ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
”ಲಿಂಗಾ…!”
”ಬುದ್ದೀ…”
“ತೀರ ಊರ ಹತ್ತಿರಕ್ಕೆ ಬಂದು ದಾರಿ ತಪ್ಪಿದೆವಲ್ಲ!”
”ಇಲ್ಲೇನೋ ಬೆಳ್ಳಗೆ ಕಾಣುತ್ತೆ ಬುದ್ದಿ… ಇದೇ ಇರಬಹುದು ದಾರಿ… ಅಲ್ಲ. ಅಲ್ಲಿ ನೀರು ಹರೀತಾ ಇದೆ… ಇದು ತೊರೆ ಗಡ್ಡೆ… ಆಗೋ ಅದೇ ತೊರೆ ತುಂಬಿ ಮೊರೀತಾ ಇದೆ.”
“ಈಚೆ ದಿಣ್ಣೆ ಹತ್ತಿದರೆ ದಿಕ್ಕು ಗೊತ್ತಾಗಬಹುದು. ಹೀಗೆ ಬಾ.”
ದಿಣ್ಣೆ ಹತ್ತುವುದಕ್ಕೆ ಶುರು ಮಾಡಿದೆವು. ಸಾಯಂಕಾಲವಾಗಿಹೋಗಿತ್ತು. ಲಿಂಗನು ಕೆಸರಿನಲ್ಲಿ ಪ್ರಯಾಸದಿಂದ ನಡೆಯುತ್ತಿದ್ದನು. ಕುದುರೆ ಲಿಂಗನ ಹಿಂದೆ, ನಾನು ಕುದುರೆಯ ಮೇಲೆ, ನಮ್ಮ ಮೇಲೆ ಕುಟುಕು ಹನಿ. ರಜಾದಲ್ಲಿ ಆ ದಿನ ಬೆಳಿಗ್ಗೆ ಬೆಂಗಳೂರಿಂದ ಹೊರಟು ಬಸ್ಸಿನಲ್ಲಿ ನಮ್ಮ ತಾಲ್ಲೂಕಿಗೆ ಹೋಗಿ, ಅಲ್ಲಿ ನಮ್ಮ ಗುರುತಿನ ಶೇಕದಾರರ ಕುದುರೆಯನ್ನು ತೆಗೆದುಕೊಂಡು, ಜವಾನರ ಹುಡುಗ ಲಿಂಗನನ್ನು ಕರೆದುಕೊಂಡು ನಮ್ಮ ಹಳ್ಳಿಗೆ ಹೋಗುತ್ತಿದ್ದೆನು. ಲಿಂಗನಿಗೆ ದಾರಿ ಚೆನ್ನಾಗಿ ಗೊತ್ತಿಲ್ಲ. ನಾನು ಆ ಕಾಡುದಾರಿಯಲ್ಲಿ ಇಪ್ಪತ್ತೆಂಟು ಸಲ ತಿರುಗಿದವನಾದರೂ ಆ ಸಾಯಂಕಾಲ ಹೀಗಾಗಿಹೋಯಿತು.
“ಲಿಂಗಾ…”
”ಬುದ್ದೀ…”
”ಪೆಟ್ಟಿಗೆ ಭಾರವಾಗಿದೆಯೆ?”
“ಭಾರವಿಲ್ಲ ಬುದ್ದಿ, ಬಹಳ ಹಗುರವಾಗಿದೆ- ನೋಡೋಕೆ ಮಾತ್ರ ದೊಡ್ಡದಾಗಿದೆ- ಏನಿದೆ ಬುದ್ದಿ ಇದರಲ್ಲಿ?”
“ನಾಲ್ಕು ಪುಸ್ತಕ, ಎರಡು ಬಟ್ಟೆ, ನನ್ನ ತಮ್ಮನಿಗೆ ಒಂದು ಜರತಾರಿ ಟೋಪಿ, ಒಂದು ಜೊತೆ ಬೂಟ್ಸು, ನನ್ನ ತಂಗಿಗೆ ಎರಡು ಬೊಂಬೆ…ಇಷ್ಟೆ.”
“ನೀವು ಬೆಂಗಳೂರಿಗೆ ಹೋಗಿ ಎಷ್ಟು ದಿವಸ ಆಯಿತು ಬುದ್ದೀ?”
“ಹೋದ ಬೇಸಿಗೆ ಆದಮೇಲೆ ಹೋದವನು ಮತ್ತೆ ಈಗಲೇ ಬರುತ್ತಿರುವುದು, ನೋಡು. ಆಗ್ಯೂ ಈಗ್ಯೂ ಈ ದಾರಿಯಲ್ಲಿ ಬಾಂದುಗಳು, ಕಳ್ಳಿಯ ಸಾಲು ಎಲ್ಲಾ ಬದಲಾಗಿ ಹೋಗಿದೆ. ಅದಕ್ಕೇನೇ ಈಗ ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆಂಬುದು ಸಹ ನನಗೆ ಗೊತ್ತಿಲ್ಲ.”
ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ
ನಾವು ಮೂವರು- ಎಂದರೆ ನಾನು, ಲಿಂಗ, ಕುದುರೆ ಬಳಲಿದ್ದೆವು. ಅಲ್ಲಿಂದ ಸ್ವಲ್ಪ ಹೊತ್ತು ಮೌನವಾಗಿ ಪ್ರಯಾಣ ಮಾಡಿದೆವು. ನನಗಾದರೂ ಬೇಗ ಮನೆಗೆ ಹೋಗಿ ಎಲ್ಲರನ್ನೂ ನೋಡಬೇಕೆಂದು ಆಸೆ. ನನ್ನ ತಮ್ಮ ಟೋಪಿ ಬೂಟ್ಸು ಎದುರುನೋಡುತ್ತಿದ್ದಾನೆ. ತಂಗಿಗೆ ಗೊಂಬೆ ಬೇರೆ ತೆಗೆದುಕೊಂಡಿದ್ದೆ. ಪರೀಕ್ಷೆ ಚೆನ್ನಾಗಿ ಮಾಡಿರುವ ವಿಚಾರ ನನ್ನ ತಂದೆಗೆ ಹೇಳಬೇಕು. ತಾಯಿಗೆ ಹೇಳಬೇಕಾದ್ದಂತೂ ಎಷ್ಟೋ ಬಿದ್ದಿತ್ತು. ದಿಣ್ಣೆ ಹತ್ತಿ ಸುತ್ತಲೂ ನೋಡುತ್ತ ನಿಂತೆವು. ಉಪಯೋಗವಾಗಲಿಲ್ಲ. ದಾರಿ ಸಿಕ್ಕುವ ಆಸೆ ದೂರವಾಯಿತು. ಕುದುರೆಯ ಮೇಲೆ ಕುಳಿತುಕೊಂಡೇ ಒಂದು ಸಿಗರೇಟು ಹತ್ತಿಸಲು ಪ್ರಯತ್ನಿಸಿದೆ. ಬೆಂಕಿಕಡ್ಡಿ ಏನು ಮಾಡಿದರೂ ಹತ್ತದು. ಗಾಳಿ, ಹನಿ. ಪ್ರಯಾಸದಿಂದ ಹಚ್ಚಿದೆ. ಕುದುರೆ ಸುತ್ತಲೂ ನೋಡುತ್ತಿತ್ತು. ಗಾಳಿ ‘ಸುಂಯ್’ ಎಂದು ಬೀಸುತ್ತಿತ್ತು.
