ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಸಾಹಿತ್ಯವು ಜನಜೀವನದ ಪಡಿನೆಳಲೆಂದು ತಿಳಿದವರು ಹೇಳುವದುಂಟು. ಈ ಮಾತನ್ನೇ ಇನ್ನೂ ಸ್ವಲ್ಪ ಹಿಂಜಿ ನೋಡಿದರೆ ಇಡೀ ಜೀವನವೇ ಸಾಹಿತ್ಯಕ್ಕೆ ಮೂಲಬಿಂಬವಾಗಬಹುದೆಂಬುದು ತೋರುವದು. ಮಾನವಜೀವನದಲ್ಲಿ ಹೇಗೋ ಹಾಗೆಯೇ ಇನ್ನುಳಿದ ಪ್ರಾಣಿಕೋಟಿಗಳ ಜೀವನದಲ್ಲಿಯೂ ಒಂದೊಂದು ಬಗೆಯು ರಸಸಂವಿಧಾನವಿದೆ. ಆದರೆ ಮಾನವನು ತನ್ನ ಸಂಸಾರದ ಸುಖದುಃಖಗಳ ಸಂಕೋಲೆಯಲ್ಲಿ ಸಿಕ್ಕಿಬಿದ್ದು ಅದರಿಂದ ಪಾರುಗಾಣದೆ ನರಳುತ್ತಿರುವಾಗ; ಆತನಿಗೆ ತನ್ನ ಜೀವನದ ರಸನಿಮಿಷಗಳ ಆನಂದವನ್ನೇ ಅನುಭವಿಸುವದು ಆಗದು; ಅಂತಹದರಲ್ಲಿ ಆತ ಇನ್ನುಳಿದ ಜೀವಿಗಳ ಸುಖದುಃಖಗಳಿಗಾಗಿ ಹಿಗ್ಗಿ-ಕುಗ್ಗುವ ಗೋಜಿಗೆ ಹೋಗಲಾರ.
ಆದರೆ ಸಂಸಾರದ ಅನಂತ ಯಾತನೆಗಳಿಂದ ನೊಂದು ಬೆಂದು, ತಾಪಪರಿಪೂತರಾದ ರಸಜೀವಿಗಳಿಗೆ ವಿಶ್ವವೆಲ್ಲವೂ ತಮ್ಮದೇ ಒಂದು ಬಳಗವಾಗಿ ತೋರದಿರದು. ಅಂಥವರಿಗೆ ವಿಶ್ವಶಕ್ತಿಯ ಕೈತಾಲದೊಂದಿಗೆ ಕುಣಿಯುವ ಚಿಕ್ಕ-ಚಂದ್ರಮರಿಂದ ಹುಲ್ಲು-ಹಣಜಿಯವರೆಗೆ ಈ ಸೃಷ್ಟಿಯ ಅಣುರೇಣುಗಳಲ್ಲೆಲ್ಲಿಯೂ ಮನುಷ್ಯ ಜೀವನದಷ್ಟೇ ಮಹತ್ತರವಾದ ಒಂದೊಂದು ಚರಿತ್ರಾಂಶವು ಕಂಡುಬರುವದು.
1
ನನ್ನ ಮದುವೆ ಶಿರೂರಿನಲ್ಲಿ ನಡೆಯಿತು. ನಮ್ಮ ಬಳಗ ದೊಡ್ಡದು. ಅಂತೆಯೇ ನಮ್ಮನ್ನೆಲ್ಲ ಒಂದು ದೊಡ್ಡ ಮನೆಯಲ್ಲಿ ಇಳಿಸಿದ್ದರು. ಅದಕ್ಕೆ ಮನೆಯೆನ್ನುವುದಕ್ಕಿಂತ, ಒಂದು ವಠಾರ, ಇಲ್ಲವೆ ವಾಡೆ ಎಂದರೆ ಹೆಚ್ಚು ಒಪ್ಪೀತು. ಅದೇನು ಅಂಥಿಂಥ ಮನೆಯಲ್ಲ; ಈಗಿನ ಪಟ್ಟಣಿಗರ ಲೆಕ್ಕದಂತೆ ಹತ್ತು ಹನ್ನೆರಡು ಸಂಸಾರಗಳು ಅಲ್ಲಿ ನೆಮ್ಮದಿಯಾಗಿ ಇರಬಹುದು. ಸಾಮಾನ್ಯವಾಗಿ, ಆ ಮನೆಯಲ್ಲಿ ಒಬ್ಬಿಬ್ಬರೇಕೆ? ಹತ್ತು-ಹನ್ನೆರಡು ಜನರು ಸಹ ಇರಲು ಹೆದರಬಹುದು. ಮೇಲುಪ್ಪರಿಗೆಗೆ ಹೋಗುವಾಗ ಜೋಡಿಲ್ಲದೆ ಯಾರೂ ಹೋಗುವಂತಿರಲಿಲ್ಲ.
ಮನೆ ಬಹಳ ಹಳೆಯ ಕಾಲದ್ದು. ಹಳೆಯವಾಗಿ ಇಲ್ಲಣ ಹತ್ತಿ ಕಪ್ಪುಗಟ್ಟಿದ ತೊಲೆಜಂತೆಗಳು, ಒಬ್ಬೊಬ್ಬರ ತೆಕ್ಕೆಗೂ ಅಮರದಂಥ ಕಂಬಗಳು, ಮಾರು ಮಾರು ದಪ್ಪವಾದ ಗೋಡೆಗಳು, ಗುದ್ದು-ಮೊಳದಾಳದ ಗೂಡುಗಳು, ಜೇಡರ ಹುಳುಗಳ ಜಾಳಿಗೆಗಳಿಂದೊಪ್ಪುವ ಮೂಲೆಗಳು, ಮುಸುಕುಗತ್ತಲೆಯ ಕೋಣೆಗಳು, ಇವೆಲ್ಲ ಆ ಮನೆಗೆ ಒಂದು ಬಗೆಯ ಭೀಕರತೆಯನ್ನುಂಟುಮಾಡಿದ್ದವು. ಅಲ್ಲದೆ, ಭವ್ಯವಾದ ಅಂಗಳ, ವಿಶಾಲವಾದ ಹಿತ್ತಲ, ಆ ಹಿತ್ತಲ ತುಂಬಾ ತರಗಲೆಗಳ ತಳಿಹಾಕುವ ಒಂದೆರಡು ಹುಣಿಸೆ-ಬೇವಿನ ಮರಗಳು, ಹಿತ್ತಲ ಗೋಡೆಯಾಚೆಗಿನ ಅಗಳತ, ಅದಕ್ಕೆ ಹೊಂದಿ ಅರ್ಧ ಹಾಳಾಗಿ ನಿಂತ ಹೂಡೆ- ಇವುಗಳೆಲ್ಲ ಆ ಮನೆಯ ಭೀಷಣತೆಗೆ ರಂಗು ಹೊಯಿದಂತೆ ಇದ್ದುವು.
ಇರುಳು ಮಲಗಿಕೊಂಡರೆ, ಜಂತೆಗಳಲ್ಲೋಡಾಡುವ ಇಲಿಗಳ ಕಿರಿಚಾಟದಿಂದಲೂ, ಅವುಗಳ ಓಡಾಟಕ್ಕೆ ಉದುರುವ ಮಾಳಿಗೆಯ ಮಣ್ಣಿನ ಸಪ್ಪಳದಿಂದಲೂ, ಮೂಲೆ ಮೂಲೆಗಳಲ್ಲೆಲ್ಲ ಮನೆಮಾಡಿಕೊಂಡಿದ್ದ ಹಲ್ಲಿಗಳ ಲೊಚಲೊಚ ಶಬ್ದದಿಂದಲೂ, ಹಿತ್ತಲ ಗಿಡಗಳಲ್ಲಿ ನೆಲೆನಿಂತ ತೊಗಲ ಬಾವುಲಿಗಳ ಚೀರಾಟದಿಂದಲೂ, ಅಲ್ಲಿ ಇದ್ದಷ್ಟು ದಿನವೆಲ್ಲ ನಿದ್ದೆಗೇಡಾದ ನಮ್ಮೆದೆಗಳು ಬರೀ ಡವಡವಿಸುತ್ತಿರುವದೇ! ಇಂಥ ರೌದ್ರನಿವಾಸವು ನಮಗೆ ಮದುವೆಯ ಮನೆಯಾಗಿತ್ತು!
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
2
ನಾವು ಇಳುಕೊಂಡ ಆ ಮನೆಗೆ ಒಂದು ಮೇಲುಪ್ಪರಿಗೆ. ಅದರ ಮೊಗಸಾಲೆಯ ಮುಂಬದಿಗೆ ಒಂದು ಲೋವಿ. ಅದರ ಚೆಟ್ಟಿನ ಒಳಮಗ್ಗಲು ಒಂದು ಬಿರುಕಿನಲ್ಲಿ ಒಂದು ಗುಬ್ಬಿಯ ಜೋಡು ಮನೆಮಾಡಿಕೊಂಡಿದ್ದಿತು. ಆ ಗುಬ್ಬಿಗಳಿಗೆ ಅದೇ ಹೊಸದಾಗಿ ಹುಟ್ಟಿದ ಎರಡು ಮಕ್ಕಳು. ಅವುಗಳಿಗಾಗಿ ಆ ಗುಬ್ಬಿಗಳೆರಡೂ ಮೆತ್ತನ್ನ ಹುಲ್ಲು ಕಡ್ಡಿಗಳಿಂದ ಸೊಗಸಾದ ಗೂಡನ್ನೊಂದು ಕಟ್ಟಿದ್ದವು.

