ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ವೆಂಕಟರಮಣ- ಕಮಲ, ವಿ.ಪಿ. ಬಂದಿತ್ತೆ?
ಕಮಲ- ಬಂದಿತ್ತು.
ವೆಂಕಟರಮಣ- ಎಷ್ಟಕ್ಕೆ?
ಕಮಲ- ಇಪ್ಪತ್ತುಮೂರುವರೆ ರೂಪಾಯಿಗೆ
ವೆಂಕಟರಮಣ- ಹಾಗಾದರೆ ನಾನು ಯೋಚಿಸಿದ್ದಕ್ಕಿಂತ ಒಂದೂವರೆ ರೂಪಾಯಿ ಕಡಿಮೆಯೇ ಆಯಿತು. ಪುಸ್ತಕವೆಲ್ಲಿ?
ಕಮಲ- ಪುಸ್ತಕವೆಲ್ಲಿ ಅಂದರೆ! ಪೋಸ್ಟ್ ಆಫೀಸಿನಲ್ಲಿ!
ವೆಂಕಟರಮಣ- ಹಾಗಾದರೆ ವಿ.ಪಿ. ತೆಗೆದುಕೊಳ್ಳಲಿಲ್ಲವೆ?
ಕಮಲ- ಇಲ್ಲ.
ವೆಂಕಟರಮಣ- ಯಾತಕ್ಕೆ? ವಿ.ಪಿ. ಬರುತ್ತೆ, ಅದು ನನಗೆ ವ್ಯಾಸಂಗಕ್ಕೆ ಈಗ ಬೇಕೇಬೇಕಾದ ಪುಸ್ತಕ ಎಂದು ಅಯ್ಯನಿಗೆ ಹೇಳಿರಲಿಲ್ಲವೆ?
ಕಮಲ- ಹೌದು, ನೀನು ಹೇಳಿದ್ದೆ.
ವೆಂಕಟರಮಣ- ವಿ.ಪಿ. ಯಾತಕ್ಕೋಸ್ಕರ ತೆಗೆದುಕೊಳ್ಳಲಿಲ್ಲ? ಪೋಸ್ಟ್ ಆಫೀಸ್ ಜವಾನ ಬಂದಾಗ್ಯೆ ಅಯ್ಯ ಮನೆಯಲ್ಲಿರಲಿಲ್ಲವೆ?
ಕಮಲ- ಇದ್ದರು.
ವೆಂಕಟರಮಣ- ಹಾಗಾದರೆ, ವಿ.ಪಿ. ಯಾತಕ್ಕೆ ತೆಗೆದುಕೊಳ್ಳಲಿಲ್ಲ? ಅಯ್ಯ ಏನು ಹೇಳಿದರು? ಕಾರಣವೇನಿರಬಹುದು?
ಕಮಲ- ನನ್ನನ್ನು ಕೇಳಿ ಏನು ಉಪಯೋಗ?
ವೆಂಕಟರಮಣ- ನಿನಗೆ ಕಾರಣ ಗೊತ್ತಿದೆ. ಹೇಳುವುದಿಲ್ಲ ಅಷ್ಟೆ! ನನ್ನ ವಿಷಯ ನಿನಗೆ ಸ್ವಲ್ಪವೂ ಬೇಡ.
ಕಮಲ- ನೀನು ಸುಮ್ಮನೆ ಕೋಪಮಾಡಿ ಉಪಯೋಗವೇನು? ಹೆಣ್ಣು ಹೆಂಗಸು ನನಿಗೆ ಇವುಗಳೆಲ್ಲಾ ಹ್ಯಾಗೆ ಗೊತ್ತಾಗುತ್ತೆ?
ವೆಂಕಟರಮಣ- ಅಯ್ಯೋ ಪಾಪ. ಹೆಣ್ಣು ಹೆಂಗಸು!! ಏನಾದರೂ ಗೊತ್ತೆ? ಇಲ್ಲ! ಇಲ್ಲ!! ವಾರಕ್ಕೆರಡು ಸಾರಿ ಮಾತ್ರ ಗಂಡನಿಗೆ ಕಾಗದ ಬರೆಯುವುದು ಗೊತ್ತು ಅಷ್ಟೆ! ನಿನ್ನ ಗಂಡನ ಕಾಗದ ಬರಲಿ. ನಾನು ಈ ಬಾರಿ ಒಡೆದು ನೋಡಿಬಿಡುತ್ತೇನೆ.
ಕಮಲ- ನೀನು ಹಾಗೆ ಮಾಡಿದರೆ ಅಯ್ಯನಿಗೆ ಹೇಳುತ್ತೇನೆ.
ವೆಂಕರಮಣ- ಹಾಗಾದರೆ ವಿ.ಪಿ. ಯಾಕೆ ತೆಗೆದುಕೊಳ್ಳಲಿಲ್ಲ ಹೇಳು ಮತ್ತೆ!
ಕಮಲ- ಯಾಕೆ? ಯಾಕೆ? -ಸುಮ್ಮನೆ ನನ್ನನ್ನು ಕಿರುಗುಟ್ಟಿಸುತ್ತೀಯೆ! ಯಾಕೆ ಅಂದರೆ ನಿನಿಗೇ ಗೊತ್ತು. ಕೈಯಲ್ಲಿ ದುಡ್ಡಿರಲಿಲ್ಲ.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ವೆಂಕಟರಮಣ- ಈ ವಿಷಯ ಎಂಟು ದಿನದ ಮುಂಚಿತವಾಗಿಯೇ ಅಯ್ಯನಿಗೆ ಹೇಳಿದ್ದೆ. ಬೊಂಬಾಯಿಗೆ ಕಾಗದ ಬರೆಯುವುದಕ್ಕೆ ಮೊದಲು ಕೇಳಿದೆ. ಆಗಲಿ, ಹಣವನ್ನು ಸಿದ್ಧಪಡಿಸುತ್ತೇನೆ ಎಂದು ಅಯ್ಯ ಹೇಳಿದ ಮೇಲೆ ನಾನು ಪುಸ್ತಕಕ್ಕೆ ಬರೆದೆ. ಈಗ ಹಣವಿಲ್ಲವೆಂದರೆ ನಾನು ಏನು ಮಾಡಲಿ! ನನಿಗೆ ಪುಸ್ತಕ ಅತ್ಯವಶ್ಯಕವಾಗಿ ಬೇಕಾಗಿದೆ. ನಾಳೆಯಾದರೂ ವಿ.ಪಿ. ತೆಗೆದುಕೊಳ್ಳಬಹುದೇನು?
ಕಮಲ- ನಾಳೆ ರಜವಲ್ಲವೆ?
ವೆಂಕಟರಮಣ- ನಾಳೆ ಪೋಸ್ಟ್ ಆಫೀಸಿಗೆ ರಜಾ ಇಲ್ಲ.
ಕಮಲ- ನಾಳೆಯೂ ಅಯ್ಯನ ಕೈಲಿ ದುಡ್ಡಿರುವಂತೆ ಕಾಣುವುದಿಲ್ಲ.
ವೆಂಕಟರಮಣ- ನನ್ನ ಹಣೆಯ ಬರಹ! ನನ್ನ ವಿದ್ಯಾಭ್ಯಾಸಕ್ಕೆ ಏನಾದರೂ ದೇವರು ಅಡಚಣೆಯನ್ನು ತಂದಿಡುತ್ತಾನೆ. ಅಯ್ಯ ಪಡುತ್ತಿರುವ ಕಷ್ಟವನ್ನು ಪ್ರತಿದಿನವೂ ಕಣ್ಣಾರೆ ನೋಡುತ್ತಾ ನಾನು ಹೇಗೆ ತಾನೇ ಅವನನ್ನು ದುಡ್ಡಿಗೋಸ್ಕರ ತೊಂದರೆಪಡಿಸಲಿ! ಈ ಸಾರಿ ನನಗೆ ಪ್ಯಾಸಾಗಿ ಹೋದರೆ ಆಮೇಲೆ ಯಾರಿಗು ಏನು ಕಷ್ಟವಿರುವುದಿಲ್ಲ. ನಾನು ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ತರುತ್ತೇನೆ. ದೇವರು ದುಡ್ಡು ಒದಗಿಸಬೇಕು.
