತುಸು ಮುಗುಳುನಕ್ಕಳು. ನನಗೆ ಜುಗುಪ್ಸೆಯಾಯಿತು.
ಸೀಳು ದಾರಿಯಿಂದ ಹೊಲಬನಗಳನ್ನು ಹಿಂದೆ ಬಿಟ್ಟು ಸಾಗಿದಂತೆ ಎಂದೋ ಕೇಳಿ ಅರ್ಧ ಮರೆತ ಹಾಡಿನಂತೆ ಈ ಪ್ರದೇಶದ ಕೆಲವು ಅಸ್ಪಷ್ಟ ಸ್ಮೃತಿಗಳು ನನ್ನ ದಣಿದ ಮನಸ್ಸಿನಲ್ಲಿ ಎದ್ದವು. ಸ್ವನಾಮಧನ್ಯ ನಾರಾಯಣರಾಯರ ಜತೆಯಲ್ಲಿ ಬಾಲ್ಯದಲ್ಲಿ ನಾನಿಲ್ಲಿ ಬಂದಿದ್ದೆ. ಹೊಲಗಳಾಚೆಯ ತೆಂಗಿನ ಹಿತ್ತಿಲಲ್ಲಿ ನಿಂತ ಇಳಿಮಾಡಿನ ಆ ಮನೆ ನೋಡಿ ಎದ್ದ ನೆನಪು ರಮ್ಯವಾಗಿತ್ತು. ಆಗ ಯಾವುದೋ ಮರಕ್ಕೆ ಬೀಸಿದ ಕಲ್ಲು ಆ ಮನೆಯ ಮಾಡನ್ನು ಭೇದಿಸಿ ಒಳಗೆ ಬಿದ್ದಿತೆಂದು ಆ ಜೀರ್ಣಮನೆಯ ಶೀರ್ಣ ಹೆಂಗಸು ನನ್ನನ್ನು ಕೈ ಹಿಡಿದು ದರದರನೆ ಎಳೆದು ತಂದು ಜಗುಲಿಯಲ್ಲಿ ಕೂಡ್ರಿಸಿದ್ದಳು. ಹಂಚಿನ ದಂಡವೆಂದು ಒಂದು ರೂಪಾಯಿ ಒಗೆದು ನಡೆಯೆಂದು ಎಂದಿದ್ದಳು. ಆದರೆ ರೂಪಾಯಿ ಇರಲಿ, ಇದ್ದ ಒಂದು ಆಣೆಯನ್ನೂ ದೇಗುಲದ ಹಿಂದಿನ ಅಂಗಡಿಯವನಿಗೆ ಪೇಡೆಗಾಗಿ ಬೆಳಿಗ್ಗೆ ಕೊಟ್ಟಿದ್ದೆ.
ಆ ನೆನಹು ಜಗುಲಿಯಲ್ಲಿ ಕುಳಿತ ನನ್ನ ಚಿತ್ರವನ್ನೇ ನನ್ನ ಮುಂದೊಡ್ಡಿತು. ನಾರಾಯಣರಾಯರ ಮಾಧು- ನನ್ನ ಜತೆಯಲ್ಲಿ ಬಂದವ-ಜಗುಲಿಯಿಂದ ನೋಡುವಾಗ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಒಮ್ಮೆ ಅಲ್ಲಿಂದ ಜಾರುವ ಉಪಾಯ ಯೋಚಿಸುತ್ತ ನಾನು ಕುಳಿತಿದ್ದೆ.
ಅಷ್ಟರಲ್ಲಿ ಮಾಧುವೂ ದೇವದಾಸಿಯರ ಸಖಿಯೂ ಬಂದರು. ‘ಮಾಯಿ, ಕಲ್ಲು ಕೈ ತಪ್ಪಿ ಬಿದ್ದಿರಬಹುದು. ಇವರು ಕರ್ಣಾಟ್ಕಿಯವರು. ಅವನನ್ನು ಬಿಟ್ಟುಬಿಡು’ ಎಂದು ಸಖಿಯು ನನ್ನ ವತಿಯಿಂದ ಕ್ರಿಸ್ತ ಹೆಂಗಸಿಗೆ ಬಿನ್ನವಿಸಿಕೊಂಡಳು. ಆದರೂ ರೂಪಾಯಿಯ ವಿನಾ ಅವಳು ನನ್ನನ್ನು ಬಿಡಲು ಒಪ್ಪಲಿಲ್ಲ.
‘ಕಲ್ಲು ಬಿದ್ದಿದ್ದಾದರೂ ನಿಜವೇ? ಎಲ್ಲಿ ನೋಡೋಣ’ ಎಂದಳು ಸಖಿ.
‘ಮತ್ತೆ ಸುಳ್ಳೆಂದು ಮಾಡಿದೆಯಾ? ಒಳಮನೆಯಲ್ಲಿ ಬಿದ್ದಿದೆ. ತೋರಿಸುತ್ತೇನೆ ಬೇಕಾದರೆ’ ಎಂದ ಅವಳು ಒಳಗೆ ನಡೆದಾಕ್ಷಣ ಸಖಿಯು ನನ್ನ ಹಿಡಿದು ಏಳಿಸುತ್ತ, ‘ಏಳು, ಓಡೋಣ’ ಎಂದಳು.
ಹಿಂದೆ ನೋಡದೆ ಓಡುತ್ತಿದ್ದಂತೆ ಆ ಕ್ರಿಸ್ತರ ಹೆಂಗಸಿನ ಬೆದರಿಕೆಗಳೂ ಬೈಗಳೂ ಅಸ್ಪಷ್ಟವಾಗಿ ಕೇಳಿಸುತ್ತಿದ್ದವು. ಆಕೆ ನನಗೆ ಬಯ್ಯದೆ ಸಖಿಗೆ ಬಯ್ಯುತ್ತಿದ್ದಳು.
