ಗಾಜಾದಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಆರ್‌ಡಬ್ಲ್ಯುಎ) ನಡೆಸುತ್ತಿರುವ ಕ್ಲಿನಿಕ್‌ಗಳಲ್ಲಿ ತಪಾಸಣೆಗೊಳಗಾಗಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ಸಂಸ್ಥೆಯು ಮಂಗಳವಾರ ತಿಳಿಸಿದೆ.
‘‘ನಾಲ್ಕು ತಿಂಗಳ ಹಿಂದೆ ಗಾಝಾದ ಮೇಲಿನ ಮುತ್ತಿಗೆಯನ್ನು ಇಸ್ರೇಲ್ ಸೈನಿಕರು ಬಿಗಿಗೊಳಿಸಿದ ಬಳಿಕ, ಗಾಜಾದಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿರುವುದನ್ನು ನಮ್ಮ ಆರೋಗ್ಯ ತಂಡಗಳು ಪತ್ತೆಹಚ್ಚಿವೆ’’ ಎಂದು ಯುಎನ್‌ಆರ್‌ಡಬ್ಲ್ಯುಎಯ ಸಾರ್ವಜನಿಕ ಸಂಪರ್ಕಗಳ ನಿರ್ದೇಶಕಿ ಜೂಲಿಯಟ್ ಟೌಮ ಹೇಳಿದರು.
ಅವರು ಜೋರ್ಡಾನ್‌ನ ಅಮ್ಮಾನ್‌ನಿಂದ ವಿಡಿಯೋ ಲಿಂಕ್ ಮೂಲಕ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ
2024ರ ಜನವರಿಯ ಬಳಿಕ, ಗಾಜಾದಲ್ಲಿರುವ ತನ್ನ ಐದು ಕ್ಲಿನಿಕ್ ಗಳಲ್ಲಿ, ಐದು ವರ್ಷಕ್ಕಿಂತ ಕೆಳಗಿನ 2,40,000ಕ್ಕೂ ಅಧಿಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜೂಲಿಯಟ್ ತಿಳಿಸಿದರು. ಯುದ್ಧಕ್ಕಿಂತ ಮೊದಲು, ಗಾಜಾಪಟ್ಟಿಯಲ್ಲಿ ತೀವ್ರ ಅಪೌಷ್ಟಿಕತೆ ಅಪರೂಪವಾಗಿತ್ತು ಎಂದು ಅವರು ಹೇಳಿದರು.
‘‘ಹಿಂದೆ, ಇಂಥ ಅಪೌಷ್ಟಿಕತೆಯ ಪ್ರಕರಣಗಳನ್ನು ತಾನು ಪಠ್ಯಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ಮಾತ್ರ ನೋಡಿರುವುದಾಗಿ ನಾವು ಮಾತನಾಡಿದ ಓರ್ವ ನರ್ಸ್ ಹೇಳಿದ್ದಾರೆ. ಔಷಧ, ಪೌಷ್ಟಿಕ ಆಹರ, ಸ್ವಚ್ಛತಾ ಸಲಕರಣೆಗಳು, ಇಂಧನ ಎಲ್ಲವೂ ಕ್ಷಿಪ್ರವಾಗಿ ಮುಗಿಯುತ್ತಿದೆ’’ ಎಂದು ಅವರು ತಿಳಿಸಿದರು.
ಗಾಜಾದ ಮೇಲಿನ 11 ವಾರಗಳ ದಿಗ್ಬಂಧನವನ್ನು ಇಸ್ರೇಲ್ ಮೇ 19ರಂದು ತೆರವುಗೊಳಿಸಿದೆ. ಆ ಮೂಲಕ, ವಿಶ್ವಸಂಸ್ಥೆಯಿಂದ ಸೀಮಿತ ಪ್ರಮಾಣದ ಸರಬರಾಜುಗಳಿಗೆ ಅವಕಾಶ ನೀಡಿದೆ. ಆದರೆ, ಯುಎನ್‌ಆರ್‌ಡಬ್ಲ್ಯುಎ ಗಾಜಾಕ್ಕೆ ನೆರವು ತರುವುದನ್ನು ನಿಷೇಧಿಸಿದೆ.