ಕಮಲ- ನೀನು ಕಷ್ಟಪಟ್ಟು ವಿದ್ಯಾರ್ಜನೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆಯಪ್ಪ. ಅಯ್ಯ ಅಕ್ಕ ಇಬ್ಬರೂ ನೀನೇ ನಿಧಿಯೆಂದು ತಿಳಿದುಕೊಂಡಿದಾರೆ. ಇಷ್ಟು ದಿನ ಅನೇಕ ಕಷ್ಟಗಳನ್ನು ನಿರ್ವಹಿಸಿಕೊಂಡು ನಿನಗೆ ವಿದ್ಯಾಭ್ಯಾಸ ಮಾಡಿಸಲಿಲ್ಲವೆ? ಹೋದ ವರ್ಷ ನೀನು ಬಿ.ಎ. ಪರೀಕ್ಷೆಗೆ ಹಣ ಕಟ್ಟುವಾಗ್ಯೆ ಅಕ್ಕನ ಬುಗುಡಿಯನ್ನು ವಿಕ್ರಯಿಸಲ್ಲವೆ ಹಣವನ್ನು ಒದಗಿಸಿದ್ದು! ಮಗ್ಗಲು ಮನೇ ಕೋಮಲಮ್ಮನವರು ‘ಅಯ್ಯೋ ಬುಗುಡಿಯನ್ನು ಯಾಕಮ್ಮ ವಿಕ್ರಯಿಸಿಬಿಟ್ಟಿರಿ’ ಎಂದು ಅಕ್ಕನನ್ನು ಕೇಳಿದ್ದಕ್ಕೆ ‘ನನಿಗೇನಮ್ಮ ಕಡಿಮೆ? ನನ್ನ ಮಗ ಬಿ.ಎ. ಪ್ಯಾಸು ಮಾಡಲಿ. ಹತ್ತು ಜೊತೆ ಬುಗುಡಿಯನ್ನು ತೆಗೆದುಕೊಡುತ್ತಾನೆ’ ಎಂದು ಅಕ್ಕ ಉತ್ತರ ಕೊಟ್ಟಳು. ಇನ್ನು ಮೂರು ನಾಲ್ಕು ದಿನಗಳಲ್ಲೇ ಅಯ್ಯ ಎಲ್ಲಾದರೂ ಹಣವನ್ನು ಒದಗಿಸುತ್ತಾರೆ. ಯೋಚನೆ ಮಾಡಬೇಡವಪ್ಪ. ನೀನು ಸಿವಿಲ್ ಸರ್ವಿಸ್ ಪ್ಯಾಸು ಮಾಡಬೇಕೆಂದು ಅಯ್ಯ ಅಕ್ಕನಿಗೆ ಯೋಚನೆ ಇಲ್ಲವೆ? ನಮ್ಮಗಳಿಗೆಲ್ಲಾ ಆಸೆ ಇಲ್ಲವೆ?
ವೆಂಕಟರಮಣ- ಪೇಟೆಯಿಂದ ಸಾಮಾನೇನಾದರೂ ತರಬೇಕೆ? ಅಯ್ಯ ಎಲ್ಲಿ?
ಕಮಲ- ಅಯ್ಯ ಜವಳಿ ಅಂಗಡಿಗೆ ಹೋಗಿದಾರೆ. ಈ ಸಾರಿ ಗೌರೀಹಬ್ಬಕ್ಕೆ ಸೀರೆ ತೆಗೆದುಕೊಳ್ಳುವುದಕ್ಕೋಸ್ಕರ ಅಕ್ಕನಿಗೆ ತೌರುಮನೆಯಿಂದ ಇಪ್ಪತ್ತೈದು ರೂಪಾಯಿ ಬಂತು. ಅಯ್ಯ ಐದು ರೂಪಾಯಿ ಕೊಡುತ್ತೇನೆಂದು ಹೇಳಿದರು. ಆದ್ದರಿಂದ ಅಕ್ಕ ಒಂದು ಧರ್ಮಾವರದ ಸೀರೆ ಕೊಂಡು ಉಟ್ಟುಕೊಂಡು ನಾಳೆ ಗೌರೀಪೂಜೆಗೆ ಹೋಗಬೇಕೆಂದಿದ್ದಾಳೆ. ಒಂದು ಧರ್ಮಾವರದ ಸೀರೆ ಉಟ್ಟುಕೊಳ್ಳಬೇಕೆಂದು ನಾಲ್ಕು ಐದು ವರ್ಷಗಳಿಂದಲೂ ಆಸೆ ಪಡುತ್ತಿದ್ದಳು. ಒಂದು ತಿಂಗಳ ಕೆಳಗೆ ತಾತನವರು ಬಂದಿದ್ದಾಗ್ಯೆ ಹೇಳಿಕೊಂಡಳು. ಅದೇ ಪ್ರಕಾರ ರೂಪಾಯಿ ಬಂತು. ಅಯ್ಯ ಜವಳಿ ಅಂಗಡಿಗೆ ಸೀರೆ ತರಲು ಹೋಗಿದ್ದಾರೆ.
ವೆಂಕಟರಮಣ- ನಾನು ಪೇಟೆಯಿಂದ ಏನಾದರೂ ತರಬೇಕೆ?
ಕಮಲ- ಹೌದು, ಬಾಕಿ ಪದಾರ್ಥಗಳೆಲ್ಲಾ ಇವೆ. ಹುವ್ವು ಮಾತ್ರ ತರಬೇಕು. ಇಗೋ ಎರಡು ಆಣೆ.
ವೆಂಕಟರಮಣ- ಎರಡಾಣೆ ಹುವ್ವು ಹ್ಯಾಗೆ ಸಾಕು? ನೀವು ಗೌರಿಪೂಜೆಗೆ ತೆಗೆದುಕೊಂಡು ಹೋಗಬೇಕು, ಉಪಾಕರ್ಮಕ್ಕೆ ನಮ್ಮಗಳಿಗೆ ಆಗಬೇಕು; ಮುತ್ತೈದೆಯರಿಗೆ ಕೊಡಲು ಬೇಕು; ನಿಮಗೆ ಮುಡಿದುಕೊಳ್ಳಲು ಬೇಕು! ಈ ಹಬ್ಬದ ಗಲಾಟೆಯಲ್ಲಿ ಎರಡಾಣೆಗೆ ಎಷ್ಟು ಹುವ್ವು ಬರುತ್ತೆ?
ಕಮಲ- ಹಾಗಾದರೆ ಪೂಜೆಗೀಜೆಗೆಲ್ಲಾ ಮಾರ್ಕೆಟ್ಟಿನಲ್ಲಿ ಎರಡಾಣೆಗೆ ಎಷ್ಟು ಬರುತ್ತೋ ಅಷ್ಟು ತೆಗೆದುಕೊಂಡು ಬಾ. ಈ ನಾಲ್ಕು ಆಣೆ ತೆಗೆದುಕೊಂಡು ಹುವ್ವಿನ ಅಂಗಡಿಬೀದಿಯಲ್ಲಿ ಮುಡಿದುಕೊಳ್ಳುವುದಕ್ಕೆ ಚೆನ್ನಾಗಿರುವ ಹುವ್ವನ್ನು ಬೇರೆ ತೆಗೆದುಕೊಂಡು ಬಾ.
ವೆಂಕಟರಮಣ- ನನ್ನ ದುಡ್ಡು ನಿನ್ನ ಹತ್ತಿರವಿದೆಯಲ್ಲ! ಅದರಲ್ಲಿ ಒಂದಾಣೆ ಕೊಡು.
ಕಮಲ- ಯಾತಕ್ಕಪ್ಪ ನೀನು ಸುಮ್ಮನೇ ದುಂದು ವೆಚ್ಚ ಮಾಡಬಿಡುತ್ತೀಯೆ? ಯಾತಕ್ಕೆ ಹೇಳು? ನಿನಗೆ ಬಿ.ಎ. ಪ್ಯಾಸಾದರೂ ಕಾಸಿನ ಬೆಲೆ ಗೊತ್ತಿಲ್ಲ.