”ಲಿಂಗಾ…”
”ಬುದ್ದೀ…”
“ಬೆಳಗಾಗುವವರೆಗೆ ಈ ಬಯಲಿನಲ್ಲೇ ಕೂತುಕೊಂಡಿರಬೇಕಾಗುತ್ತೆ.”
ಇದನ್ನು ಕೇಳಿ ಕುದುರೆ ಕಿವಿಯನ್ನು ನೆಟ್ಟಗೆ ಮಾಡಿಕೊಂಡಿತು.
ಲಿಂಗನು, “ಅಗೋ ಸ್ವಾಮಿ” ಎಂದನು.
ನಾನು ಆಲಿಸಿದೆ. ನಮ್ಮ ಬಲಗಡೆ ಒಂದು ಕಡೆಯಿಂದ ನಾಯಿ ಬಗುಳುವುದು ಕೇಳಿಬಂತು.
“ಈ ನಾಯಿ ಬಗಳುವ ದಿಕ್ಕಿನಲ್ಲೇ ಹೋಗೋಣ ಬುದ್ದೀ, ಯಾವುದಾದರೂ ಹಳ್ಳಿ ಸಿಕ್ಕೀತು. ನೀವು ಮರ ಗಿಡ ಗುರುತು ನೋಡಿಕೋತಾ ಬನ್ನಿ.”
ಸ್ವಲ್ಪ ಬಲಗಡೆ ತಿರುಗಿಕೊಂಡು ದಿಣ್ಣೆ ಇಳಿಯುವುದಕ್ಕೆ ಮೊದಲುಮಾಡಿದೆವು. ಆದರೆ ಮತ್ತೆ ನಾಯಿಯ ಬೊಗುಳು ಕೇಳಿಬರಲಿಲ್ಲ. ಇದ್ದಕ್ಕಿದ್ದ ಹಾಗೆ ಲಿಂಗನು,
“ಅದೇನು ಬುದ್ದಿ ಅಲ್ಲಿ ಕಾಣುವುದು?” ಅಂದನು.
ಅವನು ಬೆರಳು ತೋರಿಸಿದ ಕಡೆ ನೋಡಿದೆನು.
”ಅದೊಂದು ಮರ ಕಾಣೋ! ಅಯ್ಯೋ ಪುಕ್ಕಲು ಹುಡುಗಾ. ನನ್ನ ಸಮೀಪದಲ್ಲೇ ಕುದುರೆಯ ಪಕ್ಕದಲ್ಲೇ ಬಾ, ಹೆದರಬೇಡ. ನಿನಗೊಂದು ಕಥೆ ಹೇಳ್ತೇನೆ. ನಿನಗೆ ಓದುಬರಹ ಬರುತ್ತೆಯೆ ಮಗೂ?”
“ಬರುತ್ತೆ, ಅದೇನು ಕಥೆ ಹೇಳಿ ಬುದ್ದಿ.”
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ಅಲ್ಲಿ ಒಂದು ಸಣ್ಣ ದಿಬ್ಬದ ಮೇಲೆ ಕುಳಿತುಕೊಂಡೆವು. ಲಿಂಗನಿಗೆ ಕಥೆ ಹೇಳಿದೆ:- ಇಂಗ್ಲೀಷರ ಸೈನ್ಯ ಕಾವೇರಿಯನ್ನು ದಾಟಿ ಬಂದದ್ದು-ಸುಲ್ತಾನನು ಕೋಟೆಯ ಬಾಗಿಲನ್ನು ಭದ್ರಪಡಿಸಿದ್ದು-ಯುದ್ಧ-ಮಧ್ಯಾಹ್ನ ಇಂಗ್ಲೀಷರು ಕೋಟೆ ಹತ್ತಿ ಬಾವುಟ ಏರಿಸಿದ್ದು-ಆಗ ಟಿಪ್ಪುವು ಊಟ ಮಾಡುತ್ತಿದ್ದುದು-ಇಂಗ್ಲೀಷರು ಬಾವುಟ ಏರಿಸಿದ್ದುದನ್ನು ಕೇಳಿ ಎರಡು ತುತ್ತು ಊಟ ಮಾಡಿದ್ದವನು ಅಲ್ಲಿಗೇ ಬಿಟ್ಟು ಕುದುರೆಯ ಮೇಲೆ ಕೋಟೆಗೆ ಬಂದದ್ದು-ಸಾಯಂಕಾಲದವರೆಗೆ ಯುದ್ಧ ಮಾಡಿ ಬಿದ್ದದ್ದು-ಒಬ್ಬರಿಗೂ ತಿಳಿಯದಿರಲೆಂದು ಶವಗಳ ನಡುವೆ ಅಡಗಿಕೊಂಡದ್ದು ಯಾವನೋ ಸೋಲ್ಜರನು ಅವನ ಬಂಗಾರದ ನಡುಕಟ್ಟಿಗೆ ಕೈ ಹಾಕಿದ್ದು- ಟಿಪ್ಪು ಕತ್ತಿ ಬೀಸಿದ್ದು-ಇಂಗ್ಲೀಷರು ಟಿಪ್ಪುವಿನ ಮಕ್ಕಳನ್ನು ಸೆರೆಹಿಡಿದದ್ದು- ಟಿಪ್ಪುವಿನ ಶವವನ್ನು ಲಾಟೀನು ಬೆಳಕಿನಲ್ಲಿ ಹುಡುಕಿದ್ದು- ರಾತ್ರಿಯೆಲ್ಲಾ ಸೋಲ್ಜರುಗಳು ಶ್ರೀರಂಗಪಟ್ಟಣವನ್ನು ಲೂಟಿ ಮಾಡಿದ್ದು- ಅವರ ಹಾವಳಿಯನ್ನು ತಾಳಲಾರದೆ ಹೆಂಗಸರು ಮಕ್ಕಳೆಲ್ಲ ಬೆಳಗಿನವರೆಗೆ ಬೀದಿಗಳಲ್ಲಿ ಅಲೆದದ್ದು- ಮಾರನೆಯ ಬೆಳಿಗ್ಗೆ ಟಿಪ್ಪುವಿನ ಶವದ ಮೆರವಣಿಗೆಯಾಗಿ ಸಮಾಧಿಯಾದದ್ದು-ಎಲ್ಲವನ್ನೂ ಹೇಳಿದೆ.