ಆ ಮನೆಗೆ ಹೋದ ದಿನವೇ ಆ ಗುಬ್ಬಿಗಳ ಸಂಸಾರವು ನನ್ನ ಮನವನ್ನೆಳೆಯಿತು. ನನ್ನ ಬಾಳುವೆಯ ಗಾಳಿಗೋಪುರಕ್ಕೆ ಕಳಸವನ್ನಿಡುತ್ತಲಿದ್ದ ನನಗೆ ಆಗ ಎಲ್ಲ ಬಗೆಯ ಸಂಸಾರವೂ ಒಂದೊಂದು ಸೊಬಗಿನ ಬೀಡೆಂಬಂತೆ ಎನಿಸುತ್ತಿದ್ದಿತು. ಆ ಗುಬ್ಬಿಗಳ ಸಂಸಾರವೂ ನನ್ನ ಹರೆಯದ ಸವಿಗನಸುಗಳಿಗೆ ಬಣ್ಣ ಬರೆಯುವಂತೆ ತೋರಲು ನಾನು ಅವುಗಳ ಕಾರ್ಯಕಲಾಪಗಳನ್ನು ಕಣ್ಮನಗಳು ತಣಿಯುವಂತೆ ನೋಡಿ ನೋಡಿ ನಲಿಯುತ್ತಿದ್ದೆ. ಹಿರಿಯ ಗುಬ್ಬಿಗಳು ತಮ್ಮ ಮರಿಗಳನ್ನು ಲಲ್ಲೆಗೈಯುವದು, ಅವಕ್ಕೆ ಗುಟುಕು ಕೊಡುವದು, ಅವನ್ನು ಮುಂಡಾಡಿ ಸಂತೈಸುವದು, ಅವುಗಳಿಗಾಗಿ ಹೊಸ ಹೊಸ ತಿನಿಸನ್ನು ತಂದುಕೊಡುವದು ಮೊದಲಾದ್ದನ್ನೆಲ್ಲ ನೋಡುತ್ತಿದ್ದ ನನಗೆ, ಅವುಗಳ ಸಂಸಾರವು ಒಂದು ಮನುಷ್ಯಸಂಸಾರದಂತೆಯೇ ತೋರತೊಡಗಿತು.
ಹಿರಿಯ ಗುಬ್ಬಿಗಳೆರಡೂ ತಮ್ಮ ತಮ್ಮೊಳಗೆ ಚಿಲಿಪಿಲಿಗುಟ್ಟುತ್ತಿರುವಾಗ, ಗಂಡಹೆಂಡಿರಾದ ಮನುಷ್ಯರಿಬ್ಬರು, “ನಾನು ಕಚೇರಿಗೆ ಹೋಗಬೇಕು; ಬೇಗ ಅಡಿಗೆ ಮಾಡು”, “ಸರಿ, ಪೇಟೆಯಿಂದ ಕಾಯಿಪಲ್ಯವನ್ನೆ ತರದಿದ್ದರೆ ಅಡಿಗೆ ಏನು ಮಾಡಲಿ, ನನ್ನ ತಲೆ”, “ಆಗಲಿ; ಹಾಗಾದರೆ ಪೇಟೆಯಿಂದ ಬರುವಾಗ ಮಗುವಿಗೆ ಏನು ತರಲಿ”, “ಹೌದು, ನನ್ನ ಕೂಸಿಗೆ ಮೊನ್ನೆ ನೋಡಿದ್ದ ಚೇನು ತೆಗೆದುಕೊಂಡು ಬರ್‍ರಿ”… ಎಂದು ಮುಂತಾಗಿ ಮುದ್ದು ಮಾತಾಡುತ್ತಿರುವಂತೆ ನನಗೆ ಎನಿಸುತ್ತಿತ್ತು. ನೋಡುತ್ತ ನಿಂತಿರುವಂತೆ, ಅದಾವದೋ ಒಂದು ತನ್ಮಯತೆಯು ನನ್ನ ತನುವಿನಲ್ಲಿಳಿಯಲು, ನಾನೇ ಆ ಗಂಡು ಗುಬ್ಬಿಯಂತೆಯೂ ನನ್ನ ಕನಸುಗಳ ರಾಣಿಯಾಗಿ ಬೆಳಗಾದರೆ ನನ್ನ ಕೈ ಹಿಡಿಯಲಿರುವವಳೇ ಆ ಹೆಣ್ಣು ಗುಬ್ಬಿಯಂತೆಯೂ, ನಮ್ಮಿಬ್ಬರ ಭಾಗ್ಯದ ಬೆಳಕಿನಂತೆ ಮುಂದೆ ಹುಟ್ಟಿ ಬರಲಿರುವ ನಮ್ಮ ಮಕ್ಕಳೇ ಆ ಚಿಕ್ಕ ಗುಬ್ಬಿಮರಿಗಳಂತೆಯೂ ಭಾವನೆಯಾಗಲು ನನ್ನ ಹೃದಯವು ತನ್ನಲ್ಲಿ ತಾನೇ ನಲಿದಾಡುವದು.
3
ನಾವು ಶಿರೂರಿಗೆ ಹೋದ ಮರುದಿನ ನಾನು, ಅಪ್ಪಣ್ಣ, ಅನಂತ, ನಮ್ಮ ಅಬಚಿಯ ಗಂಡ ಶೇಷಪ್ಪ, ನನ್ನ ಕಕ್ಕನ ಮಗ ಲಕ್ಷ್ಮಣ, ನನ್ನ ಹಿರಿಯ ಭಾವ ವೆಂಕಟರಾಯ ಇಷ್ಟು ಜನವೆಲ್ಲ ಸೇರಿ ಮೇಲಟ್ಟದ ಮೊಗಸಾಲೆಯಲ್ಲಿ ಮಲಗಿಕೊಂಡಿದ್ದೆವು. ವಾಡಿಕೆಯಂತೆ ಇಲಿ, ಹಲ್ಲಿ, ತೊಗಲುಬಾವುಲಿಗಳ ತೊಂದರೆಯೆಲ್ಲವೂ ಸಾಗಿಯೇ ಇತ್ತು. ಆದರೂ ಹತ್ತು ತರದ ಗಡಿಬಿಡಿಯಿಂದ ದಣಿದ ಕಾರಣ ಎಲ್ಲರಿಗೂ ಗಾಢನಿದ್ರೆ. ಜಿದ್ದು ಕಟ್ಟಿದಂತೆ ಒಬ್ಬರಿಗಿಂತ ಒಬ್ಬರು ಹೆಚ್ಚಾಗಿ ಗೊರಕೆ ಹೊಡೆಯುವವರೇ. ಆದರೆ, ನನ್ನ ಸಂಸಾರಸ್ವರ್ಗದ ಶಚಿದೇವಿಯಾಗಬೇಕಾದವಳ ಚಿಂತನೆಯಲ್ಲಿ ತೊಡಗಿದ ನನಗೆ ಮಾತ್ರ ಉಳಿದವರಷ್ಟು ಬೇಗ ನಿದ್ದೆ ಬಾರದಿದ್ದುದು ಸ್ವಾಭಾವಿಕವೇ ಸರಿ. ಆದರೂ ಸರಿರಾತ್ರಿಗೆ ಹಾಯಾಗಿ ತನ್ನಷ್ಟಕ್ಕೆ ತಾನೇ ನಿದ್ದೆ ಹತ್ತಿಬಿಟ್ಟಿತು. ನಡುವೆ ಅಕಸ್ಮಾತ್ತಾಗಿ ಎಚ್ಚರಿಯುವ ಹೊತ್ತಿಗೆ ನನ್ನ ಹಗಲುಗನಸುಗಳ ಅಧಿಷ್ಠಾತೃದೇವಿಯಾದ ನನ್ನ ಭಾವೀ ರಾಜ್ಞಿಯು ನನ್ನ ನಿದ್ದೆಗನಸುಗಳನ್ನು ಸವಿಗೊಳಿಸುತ್ತಿದ್ದಳು. ಆಗ ಈ ಲೋಕದ ಬಂಧನವನ್ನೆಲ್ಲ ಮೀರಿ ನಿಂತ ಅಮರನಂತೆ ನಾನು ಅದಾವುದೋ ಒಂದು ಆನಂದನಿಕೇತನದಲ್ಲಿ ವಿಹರಿಸುತ್ತಿದ್ದೆ; ಅಂತೆ ತಿರುಗಿ ಬೇಗ ನಿದ್ದೆ ಹತ್ತದಾಗಿತ್ತು.