ವೆಂಕಟರಮಣ- ನನ್ನ ತಂಗಿ ಹನ್ನೆರಡು ವರುಷದ ಕುಳ್ಳಿ ಕಮಲುಗೆ ದುಡ್ಡಿನ ಬೆಲೆ ಗೊತ್ತು. ಇಪ್ಪತ್ತು ವರ್ಷದ ಗ್ರಾಜ್ಯುಯೇಟ್‌ಗೆ ಏನೂ ಗೊತ್ತಿಲ್ಲ! ಆಹಾ! ನಿನಿಗೆ ಸರಿಯಾದ ಜಿಪುಣಗಂಡನೇ ಸಿಕ್ಕಿದಾನೆ!! ನನ್ನ ದುಡ್ಡು ನನಿಗೆ ಕೊಡು- ಎಂದರೆ ಏನೇನೋ ಹರಟೆ
ಕಮಲ- ದುಡ್ಡು ಬೇಕಾದರೆ ಎಲ್ಲಾ ವಾಪಸ್ಸು ತೆಗೆದುಕೊಂಡುಬಿಡು! ನಿಮ್ಮ ಭಾವನವರನ್ನು ಏನೂ ಅಂದು ಆಡಿ ಮಾಡಬೇಡ! ಒಂದಾಣೆ ಇಗೋ. ಯಾತಕ್ಕೆ ಹೇಳು.
ವೆಂಕಟರಮಣ- ಹೆಂಗಸರಿಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂದು ಯಾವಾಗಲೂ ಆಸೆ. ಅಕ್ಕನಿಗೆ ತಾಳೇಹುವ್ವು ತಂದುಕೊಡೋಣವೆಂದು.
ಕಮಲ- ಹಾಗಾದರೆ ನನ್ನ ದುಡ್ಡಿನಲ್ಲಿ ಕೊಂಡುಕೊಂಡು ಬಾ. ಒಳ್ಳೇದಾದ ಘಮಘಮಿಸುವ ಎರಡು ಮೋತೆ ಕೊಂಡುಕೊಂಡು ಬಾ.
ವೆಂಕಟರಮಣ- ಇಲ್ಲ. ನಿನ್ನ ದುಡ್ಡು ಬೇಡ. ನನ್ನ ದುಡ್ಡಿನಲ್ಲಿ ತಂದುಕೊಡಬೇಕೆಂದು ನಾನಿದೇನೆ. ಹಾಗಾದರೆ ನಾನು ಪೇಟೆಗೆ ಹೋಗಿ ಬೇಗ ಬರುತ್ತೇನೆ.
ಕಮಲ- ಅಣ್ಣ ಅಣ್ಣ…
ವೆಂಕಟರಮಣ- (ವಾಪಸ್ಸು ಬಂದು) ಏನು?
ಕಮಲ- ನಿನ್ನದು ಬಾಕಿ ಇನ್ನು ಒಂದು ರೂಪಾಯಿ ಐದಾಣೆ ಮಾತ್ರವೆ. ಲೆಕ್ಕ ಜ್ಞಾಪಕವಿಟ್ಟುಕೊ– ಎಂದು ಕೂಗಿದೆ.
ಮೇಲೆ ಹೇಳಿದ ಮಾತುಗಳೆಲ್ಲವೂ, ಒಳಗೆ ಕುಳಿತುಕೊಂಡು ಮರುದಿನದ ಗೌರೀಪೂಜೆಗೆ ಸನ್ನಾಹ ಮಾಡುತ್ತಿದ್ದ ಲಕ್ಷ್ಮೀದೇವಮ್ಮನವರಿಗೆ ಪ್ರತಿಯೊಂದೂ ಕೇಳಿಸಿತು.
ಸ್ವಲ್ಪಹೊತ್ತಿಗೆ ವೆಂಕಟಸುಬ್ಬಶಾಸ್ತ್ರಿಗಳು ನಾಲ್ಕು ಐದು ಸೀರೆಗಳನ್ನು ತೆಗೆದುಕೊಂಡು ಮನೆಗೆ ಬಂದರು. ಶಾಸ್ತ್ರಿಗಳು ಇಷ್ಟಸತಿಯನ್ನು ಕೂಗಿ ”ಬಾರೆ ಇಲ್ಲಿ ಸೀರೆಗಳನ್ನು ತಂದಿದ್ದೇನೆ. ನಿನಿಗೆ ಯಾವದು ಬೇಕೋ ನೋಡು” ಎಂದು ಹೇಳಿದರು. ಕಮಲ ಓಡಿಬಂದು ಎಲ್ಲಾ ಸೀರೆಗಳನ್ನೂ ನೋಡಿ ”ಅಕ್ಕ, ಇದು ತುಂಬಾ ಚೆನ್ನಾಗಿದೆ! ದಡೂತಿಯಾಗಿದೆ! ಇದನ್ನು ಉಟ್ಟುಕೊ” ಎಂದಳು.
ಲಕ್ಷ್ಮೀದೇವಮ್ಮ- ಈಗ ಸದ್ಯಃ ನನಗೆ ಸೀರೆ ಬೇಡ.
ವೆಂಕಟಸುಬ್ಬಶಾಸ್ತ್ರಿಗಳು ಕಮಲು ಇಬ್ಬರೂ ಬೆಪ್ಪಾಗಿ ನೋಡಿದರು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಕಮಲ- ಇದೇನಕ್ಕ ಹೀಗೆ ಹೇಳುತ್ತಿ. ಎಷ್ಟೋ ದಿನಗಳಿಂದ ಆಸೆಪಟ್ಟು ಆಸೆಪಟ್ಟು ಬೇಕೆಂದಿರುವ ಸೀರೆ ಕಂಡ ಒಡನೆ ಬೇಡವೆನ್ನುತ್ತೀಯೆ! ನಾಳೆ ಗೌರಿಹಬ್ಬ, ಮಗಳು ಹೊಸ ಸೀರೆ ಉಟ್ಟುಕೊಳ್ಳಲಿ-ಎಂದು ತಾತನವರು ಹಣ ಕಳುಹಿಸಿದರು. ನೀನೂ ಒಪ್ಪಿದೆ. ಈಗ ನಿನ್ನ ಮಾತು ಅರ್ಥವಾಗುವುದಿಲ್ಲ. ಲಕ್ಷಣವಾಗಿ ಹೊಸ ಸೀರೆ ಉಟ್ಟುಕೊಂಡು ನಾಳೆ ಗೌರೀಪೂಜೆಗೆ ಹೋಗಮ್ಮ, ಈಗ ಏನೇನೋ ಮಾತು ಬೇಡ.
ಲಕ್ಷ್ಮೀದೇವಮ್ಮ- ಈಗ ನನಗೆ ಸೀರೆ ಬೇಡ. ಮುಂದಿನವರ್ಷ ಬದುಕಿದ್ದರೆ ಆ ಗೌರಮ್ಮನ ದಯದಿಂದ ನನಗೆ ಬೇಕಾದ ಸೀರೆ ಸಿಕ್ಕುತ್ತೆ. ಈ ವರ್ಷ ನನಗೆ ರೂಪಾಯೇ ಬೇಕು, ಖಂಡಿತ ಸೀರೆ ಬೇಡ. ಸೀರೆಗಳನ್ನೆಲ್ಲಾ ಅಂಗಡಿಗೆ ವಾಪಸ್ಸು ಕೊಡಬಹುದು.
ಶಾಸ್ತ್ರಿಗಳು- ಇದ್ಯಾಕೆ ಹೀಗೆ ಹೇಳುತ್ತಿ?
ಲಕ್ಷ್ಮೀದೇವಮ್ಮ- ನನಗೆ ಸದ್ಯಃ ಸೀರೆ ಬೇಡ.
ಶಾಸ್ತ್ರಿಗಳು- ಕಾರಣವೇನೋ ಇದೆ! ನೀನು ಧರ್ಮಾವರದ ಸೀರೆ ಉಟ್ಟುಕೊಳ್ಳಬೇಕೆಂದು ಬಹಳ ದಿನಗಳಿಂದ ಹೇಳುತ್ತಿರಲಿಲ್ಲವೆ?
ಲಕ್ಷ್ಮೀದೇವಮ್ಮ- ಹೌದು ಕಾರಣವಿದೆ. ನಾಳೆ ಹೇಳುತ್ತೇನೆ. ಈಗ ನನ್ನನ್ನು ನಿರ್ಬಂಧಿಸಬೇಡಿ -ಎಂದು ಹೇಳಿ ಒಳಕ್ಕೆ ಹೊರಟುಹೋದರು.