ದಾರಿ ನಡೆದಂತೆ ಆ ಮನೆಯನ್ನು ನೋಡಿ ಇವೆಲ್ಲ ಮಾತುಗಳು ತಾವಾಗಿ ನೆನಪಿಗೆ ಬಂದವು. ಸಖಿ ಎಲ್ಲಿರಬಹುದು? ನನ್ನಂತೆ ಆಕೆಗೂ ಈ ಮಾತುಗಳು ನೆನಪಿರಬಹುದೇ ಎಂಬ ವಿಚಾರವಾಯಿತು. ಆದರೆ ಹಸಿವಿನ ಮೂಲಕ ಆ ವಿಚಾರಗಳು ಅಲ್ಲಿಯೇ ಮಾಯವಾದವು.
ಊಟ ತೀರಿಸಿ ಕೆಲಹೊತ್ತು ಅಡ್ಡವಾಗಿ ಮೂರು ಘಂಟೆಗೆ ನಾನು ಅದೇ ದಾರಿಯಿಂದ ತಿರುಗಿ ಬಂದೆ. ಪುನಃ ಆ ಮನೆಯನ್ನು ನೋಡಿ ಅದೇ ಮಾತು ನೆನಪಾಯಿತು. ತಿರುಗಿ ಸಖಿಯ ವಿಚಾರವಾಯಿತು. ಎಲ್ಲಿರಬಹುದು ಆಕೆ? ನನಗೆ ಗುರುತಾದರೂ ಸಿಕ್ಕೀತೇ? ಅವಳಿಗೂ ಗುರುತು ಸಿಗದು. ಆಗಲೇ ಬೆಳಿಗ್ಗೆ ಇಳಿದ ಗುಡ್ಡ ಏರುವ ವಿಚಾರ ಬಂತು. ಪ್ರಯೋಜನವಿಲ್ಲದ ಮಾತುಗಳನ್ನು ದೂರ ಬಿಸುಟು ಲಗುಬಗೆಯಿಂದ ನಾನು ದೇಗುಲದ ಬಾಗಿಲಿಗೆ ಬಂದೆ.
ವೀಳ್ಯದ ದೇವದಾಸಿ ಹೆಬ್ಬಾಗಿಲ ಬಳಿಯ ಚಂದ್ರಸಾಲೆಯಲ್ಲಿ ಕುಳಿತಿದ್ದಳು. ತಲೆ ಬಾಚಿ ಆಸ್ಥೆಯಿಂದ ಸಿಂಗಾರವಾಗಿತ್ತು. ಕಾವಿಯ ಬಣ್ಣದ ಸೀರೆಯಿಂದ ಮೋರೆ ತುಸು ಕೆಂಪುಗೊಂಡಿತ್ತು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ನಾನು ಬಂದೊಡನೆ ಆಕೆ ಎದ್ದು ಪ್ರಾಂಗಣದಿಂದ ಆಚೆಗೆ ನಡೆದಳು. ನಾನು ದೇಗುಲದಲ್ಲಿ ಬಂದೆ. ಒಳಬಾಗಿಲು ಹಾಕಿತ್ತು. ಮೇಲೆ ತೂಗುವ ದೊಡ್ಡ ಜುಮ್ಮರಗಳನ್ನು ನೋಡುತ್ತ ಅತ್ತಿತ್ತ ತಿರುಗಾಡಹತ್ತಿದೆ.
ತುಸು ಹೊತ್ತಿನ ಮೇಲೆ ಭಟ್ಟರೂ ಆ ದೇವದಾಸಿಯೂ ಕಿರಿಬಾಗಿಲಿನಿಂದ ಒಳ ಬಂದರು. ಇವಳೇ ನಾನು ಬಂದ ಸಮಾಚಾರ ಭಟ್ಟರಿಗೆ ಕೊಟ್ಟಿರಬೇಕೆಂದು ಅನುಮಾನ ಮಾಡಿದೆ. ಬೆಳಗ್ಗಿನ ರೂಪಾಯಿಯ ನೆನಪಾಯಿತು. ಹೋಗುವಾಗಲೂ ವೀಳ್ಯದ ರಿವಾಜು ಇರಬಹುದು. ಇನ್ನೊಂದಕ್ಕೆ ಗಸ್ತು ಬರಬಹುದೇ ಎಂಬ ಯೋಚನೆ ಆಯಿತು.
ಭಟ್ಟರು ಬಾಗಿಲು ತೆರೆದರು. ಮಿಣುಗುವ ದೀಪಗಳನ್ನು ಕೆದರಿದರು. ಕಾಗದದ ಪೊಟ್ಟಳೆಯನ್ನೂ ಪ್ರಸಾದವನ್ನೂ ಕೈಯಲ್ಲಿ ಹಿಡಿದುಕೊಂಡು ಹೊರಬಂದರು. ನಾನು ಬಾಗಿಲಿನ ಬಳಿ ಕೈ ಜೋಡಿಸಿ ನಿಂತಿದ್ದೆ. ಮಾರು ದೂರ ಕಂಬಕ್ಕೆ ಆನಿಸಿ ದೇವದಾಸಿ ನನ್ನನ್ನು ಒಂದು ವಿಧವಾದ ದೃಷ್ಟಿಯಿಂದ ನೋಡುತ್ತ ನಿಂತಿದ್ದಳು. ನನ್ನ ದೃಷ್ಟಿ ಅವಳ ದೃಷ್ಟಿಯೊಡನೆ ಒಂದಾದಾಗ ಅವಳ ತುಟಿಗಳು ವಿಕಸಿತವಾಗುತ್ತಿದ್ದವು. ಇವಳ ಹಾವಭಾವವನ್ನು ನೋಡಿ ಬೆಳಗ್ಗಿನ ರೂಪಾಯಿಯ ನೆನಹು ತಿರುಗಿ ಎದ್ದಿತ್ತು. ‘ನಿಮ್ಮ ಹೆಸರೇನು?’ ಎಂದರು ಭಟ್ಟರು. ಹೆಸರು ಹೇಳಿದೆ. ಭಟ್ಟರು ನನ್ನ ವತಿಯಿಂದ ಪ್ರಾರ್ಥನೆ ಮಾಡಿದರು.