“ಕಥೆ ಬಹಳ ಚೆನ್ನಾಗಿದೆ ಬುದ್ದಿ.”
“ಇನ್ನು ಏಳು ಹೋಗೋಣ.”
ಹೊರಟೆವು. ಲಿಂಗನು ಮತ್ತೆ ಮರವನ್ನು ನೋಡುತ್ತ,
“ಮರ ಎಲ್ಲಾದರೂ ಹಾಗಿರುತ್ತೇ ಬುದ್ದಿ?”
ಎಂದು ನನ್ನ ಸಮೀಪಕ್ಕೆ ಬಂದು ಕುದುರೆಯ ಬಲಪಕ್ಕದಲ್ಲೇ ನಡೆಯುತ್ತ ಮೆಲ್ಲನೆ ಕೇಳಿದನು. ಆ ಮರವು ರಾತ್ರಿಯ ಹೊತ್ತು ಅಷ್ಟು ವಿಕಾರವಾಗಿ ಕಾಣುವುದು! ಹುಡುಗ ಹೆದರಿಯಾನು ಎಂದು ನಾನು ಮತ್ತೆ ಕುದುರೆಯಿಂದ ಇಳಿದೆ.
”ಆ ಮರ ನನಗೆ ಚೆನ್ನಾಗಿ ಗೊತ್ತು ಮಗು. ಇಲ್ಲಿಂದ ಹತ್ತಿರವೇ ಇದೆ ನಮ್ಮೂರು. ಆ ಮರವನ್ನು ನೋಡಿ ನನ್ನ ತಮ್ಮ ಶಾಮಣ್ಣ ಹೋದ ವರುಷ ಹೆದರಿದ್ದ.”
“ಅವರು ಇಲ್ಲಿಗೇಕೆ ಬಂದಿದ್ದರು ಸಾಮಿ? ದಾರಿ ತಪ್ಪಿದ್ದರೆ?”
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
“ನೋಡು, ಹೋದ ಬೇಸಿಗೆಯಲ್ಲಿ ನಾನು ನಮ್ಮೂರಿಗೆ ಬಂದಿದ್ದಾಗ ಒಂದು ದಿನ ಸಾಯಂಕಾಲ ನಾನು ನನ್ನ ತಮ್ಮ ಶಾಮಣ್ಣ ತಿರುಗಾಡುವುದಕ್ಕೆ ಹೊರಟೆವು. ಶಾಮಣ್ಣನಿಗೆ ಎಂಟು ವರ್ಷ ವಯಸ್ಸು. ತಾನು ಚರಿತ್ರೆಯಲ್ಲಿ ಓದಿದ್ದ ಕಥೆ- ಈಗ ನಾನು ನಿನಗೆ ಹೇಳಿದೆನಲ್ಲಾ ಆ ಕಥೆ-ನನಗೆ ಹೇಳುತ್ತ ಬಂದ. ಶಾಮಣ್ಣ ಬಹಳ ಬುದ್ಧಿವಂತ. ಎಷ್ಟೋ ಕಥೆ ಹೇಳುತ್ತಾನೆ. ಆದರೆ ಶ್ರೀರಂಗಪಟ್ಟಣದ ಕಥೆ ಹೇಳುವಾಗ ಮೈಮರೆತು ಬಿಡುತ್ತಾನೆ. ಅವನಿಗೆ ಅಷ್ಟು ಪ್ರೀತಿ ಅದರ ಮೇಲೆ, ಅಷ್ಟು ಉತ್ಸಾಹ! ‘ಶ್ರೀರಂಗಪಟ್ಟಣ ಎಂದು ತೋರಿಸುತ್ತೀಯ?’ ಎಂದು ನನ್ನನ್ನು ಪೀಡಿಸುತ್ತಾನೆ. ಆ ಕಥೆ ಹೇಳಿಕೋತ, ನೋಡಪ್ಪ, ಆ ದಿನ ರಾತ್ರಿಯಾಯಿತು. ದಾರಿ ತಪ್ಪಿಬಿಟ್ಟೆವು. ಇದೇ ಮರದ ಹತ್ತಿರ ಬಂದಿದ್ದೆವು. ಶಾಮಣ್ಣ ಹೆದರಿಬಿಟ್ಟ ಈ ಮರ ನೋಡಿ. ಮನೆಗೆ ಹೋಗುತ್ತಲೂ ಜ್ವರ ಬಂತು ಅವನಿಗೆ. ಎರಡು ಮೂರು ದಿನ ವಾಸಿಯಾಗಲಿಲ್ಲ.”
“ಹಾಗಾದರೆ ಇಲ್ಲಿಂದ ದಾರಿ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲ ಸಾಮಿ? ನಿಮೂರು ಎಷ್ಟಾಗುತ್ತೆ ಇಲ್ಲಿಗೆ?”
“ಇಲ್ಲಿಂದ ನಮ್ಮೂರಿಗೆ ಸರಿಯಾದ ದಾರಿ ಇಲ್ಲ. ಚೂಟಿಯ ಮೇಲೆ ಹೋಗಬೇಕು. ಇನ್ನೇನು ಇದೇ ನಮ್ಮೂರ ಸ್ಮಶಾನ. ಇಲ್ಲಿಂದ ಅರ್ಧ ಮೈಲಿಗೆ ಸ್ವಲ್ಪ ಜಾಸ್ತಿ ಆದೀತು ನಮ್ಮ ಹಳ್ಳಿ, ಅಷ್ಟೇ.”
“ಏನು ಬುದ್ದಿ!”