ಶಾಸ್ತ್ರಿಗಳು ಪೆಚ್ಚುಮುಖ ಹಾಕಿಕೊಂಡು ಜವಳಿ ಅಂಗಡಿಗೆ ಪುನಃ ಹೋಗಿ ಸೀರೆಗಳನ್ನೆಲ್ಲಾ ವಾಪಸ್ಸು ಕೊಟ್ಟು ಮನೆಗೆ ಬಂದರು.
ಮರುದಿನ ಹಬ್ಬದ ಗಲಾಟೆ. ಶಾಸ್ತ್ರಿಗಳ ಮನೆಯಲ್ಲಿ ಎರಡು ಹಬ್ಬ. ಸಾಮಶಾಖಾಧ್ಯಾಯಿಗಳಾದ್ದರಿಂದ ಉಪಾಕರ್ಮ. ಹೆಂಗಸರಿಗೆ ಗೌರೀಹಬ್ಬ, ಒಂದೊಂದು ವರ್ಷ ಮೂರು ಹಬ್ಬಗಳು ಸೇರುವುದುಂಟು- ಸಾಮಗೋಪಾಕರ್ಮ-ಗೌರೀಪೂಜೆ-ಗಣಪತಿಪೂಜೆ. ಈ ವರ್ಷ ಗಣಪತಿಪೂಜೆ ಬೇರೆ ಬಂತು.
ಶಾಸ್ತ್ರಿಗಳೂ ವೆಂಕಟರಮಣನೂ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿಕೊಂಡು ಉಪಾಕರ್ಮದ ನಿಮಿತ್ತ ದೊಡ್ಡಕೆರೆಗೆ ಹೊರಟುಹೋದರು. ಕಮಲು ಅಲಂಕಾರ ಮಾಡಿಕೊಂಡು ಪುರೋಹಿತ ರಂಗಾಭಟ್ಟರ ಹೆಂಡತಿಯ ಸಹಾಯ ಮಾಡಿಕೊಂಡು ಗೌರೀಪೂಜೆಗೆ ಸಂಭ್ರಮದಿಂದ ಹೊರಟು ಹೋದಳು. ಲಕ್ಷ್ಮೀದೇವಮ್ಮನವರು ಹಬ್ಬ ಅಡಿಗೆಯನ್ನೆಲ್ಲಾ ಮುಗಿಸಿ ಒಬ್ಬಟ್ಟು ತಟ್ಟುತ್ತಾ ಕುಳಿತಿದ್ದರು. ಹನ್ನೊಂದು ಘಂಟೆಯಾಯಿತು. ಬೀದಿಯ ಬಾಗಿಲಲ್ಲಿ ಯಾರೋ ಕೂಗಿದಂತಾಯಿತು.
“ತಾಯಿ-ತಾಯಿ-ಅವ್ವ.”
ಲಕ್ಷ್ಮೀದೇವಮ್ಮ- ಯಾರಪ್ಪ?
”ನಾನು ತಾಯಿ. ಜನಾನೀಬಾಗಿಲು ಬೋರ. ಅರಮನೆಯಿಂದ ಮೊರದ ಬಾಗಿನ ತೆಗಿಸಿಕೊಂಡು ಬಂದಿದೇನೆ.”
ಲಕ್ಷ್ಮೀದೇವಮ್ಮನವರು ಬಾಗಿಲನ್ನು ತೆಗೆದು ಬಾಗಿನವನ್ನು ಮನೆಯ ಒಳಗಿಡಿಸಿ ಬೋರನಿಗೆ ಒಂದ ತೆಂಗಿನಕಾಯನ್ನೂ ಎಲೆ ಅಡಿಕೆಯನ್ನೂ ಕೊಟ್ಟು “ಹೋಗಿ ಬಾ” ಎಂದರು. ಅಷ್ಟು ಹೊತ್ತಿಗೆ ಸರಿಯಾಗಿ ಪೋಸ್ಟ್ ಜವಾನ ವಿ.ಪಿ.ಯನ್ನು ತಂದ. ಲಕ್ಷ್ಮೀದೇವಮ್ಮನವರು ದೇವರ ಮುಂದೆ ಮಂತ್ರಾಕ್ಷತೆ ಬಟ್ಟಲಿನಲ್ಲಿಟ್ಟಿದ್ದ ಇಪ್ಪತ್ತು ಮೂರುವರೆ ರೂಪಾಯಿಗಳನ್ನು ಕೊಟ್ಟು ಪುಸ್ತಕವನ್ನು ತೆಗೆದುಕೊಂಡು ವೆಂಕಟರಮಣನ ಚಿಕ್ಕಮನೆಯಲ್ಲಿ ಅವನ ಪೆಟ್ಟಿಗೆಯಲ್ಲಿ ಮುಚ್ಚಿಟ್ಟು, ಪುನಃ ಸ್ನಾನಮಾಡಿ ಮಡಿಸೀರೆಯನ್ನುಟ್ಟು, ಒಬ್ಬಟ್ಟು ತಟ್ಟುತ್ತಾ ಕುಳಿತುಕೊಂಡರು.
ಹನ್ನೆರಡು ಘಂಟೆಯಾಯಿತು. ಶಾಸ್ತ್ರಿಗಳೂ ವೆಂಕಟರಮಣನೂ ಉಪಾಕರ್ಮವನ್ನು ಮುಗಿಸಿಕೊಂಡು ಬಂದರು. ಕಮಲು ಕೂಡ ಜಾಗ್ರತೆಯಲ್ಲೇ ಬಂದುಬಿಟ್ಟಳು. ಶಾಸ್ತ್ರಿಗಳು ಹೆಂಡತಿಯನ್ನು ಕರೆದು “ನೀನು ಹೋಗಿ ಗೌರೀಪೂಜೆ ಮಾಡಿಕೊಂಡು ಬಂದುಬಿಡು” ಎಂದು ಹೇಳಿದರು. ಹಾಗೆಯೇ ಹೆಂಡತಿಯನ್ನು ನೋಡಿ ”ಇದೇನೆ ಇದು. ಹಳೆ ಪಟ್ಟೆ ಸೀರೆಯನ್ನು ತೆಗೆದಿದ್ದೀಯೆ?” ಎಂದು ಕೇಳಿದರು.
ಲಕ್ಷ್ಮೀದೇವಮ್ಮ- ಈ ಸೀರೆ ನನಗೆ ಮದುವೆಯಾದೊಡನೆ ನನ್ನ ಪ್ರಥಮ ಗೌರೀಪೂಜೆಗೆ ನೀವು- ಎಂದರೆ ನಮ್ಮ ಮಾವನವರು-ಕಳುಹಿಸಿದ್ದು. ನಾನು ಗೌರೀಪೂಜೆಗೆ ಉಟ್ಟುಕೊಳ್ಳುವುದಕ್ಕೆ ಅದಕ್ಕಿಂತಲೂ ಬೇರೆ ಸೀರೆ ಬೇಕೆ! ನೀವುಗಳೆಲ್ಲಾ ಎದ್ದರೆ ನಾನು ನಿಮ್ಮಗಳಿಗೆಲ್ಲಾ ಬಡಿಸಿಬಿಟ್ಟು ನಿಮ್ಮ ಊಟವಾದ ಮೇಲೆ ಗೌರೀಪೂಜೆಗೆ ನಿಧಾನವಾಗಿ ಹೋಗುತ್ತೇನೆ.
ಊಟದ ವಿಷಯ ಸ್ವಲ್ಪ ಚರ್ಚೆಯಾಯಿತು. ಕೊನೆಗೆ ಎಲ್ಲರೂ ಊಟಕ್ಕೆ ಕುಳಿತರು. ಊಟವೂ ಆಯಿತು. ಅನಂತರ ಲಕ್ಷ್ಮೀದೇವಮ್ಮನವರು ಪೂಜಾಸಾಮಗ್ರಿಗಳನ್ನು ತೆಗೆದುಕೊಂಡು ಹೊರಡಲುದ್ಯುಕ್ತರಾದರು.
ವೆಂಕಟರಮಣ- ಅಕ್ಕಾ, ಹಣ್ಣು ಹಂಪಲಿನ ತಟ್ಟೆ ತೆಗೆದುಕೊಳ್ಳಲಿಲ್ಲವಲ್ಲ.
ಲಕ್ಷ್ಮೀದೇವಮ್ಮ- ಈ ತಟ್ಟೆಗಳನ್ನು ಮೊದಲು ಋತ್ವಿಕ ರಾಮ ಶಾಸ್ತ್ರಿಗಳ ಮನೆಯಲ್ಲಿ ಗೌರಿಯ ಮುಂದೆ ಇಟ್ಟು ಪುನಃ ಬಂದು ಬಾಕಿ ತಟ್ಟೆಗಳನ್ನು ತೆಗೆದುಕೊಂಡು ಹೋಗುತ್ತೇನೆ.
ವೆಂಕಟರಮಣ- ನಾನು ತಂದುಕೊಡುತ್ತೇನೆ. ನೀನು ಪುನಃ ಯಾತಕ್ಕೆ ಬರಬೇಕು.

ಲಕ್ಷ್ಮೀದೇವಮ್ಮನವರು ಭಕ್ತಿಯಿಂದ ಸಾಂಗವಾಗಿ ಶಾಸ್ರೋಕ್ತವಾಗಿ ಪೂಜೆಯನ್ನು ನಿರವಸರವಾಗಿ ಮಾಡಿದರು. ಕೊನೆಗೆ ಪುರೋಹಿತ ರಂಗಾಭಟ್ಟರು, “ಮನಸೋದ್ದಿಷ್ಟಪ್ರಾರ್ಥನಾಂ ಸಮರ್ಪಯಾಮಿ” ಎಂದು ಹೇಳಿ ”ನಿಮ್ಮ ಮನಸ್ಸಿನಲ್ಲಿರುವುದನ್ನು ಪ್ರಾರ್ಥನೆ ಮಾಡಿ ನಮಸ್ಕಾರ ಮಾಡಿ ಅಮ್ಮ” ಎಂದು ಹೇಳಿದರು. ಲಕ್ಷ್ಮೀದೇವಮ್ಮನವರು ಗೌರಿಯ ಮುಂದೆ ಎದ್ದು ನಿಂತು ಮಂತ್ರಾಕ್ಷತೆ ಪುಷ್ಪಗಳನ್ನು ಕೈಯಲ್ಲಿ ಹಿಡಿದು ಪೂರ್ವಕಾಲದ ಒಂದು ಗೌರೀ ಸ್ತೋತ್ರವನ್ನು ಹೇಳಿ ಅನಂತರ “ಅಂಬಾ! ಗೌರಿ! ನನ್ನ ಸೌಮಂಗಲ್ಯವನ್ನು ಚಿರವಾಗಿ ಕಾಪಾಡು. ನನ್ನ ಮಗನು ಈಗ ಕೈಗೊಂಡಿರುವ ಕಾರ್ಯವನ್ನು ಸಿದ್ಧಿಗೊಳಿಸು” ಎಂದು ಮನಸ್ಸಿನಲ್ಲಿ ಹೇಳಿಕೊಂಡು ಪೂಜೆ ಮಾಡಿ ನಮಸ್ಕಾರ ಮಾಡಿದರು. ನಮಸ್ಕಾರ ಮಾಡಿ ಎದ್ದ ಒಡನೆ ಲಕ್ಷ್ಮೀದೇವಮ್ಮನವರು ಪೂಜೆ ಮಾಡಿದ್ದ ಒಂದು ತಾಳೇಹುವ್ವು ಗೌರೀದೇವಿಯ ಬಲ ಭಾಗದಿಂದ ಸಡಲಿ ಬಿತ್ತು. ಇದನ್ನು ನೋಡಿ ರಂಗಾಭಟ್ಟರು ಆಶ್ಚರ್ಯಪಟ್ಟು “ಅಮ್ಮ ನೋಡಿದಿರಾ! ನಿಮ್ಮ ಪ್ರಾರ್ಥನೆ ಸಫಲವಾಗುತ್ತದೆ- ದೇವಿ ವರ ಕೊಟ್ಟಳು. ದೇವಿಯ ಬಲಭಾಗದಿಂದ ನೀವು ಅರ್ಪಿಸಿದ ಹುವ್ವು ಕೆಳಕ್ಕೆ ಬಿತ್ತು” ಎಂದು ಹೇಳಿ ಆ ಹುವ್ವನ್ನು ತೆಗೆದು ಮಂತ್ರಾಕ್ಷತೆ ಸಹಿತ “ಸುಮಂಗಲೀರಿಯಂ…” ಇತ್ಯಾದಿಯಾಗಿ ಆಶೀರ್ವದಿಸಿ ಲಕ್ಷ್ಮೀದೇವಮ್ಮನವರಿಗೆ ಕೊಟ್ಟರು.
ಮನೆಗೆ ಬಂದಮೇಲೆ ವೆಂಕಟರಮಣ ತಾಯಿಯನ್ನು ಕುರಿತು ”ಅಕ್ಕ, ನೀನು ಊಟಕ್ಕೆ ಕೂತುಕೊ. ನಾನು ಮಗುಟ ಉಟ್ಟುಕೊಂಡು ನಿನಗೆ ಬಡಿಸುತ್ತೇನೆ” ಎಂದು ಹೇಳಿದ್ದನ್ನು ಕೇಳಿ ತಾಯಿ ಸಂತೋಷಪಟ್ಟುಕೊಂಡು ಒಪ್ಪಿದಳು. ತಾಯಿ ಊಟ ಮಾಡುತ್ತಿರುವಾಗ್ಯೆ-
ವೆಂಕಟರಮಣ- ಅಕ್ಕ, ಈ ಸಾರಿ ನನಗೆ ಸಿವಿಲ್ ಸರ್ವಿಸ್ ಪ್ಯಾಸಾದರೆ- ನಾನೇನೋ ಬಹಳ ಕಷ್ಟಪಟ್ಟು ವ್ಯಾಸಂಗ ಮಾಡಿದ್ದೇನೆ, ಪ್ಯಾಸಾದರೆ- ನನ್ನ ಮೊದಲನೇ ತಿಂಗಳ ಸಂಬಳದಲ್ಲಿ ನಿನಗೆ ಕಲಾಪತ್ತಿನ ಧರ್ಮಾವರದ ಸೀರೆ ತಂದುಕೊಡುತ್ತೇನೆ. ನೀನೇನೂ ಯೋಚನೆ ಮಾಡಬೇಡಮ್ಮ-ಮಾತೃಪೂಜೆ ಯಾವ ರೀತಿ ಮಾಡುತ್ತೇನೋ ನಿನಗೇ ಗೊತ್ತಾಗುತ್ತೆ.
ಲಕ್ಷ್ಮೀದೇವಮ್ಮ- ಯೋಚನೆ ಮಾಡಬೇಡವಪ್ಪ- ದೇವರಿದ್ದಾನೆ.
ವೆಂಕಟರಮಣ- ಇನ್ನೊಂದು ಒಬ್ಬಟ್ಟು ಹಾಕುತ್ತೇನೆ.
ಲಕ್ಷ್ಮೀದೇವಮ್ಮ- ಬೇಡ! ಬೇಡ! ಇದೇನೋ ಇದು, ಬೇಡ ಬೇಡ ಎಂದರೂ ಹಾಕಿಬಿಟ್ಟೆ!
ತಾಯಿಮಕ್ಕಳು ಒಬ್ಬರ ಮುಖ ಒಬ್ಬರು ನೋಡಿ ನಕ್ಕರು.
ಲಕ್ಷ್ಮೀದೇವಮ್ಮ- ನೀನು ಇನ್ನು ಹೋಗು. ಕಮಲು ಕೈಯಲ್ಲಿ ನಾನು ಮಜ್ಜಿಗೆ ಹಾಕಿಸಿಕೊಳ್ಳುತ್ತೇನೆ.
ವೆಂಕಟರಮಣ ತನ್ನ ಚಿಕ್ಕಮನೆಗೆ ಹೋಗಿ ಪೆಟ್ಟಿಗೆ ಬಾಗಿಲು ತೆಗೆದೊಡನೆ ಪುಸ್ತಕ ಕಣ್ಣಿಗೆ ಬಿತ್ತು. ಹರ್ಷದಿಂದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಬಂದು- “ಅಯ್ಯ! ವಿ.ಪಿ. ಯಾರು ತೆಗೆದುಕೊಂಡರು? ದುಡ್ಡು ಎಲ್ಲಿತ್ತು?” -ಎಂದು ಕೇಳಿದ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಶಾಸ್ತ್ರಿಗಳು- ನನಿಗೆ ಗೊತ್ತಿಲ್ಲ.