4
ಚಾವಡಿಯಲ್ಲಿ ಎರಡು ಹೊಡೆಯಿತು. ಲೋವಿಯ ಚಪ್ಪರದಲ್ಲಿ ಆರ್ತ ಚೀತ್ಕಾರವೊಂದು ಕೇಳಿಬಂತು. ಕನಸಿನಲ್ಲಿ ಹೆದರಿಕೊಂಡವರಂತೆ ಎಚ್ಚತ್ತು ಗಡಬಡಿಸುವಾಗ ನನಗೆ ಎಲ್ಲವೂ ಒಂದು ಕಲಸುಮಲಸಿನ ಹಳವಂಡದಂತೆ ತೋರಿತು. ನಿಚ್ಚಳವಾಗಿ ಎಚ್ಚರಿಯುವ ಹೊತ್ತಿಗೆ ಆ ಆರ್ತಸ್ವರವು ಕರುಳೊಡೆಯುವಂತೆ ಡಬಡಬಯೆನ್ನುತ್ತಿದ್ದ ನನ್ನ ಎದೆಯನ್ನು ಇನ್ನೂ ಹೆಚ್ಚಾಗಿ ತಟ್ಟಹತ್ತಿತು. ಚಟ್ಟನೆದ್ದು ಕುಳಿತು ತಲೆದಿಂಬುದೆಸೆಯ ದೀಪವನ್ನು ದೊಡ್ಡದು ಮಾಡಿ ನೋಡಿದೆ. ಆ ಚೀತ್ಕಾರವು ಆ ಗುಬ್ಬಿಗಳ ಗೂಡಿನಿಂದ ಬರುತ್ತಿದ್ದಿತು. ಆಗ ನನ್ನ ನಾಡಿಗಳಲ್ಲೆಲ್ಲ ಒಂದು ತೆರದ ಗಾಬರಿಯು ತುಂಬಿಹರಿಯುತ್ತಿರುವಂತೆ ತೋರಿತು. ಅಂತಹದರಲ್ಲಿಯೇ, ನಡುಗುವ ಕೈಗಳಿಂದ ದೀಪವನ್ನು ಎತ್ತಿ ಹಿಡಿದು ನೋಡಿದೆ; ಕಾಲಕರಾಲವಾದ ಘಟಸರ್ಪವೊಂದು, ಅಖಂಡವಾಗಿ ಕಿರುಚುತ್ತಿರುವ ಗಂಡು ಗುಬ್ಬಿಯನ್ನು ಬಾಯಲ್ಲಿ ಕಚ್ಚಿಕೊಂಡು ಲೋವಿಯ ದುಂಡು ಕಟ್ಟಿನಗುಂಟ ಮೆಲ್ಲನೆ ಹಿಂದಕ್ಕೆ ಸರಿದು ಹೋಗುತ್ತಲಿತ್ತು. ಹಾವು ಅಂಥಿಂಥದಲ್ಲ; ನಾಗರ ಹಾವು. ಒಂದು ಒಂದೂವರೆ ಮಾರು ಉದ್ದವಾಗಿತ್ತು. ಒನಕೆಯಂತೆ ದಪ್ಪವಾಗಿ ಕರ್‍ರಗೆ ಮಿರಿಮಿರಿ ಮಿಂಚುತಿತ್ತು. ಮೈಮೇಲೆ ಬೆರಳುದ್ದದ ಬಿರುಸಾದ ನಿಡುಗೂದಲು. ಬೊಗಸೆಯಗಲದ ಹೆಡೆ. ದೀಪದ ಬೆಳಕಿಗೆ ಥಳಥಳ ಹೊಳೆಯುವ ಕಣ್ಣಿನ ವಕ್ರವಾದ ಉಗ್ರ ದೃಷ್ಟಿಯು ನನ್ನ ಕೈಕಾಲುಗಳನ್ನು ಇದ್ದಲ್ಲಿಯೇ ತಣ್ಣಗೆ ಮಾಡಿತು. ನಡುಗುವ ಕೈಯಿಂದ ದೀಪವು ಒಮ್ಮಿಂದೊಮ್ಮೆ ಜಾರಿಬಿದ್ದು ಆರಿಹೋಯಿತು; ಆದರೂ ಇದ್ದುದರಲ್ಲಿಯೇ ಸಾವರಿಸಿಕೊಂಡು ನಾನು ಬದಿಯಲ್ಲಿ ಮಲಗಿದವರನ್ನೆಲ್ಲ ಬಡಿದೆಬ್ಬಿಸಿದೆ.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
ಗಂಡುಗುಬ್ಬಿಯನ್ನು ಹಾವು ಕಚ್ಚಿಕೊಂಡು ಹೋದದ್ದರಿಂದ, ಹೆಣ್ಣು ಗುಬ್ಬಿಯ ಸಂತಾಪಕ್ಕೆ ಸೀಮೆಯಿಲ್ಲದಾಗಿತ್ತು. ಅದು ತೆರಪಿಲ್ಲದೆ ಹಾಹಾಕಾರ ಮಾಡುತ್ತ ದಿಕ್ಕು ದಿಕ್ಕು ಹಾಯುತ್ತಿತ್ತು. ಹಾವಿನ ಬಾಯಲ್ಲಿ ಜೀವನದ ಜೊತೆಗಾರ ಕಿರುಚುತ್ತಿದ್ದಾನೆ. ಗೂಡಿನಲ್ಲಿ ತನ್ನಕ್ಕರೆಯ ಚಿಕ್ಕಮಕ್ಕಳೆರಡು ಚಿಲಿಪಿಲಿಗುಟ್ಟುತ್ತಿವೆ. ಮೇಲೆ ತನ್ನ ಪ್ರಾಣಸಂಕಟವೊಂದು. ಹೀಗೆ ಕಂಗೆಟ್ಟು ಕತ್ತಲಲ್ಲಿ ಅತ್ತಿತ್ತ ಸುತ್ತಾಡುವಾಗ ಆ ಹೆಣ್ಣು ಗುಬ್ಬಿಯು ಎಷ್ಟೋ ಸಲ ಹೌಹಾರಿ ಕುಳಿತ ನಮ್ಮ ಮೈ-ಕೈಗೆ ತಾಕಿ ತಡವರಿಸುತ್ತಿತ್ತು. ಆ ಗಲಭೆಯನ್ನು ನೋಡಿ ನಮ್ಮೆಲ್ಲರಿಗೂ ಗಾಬರಿ ಇಮ್ಮಡಿಸಿಬಿಟ್ಟಿತು. ಆಗೀಗೊಮ್ಮೆ ಬೆಂಕಿಯ ಕಡ್ಡಿಗಳನ್ನು ಕೊರೆದು ಬೆಳಕು ಮಾಡಿಕೊಳ್ಳುತ್ತ ನಾವೆಲ್ಲರೂ ನಮ್ಮ ಜೀವರಕ್ಷಣೆಯ ಹವಣಿಕೆಯಲ್ಲಿದ್ದೆವು.
ಇಷ್ಟರಲ್ಲಿ ಮೇಲಿನವರ ಗದ್ದಲವನ್ನು ಕೇಳಿ ಕೆಳಗಿನವರು ದೀಪ ಹಚ್ಚಿಕೊಂಡು ಮೇಲೆ ಬರುವದರಲ್ಲಿದ್ದರು. ಆದರೆ ಅದಕ್ಕೂ ಮೊದಲೇ ನಮ್ಮ ಕಾಮಿ (ಬೆಕ್ಕು) ಯಾವ ಮಾಯದಿಂದಲೋ ಅಲ್ಲಿಗೆ ಬಂದು ದಿಕ್ಕೆಟ್ಟು ಆಲ್ಪರಿಯುತ್ತ ಮೊಗಸಾಲೆಯ ತುಂಬೆಲ್ಲ ಸುತ್ತಾಡುತ್ತಿದ್ದ ಹೆಣ್ಣು ಗುಬ್ಬಿಯನ್ನು ಹಾರಿ ಹಿಡಿದುಬಿಟ್ಟಿತ್ತು. ಕೆಳಗಿನವರು ದೀಪ ತೆಗೆದುಕೊಂಡು ಮೇಲೆ ಬರುವದಕ್ಕೂ, ಹೆಣ್ಣು ಗುಬ್ಬಿಯನ್ನು ಬಾಯಲ್ಲಿ ಕಚ್ಚಿಕೊಂಡು ಕಾಮಿ ಕೆಳಗೋಡುವುದಕ್ಕೂ ಗಂಟೇ ಬಿತ್ತು. ಎಲ್ಲರೂ ಸೇರಿ ಕಾಮಿಯನ್ನು ಹಿಡಿದು, ಹೊಡೆದು, ಬಡಿದು ಗುಬ್ಬಿಯನ್ನು ಬಿಡಿಸಿಕೊಳ್ಳುವ ಹೊತ್ತಿಗೆ ಅದು ಗುಬ್ಬಿಯನ್ನು ಅರ್ಧಕ್ಕರ್ಧ ತಿಂದೇಬಿಟ್ಟಿತ್ತು.

ಇತ್ತ ನಾವೆಲ್ಲ ನೋಡುತ್ತಿರುವಂತೆಯೇ, ಗಂಡು ಗುಬ್ಬಿಯನ್ನು ಹಿಡಿದುಕೊಂಡು ಹೊರಟ ಹಾವು, ಗುಬ್ಬಿಯ ಗೂಡಿನಿಂದ ಹತ್ತೆಂಟು ಮೊಳ ದೂರದಲ್ಲಿದ್ದ ಗುದ್ದಿನಲ್ಲಿ ಹೊಕ್ಕುಬಿಟ್ಟಿತು. ಹಾವು ಗುದ್ದಿನ ಒಳವೊಳಗೆ ಸೇರಿಹೋದಂತೆ, ಅದರ ಬಾಯಲ್ಲಿದ್ದ ಗುಬ್ಬಿಯ ಕರುಣಾಸ್ವರವು ಮಂದಮಂದವಾಗಿ ಕುಂದುತ್ತ ಕೊನೆಗೊಮ್ಮೆ ನಿಂತುಹೋಯಿತು.