ಬಾಯಿ ಜಾರಿ ಅವನಿಗೆ ಸ್ಮಶಾನ ಎಂದು ಹೇಳಿಬಿಟ್ಟೆ. ಅವನು ಹದಿನಾಲ್ಕು ವರ್ಷದ ಹುಡುಗ. ಹೆದರಿಬಿಟ್ಟರೆ?
“ಇಲ್ಲಿಂದ ಸ್ವಲ್ಪ ಬಲಕ್ಕೆ ಹೋಗಬೇಕು ಕಾಣೋ ಅಷ್ಟೆ. ಈ ಮರ ನಮ್ಮೂರಿಗೆ ಪಶ್ಚಿಮಕ್ಕಿದೆ.”
ಮಳೆ ಬಿಟ್ಟಿತ್ತು. ‘ಜೀ’ ಎಂದು ಕತ್ತಲೆ ಕವಿಯುತ್ತಿತ್ತು. ಕಪ್ಪೆಗಳು ಎಲ್ಲೆಲ್ಲೂ ಮೊರೆಯಿಡುತ್ತಿದ್ದವು. ಲಿಂಗನು ಹಿಂದಹಿಂದಕ್ಕೆ ನೋಡುತ್ತ ನಡೆಯುತ್ತಿದ್ದನು. ಅವನ ಮನಸ್ಸಿನ ಗಾಬರಿ ನನಗೆ ಗೊತ್ತು. ಅವನೊಡನೆ ಮಾತಾಡುತ್ತಲೇ ಇದ್ದರೆ ಮೇಲು ಎಂದುಕೊಂಡು,
“ಲಿಂಗಾ,…” ಎಂದು ಏನನ್ನೋ ಹೇಳಹೋದೆ. ಅವನು,
”ಅಲ್ಲಿ ನೋಡಿ ಬುದ್ದಿ” ಎಂದು ಹಿಂದಕ್ಕೆ ಬೆರಳು ತೋರಿಸಿದ.
“ದೆವ್ವಗಳ ಭಯವೇನೋ ನಿನಗೆ? ಅಯ್ಯೋ ಪುಕ್ಕಲಾ.”
”ಅಲ್ಲಿ ನೋಡಿ ಬುದ್ದಿ” ಎಂದು ಮತ್ತೆ ಒತ್ತಿ ಹೇಳಿದ, ಹಿಂದಿರುಗಿ ನೋಡಿದೆ. ನಾನು ಕುಳಿತು ಕಥೆ ಹೇಳಿದ್ದ ದಿಬ್ಬದ ಬಳಿ ಒಂದು ದೀವಿಗೆ. ಎರಡು ವ್ಯಕ್ತಿಗಳು ದೀವಿಗೆಯ ಆಚೆ ಈಚೆ ಎದುರುಬದುರಾಗಿ ಕುಳಿತು ನೆಲವನ್ನೇ ನೋಡುತ್ತಿದ್ದವು. ನನಗೆ ಉತ್ಸಾಹವು ಹೆಚ್ಚಾಯಿತು- ಅದರಲ್ಲಿ ಜಂಭ ಏಕೆ, ಸ್ವಲ್ಪ ಭಯವೇ ಆಯಿತು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
”ಲಿಂಗಾ, ನಿನಗೇನು ಕಾಣಿಸುತ್ತೋ?”
“ನೋಡಿ ಸಾಮಿ-ದೀವಿಗೆ-ಆಚೆ-ಈಚೆ…”
”ಭಯಪಡಬೇಡ ಹತ್ತಿರ ಹೋಗಿ ನೋಡೋಣ.”
”ಸಾಮಿ ಈಚೆ ನೋಡಿ.”
ಅಲ್ಲಿ ಒಂದು ಬೆಳಕು ಚಲಿಸುತ್ತಿತ್ತು. ಒಂದು ಕೈಲಿ ಲಿಂಗನ ಕೈಯನ್ನು ಹಿಡಿದುಕೊಂಡು, ಇನ್ನೊಂದರಲ್ಲಿ ಕುದುರೆಯನ್ನೆಳೆದುಕೊಂಡು ದಿಬ್ಬದ ಕಡೆ ಮೆಲ್ಲನೆ ಹೊರಟೆನು-ಅಲ್ಲಿ ನಮಗೆ ಕಾಣುತ್ತಿದ್ದುದು ಸುಳ್ಳಲ್ಲ, ಭ್ರಾಂತಿಯಲ್ಲ. ವ್ಯಕ್ತಿಗಳು ಧ್ವನಿ ಮಾಡುವಂತೆ ಬೇರೆ ಕೇಳಿಸಿತು. ಮನುಷ್ಯರಂತೆ ಮಾತು! ಅಲ್ಲೇ ಒಂದು ಮರದಡಿಯಲ್ಲಿ ನಿಂತು ಆಲಿಸಿದೆವು.
”ಅಯ್ಯೋ… ನನ್ನ ಕಂದಯ್ಯಾ… ಹಾಲು ಬಯಸಿ ಹೋದೆಯಲ್ಲೋ… ಕುಡಿಯೊ ಮಗುವೆ… ಹಾಲು ತಂದಿದ್ದೇನೆ… ಕುಡಿಯೊ ಕಂದಾ… ದಿನದಿನಕ್ಕೆ ಸವೆದು ಸವೆದು ಕರಗಿಹೋದೆಯಲ್ಲೋ… ನಮ್ಮನ್ನ ಅಗಲಿ ಹೋಗುವ ದಿನ ಏನೋ ಮಾತನಾಡಲು ಹೋಗಿ ನಾಲಗೆ ಬಾರದೆ ನನ್ನ ಮುಖವನ್ನೇ ನೋಡಿದೆ… ಅಪ್ಪಯ್ಯಾ… ಏನು ಹೇಳಲಿದ್ದೆ… ನಿನ್ನ ಕಣ್ಣುಗಳಲ್ಲಿ ನಮ್ಮನ್ನು ಬಿಟ್ಟು ಹೋಗಲಾರದ ಸಂಕಟವನ್ನು ತೋರಿಸಿದೆ… ಕಂದ…. ಕಂದಯ್ಯಾ…ಅರಣ್ಯದಲ್ಲಿ ಒಬ್ಬನೇ ಮಲಗಿದ್ದೀಯಲ್ಲೋ…” ಎಂದು ಆಕೆ ಒಂದು ಲೋಟದಿಂದ ದಿಬ್ಬದ ಮೇಲೆ ಹಾಲು ಹೊಯ್ದು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಅಲ್ಲಿದ್ದವರು ಹೆಂಗಸರೆಂಬುದು ಮಾತ್ರ ಆ ಮಿಣುಕು ದೀಪದಿಂದ ನಮಗೆ ಗೊತ್ತಾಯಿತು. ನಾನು ಲಿಂಗನ ಕಿವಿಯಲ್ಲಿ “ಯಾರೋ ಅಳುತ್ತಿದ್ದಾರೆ, ಹೆದರಬೇಡ” ಎಂದು ಹೇಳಿದೆ. ಎರಡನೆಯಾಕೆ-ಚಿಕ್ಕ ವಯಸ್ಸಿನ ಹುಡುಗಿ-ಅಳುತ್ತ ನುಡಿದಳು:
”ಅಣ್ಣಯ್ಯನಿಗೆ ಬರೆಯಲೂ ಆಗಲಿಲ್ಲ… ಎರಡೇ ದಿವಸದಲ್ಲಿ ಹೀಗಾಗಿ ಹೋಯಿತು… ಅಯ್ಯೋ…”
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ನಾನು ಎರಡು ಹೆಜ್ಜೆ ಮುಂದೆ ಇಟ್ಟೆನು. ಅಷ್ಟು ಹೊತ್ತಿಗೆ ನಮ್ಮ ಎಡಗಡೆ ಚಲಿಸುತ್ತಿದ್ದ ಬೆಳಕು ಬಂದು ದಿಬ್ಬವನ್ನು ಸೇರಿತು.