ವೆಂಕಟರಮಣ- ಕಮಲು, ವಿ.ಪಿ.ಗೆ ದುಡ್ಡು ಯಾರು ಕೊಟ್ಟರು?
ಕಮಲು- ನಂಗೊತ್ತಿಲ್ಲ.
ವೆಂಕಟರಮಣ- ಅಕ್ಕ-ನೀನು ಕೊಟ್ಟೆಯಾ?
ಲಕ್ಷ್ಮೀದೇವಮ್ಮ- ಹುಂ.
ವೆಂಕಟರಮಣ- ನೀನು ಸೀರೆ ಬೇಡವೆಂದು ಹೇಳಿದ್ದು ಇದಕ್ಕೋಸ್ಕರವೆ?
ಲಕ್ಷ್ಮೀದೇವಮ್ಮ- ಹೌದಪ್ಪ.
ವೆಂಕಟರಮಣನಿಗೆ ಏನೂ ತೋಚಲಿಲ್ಲ. ತಾಯಿಯ ಬಳಿ ಹೋಗಿ ತಾಯಿಯ ಕೈ ಹಿಡಿದುಕೊಂಡು ಕುಳಿತೊಡನೆ ತಡೆಯಲಾರದಷ್ಟು ಅಳು ಬಂತು. ಹಾಗೆಯೇ ಸ್ವಲ್ಪ ಹೊತ್ತು ಕುಳಿತಿದ್ದು ರೂಮಿಗೆ ಹಿಂದಕ್ಕೆ ಬಂದು ಈ ಪ್ರೇಮದ ಋಣವನ್ನು ಯಾವ ರೀತಿಯಲ್ಲಿ ತೀರಿಸುವುದೋ ಎಂದು ಯೋಚನೆ ಮಾಡುತ್ತಾ ಇದ್ದ. ಹಾಗೆಯೇ ನಿದ್ದೆ ಹೋದ.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಇದ್ದರೂ ಇರಬಹುದು’, ಕಾವ್ಯಾಲಯ, ಮೈಸೂರು, 1946)

ಎಸ್.ಜಿ. ಶಾಸ್ತ್ರಿಗಳ ‘ಹಬ್ಬದ ಉಡುಗೊರೆ’
ಪಂಜೆ ಮಂಗೇಶರಾಯರ ಸಣ್ಣಕತೆಗಳು ಪ್ರಕಟವಾಗಲು ಆರಂಭವಾದದ್ದು 1900ರಿಂದ. ಅನಂತರ 1911ರಿಂದ ಶ್ರೀನಿವಾಸರ ಕತೆಗಳೂ, 1913ರಿಂದ ಕೆರೂರು ವಾಸುದೇವಾಚಾರ್ಯರ ಕತೆಗಳೂ ಪ್ರಕಟವಾಗತೊಡಗಿದವು. ಇದೇ ಸುಮಾರಿಗೆ ಕನ್ನಡದಲ್ಲಿ ಸಣ್ಣ ಕತೆಗಳನ್ನು ಬರೆಯಲು ಆರಂಭಿಸಿದ ಇನ್ನೊಬ್ಬರು ದಿ. ಎಸ್.ಜಿ. ಶಾಸ್ತ್ರಿಗಳು (ಸೋಸಲೆ ಗರಳಪುರಿ ಶಾಸ್ತ್ರಿ: 1890-1955). ಇವರ “ಇದ್ದರೂ ಇರಬಹುದು” (1946) ಮತ್ತು “ಪರಪುರುಷ ಮತ್ತು ಇತರ ಕತೆಗಳು” (1954) ಎಂಬ ಎರಡು ಕಥಾಸಂಕಲನಗಳು ಪ್ರಕಟವಾಗಿವೆ. ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ನಾಲ್ಕು ಕತೆಗಳು ಸೇರಿವೆ. ಮೊದಲ ಸಂಕಲನದ ಕತೆಗಳು ಬಹಳ ಹಿಂದೆ ಬರೆದುವು. ಹೆಚ್ಚಿನವು ಶ್ರೀನಿವಾಸರ ಮಹತ್ವದ ಕತೆಗಳು ಪ್ರಕಟವಾದದ್ದಕ್ಕಿಂತ ಮುಂಚಿನವು. ಎರಡನೆಯ ಸಂಕಲನದಲ್ಲಿಯ ಕತೆಗಳು ಈಚಿನವು, 1953-54ರ ಸುಮಾರಿಗೆ ಬರೆದುವು. ಎರಡೂ ಸಂಕಲನಗಳಲ್ಲಿ ಸೇರಿ ಬಹುಶಃ ಶಾಸ್ತ್ರಿಗಳು ಬರೆದ ಎಲ್ಲಾ ಕತೆಗಳೂ ಪುಸ್ತಕರೂಪದಲ್ಲಿ ಪ್ರಕಟವಾದಂತಾಗಿದೆ.
ಶಾಸ್ತ್ರಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ಲಂಡನ್ನಿನಲ್ಲಿದ್ದಾಗ “ಇದ್ದರೂ ಇರಬಹುದು” ಸಂಕಲನದ ಮೊದಲ ಎರಡು ಕತೆಗಳನ್ನು 1913ರಲ್ಲಿಯೂ, ಇನ್ನೆರಡನ್ನು 1916ರಲ್ಲಿಯೂ ಬರೆದುದಾಗಿ ಅವರ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇವುಗಳಲ್ಲಿ ‘ಹಬ್ಬದ ಉಡುಗೊರೆ’, ‘ವಾರದ ಹುಡುಗ’ ಈ ಕತೆಗಳು ‘ಪ್ರಬುದ್ಧ ಕರ್ಣಾಟಕ’ದ ಆರಂಭದ ಸಂಚಿಕೆಗಳಲ್ಲಿ ಪ್ರಕಟವಾದುವೆಂದೂ, ಆಗ ತಕ್ಷಣ ಓದುಗರ ಪ್ರೀತಿ-ವಿಶ್ವಾಸಗಳನ್ನು ಗಳಿಸಿದವೆಂದೂ ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಆನಂದರು ಸ್ಮರಿಸಿಕೊಂಡಿದ್ದಾರೆ. ಆ ಕಾಲದಲ್ಲಿ ಈ ಕತೆಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದವೆಂದರೆ, “ಓದುಗರಿಗೆ ನೂತನಾನಂದವನ್ನು ಒದಗಿಸಿದುದು ಮಾತ್ರವೇ ಅಲ್ಲ; ಇತರ ಪತ್ರಿಕೆಗಳಲ್ಲಿ ಹಲವಾರು ‘ವಾರದ ಹುಡುಗ’ದ ಅನುಕರಣ, ಅನುರಣನಗಳು ಪ್ರಕಟವಾದವು” ಎಂದಿದ್ದಾರೆ ಅ.ನ.ಕೃ. (ಕನ್ನಡ ಕುಲರಸಿಕರು, ಪುಟ: 149). ಕನ್ನಡ ಸಣ್ಣಕತೆಯ ಆರಂಭಕಾಲದಲ್ಲಿ ಈ ಕತೆಗಳು ತೀರ ಹೊಸಬಗೆಯವಾಗಿ, ಇತರರ ಕತೆಗಳಿಗಿಂತ ಭಿನ್ನವಾಗಿ ಕಾಣಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಅಲ್ಲದೆ ಅಧಿಕೃತವಾಗಿ ಕತೆಗಾರರೆಂದು ಇನ್ನೂ ಯಾರೂ ಗುರುತಿಸಲ್ಪಡದಿದ್ದ ಕಾಲದಲ್ಲಿ ಒಳ್ಳೆಯ ಕತೆಗಳು ವೈಯಕ್ತಿಕವಾಗಿ ಪ್ರಭಾವ ಬೀರಿದ್ದೂ ಸಹಜವಾಗಿಯೇ ಇದೆ. ಆದರೂ ಶಾಸ್ತ್ರಿಗಳ ಕತೆಗಳು ಇಲ್ಲಿಯವರೆಗೂ ವಿಮರ್ಶಕರ ಗಮನವನ್ನು ಅಷ್ಟಾಗಿ ಸೆಳೆದಿಲ್ಲವೆಂದೇ ಹೇಳಬೇಕು. ಯಾವ ಮಹತ್ವದ ಆಂಥಾಲಜಿಗಳಲ್ಲೂ ಅವರ ಕತೆಗಳು ಸೇರಿಲ್ಲ. ಸಾಮಾನ್ಯ ಓದುಗರ ದೃಷ್ಟಿಯಿಂದ ನೋಡುವದಾದರೆ, ಪ್ರಕಟವಾಗಿ 34 ವರ್ಷಗಳಾಗಿದ್ದರೂ ”ಇದ್ದರೂ ಇರಬಹುದು” ಸಂಕಲನದ ಮೊದಲ ಮುದ್ರಣದ ಪ್ರತಿಗಳು ಇನ್ನೂ ಮುಗಿದಿಲ್ಲ. (1946ರ ಮುಂಚೆಯೇ ಶಾಸ್ತ್ರಿಗಳ ಎರಡು ಕತೆಗಳನ್ನು ಒಳಗೊಂಡ ಸಂಕಲನವೊಂದು “ಇದ್ದರೂ ಇರಬಹುದು” ಎಂಬ ಹೆಸರಿನಲ್ಲಿಯೇ ಪ್ರಕಟವಾಗಿತ್ತೆಂದು ಕೂಡಲಿ ಚಿದಂಬರಂ ಬರೆದಿದ್ದಾರೆ.)