5
ಇತ್ತ ಆ ಗುಬ್ಬಿಗಳ ಚಿಕ್ಕಮಕ್ಕಳೆರಡೂ ಹುಟ್ಟುಹುಟ್ಟುತ್ತಲೇ ಅನಾಥವಾಗಿ, ತಮ್ಮ ಪ್ರೇಮಕ್ಕೆ ಊರುಗೋಲೇ ಇಲ್ಲದಾಗಲು, ಅದೆಷ್ಟೋ ಹೊತ್ತು ಹಲುಬಿ, ಅತ್ತತ್ತು ದಣಿದು, ಸುಮ್ಮನೆ ಬಿದ್ದುಕೊಂಡವು.
6
ನಮಗೆಲ್ಲ ನಮ್ಮ ನಮ್ಮ ಜೀವದ ಭಯ. ಆಗ ಆ ಮರಿಗಳನ್ನಾರು ಕೇಳಬೇಕು! ಬಿಟ್ಟ ಕೆಲಸವನ್ನೆಲ್ಲ ಬಿಟ್ಟು ಅಪ್ಪಣ್ಣನೂ, ವೆಂಕಟರಾಯನೂ ಹೋಗಿ, ಆ ಅಪರಾತ್ರಿಯಲ್ಲಿ ಒಬ್ಬ ಮಾಂತ್ರಿಕನನ್ನು ಹುಡುಕಿಕೊಂಡು ಬಂದರು. ಮಾಂತ್ರಿಕನು ಮನೆತನಕ ಬಂದಮೇಲೆ ಅದು ದೇವರ ಹಾವೆಂದೂ, ಅದನ್ನು ತಾನು ಹಿಡಿಯಲಾಗದೆಂದೂ, ಅದು ಇನ್ನೊಮ್ಮೆ ಯಾರ ಕಣ್ಣಿಗೂ ಬೀಳದಂತೆ ತಾನು ಮಂತ್ರಬಂಧನವನ್ನು ಮಾಡಬಲ್ಲೆನೆಂದೂ ಹೇಳಿ, ಏನೇನೋ ಒಟಗುಟ್ಟುತ್ತ, ಅತ್ತಿತ್ತ ನಾಲ್ಕೆಂಟು ಗೆರೆ ಹಾಕಿದಂತೆ ಮಾಡಿ, ನಮ್ಮ ನಾಲೈದು ಹಿಡಿ ಅಕ್ಕಿಯ ಕಾಳು ಹಾಳುಮಾಡಿ, ಮೇಲೆ ಒಂದು ರೂಪಾಯಿ ಕಿತ್ತುಕೊಂಡು ಹೊರಟುಹೋದನು. ಆದರೆ ನಮ್ಮದು ಮನುಷ್ಯ ಜೀವ! ಸುಮ್ಮನೆ ಹೇಗೆ ಕುಳಿತೀತು? ನಮ್ಮ ಹೆದರಿಕೆ ನಮಗೆ. ಆ ಮಾಂತ್ರಿಕನು ಬಂದು ಹೋದಮೇಲೆಯೂ ನಮಗೆ ಜೀವದಲ್ಲಿ ಜೀವವಿಲ್ಲ. ಆಗಿನಿಂದಲೇ ಎರಡು ಮೂರು ಕಂದೀಲು ಹಚ್ಚಿಕೊಂಡು, ಎಲ್ಲರೂ ಇಸ್ಪೀಟು ಆಡುತ್ತ ಬೆಳಗಿನ ತನಕ ಕುಳಿತುಬಿಟ್ಟೆವು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ನಸುಕು ಹರಿಯುವ ಸಮಯ. ನನ್ನ ತಾಯಿ ಬಂದು “ಸುರಗಿ ಎರಕೊಳ್ಳಲು ತಡವಾಯಿತು- ಈಗ ಬೀಗರು ಬಂದುಬಿಡುತ್ತಾರೆ-ಎಲ್ಲದಕ್ಕೂ ನಾನೇ ಬಡಕೊಳ್ಳಬೇಕು- ಒಬ್ಬರೂ ಕಿವಿಯಮೇಲೆ ಹಾಕಿಕೊಳ್ಳುವುದಿಲ್ಲ- ಹೀಗಾದರೆ ನಾನೇ ಎಷ್ಟೆಂತ ಸಾಯಲಿ” ಎಂದು ಮೊದಲಾಗಿ ಎಲ್ಲರ ಮೇಲೆಯೂ ಹರಿಹಾಯ್ದುಹೋದರು. ಅಕ್ಕ ಬಂದು ‘ಆರತಿಗೆ ತಡವಾಗುವದು ಬೇಗನೇಳು’ ಎಂದು ಬಲುಮೆ ಮಾಡಿದಳು. ಆದರೆ ಹೊತ್ತು ಹರೆಯುತ್ತ ಬಂದಂತೆ ಇಸ್ಪೇಟಿನಲ್ಲಿ ಹೆಚ್ಚು ಹೆಚ್ಚು ತಲ್ಲೀನರಾಗುತ್ತಲಿದ್ದ ನಾವು, ಅವರಿಬ್ಬರನ್ನೂ ಹೂ ಹೂ ಎಂದು ಹೇಳಿ ಹಿಂದಕ್ಕಟ್ಟಿಬಿಟ್ಟೆವು. ನನಗಂತೂ ಅಂದಿನ ಆಟದಲ್ಲಿ ಇಲ್ಲದ ಹುರುಪು. ಏಕೆಂದರೆ ನಾನೇ ಮುಂದಾಳಾಗಿ ಅಪ್ಪಣ್ಣನ ಪಾರ್ಟಿಯ ಮೇಲೆ ನಾಲ್ವತ್ತೆರಡು ಹೊರಿಸಿಬಿಟ್ಟಿದ್ದೆ.
ಹೀಗೆ ನಾವೆಲ್ಲರೂ ನಮ್ಮಾಟದ ರಂಗಿನಲ್ಲಿಯೇ ಗುಂಗುಗಾಣಿ ಕುಳಿತಾಗ ಗುಬ್ಬಿಯ ಗೂಡಿನಿಂದ ಮತ್ತೆ ಚೀತ್ಕಾರ! ಎಲ್ಲರೂ ತಟ್ಟನೆ ಮೆಟ್ಟಿಬಿದ್ದೆವು. ಮತ್ತೆ ಅದೇ ಹಾವು! ಅದೇ ಭಯಾನಕ ದೃಶ್ಯ! ಹಾವು ಮೆಲ್ಲನೆ ಲೋವಿಯ ಗುಂಟ ಹರಿದು ಬಂದು ಆ ಗುಬ್ಬಿಯ ಗೂಡಿನಲ್ಲಿ ಹೆಡೆಯನ್ನು ಸೇರಿಸಿ, ಮರಿಗಳನ್ನು ಹಿಡಿದುಕೊಳ್ಳುವುದರಲ್ಲಿತ್ತು. ಅದನ್ನು ಕಂಡು ಎಲ್ಲರ ಆಟವು ಮುಗಿದೇ ಹೋಯಿತು. ಎಲ್ಲರಿಗೂ ದಿಗ್ಭ್ರಮೆ. ನೀ ಹೊಡಿ, ನಾ ಹೊಡಿ ಎನ್ನುವದರೊಳಗೆ ಹಾವು ಒಂದು ಮರಿಯನ್ನು ಹಿಡಿದುಕೊಂಡು ಮತ್ತೆ ತನ್ನ ಹೋರನ್ನು ಸೇರಿಕೊಂಡಿತು.
ಎಲ್ಲರೂ ಬರೀ ಮಾತನಾಡಿದೆವೇ ಹೊರ್ತು ಎದ್ದುಹೋಗಿ ಹಾವನ್ನು ಹೊಡೆಯುವಷ್ಟು ನೀರು ಒಬ್ಬನಲ್ಲಿಯೂ ಇರಲಿಲ್ಲ. ಕೊನೆಗೆ ‘ಮಾಂತ್ರಿಕ ದೇವರ ಹಾವೆಂದು ಹೇಳಲಿಲ್ಲವೇ; ಅದನ್ನು ಹೇಗೆ ಹೊಡೆಯುವದು?’ ಎಂದು ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡು ಸುಮ್ಮನಾದೆವು.
ಹಾವು ಗೂಡಿನೊಳಗಿಂದ ಒಂದು ಮರಿಯನ್ನು ಹಿಡಿಯುವಾಗ, ಇನ್ನೊಂದು ಮರಿಯೂ ಗೂಡಿನಿಂದ ಜಾರಿ ಹೊರಗೆ ಬಿದ್ದು ಪ್ರಾಣಸಂಕಟದಿಂದ ಒದೆದಾಡಹತ್ತಿತು. ಮೂರು ಜೀವಿಗಳ ಸಾವನ್ನು ಕಂಡು ಬೇವಸಗೊಂಡ ನನ್ನ ಕರುಳು ಆ ಮರಿಯ ತೊಳಲಾಟದಿಂದ ಮತ್ತೂ ಕಳವಳಿಸಿತು. ಒಂದು ಬಾಳೆಯ ದೊನ್ನೆಯಲ್ಲಿ ಆ ಮರಿಯನ್ನು ಮೆಲ್ಲನೆ ಎತ್ತಿ ಮಲಗಿಸಿ ಸ್ವಲ್ಪ ಹಾಲನ್ನು ಹಾಕಿ ಇಟ್ಟೆವು. ಪಾಪ! ತನ್ನ ಕರುಳು ಬಳ್ಳಿಯೇ ಕತ್ತರಿಸಿಹೋಗಿರಲು, ಕಮರುವ ಹೀಚಿನಂತಿದ್ದ ಆ ಮರಿಗೆ ನಮ್ಮ ಆರೈಕೆಯು ವಿಷವಾಯಿತೋ ಅಮೃತವಾಯಿತೋ- ಯಾರು ಹೇಳಬೇಕು?