“ಏನಿದು ಹುಚ್ಚು?… ರಾತ್ರಿಯ ಹೊತ್ತು ಹೀಗೆ ಬಂದುಬಿಟ್ಟರೆ ಹೇಗೆ? ಹೋದವನು ಬಂದಾನೆ ?…ಬನ್ನಿ ಮನೆಗೆ…”
ಧ್ವನಿಯನ್ನು ಗುರ್ತಿಸಿದೆ…ಆತನು ನನ್ನ ತಂದೆ!
“ಕತ್ತಲೆಯೆಂದರೆ ಹೆದರುತ್ತಿದ್ದವನು ಈಗ ಒಬ್ಬನೇ ಇಲ್ಲಿ ಮಲಗಿದ್ದೀಯಲ್ಲೋ… ಆಗ ನಿನಗೆ ಇದೇ ಜಾಗದಲ್ಲಿ ಹೆದರಿಕೆಯಾಗಿ ಜ್ವರ ಬಂದಿತ್ತಲ್ಲ… ಈಗ ಇಲ್ಲಿ ಒಬ್ಬನೇ ಮಲಗಲು ಹೆದರಿಕೆ ಇಲ್ಲವೇ?… ಇಲ್ಲಿ ನಿನ್ನೊಬ್ಬನನ್ನೇ ಬಿಟ್ಟು ನಾನು ಮನೆಗೆ ಹೇಗೆ ಹೋಗಲಿ?”

ಅದು ನನ್ನ ತಾಯಿಯ ರೋದನ!
“ಅಣ್ಣಯ್ಯ ಟೋಪಿ, ಬೂಟ್ಸು ತರುತ್ತಾನೆ… ಅವನಿಗೆ ಶ್ರೀರಂಗಪಟ್ಟಣದ ಕಥೆ ಯಾರು ಹೇಳುವರು? ಶ್ರೀರಂಗಪಟ್ಟಣ ಯಾರಿಗೆ ತೋರಿಸಬೇಕು?… ಎಷ್ಟು ಸಂಕಟಪಡಬೇಕು ?… ಶಾಮೂ…”
ಅದು ನನ್ನ ತಂಗಿಯ ಅಳು!
ನನ್ನ ಆಗಿನ ಸ್ಥಿತಿಯನ್ನು ಬರೆಯಲು ಸಾಧ್ಯವಿಲ್ಲ. ಅನಂತ ವಿಶ್ವದಲ್ಲಿ ನಾನೊಬ್ಬನೇ ಇರುವಂತೆ ತೋರಿತು. ಲಿಂಗನು ನನ್ನನ್ನು ಮುಂದಕ್ಕೆ ಬಿಡದೆ ಬಲವಾಗಿ ಹಿಡಿದುಕೊಂಡಿದ್ದನು. ಅವನ ಕೈ ಬಿಡಿಸಿಕೊಂಡು ದಿಬ್ಬಕ್ಕೆ ಹೋದೆ.
ನನ್ನ ತಂದೆ,
“ಯಾರು?”
ಎಂದು ಲಾಟೀನು ಮೇಲಕ್ಕೆ ಎತ್ತಿ ಹಿಡಿದರು.
“ಏನಪ್ಪಾ?…”
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಎಂದೆ. ನನ್ನನ್ನು ನೋಡಿ ಎಲ್ಲರೂ ಗೊಳೋ ಎಂದು ಅತ್ತರು. ನಾನು ಶಾಮಣ್ಣನ ಸಮಾಧಿಯ ಮೇಲೆ ಬಹಳ ಹೊತ್ತು ಕಣ್ಣೀರು ಸುರಿಸಿದೆ. ಒಬ್ಬೊಬ್ಬರೊಂದೊಂದು ಕಡೆ ಕಣ್ಣೀರಿಡುತ್ತಿದ್ದರು. ಲಿಂಗನೂ ಅಳುತ್ತಿದ್ದ. ದುಃಖದ ಉದ್ವೇಗವು ತೀರಿದ ಮೇಲೆ ನಾನು ಪೆಟ್ಟಿಗೆಯಿಂದ ಟೋಪಿ ತೆಗೆದು ಸಮಾಧಿಯ ಮೇಲಿಟ್ಟು, ಬೂಟ್ಸನ್ನು ಹತ್ತಿರದಲ್ಲಿಯೇ ಇರಿಸಿದೆನು. ಶಾಮಣ್ಣ ಒಂದು ಸಲ ಕೇಳಿದ್ದ, ”ಅಣ್ಣಯ್ಯ, ಈ ಗಿಡ ಮರ ಎಲ್ಲಾ ರಾತ್ರಿ ಹೊತ್ತು ಅರಣ್ಯದಲ್ಲಿ ಒಂಟಿಯಾಗಿ ಹೇಗಿರುತ್ತವೆ?” ಎಂದು. ಅದು ನನಗೆ ನೆನಪಾಗಿ ನಾನು ಆ ರಾತ್ರಿ ಅಲ್ಲೇ ಇರಬೇಕೆಂದು ಮನೆಗೆ ಹೋಗಲೊಪ್ಪಲಿಲ್ಲ. ಎಲ್ಲರೂ ಅಲ್ಲೇ ನಿಂತೆವು. ಬಹಳ ಹೊತ್ತು ಏನೇನೋ ಮಾತನಾಡಿದೆವು-ಶಾಮಣ್ಣ ಕಾಯಿಲೆ-ಅವನು ನಮ್ಮ ಮನೆಯ ಮಾಣಿಕ್ಯ-ಬಹಳ ಮುದ್ದಾದ ಹುಡುಗ-ಬುದ್ಧಿಶಾಲಿ-ಊರಿನವರಿಗೆಲ್ಲ ಮುದ್ದು, ಅಚ್ಚುಮೆಚ್ಚು-ಅವನನ್ನು ನೋಡಿದರೆ ಯಾರಿಗೂ ಸಂತೋಷವಾಗುವುದು-ಚಟುವಟಿಕೆ ಅಷ್ಟಿಷ್ಟಲ್ಲ. ನನ್ನ ತಂದೆ,