”ಇದ್ದರೂ ಇರಬಹುದು” ಸಂಕಲನದ ಹೆಚ್ಚಿನ ಕಥೆಗಳೆಲ್ಲ ಅದರ ಪ್ರಕಾಶಕರಾದ ಕೂಡಲಿ ಚಿದಂಬರಂ ಅವರು ಗುರುತಿಸಿರುವಂತೆ “ಸಂಸಾರಸಂಹಿತೆಯ ಯಾವುದೋ ಒಂದು ಸೂತ್ರವನ್ನು ಅವಲಂಬಿಸಿ ನೆಯ್ದವು”. ಕೌಟುಂಬಿಕ ಜೀವನದಲ್ಲಿ ಉದ್ಭವಿಸುವ ಬಿಕ್ಕಟ್ಟುಗಳನ್ನು ಈ ಕತೆಗಳಲ್ಲಿ ಚಿತ್ರಿಸಲಾಗಿದೆಯಾದರೂ ಒಂದಲ್ಲ ಒಂದು ಕಾರಣದಿಂದ ಈ ಬಿಕ್ಕಟ್ಟುಗಳು ಸುಲಭವಾಗಿ ಪರಿಹಾರಗೊಂಡು ಎಲ್ಲವೂ ಸುಖಮಯವಾಗಿ ಕೊನೆಗೊಳ್ಳುತ್ತದೆ. ಮತ್ತು ಈ ಮುಕ್ತಾಯದ ಕ್ಷಣಗಳು ಹೆಚ್ಚಾಗಿ ಪಾತ್ರಗಳ ಭಾವನಾತ್ಮಕ ಪರಿವರ್ತನೆಯ ಮೇಲೆ ಅವಲಂಬಿಸಿವೆ. ಇದರಿಂದಾಗಿ ಬಿಕ್ಕಟ್ಟುಗಳು ಸರಿಯಾಗಿ ಗಟ್ಟಿಗೆ ಹತ್ತುವದಿಲ್ಲ. ಬದಲಾಗಿ, ಆ ಮೂಲಕ ಸಂಸಾರಸಂಹಿತೆಯ ಸೂತ್ರಗಳನ್ನು ಎತ್ತಿ ತೋರಿಸುವದರ ಮೇಲೆ ಒತ್ತು ಬೀಳುತ್ತದೆ.
‘ಹಬ್ಬದ ಉಡುಗೊರೆ’ ಶಾಸ್ತ್ರಿಗಳ ಒಂದು ಪ್ರಾತಿನಿಧಿಕ ಕಥೆ ಎನ್ನಬಹುದು. ಇಲ್ಲಿ ಚಿತ್ರಿತವಾಗಿರುವದೂ ಕೂಡ ಒಂದು ಸಾಂಸಾರಿಕ ಚಿತ್ರವೇ. ತಂದೆ-ತಾಯಿ, ಮಗ-ಮಗಳು -ಹೀಗೆ ನಾಲ್ಕು ಜನರ ಅನ್ಯೋನ್ಯವಾದ ಒಂದು ಚಿಕ್ಕ ಸಂಸಾರ. ಬಡತನವೇನೋ ಇದೆ. ಆದರೆ ಅದೊಂದು ಸಮಸ್ಯೆಯೇ ಎನಿಸದಂತೆ ನಾಲ್ಕು ಜನರೂ ಅದನ್ನು ಒಪ್ಪಿಕೊಂಡು, ತಮ್ಮ ಪರಸ್ಪರ ಪ್ರೇಮ-ಔದಾರ್ಯ-ಹೃದಯವಂತಿಕೆಗಳಿಂದ ಅದನ್ನು ಮರೆಸಿಬಿಟ್ಟಿದ್ದಾರೆ. ಆದರೆ ಬಡತನವೇ ಕತೆಯ ಬಿಕ್ಕಟ್ಟಿನ ಉಗಮಸ್ಥಾನವಾಗುತ್ತದೆ. ಈ ಬಡತನದ ಹಿನ್ನೆಲೆಯಲ್ಲಿ ಇಲ್ಲಿಯ ಪಾತ್ರಗಳು ಪರಸ್ಪರ ಪ್ರೀತಿಗಾಗಿ ತಮ್ಮ ಸೀಮಿತ ಅವಕಾಶದಲ್ಲಿಯೇ ತೋರಿಸುವ ಔದಾರ್ಯ-ದೊಡ್ಡತನಗಳು ಸೌಮ್ಯ ರೀತಿಯಲ್ಲಿ ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಸೋದರ-ಸೋದರಿಯರ ನಡುವೆ, ಗಂಡ-ಹೆಂಡತಿಯ ನಡುವೆ, ತಾಯಿ-ಮಗನ ನಡುವೆ -ಹೀಗೆ ಹಲವು ಮುಖವಾಗಿ ಹರಿಯುವ ಪ್ರೀತಿ ವಿಶ್ವಾಸಗಳು ಇಡೀ ಕತೆಗೆ ಒಂದು ಬಗೆಯ ಭಾವನಾತ್ಮಕತೆಯ ಬಣ್ಣ ಕೊಟ್ಟಿವೆ. ಆದರೆ ಇದರಲ್ಲಿ ಅಸಹಜವಾದುದೇನೂ ಇಲ್ಲ. ಕೊನೆಯಲ್ಲಿ ಬರುವ ತಾಯಿಯ ತ್ಯಾಗದ ಪ್ರಸಂಗವಂತೂ ತನ್ನ ನಿರಾಡಂಬರತೆಯಿಂದಾಗಿ ಇನ್ನಷ್ಟು ತೀವ್ರವಾಗಿ ತಟ್ಟುತ್ತದೆ. ಈ ತ್ಯಾಗ ತನ್ನಷ್ಟಕ್ಕೆ ಬಹಳ ದೊಡ್ಡದೇನೂ ಅಲ್ಲ. ಆದರೆ ತಾಯಿ ಲಕ್ಷ್ಮೀದೇವಮ್ಮನಲ್ಲಿ ಅದು ಸಂಸ್ಕಾರಜನ್ಯವೆಂಬಂತೆ ಸಹಜವಾಗಿ ವ್ಯಕ್ತವಾಗಿರುವ ರೀತಿ ಮಹತ್ವದ್ದಾಗಿದೆ. ಸಂಸಾರದ ಸುಖ-ಸಂತೋಷಗಳು ಇಂಥ ಚಿಕ್ಕ-ಪುಟ್ಟ ಹೊಂದಾಣಿಕೆಗಳ ಮೇಲೆಯೇ ನಿರ್ಭರವಾಗಿರುತ್ತವೆಂದು ಕತೆಗಾರರಿಗೆ ಇಲ್ಲಿ ತೋರಿಸಬೇಕಾಗಿದೆ. ತಾಯಿಯ ತ್ಯಾಗಕ್ಕೆ ಮಗನ ಪ್ರತಿಕ್ರಿಯೆಯಲ್ಲಿ ಭಾವನಾವಶತೆಯ ಬಣ್ಣ ಒಂದಿಷ್ಟು ಹೆಚ್ಚಾಯಿತೇನೋ ಎನಿಸಿದರೂ ಅವನಂಥ ಭಾವಕ ಮಗನಿಗೆ ಆ ಪ್ರಸಂಗದಲ್ಲಿ ಅದು ಅಸಹಜವೆಂದೇನೂ ಅನಿಸುವುದಿಲ್ಲ.