7
ಅಷ್ಟೊತ್ತಿಗೆ ನನ್ನ ತಾಯಿ-ಅಕ್ಕ ಮತ್ತೊಮ್ಮೆ ಬಂದು ಬಲವಂತದಿಂದ ಎಬ್ಬಿಸಿಕೊಂಡು ಹೋದರು. ಮುಂದೆ ಸುರಗಿ-ಪುಣ್ಯಾಹವಾಚನ-ಆರತಿ-ಅಕ್ಷತೆಗಳೆಲ್ಲ ಯಥಾಕ್ರಮವಾಗಿ ಸಾಂಗವಾದವು. ಮದುವೆಯ ಪ್ರಮೋದವು ಮೈತುಂಬಿದಂತಿದ್ದ ನಾವೆಲ್ಲರು ನಮ್ಮ ನಮ್ಮ ಸಂತೋಷದಲ್ಲಿ ಈಸುತ್ತಿದ್ದೆವು. ಆದರೆ ಸರಿಯಾಗಿ ಅಕ್ಕಿಯ ಕಾಳು ಬೀಳುವ ಹೊತ್ತಿಗೆ ಬಂತು ಸುದ್ದಿ-ಅದೂ ಒಂದು ಮರಿಯು ಹಾಲಿನ ದೊನ್ನೆಯಲ್ಲಿಯೇ ಪ್ರಾಣನೀಗಿತೆಂದು.
ಅಂತೂ, ಹೀಗೆ ಹನ್ನೆರಡು ತಾಸಿನ ಅವಧಿಯಲ್ಲಿ ಆ ಗುಬ್ಬಿಯ ಸಂಸಾರದ ಮೂಲೋತ್ಪಾಟನವಾಗಿಬಿಟ್ಟಿತೆಂದು ಹೇಳಿದರೆ, ಇದೂ ಒಂದು ಕಟ್ಟಿದ ಕತೆಯಂತೆ ತೋರುವದು. ಆದರೂ ಆ ಸಂಗತಿಯು ನನ್ನ ಮದುವೆಯ ಕಾಲದಲ್ಲಿ ನಡೆದ ಪ್ರತಿಯೊಂದು ಸಂಗತಿಯಂತೆ ನಿತ್ಯ ಸತ್ಯವಾದ ಮಾತಾಗಿದೆ.
*
ಹೊಸ ಸಂಸಾರದ ಹೊಸ್ತಿಲಲ್ಲಿ ಕಾಲಿಡುತ್ತಿದ್ದ ನನ್ನ ಮನೆಯಲ್ಲಿ ಅಂದು ಮದುವೆಯ ಮಾಂಗಲ್ಯ ನಡೆದಾಗ ಆ ಗುಬ್ಬಿಗಳ ಸಂಸಾರದಲ್ಲಿ ಅಂತಕನ ಕೋಲಾಹಲವು ನಡೆದುಹೋಯಿತು.
8
ಇದೀಗ ನನಗೆ ಚಿನ್ನ-ರನ್ನದಂತಹ ಎರಡು ಮಕ್ಕಳಿವೆ. ನಮ್ಮಿಬ್ಬರಿಗೂ ಆ ಮಕ್ಕಳೆಂದರೆ ಹೆಚ್ಚಿನ ವ್ಯಾಮೋಹ. ಅವುಗಳಿಂದಲೇ ನಮ್ಮ ಸಂಸಾರದಲ್ಲೆಲ್ಲಿಯೂ ಸುಖ ಸಂತೋಷಗಳು ಓಲಾಡುತ್ತಿವೆ. ನಮ್ಮ ಬಾಳ್ವೆಗೆ ಇಂಥದು ಕಡಮೆ ಎಂಬ ಮಾತೇ ಇಲ್ಲ. ದುಃಖವೆಂದರೆ ಏನೋ? -ಎಂಬಂತೆ ನಾವಿದ್ದೇವೆ. ಈ ಜಗತ್ತಿನಲ್ಲಿ ನಮ್ಮಂಥ ಸಂಸಾರ ಸುಖಿಗಳು ಇನ್ನಾರೂ ಇರಲಾರರೆಂದೇ ನನ್ನ ಭಾವನೆಯಾಗುತ್ತಲಿದೆ.
ನಾವು ಗಂಡ-ಹೆಂಡತಿ, ಮಕ್ಕಳೊಂದಿಗೆ ಒಟ್ಟಿಗೆ ಕೂಡಿ ಕುಳಿತೆವೆಂದರೆ ನನ್ನ ಹರೆಯದ ಕನಸು ಕೈಯಲ್ಲಿಳಿದು ಕುಣಿಯುವಂತೆ ಭಾಸವಾಗುವದು… ಆದರೆ ಹೀಗಿರುವಾಗಲೇ ಎಂದಾದರೊಮ್ಮೊಮ್ಮೆ ಆ ಗುಬ್ಬಿಗಳ ಸಂಸಾರದ ನೆನಪು ಒಮ್ಮಿಂದೊಮ್ಮೆ ನನ್ನ ತಲೆಯಲ್ಲಿ ತೋರಿಬಿಡುವದು. ಆಗ ಹಿಂದಿನಂತೆಯೆ ಈಗಲೂ ಆ ಗುಬ್ಬಿಗಳ ಸಂಸಾರದೊಂದಿಗೆ ಒಂದು ಬಗೆಯ ತನ್ಮಯತೆಯು ಎನ್ನಿಸುವುದು. ಆದರೆ ಅಂದಿನ ಸೊಗಸಿನ ಬದಲು, ಇಂದು ನನ್ನೆದೆಯು ಒಂದು ಬಗೆಯ ವೇದನೆಯಿಂದ ಗದಗದ ನಡುಗುವದು… ಮನುಷ್ಯನ ಬುದ್ಧಿ ಭಾವನೆಗಳನ್ನು ಲೆಕ್ಕಿಸದೆ, ಆತನ ಕಲ್ಪನೆಯ ಕಣ್ಮರೆಯಾಗಿ, ಎಲ್ಲಿಯೋ ಯಾವುದೋ ಒಂದು ಹೋರಿನಲ್ಲಿ ಹೊಂಚಿ ಕುಳಿತ ಸಾವೆಂಬ ಹಾವು ಎಲ್ಲಿ ನನ್ನ ಸಂಸಾರವನ್ನು ಸೂರೆಗೊಂಡೀತೋ ಎಂದು ನನಗೆ ಇಲ್ಲದ ಭಯವುಂಟಾಗಿ ದಿಗ್ಭ್ರಮೆಯಾದಂತೆನಿಸುವದು. ಹೀಗೆ ಬೇಡಬೇಡವೆಂದರೂ ಬಲುಮೆಯಿಂದ ಆ ಹಿಂದಿನ ನೆನಪು ನನ್ನ ಮನದಲ್ಲಿ ಮೂಡಿಕೊಂಡಾಗೆಲ್ಲ, ನನ್ನ ಕಣ್ಮನಗಳೂ ಬುದ್ಧಿಭಾವನೆಗಳೂ ಕುರುಡಾದಂತೆನಿಸಿ ನಾನು ಯಾವದೋ ಒಂದು ಲೋಕಾಂತರದಲ್ಲಿ ಹವಣು ತಪ್ಪಿ ಅಲೆಯುತ್ತಿರುವಂತೆ ಭಾಸವಾಗುವದು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಜೀವನ’, ಮನೋಹರ ಗ್ರಂಥಮಾಲೆ, ಧಾರವಾಡ, 1934)

ಕಲ್ಲೂರರ ‘ಗುಬ್ಬಿಗಳ ಸಂಸಾರ’
ಆರಂಭದಲ್ಲಿ ವಿಶೇಷ ಭರವಸೆಯನ್ನು ಮೂಡಿಸಿ ನಂತರ ಕಥೆ ಬರೆಯುವುದನ್ನೇ ನಿಲ್ಲಿಸಿಬಿಟ್ಟ ಕತೆಗಾರರು ಕನ್ನಡದಲ್ಲಿ ಬಹಳಷ್ಟು ಜನ ಇದ್ದಾರೆ. ಅಂಥವರಲ್ಲಿ ಎದ್ದು ಕಾಣುವ ಹೆಸರು ಕೃಷ್ಣಕುಮಾರ ಕಲ್ಲೂರರದು (1909-1982). ಉತ್ತರ ಕರ್ನಾಟಕದಲ್ಲಿ ಕೆರೂರರ ನಂತರ ಸಣ್ಣಕತೆಗಳನ್ನು ಬರೆಯತೊಡಗಿದ ಮೊದಲಿಗರಲ್ಲಿ ಇವರೊಬ್ಬರು. ಇವರ ಎರಡು ಕತೆಗಳು ‘ಮಂಗನ ಮೆರವಣಿಗೆ'(1930) ಎಂಬ ಸಂಕಲನದಲ್ಲಿ, ಐದು ಕತೆಗಳು ‘ಬಿಸಿಲುಗುದುರೆ'(1931)ಯಲ್ಲಿ, ಎಂಟು ಕತೆಗಳು ‘ಜೀವನ'(1934)ದಲ್ಲಿ ಪ್ರಕಟವಾಗಿವೆ. ಈಗ ಈ ಯಾವ ಸಂಕಲನವೂ ಸಿಗುವದಿಲ್ಲ. ಈಚೆಗೆ ‘ಹೂದೋಟ’ ಭಾಗ: 2(1952)ರಲ್ಲಿ ಒಂದು, ಮತ್ತು ‘ನಡೆದು ಬಂದ ದಾರಿ’ ಸಂಪುಟ: 2(1957)ರಲ್ಲಿ ಇನ್ನೊಂದು- ಹೀಗೆ ಮತ್ತೆರಡು ಕತೆಗಳು ಬಂದಿವೆ. ‘ಕಾಳಿ’, ‘ಫಕ್ಕೀರವ್ವನ ಪುಣ್ಯ’, ‘ಯಾರಿಗೆ ಯಾರು’ ಎಂಬ ಇನ್ನೂ ಮೂರು ಕತೆಗಳು ‘ಜಯಕರ್ನಾಟಕ’ ಪತ್ರಿಕೆಯಲ್ಲಿ (1930) ಬಂದಿವೆ. ಹೀಗೆ ಎಲ್ಲಾ ಸೇರಿ ಅವರು ಬರೆದಿರುವುದು ಇಪ್ಪತ್ತು ಕತೆಗಳನ್ನು ಮಾತ್ರ. ಅವರ ಮೊದಲ ಕತೆಗಳು 1929ರಿಂದ 1933ರ ನಡುವೆ ಬರೆಯಲ್ಪಟ್ಟವು. ಎಂದರೆ ಈ ಕತೆಗಳನ್ನು ಅವರು ತಮ್ಮ ವಯಸ್ಸಿನ 20ರಿಂದ 24ರ ಹರೆಯದಲ್ಲಿಯೇ ಬರೆದಿದ್ದಾರೆ. ತಮ್ಮ ಪಕ್ವ ವಯಸ್ಸಿನಲ್ಲೂ ಅವರು ಕತೆಗಳನ್ನು ಬರೆದಿದ್ದರೆ ಅವುಗಳ ಗುಣಮಟ್ಟ ಹೇಗಿರಬಹುದಿತ್ತು ಎಂಬುದು ಈಗ ಕೇವಲ ವ್ಯರ್ಥ ಕುತೂಹಲದ ಪ್ರಶ್ನೆ.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಕಲ್ಲೂರರಿಗೆ ಸಣ್ಣಕತೆಗಾರರೆಂದು ಮನ್ನಣೆಯೇನೋ ಬಹಳ ಹಿಂದೆಯೇ ಬಂದಿದೆ. ಕನ್ನಡ ಸಣ್ಣಕತೆಗಳ ಸಮೀಕ್ಷೆಗಳಲ್ಲಿ ಅವರ ಹೆಸರನ್ನು ತಪ್ಪದೇ ತೆಗೆದುಕೊಳ್ಳಲಾಗುತ್ತಿದೆ. ಆದರೆ ಅವರ ಕತೆಗಳನ್ನು ಕುರಿತು ವಿವರವಾದ, ಸಮರ್ಪಕವಾದ ಚರ್ಚೆ ಮಾತ್ರ ನಡೆದಿಲ್ಲ. ದೇ.ಜ.ಗೌ. ಸಂಪಾದಿಸಿದ ‘ಹೊಸಗನ್ನಡ ಕಥಾಸಂಗ್ರಹ'(1957)ರಲ್ಲಿ ‘ಜೀವನ’ ಕತೆಗೆ ಸಿಕ್ಕಿರುವ ಪ್ರಾತಿನಿಧ್ಯವೊಂದನ್ನು ಬಿಟ್ಟರೆ ಅವರ ಇನ್ನಾವ ಕಥೆಯೂ ಮಹತ್ವದ ಆ್ಯಂಥಾಲಜಿಗಳಲ್ಲಿ ಸ್ಥಾನ ಪಡೆದಿಲ್ಲ. ಆದರೆ ‘ಗುಬ್ಬಿಗಳ ಸಂಸಾರ'(1931) ಮಾತ್ರ ಉತ್ತರ ಕರ್ನಾಟಕದ ಕಡೆ-ಜೊತೆಗೆ ಮಹಾರಾಷ್ಟ್ರ ರಾಜ್ಯದಲ್ಲಿ-ಹಲವಾರು ಪಠ್ಯ ಪುಸ್ತಕಗಳಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿರುವ ಕಥೆ.
ಕಲ್ಲೂರರ ಮೊದಲ ಎರಡು ಸಂಕಲನಗಳಲ್ಲಿಯ ಕತೆಗಳು ಇನ್ನೂ ಎಳಸಾಗಿವೆ. ಅವರ ಮೂರನೆಯ ಸಂಕಲನವಾದ ‘ಜೀವನ’ದಲ್ಲಿ ಮಾತ್ರ ಅವರ ಕತೆಗಾರಿಕೆ ಒಮ್ಮೆಲೇ ಪ್ರಬುದ್ಧಾವಸ್ಥೆಗೆ ಬಂದಂತಿದೆ. ಈ ಸಂಕಲನದಲ್ಲಿಯ ‘ಜೀವನ’, ‘ಗುಬ್ಬಿಗಳ ಸಂಸಾರ’, ‘ಗೆಳೆತನದ ಗೆಲುವು’, ‘ಜೀವನ ಕಲಹ’ ಮುಂತಾದ ಕತೆಗಳನ್ನು ಇಂದಿಗೂ ಆಸಕ್ತಿಯಿಂದ ಓದಬಹುದಾಗಿದೆ. ಕಲ್ಲೂರರು ತಮ್ಮ ಈ ಕತೆಗಳಲ್ಲಿ ಆ ಕಾಲದ ಸಾಮಾಜಿಕ ಸಮಸ್ಯೆಗಳಿಗೆ ಅಷ್ಟಾಗಿ ಗಮನ ಕೊಟ್ಟಿಲ್ಲ. ಅನುಭವಗಳ ಹಿಂದಿನ ಸಾರ್ವಕಾಲಿಕ ಅರ್ಥದ ಅನ್ವೇಷಣೆಯೇ ಅವರ ಆಸಕ್ತಿಯ ಮುಖ್ಯ ಕೇಂದ್ರವಾಗಿದೆ. ಈ ಕತೆಗಳು ಇಂದಿಗೂ ಅರ್ಥಪೂರ್ಣವಾಗಿ ಉಳಿದಿರುವುದಕ್ಕೆ ಈ ಆಸಕ್ತಿಯೂ ಒಂದು ವಿಶೇಷ ಕಾರಣವಾಗಿದೆ.
ಕಲ್ಲೂರರ ಕತೆಗಳು ಭಾವಪ್ರಧಾನವಾದುವು. ಅವುಗಳ ಹಿಂದಿನ ಚಿಂತನಶೀಲತೆಯಲ್ಲಿ ಕೂಡ ಭಾವದ ತೀವ್ರತೆಯೇ ಕಾಣುತ್ತದೆ. ಪ್ರಶಾಂತವಾದ ಭಾವಗೀತೆಯಂತೆ ಅವರ ಕತೆಗಳ ನಿಲುವು ಶಾಂತ ಮತ್ತು ಗಂಭೀರ. ಸೌಮ್ಯವಾದ ಭಾವವೊಂದನ್ನು ಎಳೆಯೆಳೆಯಾಗಿ ಚಿತ್ರಿಸುವುದರಲ್ಲಿ ಅವರ ಕತೆಗಾರಿಕೆ ನವುರಾಗಿ ಕೆಲಸ ಮಾಡುತ್ತದೆ. ಬರವಣಿಗೆಯಲ್ಲಿ, ಅವಸರವಿಲ್ಲ, ಉದ್ವೇಗವಿಲ್ಲ, ಕಣ್ಣು ಕುಕ್ಕುವ ಚಮತ್ಕಾರಗಳಿಲ್ಲ, ನಾಟಕೀಯ ಶಿಖರಗಳಿಲ್ಲ. ಇಡಿಯ ಅನುಭವವೇ ಒಂದು ಸಹಜವಾದ ಕ್ರಿಯೆಯೆಂಬಂತೆ ದಟ್ಟವಾದ ವಿವರಗಳ ಮೂಲಕ ಸದ್ದಿಲ್ಲದೆ ಅರಳಿಕೊಳ್ಳುವ ರೀತಿ ಅನನ್ಯವಾಗಿದೆ. ಆದರೆ ಈ ವಿವರಗಳಿಗೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ವಿವರಣೆಗಳನ್ನು ಸೇರಿಸಿರುವುದರಿಂದ ಕತೆಗಳ ಗತಿ ಮಾತ್ರ ಸ್ವಲ್ಪ ನಿಧಾನವಾಗಿದೆ.
ಇದನ್ನು ಓದಿದ್ದೀರಾ?: ಕಡೆಂಗೋಡ್ಲು ಶಂಕರಭಟ್ಟ ಅವರ ಕತೆ | ಅದ್ದಿಟ್ಟು
‘ಗುಬ್ಬಿಗಳ ಸಂಸಾರ’ ಕಲ್ಕೂರರ ಕತೆಗಾರಿಕೆಯ ವೈಶಿಷ್ಟ್ಯಗಳನ್ನೆಲ್ಲಾ ಒಳಗೊಂಡಿರುವುದರ ಜೊತೆಗೆ ದಟ್ಟವಾದ ಸಾಂಕೇತಿಕತೆಯನ್ನೂ ಹೊಂದಿರುವ ಕತೆಯಾಗಿದೆ. ಕನ್ನಡದಲ್ಲಿ ಸಣ್ಣ ಕತೆಯಲ್ಲಿ ಸಾಂಕೇತಿಕತೆ ಅಪರೂಪವಾಗಿದ್ದ ಕಾಲದಲ್ಲಿ ವಾಸ್ತವತಾವಾದವೇ ಮುಖ್ಯ ರೀತಿಯಾಗಿದ್ದ ಸಂಪ್ರದಾಯದಲ್ಲಿ ಇಂಥದೊಂದು ಕತೆ ಹುಟ್ಟಿಬಂದದ್ದೊಂದು ವಿಶೇಷವೆಂದೇ ಹೇಳಬೇಕು.