ಪ್ರಾರ್ಥನೆ ಸುರುವಾದಾಗ ಆ ದೇವದಾಸಿ ಮುಂದೆ ಬಂದಳು. ಅವಳೂ ಕೈ ಮುಗಿದು ಮೂರ್ತಿಯನ್ನು ಎವೆಯಿಕ್ಕದೆ ನೋಡುತ್ತ ನಿಂತಳು. ದುಡ್ಡಿಗಾಗಿ ಸಾಗಿದ ಅವಳ ಹಾವಭಾವ ವಿಚಾರಿಸಲು ಓಡುವ ಮನಸ್ಸನ್ನು ಭಟ್ಟರ ಪ್ರಾರ್ಥನೆಯ ಕಡೆಗೆ ಜಗ್ಗಹತ್ತಿದೆ. ‘ವಿದ್ಯಾಬುದ್ಧಿ ಆಯುರಾರೋಗ್ಯ ಧನಸಂಪತ್ತಿ’ ಎಂದು ಮೊದಲಾಗಿ ಪ್ರಾರ್ಥಿಸುತ್ತ ನಡೆದ ಭಟ್ಟರನ್ನೂ ಅವರ ಪ್ರಾರ್ಥನೆಯನ್ನೂ ಸದ್ದಿಲ್ಲದೆ ಬಿಟ್ಟು ನನ್ನ ಮರ್ಕಟ ಮನಸ್ಸು ಆಕೆಯ ಕಡೆಗೇ ಹರಿಯತೊಡಗಿತು. ಅವಳನ್ನು ನೋಡಿ ನನ್ನ ವಿಸ್ಮಯಕ್ಕೆ ಎಣೆಯಿಲ್ಲದಾಯಿತು. ಆಕೆಯ ತುಟಿಗಳು ತುಸು ತೆರೆದಿದ್ದವು. ಮೂರ್ತಿಯಲ್ಲಿ ನಟ್ಟ ಆಕೆಯ ಕಣ್ಣುಗಳಲ್ಲಿ ನೀರು ಹಿಡಿದಿತ್ತು.
ಅನ್ಯಮನಸ್ಕನಾಗಿ ಭಟ್ಟರಿಗೆ ಕೊಡುವದನ್ನು ನಿಲ್ಲಿಸಿ ಪ್ರಸಾದ ತಕ್ಕೊಂಡು ನಾನು ದೇಗುಲದ ಹೊರಬಂದೆ, ಬೆಳಿಗ್ಗಿನ ಕಿರಿಬಾಗಿಲಿನಿಂದಲೇ. ವಿಸ್ಮಯವು ನನ್ನ ಮನಸ್ಸನ್ನು ಆವರಿಸಿತ್ತು. ಬೆಳಿಗ್ಗೆ ದಣಿದು ತುಳಿದ ದಾರಿಯನ್ನು ಗಮನವಿಲ್ಲದೆ ಈಗ ತುಳಿಯುತ್ತ ನಡೆದೆ.
ಸಾಗಿದಂತೆ ಫಕ್ಕನೆ ಇವಳು ಸಖಿಯಾಗಿರಬಹುದೇ ಎಂಬ ವಿಚಾರವಾಯಿತು. ತಿರುಗಿ ನೋಡಿದೆ. ದೇಗುಲದ ಕಿರಿಬಾಗಿಲಿನ ತುದಿ ಮೆಟ್ಟಿಲಲ್ಲಿ ಸಮಸ್ತ ಚೇತನಾಶಕ್ತಿಯನ್ನೂ ಕಣ್ಣುಗಳಲ್ಲಿಟ್ಟು ಇತ್ತ ನೋಡುತ್ತ ನಿಂತ ಆ ದೇವದಾಸಿಯ ದರುಶನವಾಯಿತು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ, ಶಾರದಾ ಸಾಹಿತ್ಯ ಮಂದಿರ, ಕುಮಟಾ, 1942)
ಶ್ಯಾನಭಾಗರ ‘ದೇವದಾಸಿ’
ನವ್ಯಪೂರ್ವ ಯುಗದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಬೆಳಕಿಗೆ ಬಂದ ಲೇಖಕರ ಸಂಖ್ಯೆ ಬಹಳ ಸಣ್ಣದು. ಇದರಿಂದಾಗಿ ಆ ಜಿಲ್ಲೆಯ ವಿಶಿಷ್ಟ, ಸಾಂಸ್ಕೃತಿಕ ಸಾಮಾಜಿಕ ಪರಿಸರ ನಮ್ಮ ಸಾಹಿತ್ಯದಲ್ಲಿ ಅಷ್ಟಾಗಿ ಬರಲಿಲ್ಲ. ಅದರಲ್ಲೂ ಸಣ್ಣ ಕತೆಗಾರರ, ಕಾದಂಬರಿಕಾರರ ಸಂಖ್ಯೆ ಇನ್ನೂ ಕಡಿಮೆ. ಇದ್ದ ಒಬ್ಬಿಬ್ಬರೂ ಸರಿಯಾಗಿ ಗುರುತಿಸಲ್ಪಡದೇ ಉಳಿದಿದ್ದಾರೆ. ಅಂಥ ಅಪರಿಚಿತ ಕತೆಗಾರರಲ್ಲಿ ದಿ. ವಿ.ಜಿ. ಶ್ಯಾನಭಾಗರು ಒಬ್ಬರು (ವೈಕುಂಠ ಗೋಪಾಲ ಶ್ಯಾನಭಾಗ: 1912-1980). ಯಾವ ಮುಖ್ಯ ಆಂಥಾಲಜಿಗಳಲ್ಲೂ ಇವರ ಕತೆಗಳು ಸೇರಿಲ್ಲ. ಯಾವ ವಿಮರ್ಶಕರೂ ಇವರ ಹೆಸರನ್ನು ಎತ್ತಿ ಹೇಳಿಲ್ಲ. ನನಗೆ ತಿಳಿದಮಟ್ಟಿಗೆ ಮಾಸ್ತಿಯವರೊಬ್ಬರು ಮಾತ್ರ ಒಂದೆಡೆ ‘ಉತ್ತರ ಕನ್ನಡದ ಜೀವನ ಶ್ರೀ ವಿ.ಜಿ. ಶ್ಯಾನಭಾಗರ ಕತೆಗಳಲ್ಲಿ… ಬಾಳಿನಿಂದ ನೇರವಾಗಿ ಸಾಹಿತ್ಯಕ್ಕೆ ಬಂದಿವೆ ಎಂಬಂತೆ ವಾಸ್ತವವಾಗಿ ಕಾಣುತ್ತವೆ’ (ಪ್ರಸಂಗ-3, 1965, ಪುಟ 218) ಎಂದು ಶ್ಯಾನಭಾಗರ ಕತೆಗಳ ವಾಸ್ತವಿಕತೆಯನ್ನು ಕುರಿತು ಒಂದು ಮಾತು ಹೇಳಿದ್ದಾರೆ. ಇನ್ನುಳಿದ ಹಾಗೆ ಕನ್ನಡ ಸಣ್ಣಕತೆಗಳ ಲೋಕಕ್ಕೆ ಶ್ಯಾನಭಾಗರ ಹೆಸರು ತೀರಾ ಅಪರಿಚಿತ.