“ನಾವೆಲ್ಲರೂ ಒಂದು ದಿನ ಇಲ್ಲಿಗೆ ಬರುವವರೇನೇ” ಎಂದರು. ಗಾಳಿ ‘ಸುಂಯ್’ ಎಂದು ಬೀಸಿತು. ನಾನು “ಅಹುದು” ಎಂದೆನು. ಆ ಅರಿಯದ ಮುದ್ದಿನ ಬಾಲಕನು ಎಲ್ಲಿ ಹೆದರಿದ್ದನೋ ಅಲ್ಲಿಯೇ ಶಾಶ್ವತವಾಗಿ ಮಲಗಿದ್ದನು. ನಾವು ಮನೆಗೆ ಹೋದೆವು- ‘ಮನೆಗೆ’.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ವೀಳ್ಯ’, ಸತ್ಯಶೋಧನ ಪ್ರಕಟನಾಲಯ, ಬೆಂಗಳೂರು, 1947)

‘ಕ್ಷೀರಸಾಗರ’ ಅವರ ನಮ್ಮೂರಿನ ಪಶ್ಚಿಮಕ್ಕೆ
“ಕಲಹ ಕುತೂಹಲ”ದಂಥ ಜನಪ್ರಿಯ ಹಾಸ್ಯ ನಾಟಕಗಳ ಮೂಲಕ ನಾಟಕಕಾರರೆಂದೇ ಪ್ರಸಿದ್ಧಿ ಪಡೆದಿರುವ ದಿ. ಕ್ಷೀರಸಾಗರರು (ಬೆಳಗೆರೆ ಸೀತಾರಾಮಶಾಸ್ತ್ರಿ: 1906-1979) ಕೆಲವು ಕಥೆಗಳನ್ನೂ ಬರೆದಿದ್ದಾರೆ. 1930ರಿಂದ 1946ರ ನಡುವಿನ ಅವಧಿಯಲ್ಲಿ “ಸುಬೋಧ”, “ಪ್ರಬುದ್ಧ ಕರ್ನಾಟಕ”, ”ಕಥಾಂಜಲಿ”, ”ಕಥಾಕುಂಜ” ಮೊದಲಾದ ಆ ಕಾಲದ ಪ್ರಮುಖ ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟವಾದವು. ನಂತರ 1946ರಲ್ಲಿ ಅವರ ಹತ್ತು ಕಥೆಗಳ “ವೀಳ್ಯ” ಎಂಬ ಒಂದು ಸಂಕಲನವೂ ಬಂದಿದೆ.
ಕ್ಷೀರಸಾಗರರ ಕಥೆಗಳು ರಚನೆಯಾದದ್ದು ನವೋದಯದ ಏರುಗಾಲದಲ್ಲಿ, ಇನ್ನೂ ಪ್ರಗತಿಶೀಲರ ಘೋಷಣೆಗಳು ಮೊಳಗುವ ಪೂರ್ವದಲ್ಲಿ. ಭಾವನಾವಶತೆ ಸಾಹಿತ್ಯದ ಪ್ರಮುಖ ಸೌಂದರ್ಯಸ್ಥಾನಗಳಲ್ಲಿ ಒಂದೆಂದು ಭಾವಿಸಲ್ಪಟ್ಟಿದ್ದ ಕಾಲ ಅದು. ಕ್ಷೀರಸಾಗರರ ಕಥೆಗಳು ಈ ಬಗೆಯ ಕಲ್ಪನೆಯ ನಿರ್ದೇಶನಗಳಾಗಿವೆ. ಆದರೆ ಉತ್ತಮ ನವೋದಯ ಕಥೆಗಳ ತಾತ್ವಿಕ ಚಿಂತನೆ, ಬದುಕಿನ ನಿಗೂಢಗಳ ಅನ್ವೇಷಣೆಗಳೂ ಇಲ್ಲಿಲ್ಲ; ಪ್ರಗತಿಶೀಲ ಕಥೆಗಳ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆಯೂ ಇಲ್ಲ. ಬದಲಾಗಿ, ಬದುಕಿನ ಭಾವಪೂರ್ಣವಾದ ಕ್ಷಣಗಳನ್ನು ಸೆರೆಹಿಡಿಯುವದರಲ್ಲಿ ಅವರ ಆಸಕ್ತಿ ಕೇಂದ್ರೀಕೃತವಾಗಿದೆ. ಆದರೆ ಈ ಬಗೆಯ ಅವರ ಪ್ರಯತ್ನಗಳು ಎಲ್ಲ ಕಡೆಗೂ ಯಶಸ್ವಿಯಾಗಿಲ್ಲ. “ವೀಳ್ಯ”ದ ಹೆಚ್ಚಿನ ಕಥೆಗಳಲ್ಲಿ ಭಾವಪೂರ್ಣತೆ ಕೃತಕವಾಗಿದೆ. ‘ನಮ್ಮೂರಿನ ಪಶ್ಚಿಮಕ್ಕೆ’ ಮಾತ್ರ ಸಂಪೂರ್ಣವಾಗಿ ಭಾವಪೂರ್ಣತೆಯ ಮೇಲೆಯೇ ಅವಲಂಬಿಸಿಯೂ ಸಾಕಷ್ಟು ಯಶಸ್ವಿಯಾಗಿರುವ ಕಥೆ ಎನ್ನಬಹುದು.