ಈ ಕತೆಯ ವಸ್ತು ಬದುಕು ಮತ್ತು ಸಾವುಗಳ ನಡುವಿನ ವಿವರಿಸಲಾಗದ ತೊಡಕಿನ ಸಂಬಂಧವನ್ನು ಕುರಿತದ್ದು. ಸುಖ-ಸಂಭ್ರಮಗಳಿಂದ ತುಂಬಿದ ಬದುಕಿಗೆ ಯಾವ ಪೂರ್ವಸೂಚನೆಯೂ ಇಲ್ಲದೆ ಪ್ರವೇಶಿಸುವ ಸಾವು ಒಂದು ಕ್ಷಣದಲ್ಲಿಯೇ ಕೋಲಾಹಲವನ್ನುಂಟುಮಾಡಿಬಿಡಬಹುದಾದ ಸಾಧ್ಯತೆಯ ಕಲ್ಪನೆಯೇ ಮೈನಡುಗಿಸುವಂಥದು. ಆದರೆ ಕಥೆ ಈ ಮೈನಡುಗಿಸುವ ಅನುಭವವನ್ನು ಕೂಡ ಒಂದು ಬಗೆಯ ತಣ್ಣಗಿನ ಶಾಂತ ದನಿಯಲ್ಲಿಯೇ ನಿರೂಪಿಸುತ್ತದೆ. ಆದರೂ ಕತೆ ಪರಿಣಾಮದಲ್ಲಿ ದುರ್ಬಲವಾಗಿಲ್ಲ. ಬದಲಾಗಿ, ಓದುತ್ತ ಹೋದಂತೆ ಅನುಭವದ ಭಯಾನಕತೆ ಸದ್ದಿಲ್ಲದೆ ಮನಸ್ಸಿನ ಆಳಕ್ಕೆ ಇಳಿಯುತ್ತ ಹೋಗುತ್ತದೆ.
ಈ ವಿಶಿಷ್ಟ ಪರಿಣಾಮವನ್ನು ಸಾಧಿಸುವುದಕ್ಕೆ ಕತೆಗಾರರು ಮುಖ್ಯವಾಗಿ ಎರಡು ತಾಂತ್ರಿಕ ಉಪಾಯಗಳನ್ನು ಯೋಜಿಸಿಕೊಂಡಿದ್ದಾರೆ. ಮೊದಲನೆಯದಾಗಿ, ಕಥೆ ನಡೆದ ಕಾಲವನ್ನು ಅದನ್ನು ಬರೆದ ಕಾಲದಿಂದ ದೂರ ಸರಿಸಲಾಗಿದೆ. ತನ್ನ ಮದುವೆಯ ಕಾಲದಲ್ಲಿ ನಡೆದ ಘಟನೆಯನ್ನು ನಿರೂಪಕ ಅನೇಕ ವರ್ಷಗಳ ನಂತರ ನೆನಪಿಸಿಕೊಂಡು ಹೇಳುತ್ತಿದ್ದಾನೆ. ಇದರಿಂದಾಗಿ ನಿರೂಪಣೆಯಲ್ಲಿ ನಿರ್ಲಿಪ್ತ ಅಂತರ ಸಾಧ್ಯವಾಗಿದೆ. ಆದರೆ ಆ ಘಟನೆ ನಿರೂಪಕನ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ ಇಂದಿಗೂ ಅದರ ನೆನಪು ಅವನಲ್ಲಿ ಭಯವನ್ನುಂಟುಮಾಡುತ್ತದೆ. ಹೀಗೆ ಕಾಲದ ದೃಷ್ಟಿಯಿಂದ ವರ್ತಮಾನಕ್ಕೂ ಆ ಅನುಭವದ ಅರ್ಥವನ್ನು ವಿಸ್ತರಿಸಿಕೊಂಡು ಅದರ ಪ್ರಸ್ತುತತ್ವದ ಮೇಲೆ ಒತ್ತು ಕೊಡಲಾಗಿದೆ.
ಎರಡನೆಯದಾಗಿ, ಪ್ರತ್ಯಕ್ಷ ದುರಂತ ಸಂಭವಿಸುವುದು ನಿರೂಪಕನ ಅಥವಾ ಮನುಷ್ಯರ ಜೀವನದಲ್ಲಿ ಅಲ್ಲ, ಗುಬ್ಬಿಗಳ ಸಂಸಾರದಲ್ಲಿ. ಇದು ದುರಂತದ ತೀವ್ರತೆಯನ್ನು ಎಷ್ಟೋ ಕಡಿಮೆ ಮಾಡುತ್ತದೆ. ಆದರೆ ಗುಬ್ಬಿಗಳ ಕರುಣಾಜನಕವಾದ ಅಸಹಾಯಕತೆ ನಮ್ಮ ಸಹಾನುಭೂತಿಯನ್ನು ಸಹಜವಾಗಿ ಸೆಳೆದುಕೊಳ್ಳುತ್ತದೆ. ಜೊತೆಗೆ ಗುಬ್ಬಿಗಳ ಸಂಸಾರಕ್ಕೂ ಮನುಷ್ಯರ ಬದುಕಿಗೂ ಸಾಂಕೇತಿಕ ಸಂಬಂಧವನ್ನು ಕಲ್ಪಿಸುವುದರ ಮೂಲಕ ಅನುಭವದ ಅರ್ಥವನ್ನು ಮನುಷ್ಯರ ಜೀವನಕ್ಕೂ ಜೋಡಿಸಲಾಗಿದೆ. ಆರಂಭದಲ್ಲಿಯೇ ನಿರೂಪಕ ಗುಬ್ಬಿಗಳ ಸಂಸಾರವನ್ನು ಮನುಷ್ಯರ ಸಂಸಾರಕ್ಕೆ ಹೋಲಿಸುವುದನ್ನು ನೋಡಬಹುದು. ಜೊತೆಗೆ ತಾನೇ ಗಂಡು ಗುಬ್ಬಿಯೆಂದೂ, ಬೆಳಗಾದರೆ ಕೈ ಹಿಡಿಯಲಿರುವ ಹೆಂಡತಿಯೇ ಹೆಣ್ಣು ಗುಬ್ಬಿಯೆಂದೂ, ಮುಂದೆ ಹುಟ್ಟಲಿರುವ ಮಕ್ಕಳೇ ಆ ಚಿಕ್ಕ ಗುಬ್ಬಿಗಳೆಂದೂ ಭಾವಿಸಿಕೊಂಡು ತನ್ಮಯತೆಯನ್ನು ಅನುಭವಿಸುವುದೂ ಮಹತ್ವದ್ದಾಗಿದೆ. ಅಂತೆಯೇ ಗುಬ್ಬಿಗಳ ಸಂಸಾರದ ದುರಂತ ನಿರೂಪಕನ ಬದುಕಿನಲ್ಲಿಯೂ ಅನಿರೀಕ್ಷಿತವಾಗಿ ಬಂದು ಕವಿಯಬಹುದಾದ ಸಾವಿನ ನೆರಳಾಗಿ ಅವನ ಚಿಂತನೆಯನ್ನು ಪ್ರಭಾವಿಸುವುದು ಔಚಿತ್ಯಪೂರ್ಣವಾಗಿದೆ.
ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಹಾವು ಕೇವಲ ಗುಬ್ಬಿಗಳ ಸಂಸಾರವನ್ನಷ್ಟೇ ತಟ್ಟುವುದಿಲ್ಲ. ಹಾವನ್ನು ಕಂಡ ನಿಬ್ಬಣದ ಮನೆಯ ಎಲ್ಲರೂ ಹೌಹಾರಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೂಡ್ತ ತ್ತಾರೆ. ಹಾವು ಗಂಡು ಗುಬ್ಬಿಯನ್ನು ಕಚ್ಚಿಕೊಂಡು ಹೋದ ಮೇಲೆ ಹೆಣ್ಣು ಗುಬ್ಬಿ ದಿಕ್ಕೆಟ್ಟು ಚೀರುತ್ತ, ಕುಳಿತವರ ಮೈ-ಕೈಗೆ ತಡಮು ಬಡಿಯುತ್ತ ಹಾರಾಡುವುದು ಕೂಡ ಗುಬ್ಬಿ-ಮನುಷ್ಯರ ಸಾಂಕೇತಿಕತೆಯನ್ನು ಇನ್ನಷ್ಟು ಸ್ಥಿರೀಕರಿಸುತ್ತದೆ. ಈ ಸ್ಥಿತಿಯಲ್ಲಿ ಮನುಷ್ಯರು ಕೂಡ ಗುಬ್ಬಿಗಳಷ್ಟೇ ಅಸಹಾಯಕರಾಗುತ್ತಾರೆ. ಹಾವನ್ನು ಕೊಲ್ಲುವುದು ಅವರಿಗೆ ಸಾಧ್ಯವಾಗುವುದಿಲ್ಲ. ಮಾಂತ್ರಿಕನ ಮಂತ್ರವೂ ಉಪಯೋಗಕ್ಕೆ ಬರುವುದಿಲ್ಲ. ದಿಕ್ಕೆಟ್ಟು ಹಾರಾಡುವ ಹೆಣ್ಣು ಗುಬ್ಬಿ ನೋಡು-ನೋಡುತ್ತಿರುವಂತೆಯೇ ಬೆಕ್ಕಿನ ಬಾಯಿಗೆ ಬೀಳುತ್ತದೆ. ಈ ಗದ್ದಲದಲ್ಲಿ ಗೂಡಿನಿಂದ ಕೆಳಗೆ ಬಿದ್ದ ಮರಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ವ್ಯರ್ಥವಾಗುತ್ತವೆ. ಇಷ್ಟು ಜನರ ಕಣ್ಣೆದುರಿಗೇ ಸಾವು ತನ್ನ ಕೋಲಾಹಲವನ್ನು ನಡೆಸಿಬಿಡುತ್ತದೆ. ಕೆಲವೇ ಗಂಟೆಗಳ ಹಿಂದೆ ಸಂತೋಷದಿಂದ ನಲಿಯುತ್ತಿದ್ದ ಸಂಸಾರ ಹೇಳಹೆಸರಿಲ್ಲದಾಗುತ್ತದೆ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಹಾಳು ಸುರಿಯುವ ಹಳೆಯ ಮನೆ, ರಾತ್ರಿಯ ಹೊತ್ತು, ದೀಪ ಆರಿ ಕತ್ತಲಾಗುವುದು, ಕತ್ತಲಿನಲ್ಲಿ ದಿಕ್ಕೆಟ್ಟು ಅಲ್ಲಿ ಕುಳಿತವರಿಗೆ ಡಿಕ್ಕಿ ಹೊಡೆಯುತ್ತ ಹಾರಾಡುವ ಹೆಣ್ಣು ಗುಬ್ಬಿಯ ಆರ್ತನಾದ- ಮುಂತಾದ ವಿವರಗಳು ಸಾವಿನ ಕೋಲಾಹಲಕ್ಕೆ ತಕ್ಕದಾದ ಭೀತಿಯ ವಾತಾವರಣವನ್ನು ನಿರ್ಮಿಸುತ್ತವೆ. ಇದಕ್ಕೆ ವಿರುದ್ಧವಾಗಿ ಮದುವೆಯ ಮನೆಯ ಜೀವನದ ಕನಸು, ಇಸ್ಪೀಟಿನ ಆಟದ ಹುರುಪು, ಮದುವೆಯ ಕಾರ್ಯಗಳ ಸಡಗರ- ಸಾವಿನ ಭಯವನ್ನು ಲೆಕ್ಕಿಸದೇ ತಲೆಯೆತ್ತಿ ನಿಲ್ಲುವ ಬದುಕಿನ ಹಟಮಾರಿತನಕ್ಕೆ ಸಾಕ್ಷಿಯಾಗುತ್ತವೆ. ”ಹೀಗೆ ಒಂದಕ್ಕೊಂದು ವಿರುದ್ಧವಾಗಿರುವ ವಿವರಗಳು, ಭಾವನೆಗಳು ಒಂದು ಕತೆಯ ಸೂತ್ರದಲ್ಲಿ ಗ್ರಥಿತವಾಗಿರುವುದನ್ನು ನೋಡಿಯೇ ಆಶ್ಚರ್ಯವಾಗುತ್ತದೆ. ಅದರ ಸಂಶಯದ ನೆರಳು ಕೂಡ ಸೋಕದಂತೆ ಕತೆಯ ರಚನೆಯಿದೆ” ಎಂದಿರುವ ಕುರ್ತಕೋಟಿಯವರ ಮಾತು ಉಲ್ಲೇಖನೀಯವಾಗಿದೆ (ಯುಗಧರ್ಮ ಹಾಗೂ ಸಾಹಿತ್ಯದರ್ಶನ; ಪುಟ: 152). ಪ್ರತಿಯೊಂದು ವಿವರವೂ ಆಕಸ್ಮಿಕವೆಂಬಂತೆ ಕತೆಯಲ್ಲಿ ಕಾಣಿಸಿಕೊಂಡರೂ ಗುಪ್ತವಾಗಿ ಕತೆಯ ಅರ್ಥದಲ್ಲಿ ಸೇರಿಕೊಳ್ಳುವ ಸಹಜತೆ ಉತ್ತಮ ಕಲೆಗಾರಿಕೆಯ ಲಕ್ಷಣವಾಗಿದೆ.
ನಿರೂಪಕ ತನ್ನ ಹೊಸ ಜೀವನದ ಹೊಸ್ತಿಲಲ್ಲಿ ಕಾಲಿಡುತ್ತಿರುವಾಗಲೇ ಸಂಭವಿಸುವ ಈ ಘಟನೆ ಅವನ ಮನಸ್ಸಿನ ಮೇಲೆ ಸಹಜವಾಗಿಯೇ ಆಳವಾದ ಪರಿಣಾಮವನ್ನು ಬೀರುತ್ತದೆ. ಮುಂದೆ ಅವನ ತುಂಬಿದ ಸುಖಸಂಸಾರದಲ್ಲಿ ಆ ನೆನಪು ಆಗಾಗ ಕಾಣಿಸಿಕೊಂಡು “ಎಲ್ಲಿಯೋ, ಯಾವದೋ ಒಂದು ಹೋರಿನಲ್ಲಿ ಹೊಂಚಿ ಕುಳಿತ ಸಾವೆಂಬ ಹಾವು” ಎಲ್ಲಿ ತನ್ನ ಸಂಸಾರವನ್ನು ಸೂರೆಗೊಂಡೀತೋ ಎಂದು ಭಯವನ್ನುಂಟುಮಾಡುತ್ತದೆ. ಈ ಭಾವನೆಯಲ್ಲಿ ಅಸಹಜವಾದುದೇನೂ ಇಲ್ಲ. ಆದರೆ ಕುರ್ತಕೋಟಿಯವರು ಗುರುತಿಸಿರುವಂತೆ ಇಲ್ಲಿ ಹಾವಿನ ಸಂಕೇತವನ್ನು ವಾಚ್ಯವಾಗಿ ವಿವರಿಸಿರುವುದರಿಂದ ಕಥೆಯ ಅರ್ಥ ಸಂಕುಚಿತವಾಗಿಬಿಟ್ಟಿದೆ. ಮೇಲಾಗಿ ಇದು ಕತೆಯ ವೈವಿಧ್ಯಪೂರ್ಣವಾದ ಜೀವಂತ ವಿವರಗಳಿಗೆ, ಅವುಗಳ ಸಹಜ ಧ್ವನಿಶಕ್ತಿಗೆ ಮಾಡಿದ ಅನ್ಯಾಯವಾಗಿದೆ. ಉದಾಹರಣೆಗೆ, ಕತೆಯಲ್ಲಿ ಹಾವೊಂದೇ ಸಾವಿನ ಸಂಕೇತವಲ್ಲ. ಸಾವಿನ ಗಲಾಟೆ ಹಾವಿನಿಂದಲೇ ಆರಂಭವಾಗುವುದೇನೋ ನಿಜ. ಎರಡು ಗುಬ್ಬಿಗಳನ್ನು ಕೂಡ ಅದೇ ನುಂಗುತ್ತದೆ. ಆದರೆ ಒಂದು ಗುಬ್ಬಿ ಬೆಕ್ಕಿನ ಬಾಯಿಗೆ ಬಿದ್ದು ಸತ್ತರೆ, ಒಂದು ಮರಿ ಕೆಳಗೆ ಬಿದ್ದ ಪೆಟ್ಟಿನಿಂದ ಸಾಯುತ್ತದೆ. ಹೀಗೆ ಸಾವಿನ ರೀತಿಯಲ್ಲೂ ವೈವಿಧ್ಯವನ್ನು ತೋರಿಸುವ ಕಥೆ ಇಂಥ ಉಪಾಯಗಳಿಂದಾಗಿಯೇ ಒಂದು ಸರಳ ಅನ್ಯೋಕ್ತಿಯಾಗುವುದರಿಂದ ತಪ್ಪಿಸಿಕೊಂಡಿದೆ. ಆದರೆ ನಿರೂಪಕ (ಲೇಖಕ) ಅಚಾತುರ್ಯದಿಂದ ಅದನ್ನು ಅನ್ಯೋಕ್ತಿಗೆ ಎಳೆಯುವ ಪ್ರಯತ್ನ ಮಾಡಿದ್ದಾನೆ. ಕಥೆಯ ಆರಂಭದಲ್ಲಿ ಬರುವ ಪ್ರಾಣಿಪ್ರಪಂಚವೂ ಸಾಹಿತ್ಯದ ವಸ್ತುವಾಗಬಲ್ಲುದರ ಮೇಲಿನ ವ್ಯಾಖ್ಯಾನವಂತೂ ತೀರಾ ಅನಾವಶ್ಯಕ. ಅದನ್ನೆಲ್ಲ ಮೌನವಾಗಿಯೇ ಧ್ವನಿಸಬಲ್ಲ ಸಾಮರ್ಥ್ಯ ಕತೆಗೇ ಇದೆ. ಕಲ್ಲೂರರು ಈ ಕತೆಯನ್ನು ಬರೆದ ಕಾಲದಲ್ಲಿ ಸಾಹಿತ್ಯದಲ್ಲಿ ಸಾಂಕೇತಿಕತೆಯ ಬಳಕೆ ಇನ್ನೂ ಹದಗೊಂಡಿರದಿದ್ದುದೂ ಇಂಥ ದೋಷಗಳಿಗೆ ಕಾರಣವಾಗಿರಬಹುದು.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)