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
ಶ್ಯಾನಭಾಗರು 1930ರಿಂದ 1945-50ರ ಅವಧಿಯಲ್ಲಿ ಮಾಸ್ತಿಯವರ ‘ಜೀವನ’ ಹಾಗೂ ಬೆಟಗೇರಿಯವರ ‘ಜಯಂತಿ’ ಪತ್ರಿಕೆಗಳಲ್ಲಿ ತಮ್ಮ ಕತೆಗಳನ್ನು ಪ್ರಕಟಿಸಿದ್ದಾಗಿ ತಿಳಿದುಬರುತ್ತದೆ. ಸಿರಸಿಯ ‘ನವಚೇತನ’ದಲ್ಲೂ ಅವರ ಕತೆಗಳು ಪ್ರಕಟವಾಗಿದ್ದವಂತೆ. ಎಂಟು ಕತೆಗಳನ್ನು ಒಳಗೊಂಡ ‘ಕೆಲವು ಚಿತ್ರಗಳು'(1942) ಎಂಬ ಅವರ ಕಥಾ ಸಂಗ್ರಹವೊಂದು ಪ್ರಕಟವಾಗಿದೆ. ‘ಹಂಬಲ’ ಎಂಬ ಒಂದು ಕತೆ ‘ಇಂದ್ರ ಧನುಷ್ಯ'(1943) ಎಂಬ ಉತ್ತರ ಕನ್ನಡ ಜಿಲ್ಲೆಯ ಏಳು ಜನ ಕತೆಗಾರರ ಸಂಕಲನದಲ್ಲಿ ಬಂದಿದೆ. ಈ ಸಂಕಲನಗಳಾಗಲಿ, ಶ್ಯಾನಭಾಗರ ಉಳಿದ ಕತೆಗಳಾಗಲಿ ಈಗ ಸಿಗುವುದಿಲ್ಲ. (ದುರ್ಲಭವಾದ ‘ಕೆಲವು ಚಿತ್ರಗಳು’ ಸಂಕಲನವನ್ನೂ ಉಪಯುಕ್ತ ಮಾಹಿತಿಯನ್ನೂ ಕಷ್ಟಪಟ್ಟು ಸಂಗ್ರಹಿಸಿ ಕೊಟ್ಟವರು ಕುಮಟೆಯ ಬಾಳಿಗಾ ಕಾಲೇಜಿನ ಪ್ರೊಫೆಸರ್ ಎಲ್.ವಿ.ಪೈ ಅವರು). ‘ಜಯಂತಿ’ ಮಾಸಪತ್ರಿಕೆಯಲ್ಲಿ 1944-46ರ ನಡುವೆ ಶ್ಯಾನಭಾಗರ ಇನ್ನೂ ಆರು ಕತೆಗಳು ಪ್ರಕಟವಾಗಿವೆ.
ನವೋದಯ ಕಾಲದ, ಶ್ರೀನಿವಾಸರ ನಂತರದ ಪೀಳಿಗೆಯ ಆನಂದ, ಆನಂದಕಂದ, ಗೋ.ಕೃ., ಸಿ.ಕೆ. ವೆಂಕಟರಾಮಯ್ಯ ಮೊದಲಾದವರ ಕತೆಗಳೊಡನೆ ಹೋಲಿಸಿದಾಗ ಶ್ಯಾನಭಾಗರ ಕತೆಗಳು ತೀರಾ ಬೇರೆಯಾಗಿ ಕಾಣುತ್ತವೆ. ಕೆಲವು ದೃಷ್ಟಿಯಿಂದ ಇವು ನವ್ಯರ ಬರವಣಿಗೆಗೆ ಹೆಚ್ಚು ಸಮೀಪವಾಗಿವೆ ಎನ್ನಬಹುದು. ಶಾಂತಿನಾಥ ದೇಸಾಯಿ, ಚಿತ್ತಾಲ, ಲಂಕೇಶರ ಮೊದಲಿನ ಕತೆಗಳನ್ನು ಇವು ಆಶ್ಚರ್ಯಕರವಾಗಿ ಹೋಲುತ್ತವೆ. ‘ಕೆಲವು ಚಿತ್ರಗಳು’ ಸಂಕಲನದ ‘ದೇವಿ’ಯು ದೇಸಾಯರ ‘ಬೇಸರ’, ಚಿತ್ತಾಲರ ‘ಖಾಲಿಕೋಣೆ’ ಮತ್ತು ‘ಸೆರೆ’, ಲಂಕೇಶರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಹಾಗೂ ಕೆ. ಸದಾಶಿವರ ‘ಗಿಡ್ಡಿ’ ಕತೆಗಳನ್ನು ನೆನಪಿಗೆ ತರುತ್ತದೆ. ‘ಇದ್ದವರ ಗೋಳು’ ಹಾಗೂ ‘ಒಂದು ಅನುಭವ’ದಂಥ ಕತೆಗಳು ಲಂಕೇಶರ ಕತೆಗಳ ಮನುಷ್ಯನ ಸಣ್ಣತನವನ್ನೇ ವಸ್ತುವಾಗಿ ಉಳ್ಳಂತವು. ಇವುಗಳಲ್ಲಿ ‘ನಮ್ಮ ನಡುವಿನ ಹುಡುಗ’ದಂಥ ಕತೆಗಳ ಹೋಲಿಕೆ ಇದೆ. ನವ್ಯರ ವಿಶಿಷ್ಟ ನೈತಿಕ ನಿಲುವು, ಕೆಳದನಿಯ ನಿರೂಪಣೆ, ಸಂಕೀರ್ಣತೆ, ಸಂದಿಗ್ಧತೆ, ಧ್ವನಿ, ಭಾವತುಮುಲಗಳನ್ನೆಲ್ಲ ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ‘ಕಥೆ’ ಎಂದು ಸಾಂಪ್ರದಾಯಿಕವಾಗಿ ಗುರುತಿಸಬಹುದಾದ ಘಟನೆಗಳ ನಿರೂಪಣೆಗಿಂತ ಸಂಬಂಧಿಸಿದ ಪಾತ್ರಗಳ ಭಾವಸಂಕೀರ್ಣವನ್ನು ಸೂಚಿಸುವದರ ಮೇಲೆ ಹೆಚ್ಚು ಗಮನ ಕೊಡಲಾಗಿದೆ. ಇವೆಲ್ಲ ಆ ಕಾಲದ ಬರವಣಿಗೆಯಲ್ಲಿ ಅಪರಿಚಿತವಾಗಿದ್ದ ಗುಣಗಳಾದ್ದರಿಂದಲೇ ಈ ಕತೆಗಳು ಆ ಕಾಲದ ಓದುಗರ ಗಮನ ಸೆಳೆಯದೇ ಹೋಗಿವೆ ಎನ್ನಬಹುದು. ಈ ದೃಷ್ಟಿಯಿಂದ ಶ್ಯಾನಭಾಗರ ‘ದೇವದಾಸಿ’, ‘ಶಿಲಾಲೇಖ’, ‘ಪಾಪ-ಪುಣ್ಯ’, ‘ದೇವಿ’ ಮೊದಲಾದ ಕತೆಗಳು ಅಭ್ಯಾಸಯೋಗ್ಯವಾಗಿವೆ.