ಈ ಕಥೆ ಮೊದಲು ಪ್ರಕಟವಾದದ್ದು 1931ರಲ್ಲಿ, ”ಪ್ರಬುದ್ಧ ಕರ್ಣಾಟಕ”ದಲ್ಲಿ. ತಕ್ಷಣ ಅದು ಓದುಗರ ಪ್ರೀತಿಗೆ ಪಾತ್ರವಾಯಿತು. ಅನಂತರ ಅ.ನ.ಕೃ. ಅವರ “ಕಾಮನಬಿಲ್ಲು”ವಿನಲ್ಲಿ ಆಯ್ಕೆಯಾಯಿತು. ಹಲವಾರು ಪಠ್ಯಪುಸ್ತಕಗಳ ಮೂಲಕ, ನಾಟಕದ ರೂಪದಲ್ಲಿ ಹೀಗೆ ಹಲವು ರೀತಿಯಿಂದ ಈ ಕಥೆ ಸಾಕಷ್ಟು ಜನಪ್ರಿಯವಾಗಿದೆ. ಜೊತೆಗೆ 1937ರ ಹೊತ್ತಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಂಡಿದೆ.
ಭಾವಪೂರ್ಣತೆಯೇ ಈ ಕಥೆಯ ಮುಖ್ಯ ಆಕರ್ಷಣೆ ಎನ್ನಬಹುದು. “ಕಥನಕಲೆ”ಯ ಜೀವಾಳವಾದ “ಭಾವಪರಾಕಾಷ್ಠತೆ”ಗೆ ಇದು ಒಂದು ಅತ್ಯುತ್ತಮ ಉದಾಹರಣೆ ಎಂದಿದ್ದಾರೆ ಅನಕೃ. ಕುರ್ತಕೋಟಿಯವರೂ ಇದನ್ನು “ಭಾವಪೂರ್ಣತೆ ಹಾಗೂ ರಸೋತ್ಕರ್ಷಗಳಿಗೆ ಮಾದರಿಯ ಕಥೆ” ಎಂದು ಗುರುತಿಸಿದ್ದಾರೆ. ‘ಭಾವಪರಾಕಾಷ್ಠತೆ’ ಕಥನ ಕಲೆಯ ಜೀವಾಳವಾಗಿರಲಿ, ಆಗದಿರಲಿ; ಈ ಕಥೆಯಲ್ಲಿ ಮಾತ್ರ ಅದೇ ಜೀವಾಳವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿಯ ಭಾವಪೂರ್ಣತೆ ಕಥೆಯ ತಿರುವಿನಲ್ಲಿ ಕಾಣಿಸಿಕೊಳ್ಳುವ ಒಂದು ಪರಿಣಾಮ ಮಾತ್ರವಾಗಿರದೆ, ಇಡಿಯ ಕಥೆಯ ವಾತಾವರಣವೇ ಭಾವಪೂರ್ಣವಾಗಿದೆ.
ಇಲ್ಲಿ ಕಥೆ ಹೇಳುತ್ತಿರುವವನು ಒಬ್ಬ ಹುಡುಗ. ಸ್ವಭಾವತಃ ಅಂತಃಕರುಣಿ. ಮನೆ, ತಂದೆ-ತಾಯಿ, ತಮ್ಮ-ತಂಗಿಯರ ಬಗ್ಗೆ ವಿಶೇಷ ಪ್ರೀತಿಯುಳ್ಳವನು. ಈ ವಯಸ್ಸಿನಲ್ಲಿ ಈ ಬಗೆಯ ಪ್ರೀತಿ ಸಹಜವೂ ಹೌದು. ಅದರಲ್ಲೂ ವರ್ಷದಷ್ಟು ಕಾಲ ಮನೆ, ಮನೆಯವರಿಂದ ದೂರವಿದ್ದು, ತಿರುಗಿ ಹಳ್ಳಿಗೆ ಹೋಗಿ ಆದಷ್ಟು ಬೇಗ ತನಗೆ ಬೇಕಾದವರನ್ನು ಕಾಣಲು ತವಕಿಸುತ್ತಿರುವವನಲ್ಲಿ ಅಂಥ ಪ್ರೀತಿ ಸ್ವಲ್ಪ ಹೆಚ್ಚಾಗಿಯೇ ಪ್ರಕಟವಾದರೂ ಆಶ್ಚರ್ಯವೇನಿಲ್ಲ. ಕಥೆಯ ಆರಂಭದಲ್ಲಿಯೇ ನಿರೂಪಕನ ಈ ಸ್ವಭಾವ ಸ್ಥಾಪಿತವಾಗುತ್ತದೆ. ಲಿಂಗನೊಡನೆ ಅವನು ನಡೆಸುವ ಸಂಭಾಷಣೆಗಳಲ್ಲಿ ಅವನ ಮೃದು ಸ್ವಭಾವ, ತಮ್ಮ-ತಂಗಿಯರ ಮೇಲಿನ ಪ್ರೀತಿ ಇತ್ಯಾದಿಗಳೆಲ್ಲ ಸ್ವಾಭಾವಿಕವಾಗಿ ಬಂದಿವೆ.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಅದರಲ್ಲೂ ನಿರೂಪಕ ಹಾಗೂ ಅವನ ತಮ್ಮ ಶಾಮಣ್ಣನ ನಡುವಿನ ಸಂಬಂಧಗಳ ಬಗ್ಗೆ ವಿಶೇಷವಾದ ವಿವರಗಳಿವೆ. ನಿರೂಪಕ ಕತ್ತಲೆಯಲ್ಲಿ ದಾರಿತಪ್ಪಿ ಅಲೆಯುತ್ತಿರುವಾಗ ಮರವೊಂದನ್ನು ನೋಡಿ ಲಿಂಗ ಹೆದರುವದು, ಇದೇ ಮರವನ್ನು ನೋಡಿ ವರ್ಷದ ಹಿಂದೆ ಶಾಮಣ್ಣನೂ ಅಂಜಿದ್ದು, ಲಿಂಗನ ಅಂಜಿಕೆಯನ್ನು ಕಳೆಯಲು ನಿರೂಪಕ ಲಿಂಗನಿಗೆ ಹೇಳುವ ಕಥೆಯನ್ನು ಹಿಂದೆ ಶಾಮಣ್ಣ ನಿರೂಪಕನಿಗೆ ಹೇಳಿದ್ದು ಮುಂತಾದ ವಿವರಗಳು ಸದ್ದಿಲ್ಲದೆ ಶಾಮಣ್ಣನ ಪಾತ್ರಕ್ಕೆ ಪ್ರಾಮುಖ್ಯತೆ ತರುತ್ತ ಹೋಗುತ್ತವೆ. ಹಿಂದೆಂದೋ ನಡೆದ ಸಂಗತಿಗಳನ್ನು ಹೀಗೆಯೆ ನಿರೂಪಣೆಯ ಚೌಕಟ್ಟಿನಲ್ಲಿ ಮೂರ್ತಗೊಳಿಸುವ ಈ ರೀತಿ ಸಾಮಾನ್ಯ ಫ್ಲ್ಯಾಷ್ ಬ್ಯಾಕ್ ರೀತಿಗಿಂತ ಭಿನ್ನವಾಗಿದ್ದು ಕುತೂಹಲಕರವಾಗಿದೆ.