ಈ ಕತೆಗೆ ಓ. ಹೆನ್ರಿಯ ಸುಪ್ರಸಿದ್ಧ ಕತೆ ‘The Gift of the Magi’ ಪ್ರೇರಣೆ ನೀಡಿರಬಹುದಾದ ಸಾಧ್ಯತೆ ಬಹಳಷ್ಟಿದೆ. ಕತೆಯ ಹೆಸರಿನಲ್ಲೂ ಈ ಪ್ರೇರಣೆಯ ಸೂಚನೆ ಇದೆ. ಆದರೆ ಎರಡೂ ಕತೆಗಳ ಹಿಂದಿನ ಮನೋಭಾವದಲ್ಲಿ ಬಹಳಷ್ಟು ಅಂತರವಿದೆ. ಓ. ಹೆನ್ರಿಯ ಕತೆಯಲ್ಲಿ ಬಡವರಾದ ಗಂಡ-ಹೆಂಡತಿಯರಿಬ್ಬರು ವೈಯಕ್ತಿಕವಾಗಿ ತಮತಮಗೆ ಅಮೂಲ್ಯವಾದುದನ್ನು ತ್ಯಾಗಮಾಡಿ ಪರಸ್ಪರರಿಗಾಗಿ ಉಡುಗೊರೆಗಳನ್ನು ತಂದರೂ ಅವು ಇಬ್ಬರಿಗೂ ನಿರುಪಯುಕ್ತವಾಗಿ ಪರಿಣಮಿಸುವ ವಿಷಾದಕರ ಸನ್ನಿವೇಶವಿದೆ. ಆದರೆ ಈ ವಿಷಾದದಲ್ಲಿಯೇ ಅವರ ಅನ್ಯೋನ್ಯ ಪ್ರೀತಿ ಇನ್ನಷ್ಟು ಸ್ಪುಟವಾಗಿ ಪ್ರಕಟವಾಗುತ್ತದೆ ಮತ್ತು ಈ ವಿಷಾದವೇ ಕತೆಯ ಪರಿಣಾಮವನ್ನು ಆಳವಾಗಿಸುತ್ತದೆ. ‘ಹಬ್ಬದ ಉಡುಗೊರೆ’ಯ ಪರಿಣಾಮ ಇಷ್ಟು ಆಳವಾಗಿಲ್ಲ. ಶಾಸ್ತ್ರಿಗಳಿಗೆ ಇಂಥ ವಿಷಾದದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ಲಕ್ಷ್ಮೀದೇವಮ್ಮ ಗೌರೀಹಬ್ಬಕ್ಕೆ ಧರ್ಮಾವರದ ಸೀರೆ ಕೊಳ್ಳಬೇಕೆಂದು ಬಹಳ ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದಾಳೆ. ಅದಕ್ಕಾಗಿ ಆಕೆಗೆ ತವರಿನಿಂದ ಹಣ ಬಂದಿದೆ. ಶಾಸ್ತ್ರಿಗಳಿಗೆ ಮಗನ ಪರೀಕ್ಷೆಗೆ ಅತ್ಯಗತ್ಯವಾಗಿ ಬೇಕಾದ ಪುಸ್ತಕವನ್ನು ಪೋಸ್ಟಿನಿಂದ ಬಿಡಿಸಿಕೊಳ್ಳಲು ಹಣ ಇಲ್ಲ. ಆದರೂ ಹೆಂಡತಿಯ ಬಹುದಿನಗಳ ಆಸೆ ಈಡೇರಲೆಂದು ಆಕೆಗೆ ಐದು ರೂಪಾಯಿ ಕೂಡಿಸಿಕೊಡುತ್ತಾರೆ. ಒಂದೊಂದು ಆಣೆಯ ಲೆಕ್ಕವೂ ಮಹತ್ವದ್ದಾಗಿರುವ ಮನೆಯಲ್ಲಿ ಇವೆಲ್ಲ ದೊಡ್ಡ ಮೊತ್ತಗಳೇ. ಆದರೆ ಲಕ್ಷ್ಮೀದೇವಮ್ಮ ತನ್ನ ಆಸೆಯನ್ನು ಬಿಟ್ಟುಕೊಟ್ಟು, ಅದೇ ಹಣದಿಂದ ಮಗನಿಗೆ ಪುಸ್ತಕ ಕೊಡಿಸುವ ಒಂದು ಸಣ್ಣ ವಿಷಯ ಎಂಥ ಅನ್ಯೋನ್ಯವಾದ ಪ್ರೇಮಕ್ಕೆ, ಸುಖಕ್ಕೆ ಕಾರಣವಾಗುತ್ತದೆ! ಸಂಸಾರವನ್ನು ಸುಖಮಯಗೊಳಿಸಬಲ್ಲ ಇಂಥ ಶಕ್ತಿಗಳನ್ನು ಎತ್ತಿ ತೋರಿಸುವದೇ ಶಾಸ್ತ್ರಿಗಳ ಉದ್ದೇಶವಾಗಿದೆ. ‘ಹಾಗಲಕಾಯಿ ಮತ್ತು ತಾಳೆಹೂವು’, ‘ಕಿಟ್ಟು ಮತ್ತು ಲೀಲಾ’, ‘ರಂಗಾಚಾರಿ’, ‘ತುಂಟ ಮರಿ’ ಮೊದಲಾದ ಅವರ ಇತರ ಕತೆಗಳ ಹಿಂದಿನ ಉದ್ದೇಶವೂ ಇಂಥ ಒಂದೊಂದು ಪಾಠ ಕಲಿಸುವದೇ ಆಗಿದೆ. ‘ಪರಪುರುಷ’ ಒಂದೇ ಇದಕ್ಕೆ ಅಪವಾದವಾಗಿರುವ ಕತೆ.
‘ಹಬ್ಬದ ಉಡುಗೊರೆ’ಯ ನಿರೂಪಣಾ ತಂತ್ರದಲ್ಲಿ ಇನ್ನೂ ಅಷ್ಟು ಕೈ ಪಳಗಿಲ್ಲವೆಂದೇ ಹೇಳಬೇಕು. ಸ್ವಲ್ಪ ಹೆಚ್ಚೇ ಎನ್ನುವಂತೆ ಉಪಯೋಗಿಸಲಾಗಿರುವ ಸಂಭಾಷಣೆಯ ತಂತ್ರ ಕೆಲವು ಕಡೆ ಅಷ್ಟು ಸಹಜವೆನಿಸುವದಿಲ್ಲ. ಆರಂಭದ ಕಮಲ-ವೆಂಕಟರಮಣರ ಸಂಭಾಷಣೆಯಲ್ಲಿ ಬಂದಿರುವ ಕತೆಯ ಹಿನ್ನೆಲೆಗೆ ಅವಶ್ಯವಾದ ಅನೇಕ ಸಂಗತಿಗಳನ್ನು ಲೇಖಕರು ನೇರ ನಿರೂಪಣೆಯಲ್ಲಿ ಹೆಚ್ಚು ಸಹಜವಾಗಿ, ಪರಿಣಾಮಕಾರಿಯಾಗಿ ಹೇಳಬಹುದಾಗಿತ್ತು. ವೆಂಕಟರಮಣನಿಗೂ ಗೊತ್ತಿರಬಹುದಾದ ಮನೆಯ ಸಂಗತಿಗಳನ್ನು ಕಮಲಳ ಬಾಯಿಂದ ಹೇಳಿಸುವ ಅಗತ್ಯ ಇರಲಿಲ್ಲ. ಹಾಗೆಯೇ, ಲಕ್ಷ್ಮೀದೇವಮ್ಮನ ತ್ಯಾಗವನ್ನು ನಿರೂಪಿಸುವಾಗ ಲೇಖಕರು ತೋರಿರುವ ಸಂಯಮ ವೆಂಕಟರಮಣನ ಪ್ರತಿಕ್ರಿಯೆಯಲ್ಲೂ ಕಂಡಿದ್ದರೆ ಕತೆಯ ಧ್ವನಿಶಕ್ತಿ ಇನ್ನಷ್ಟು ಹೆಚ್ಚುತ್ತಿತ್ತು.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)