‘ದೇವದಾಸಿ’ಯ ಸಮಸ್ಯೆ ನವೋದಯದ ಹಲವು ಕತೆಗಳಿಗೆ ವಸ್ತುವಾಗಿರುವಂಥದು. ಆನಂದರ ‘ನಾನು ಕೊಂದ ಹುಡುಗಿ’ಯಂತೂ ಈ ವಸ್ತುವನ್ನೊಳಗೊಂಡ ಅತ್ಯಂತ ಪ್ರಸಿದ್ದವಾದ ಕತೆ. ಮುಖ್ಯವಾಗಿ ಈ ವಸ್ತುವಿನ ಸಾಮಾಜಿಕ ಸ್ವರೂಪ ಆ ಕಾಲದ ಲೇಖಕರ ಗಮನ ಸೆಳೆದಿದೆ. ಒಂದು ರೀತಿಯಿಂದ ‘ದೇವದಾಸಿ’ ಎಂಬ ಹೆಸರೇ ಸಾಮಾಜಿಕ ಅನ್ಯಾಯವೊಂದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅಂತೆಯೇ ಈ ವಸ್ತುವಿನ ಸಾಮಾಜಿಕತೆಯನ್ನು ಹತ್ತಿಕ್ಕಿ ಬೇರೆ ದೃಷ್ಟಿಯಿಂದ ಅದನ್ನು ಬಳಸಿಕೊಳ್ಳುವುದು ಕಠಿಣ. ಸಮಸ್ಯೆಗಳ ಸಾಮಾಜಿಕ ಹೊರ ಮುಖಕ್ಕೆ ಅಷ್ಟಾಗಿ ಗಮನ ಕೊಡದ ನವ್ಯರು ಈ ವಸ್ತುವನ್ನು ಹೇಗೆ ಬಳಸಿಕೊಳ್ಳುತ್ತಿದ್ದರೋ ಏನೋ! ಪ್ರಗತಿಶೀಲರು ಮಾತ್ರ ಇದೊಂದು ಸಾಮಾಜಿಕ ಶೋಷಣೆಯ ನಿದರ್ಶನವೆಂದು ಕೂಗಿ ಹೇಳುತ್ತಿದ್ದರು; ಈ ಶೋಷಣೆಗೆ ತುತ್ತಾದ ಸಖಿಯಂಥವರ ದುರ್ದೈವವನ್ನು ಕಣ್ಣೀರಿನಲ್ಲಿ ಬರೆಯುತ್ತಿದ್ದರು; ಇಂಥ ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಯುದ್ಧ ಸಾರುತ್ತಿದ್ದರು.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
ಆದರೆ ಶ್ಯಾನಭಾಗರ ಕತೆ ತೀರ ಬೇರೆ ಧಾಟಿಯಲ್ಲಿದೆ. ಈ ಕತೆಯಲ್ಲೂ ಸಾಮಾಜಿಕ ವ್ಯವಸ್ಥೆ, ದೇವದಾಸಿಯರ ಸ್ಥಾನಮಾನ, ಹೀನ ಅವಸ್ಥೆ ಇತ್ಯಾದಿಗಳೆಲ್ಲ ಇವೆ. ಆದರೆ ಎಲ್ಲೂ ಕೂಗಾಟವಿಲ್ಲ, ಕಥೆ ಇಂಥ ವ್ಯವಸ್ಥೆಯಲ್ಲಿ ಮಾನವೀಯ ಭಾವನೆಗಳು ಪ್ರಕಟವಾಗಲಾರದ ದುರಂತದ ಮೇಲೆ ಒತ್ತು ಕೊಡುತ್ತದೆ. ಒಟ್ಟು ಸನ್ನಿವೇಶದ ದುರಂತ ಒಂದು ಸೂಕ್ಷ್ಮಭಾವತುಮುಲದಲ್ಲಿ ಸ್ಫೋಟಗೊಳ್ಳುವ ರೀತಿ ಕತೆಯಲ್ಲಿ ಅತ್ಯಂತ ಕಲಾತ್ಮಕವಾಗಿ ಬಂದಿದೆ. ಈ ಬಗೆಯ ಸಂಯಮ ಅಂದಿನ ಕತೆಗಾರಿಕೆಗೆ ಹೊಸದೆಂದೇ ಹೇಳಬೇಕು.
ಕತೆಯ ನಾಯಕ ಬಹಳ ದಿನಗಳ ನಂತರ ತಾನು ಬಾಲ್ಯದಲ್ಲಿ ಒಂದು ಸಲ ಬಂದು ಹೋಗಿದ್ದ ಊರಿಗೆ ತಿರುಗಿ ಬಂದಾಗ ಗುಡಿಯಲ್ಲಿ ದೇವದಾಸಿಯೊಬ್ಬಳನ್ನು ನೋಡುತ್ತಾನೆ. ಅವಳ ಬಗ್ಗೆ ಅವನಿಗೆ ಜುಗುಪ್ಸೆ ಹುಟ್ಟುತ್ತದೆ. ಅವಳು ವೀಳ್ಯವನ್ನು ಮುಂದಿಡುವುದು, ಅದಕ್ಕಿರಬಹುದಾದ ಆಹ್ವಾನದ ಅರ್ಥ, ಹಣದ ಪ್ರಶ್ನೆ ಈ ಜುಗುಪ್ಸೆಗೆ ಕಾರಣವಾಗುತ್ತದೆ. ಆದರೆ ಈ ಜುಗುಪ್ಸೆ ಅತಿರಂಜಿತ ರೂಪ ತಳೆಯುವುದಿಲ್ಲ, ಬದಲಾಗಿ, ಅವಳ ಅಕಾಲ ವೃದ್ಧಾಪ್ಯವನ್ನು ಗಮನಿಸಿ ‘ದೇವಸೇವೆಯನ್ನು ಕಸರು ಬಿಡದೆ ಮಾಡಿದ್ದಾಳೆ’ ಎಂಬ ಸೂಕ್ಷ್ಮವ್ಯಂಗ್ಯದ ಅನಿಸಿಕೆಯಲ್ಲಿ ಪ್ರಕಟವಾಗುತ್ತದೆ. ಕಲೆಯ ಮುಖ್ಯ ಧಾಟಿಗೆ ಇದೊಂದು ನಿದರ್ಶನ. ಕತೆ ಯಾವುದನ್ನೂ ಬಿಚ್ಚಿ ಹೇಳುವುದಿಲ್ಲ, ಉತ್ಪ್ರೇಕ್ಷಿಸುವುದಿಲ್ಲ. ದೇವದಾಸಿಯ ಬಗೆಗಿನ ನಾಯಕನ ನಿರಾಸಕ್ತಿಯೂ ಹೀಗೇ ಸೌಮ್ಯವಾಗಿದೆ. ‘ನಾನು ಕೊಂದ ಹುಡುಗಿ’ಯಲ್ಲಿಯ ಇಂಥದೇ ಪ್ರಸಂಗದಲ್ಲಿ ನಾಯಕ ತನ್ನ ಶೀಲದ ಬಗ್ಗೆ ಹೇಳಿಕೊಳ್ಳುವ ಮಾತುಗಳನ್ನು ಗಮನಿಸಿದರೆ ಅಂತರ ಸ್ಪಷ್ಟವಾಗುತ್ತದೆ.
ನಂತರ ಊರಲ್ಲಿ ಊಟದ ಮನೆ ಹುಡುಕಿಕೊಂಡು ಹೋಗುತ್ತಿದ್ದಂತೆ ನಾಯಕನಿಗೆ ಬಾಲ್ಯದ ನೆನಪುಗಳು ಕೆರಳುವುದು ಕೂಡ ಸಹಜವಾಗಿಯೇ ಬಂದಿದೆ. ಈ ಸಂದರ್ಭದಲ್ಲಿ ಬರುವ ದೇವದಾಸಿಯರ ಹುಡುಗಿ ‘ಸಖಿ’ಯೊಂದಿಗಿನ ಒಡನಾಟದ ನೆನಪುಗಳು ಸ್ವಲ್ಪದರಲ್ಲೇ ಬಹಳಷ್ಟು ಹೇಳಬಲ್ಲವಾಗಿವೆ. ಮೊದಲನೆಯದಾಗಿ ಬಾಲ್ಯದಲ್ಲಿನ ಸಾಮಾಜಿಕ ವ್ಯವಸ್ಥೆಯ ಬಂಧನಗಳಿಂದ ಮುಕ್ತವಾದ ಮಾನವೀಯ ಸಂಬಂಧಗಳ ಪ್ರಸ್ತಾಪವಿದೆ. ಗಂಡು-ಹೆಣ್ಣೆಂಬ, ಕುಲೀನ-ಕುಲಹೀನವೆಂಬ ಭೇದವಿಲ್ಲದ ಅವಸ್ಥೆ ಇದು. ನಾಯಕನೂ-ಸಖಿಯೂ ಸ್ವಚ್ಛಂದವಾಗಿ ಕೂಡಿ ಆಡಿದ ದಿನಗಳವು. ಎರಡನೆಯದಾಗಿ, ಆ ಕಾಲದಲ್ಲಿ ಅರ್ಥವಾಗದಿದ್ದ ಹಾಗೂ ಈಗ ಅಸ್ಪಷ್ಟವಾಗಿ ಅರ್ಥವಾಗುತ್ತಿರುವ ನಾಯಕ-ಸಖಿಯರ ನಡುವಿನ ಪರಸ್ಪರ ಸಂಬಂಧದ ಪ್ರಸ್ತಾಪವೂ ಇಲ್ಲಿದೆ. ನಾಯಕ ವಯಸ್ಸಿಗೆ ಬಂದು ಬೇರೆಡೆ ಹೋದಾಗ ಸಹಜವಾಗಿಯೇ ಮರೆತುಹೋದ ಈ ಸಂಬಂಧ ಈಗ ಆ ಪರಿಸರದಲ್ಲಿ ಮತ್ತೆ ನೆನಪಿಗೆ ಬರುತ್ತದೆ. ಇಲ್ಲಿಯೂ ಉತ್ಪ್ರೇಕ್ಷೆ ಇಲ್ಲ. ಈ ಸಂಬಂಧ ಎಷ್ಟು ಆಳವಾದದ್ದಾಗಿತ್ತು ಎಂಬ ಕಲ್ಪನೆಯೂ ನಮಗೆ ಬರುವುದಿಲ್ಲ,