ಹೀಗೆ ನಿರೂಪಕ ಹಾಗೂ ಲಿಂಗರು ದಾರಿ ತಪ್ಪಿ ಮನೆಯ ಕಡೆ ಹೋಗುವ ಬದಲು ಸ್ಮಶಾನಕ್ಕೆ ಬರುವದು ಕೂಡ ಸಹಜವಾಗಿಯೇ ಬಂದಿದೆ. ಇದೇ ಕಥೆಯ ಮುಖ್ಯ ದೃಶ್ಯದ ಸ್ಥಳ. ಕಥೆಯ ಕೊನೆಯಲ್ಲಿ ಹೇಳಿರುವಂತೆ ಇಲ್ಲಿ ಸ್ಮಶಾನವೂ ಒಂದು ಮನೆ, ಎಲ್ಲರೂ ಕೊನೆಗೆ ಬರಲೇಬೇಕಾದ ಶಾಶ್ವತ ಮನೆ.
ಆದರೆ ಸ್ಮಶಾನದಲ್ಲಿ ನಡೆಯುವ ದೃಶ್ಯದಲ್ಲಿ ಮಾತ್ರ ಸಹಜತೆಗಿಂತ ನಾಟಕೀಯತೆಯದೇ ಕೈ ಮೇಲಾಗಿದೆ. ಮಗನನ್ನು ಮಣ್ಣು ಮಾಡಿದ ಜಾಗೆಗೆ ರಾತ್ರಿಯಲ್ಲಿ ತಾಯಿ ಬಂದು ವಿಲಾಪಿಸುವುದು, ಅದೇ ಹೊತ್ತಿಗೇ ನಿರೂಪಕ ಅಲ್ಲಿಗೆ ಬಂದು ಅದನ್ನು ಕೇಳಿಸಿಕೊಳ್ಳುವುದು ಅತಿಭಾವುಕವಾಗಿದೆಯಷ್ಟೇ ಅಲ್ಲ, ನಾಟಕೀಯವೂ ಆಗಿದೆ. ಅದೇ ಹೊತ್ತಿಗೆ ನಿರೂಪಕನ ತಂದೆಯೂ ಅಲ್ಲಿಗೆ ಬಂದು ಸೇರಿಕೊಳ್ಳುವುದು ಈ ನಾಟಕೀಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಸನ್ನಿವೇಶವನ್ನು ಅತಿ ಭಾವುಕತೆಯಿಂದ ಸ್ವಲ್ಪಮಟ್ಟಿಗೆ ಪಾರುಮಾಡುವ ಒಂದು ಅಂಶವೆಂದರೆ “ಏನಿದು ಹುಚ್ಚು?… ರಾತ್ರಿಯ ಹೊತ್ತು ಹೀಗೆ ಬಂದುಬಿಟ್ಟರೆ ಹೇಗೆ?… ಹೋದವನು ಬಂದಾನೆ?… ಬನ್ನಿ ಮನೆಗೆ” ಎಂಬ ತಂದೆಯ ಮಾತುಗಳು. ಈ ಸನ್ನಿವೇಶದ ಮೆಲೋಡ್ರಾಮದಲ್ಲಿ ಕತೆಗಾರ ಪೂರ್ತಿ ತೇಲಿಹೋಗಿಲ್ಲವೆಂಬುದಕ್ಕೆ ಇದೊಂದು ನಿದರ್ಶನ. ಎಷ್ಟೇ ದುಃಖವಾಗಿದ್ದರೂ ತಾಯಿ ಅದನ್ನು ವ್ಯಕ್ತಗೊಳಿಸುವ ರೀತಿ ಸ್ವಲ್ಪ ಹೆಚ್ಚಾಯಿತೆಂಬುದು ಕತೆಗಾರರಿಗೂ ಗೊತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಆದರೂ ಕಥೆ ಮೆಲೋಡ್ರಾಮದಿಂದ ಪೂರ್ತಿಯಾಗಿ ಪಾರಾಗಿಲ್ಲ. ನಿರೂಪಕ ತಾನು ತಮ್ಮನಿಗಾಗಿ ತಂದಿದ್ದ ಟೋಪಿ, ಬೂಟ್ಸುಗಳನ್ನು ಅವನ ಸಮಾಧಿಯ ಮೇಲೆ ಇರಿಸುವುದು, ಆ ರಾತ್ರಿಯನ್ನು ಅಲ್ಲೇ ಕಳೆಯಬೇಕೆಂದು ಯೋಚಿಸುವದು ಮುಂತಾದ ವಿವರಗಳು ಕೊನೆಗೂ ಕಥೆಯನ್ನು ಮೆಲೋಡ್ರಾಮದ ಮಟ್ಟದಲ್ಲಿಯೇ ನಿಲ್ಲಿಸುತ್ತವೆ.
ಹೀಗೆ ಕಥೆಯ ಭಾವಪೂರ್ಣತೆಯನ್ನು ನಿರ್ವಹಿಸುವ ಸಮಸ್ಯೆಗಳ ಕಡೆಗೆ ಈ ಕಥೆ ಗಮನ ಸೆಳೆಯುತ್ತದೆ. ಆದರೂ ನವ್ಯಕಥೆಗಳ ಒಣ ಬೌದ್ಧಿಕತೆಯ ನಡುವೆ, ಬಂಡಾಯ ಕಥೆಗಳ ರೊಚ್ಚಿನ ನಡುವೆ ಕಳೆದುಹೋಗಿರುವ ಭಾವಪೂರ್ಣತೆಯ ಆಪ್ಯಾಯಮಾನವಾದ ಅಂಶಗಳನ್ನು ನೆನಪಿಸುವ ಇಂಥ ಕಥೆಗಳೂ ಬೇಕು ಎನಿಸುತ್ತದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)