ಭಾರತದ ಸರ್ಕಾರಿ ಬ್ಯಾಂಕ್‌ನಿಂದ 13,850 ಕೋಟಿ ರೂ. ಸಾಲ ಪಡೆದು, ವಂಚಿಸಿ, ದೇಶದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬೆಲ್ಜಿಯಂಗೆ ಭಾರತ ವಿನಂತಿಸಿದೆ ಎಂದು ವರದಿಯಾಗಿದೆ.
ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 13,850 ಕೋಟಿ ರೂ. ಸಾಲ ಮಾಡಿದ್ದಾರೆ. ಆದರೆ, ಸಾಲವನ್ನು ಮರುಪಾವತಿ ಮಾಡಿಲ್ಲ. ಅವರು 2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾರೆ. ಅವರ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.
“ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ ಆರಂಭದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚಿನ ಮಾಹಿತಿಯಂತೆ ಅವರು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಸೋಸಿಯೇಟೆಡ್ ಟೈಮ್ಸ್ ವರದಿ ಮಾಡಿದೆ. ಆದರೆ, ಭಾರತ ಸರ್ಕಾರ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಚೋಕ್ಸಿ ರಕ್ತ ಕ್ಯಾನ್ಸರ್‌ನಿಂದ ಬಳಲುತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಮೆಹುಲ್ ಚೋಕ್ಸಿ ಅವರು ಭಾರತದ ಮತ್ತೊಬ್ಬ ವಜ್ರದ ಉದ್ಯಮಿ, ವಂಚಕ ನೀರವ್ ಮೋದಿ ಅವರ ಸೋದರ ಸಂಬಂಧಿಯಾಗಿದ್ದಾರೆ. ನೀರವ್ ಮೋದಿ ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ. ವಂಚಿಸಿದ್ದು, ಅವರೂ ದೇಶಬಿಟ್ಟು ಪರಾರಿಯಾಗಿದ್ದಾರೆ. ಅತನನ್ನು ಲಂಡನ್ ಅಧಿಕಾರಿಗಳು ಬಂಧಿಸಿದ್ದು, ಲಂಡನ್ ಜೈಲಿನಲ್ಲಿ ಇರಿಸಲಾಗಿದೆ. ಆತನನ್ನೂ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.