ನಾಯಕ ತಿರುಗಿ ಗುಡಿಗೆ ಬಂದಾಗ ಮತ್ತೆ ಭೆಟ್ಟಿಯಾಗುವ ದೇವದಾಸಿ ಒಂದು ಮಾತೂ ಆಡುವುದಿಲ್ಲ. ಈಗ ಆಕೆ ಅಲಂಕೃತಳಾಗಿ ಬಂದಿದ್ದಾಳೆ. ಆಕೆಯೇ ಓಡಾಡಿ ಭಟ್ಟರನ್ನು ಕರೆತಂದು ಪೂಜೆಯ ವ್ಯವಸ್ಥೆ ಮಾಡುತ್ತಾಳೆ. ನಾಯಕನಿಗೆ ಅವಳ ಹಾವಭಾವಗಳಿಂದ ಅವನು ಅವಳತ್ತ ನೋಡಿದಾಗ ವಿಕಸಿತವಾಗುವ ಅವಳ ತುಟಿಗಳಿಂದ ಹುಟ್ಟುವ ಅಪಾರ್ಥದಿಂದ ಅವನಿಗೆ ಮತ್ತೆ ಜುಗುಪ್ಸೆ ಹುಟ್ಟುತ್ತದೆ. ಆದರೆ ಪೂಜೆಯ ಕಾಲದಲ್ಲಿ ಅವಳು ದೇವರಲ್ಲಿ ಕಣ್ಣು ನೆಟ್ಟು ನಿಲ್ಲುವ ರೀತಿ, ಕಣ್ಣಿನಲ್ಲಿ ತುಂಬುವ ನೀರು ಮತ್ತೆ ಮೌನವಾಗಿ ಎಷ್ಟೋ ಮಾತು ಹೇಳುತ್ತವೆ. ಈ ಸಂದರ್ಭದಲ್ಲಿ ಆ ಮಾತುಗಳೇನೆಂದು ಅರ್ಥವಾಗುವುದಿಲ್ಲ. ಆದರೂ ಜುಗುಪ್ಸೆಗೆ ಬದಲಾಗಿ ವಿರುದ್ಧ ಭಾವನೆಗಳನ್ನು ಹುಟ್ಟಿಸುತ್ತವೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಆದರೆ ಕೊನೆಗೆ ಹೊರಟುಹೋಗುವಾಗ ಇವಳೇ ‘ಸಖಿ’ಯಾಗಿರಬಹುದೇ ಎಂದು ನಾಯಕನಿಗೆ ಹುಟ್ಟುವ ಸಂದೇಹ, ಆ ಸಂದೇಹದಿಂದ ತಿರುಗಿ ನೋಡಿದಾಗ ಇವನತ್ತಲೇ ನೋಡುತ್ತ ನಿಂತಿರುವ ದೇವದಾಸಿಯರ ‘ದರುಶನ’ ಕತೆಯ ಸೂಕ್ಷ್ಮ ಕಲೆಗಾರಿಕೆಗೆ ಇನ್ನೊಂದು ನಿದರ್ಶನವಾಗಿದೆ. ಇಲ್ಲೂ ಕೂಡ ಉತ್ಪ್ರೇಕ್ಷೆ ಇಲ್ಲ, ಭಾವನೆಗಳ ವಿಶ್ಲೇಷಣೆಯೂ ಇಲ್ಲ. ಆದರೆ ಈ ತಿರುವಿನಲ್ಲಿ ಕತೆ ಅನಿರೀಕ್ಷಿತವಾಗಿ ಭಾವಸಂಕೀರ್ಣವೊಂದನ್ನು ಸದ್ದಿಲ್ಲದೆ ಸ್ಪೋಟಿಸಿಬಿಡುತ್ತದೆ. ಈ ಸ್ಪೋಟದ ಪರಿಣಾಮಗಳು ಮಾತ್ರ ದೂರಗಾಮಿಯಾಗಿವೆ. ಈ ಸ್ಫೋಟದ ಬೆಳಕಿನಲ್ಲಿ ಕತೆಯ ಚಿಕ್ಕ-ಪುಟ್ಟ ವಿವರಗಳೆಲ್ಲ ಹೊಸ ಅರ್ಥದಿಂದ ಹೊಳೆಯತೊಡಗುತ್ತವೆ. ಬಾಲ್ಯದಲ್ಲಿ ಸಖಿ ನಾಯಕನನ್ನು ಕರೆದುಕೊಂಡು ಓಡಿಹೋಗಿ ಪಾರುಮಾಡುವ ಸಂಗತಿಯನ್ನೇ ನೋಡಿ. ಅದರ ಸ್ವಚ್ಛಂದತೆ ಸಾಮಾಜಿಕ ಜೀವ ಪದ್ಧತಿಯೊಂದರ ಬಗ್ಗೆ ಹೇಳುವುದರ ಜೊತೆಗೆ, ನಾಯಕ ಸಖಿಯರ ನಡುವಿನ ಅನ್ಯೋನ್ಯತೆಗೂ ಸಾಕ್ಷಿಯಾಗಿದೆ. ಕತೆಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಅನ್ಯೋನ್ಯತೆಗಳು ಪರಸ್ಪರಾವಲಂಬಿಯಾಗಿಯೇ ಉಳಿಯುತ್ತವೆ. ಬಾಲ್ಯದಲ್ಲಿ ಅಡ್ಡಿ ಬಾರದ ವ್ಯವಸ್ಥೆ ಬೆಳೆದಾಗ ದೊಡ್ಡ ಕಂದರವಾಗಿ ನಿಲ್ಲುತ್ತದೆ. ಈ ಕಂದರದ ವಾಸ್ತವತೆಯನ್ನು ಮೀರಲಾರದ ಸ್ಥಿತಿಯಲ್ಲಿ ಅವರು ಮತ್ತೆ ಭೆಟ್ಟಿಯಾಗುತ್ತಾರೆ. ಅವಳಿಗೆ ಅವನ ಗುರುತು ಮೊದಲು ಸಿಗುತ್ತದೆ. ಪೂಜಾರಿ ಅವನ ಹೆಸರು ಕೇಳಿದಾಗ ಇದು ಸ್ಪಷ್ಟವಾಗುತ್ತದೆ. ಆದರೂ ಈಗ ಅವನ ಗುರುತು ಸಿಕ್ಕುದನ್ನು ಆಕೆ ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ. ಮೊದಲಿನ ಸಲಿಗೆಯನ್ನು ಆಕೆ ತೋರಲಾರಳು. ಸಾಮಾಜಿಕವಾಗಿ, ನೈತಿಕವಾಗಿ ಆಕೆ ಈಗ ಈ ಹಕ್ಕು ಕಳೆದುಕೊಂಡಿದ್ದಾಳೆ. ಅಂತೆಯೇ ಮೌನವಾಗಿಯೇ ಆಕೆ ನೋವು ಅನುಭವಿಸುತ್ತಾಳೆ. ದೇವರನ್ನು ನೋಡುತ ಅವಳ ಕಣ್ಣಲ್ಲಿ ನೀರು ತುಂಬುವುದು ಏತಕ್ಕಾಗಿ ಎಂಬುದು ಈಗ ಅರ್ಥವಾಗುತ್ತದೆ. ಅವನು ಹೊರಟುಹೋದ ಮೇಲೂ ಅವನನ್ನೇ ನೋಡುತ್ತ ಆಕೆ ನಿಂತದ್ದೇಕೆಂದೂ ಈಗ ಅರ್ಥವಾಗುತ್ತದೆ. ಕೊನೆಗೆ ಅವಳು ಯಾರೆಂದು ಗುರುತು ಸಿಕ್ಕಮೇಲೂ ನಾಯಕ ತಿರುಗಿ ಬಂದು ಅವಳನ್ನು ಮಾತಾಡಿಸಲಾರ, ಅಂದಿಗೂ ಇಂದಿಗೂ ಜೀವನ ಬಹಳಷ್ಟು ಬದಲಾಗಿದೆ. ಅದರಲ್ಲೂ ದೇವದಾಸಿಯಾದ ‘ಸಖಿ’ ತನ್ನ ವೃತ್ತಿಯಿಂದಾಗಿ, ಸಾಮಾಜಿಕ ಪದ್ಧತಿಯೊಂದರ ಬಲಿಪಶುವಾಗಿ ಆ ಅರ್ಹತೆ ಕಳೆದುಕೊಂಡಿದ್ದಾಳೆ. ಆದರೆ ಈ ಮೌನದಲ್ಲಿಯ ಭಾವನೆಗಳ ತುಮುಲವನ್ನು ಕತೆ ಧ್ವನಿಪೂರ್ಣವಾಗಿ ನಮ್ಮ ಊಹೆಗೆ ಬಿಡುತ್ತದೆ. ಅಲ್ಲದೆ ಈ ಎಲ್ಲ ಅರ್ಥಗಳೂ ಕತೆಯ ಕೊನೆಯಿಂದ ತಿರುಗಿ ನೋಡಿದಾಗಲೇ ಹೊಳೆಯುವಂಥವು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕತೆಯ ಉದ್ದಕ್ಕೂ ವಿವರಗಳಿಗೆ ಸಂದಿಗ್ಧತೆಯ ಬಣ್ಣ ಕೊಟ್ಟಿರುವ ರೀತಿಯೂ ಈ ಕತೆಯ ವಿಶೇಷವೆಂದೇ ಹೇಳಬೇಕು. ನಾಯಕ-ಸಖಿಯರ ನಡುವಿನ ಸಂಬಂಧ, ನಾಯಕನ ಗುರುತು ಸಿಕ್ಕರೂ ತೋರಗೊಡದ ದೇವದಾಸಿಯ ನಡವಳಿಕೆ, ವೀಳ್ಯದ ಆಮಂತ್ರಣ, ಅವಳ ಕಣ್ಣಲ್ಲಿ ತುಂಬುವ ನೀರು, ಕೊನೆಗೆ ಇವಳೇ ‘ಸಖಿ’ಯಾಗಿರಬಹುದೇ ಎಂದು ನಾಯಕನಿಗೆ ಬರುವ ಸಂದೇಹ ಇತ್ಯಾದಿಗಳೆಲ್ಲ ಉದ್ದೇಶಪೂರ್ವಕವಾಗಿ ಸಂದಿಗ್ಧವಾಗಿವೆ. ಇವುಗಳನ್ನು ನಿರ್ವಹಿಸಿರುವ ಸಂಯಮ ಶ್ರೇಷ್ಠ ಕತೆಗಾರಿಕೆಯ ಲಕ್ಷಣವಾಗಿದೆ.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಘಟನಾಪ್ರಧಾನವಾದ ಕಥೆಯನ್ನು ವಿವರಣಾತ್ಮಕವಾಗಿ ಹೇಳುವ ಶೈಲಿಯೇ ಪ್ರಧಾನವಾಗಿದ್ದ ಕಾಲದಲ್ಲಿ ಇಷ್ಟು ಸೂಕ್ಷ್ಮ ಮಟ್ಟದಲ್ಲಿ ಕತೆ ಹೇಳಲು ಮಾಡಿದ ಪ್ರಯತ್ನ ಹೊಸದೆಂದೇ ಹೇಳಬೇಕು.
ಹೀಗೆ ಇಲ್ಲಿ ಸಾಮಾಜಿಕ ಸಮಸ್ಯೆಯೊಂದು ಅಂತರ್ಗತವಾಗಿದ್ದರೂ, ಅದನ್ನು ವೈಯಕ್ತಿಕ ನೆಲೆಯಲ್ಲಿ, ಮಾನವೀಯ ಸಂಬಂಧಗಳ ಮೇಲೆ ಒತ್ತುಕೊಟ್ಟು ಹೇಳಲಾಗಿದೆ. ಆದರೆ ಇಲ್ಲಿಯ ಸೂಕ್ಷ್ಮ ದುರಂತದ ಹಿಂದೆ ದೇವದಾಸಿಯ ಬದುಕಿನಲ್ಲಿಯ ಸಾಮಾಜಿಕ ಅನ್ಯಾಯದ ತೀವ್ರ ಅರಿವು ಲೇಖಕರಿಗೆ ಇರಲಿಲ್ಲವೆಂದು ಹೇಗೆ ಹೇಳುವುದು?
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)