14 ವರ್ಷದ ಬಾಲಕನೊಬ್ಬ ಏಕಾಂಗಿಯಾಗಿ ಬದುಕುತ್ತಿದ್ದ 91 ವರ್ಷದ ವೃದ್ದೆಯ ಮನೆಗೆ ನುಗ್ಗಿ, ಆಕೆಗೆ ಥಳಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಘಟನೆ ನಡೆದು ಆರು ತಿಂಗಳಾಗಿದ್ದು, ಆರಂಭದಲ್ಲಿ ಕೃತ್ಯ ಎಸಗಿದ್ದ ತಾನಲ್ಲವೆಂದು ಬಾಲಕ ವಾದಿಸಿದ್ದ. ಇದೀಗ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ಜೆಸ್ಸಿ ಸ್ಟೋನ್ ಎಂಬಾತ ರಾತ್ರಿ ವೇಳೆ ವೃದ್ದೆಯ ಮನೆಗೆ ನುಗ್ಗಿ, ಕೃತ್ಯ ಎಸಗಿದ್ದ. ಘಟನೆ ಬಗ್ಗೆ ವೃದ್ದೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ, ಆತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು.
ದೂರು ನೀಡಿದ್ದ ವೃದ್ದೆ, “ತಾನು ರಾತ್ರಿ ಮಲಗಿದ್ದಾಗ, ಮನೆಯೊಳಗೆ ಬಾಲಕ ನುಗ್ಗಿದ್ದಾನೆ. ತನ್ನನ್ನು ಥಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಆರೋಪಿಸಿದ್ದಾರೆ. ಆರೋಪಿ ಬಾಲಕ ವೃದ್ದೆಯ ಮನೆ ಬಳಿ ಅಡ್ಡಾಡುವುದನ್ನು ನೆರೆಹೊರೆಯವರು ವಿಡಿಯೋ ಮಾಡಿದ್ದರು. ಅದನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದರು.
ಆದರೆ, ಕೃತ್ಯ ಎಸಗಿರುವುದು ತಾನಲ್ಲವೆಂದು ಬಾಲಕ ವಾದಿಸಿದ್ದ. ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ ಬಳಿಕ, ಆತನೇ ಕೃತ್ಯ ಎಸಗಿದ್ದಾನೆಂದು ವಿಧಿವಿಜ್ಞಾನ ಸಂಶೋಧಕರು ದೃಢಪಡಿಸಿದ್ದರು. ಬಳಿಕ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಶ್ಲೀಲ ವಿಡಿಯೋಗಳನ್ನು ನೋಡಿ, ಕೃತ್ಯ ಎಸಗಿದ್ದಾಗಿಯೂ ಹೇಳಿದ್ದಾನೆ ಎಂದು ಮರಿಯನ್ ಕೌಂಟಿ ಶ್ರಾಫ್ ಕಚೇರಿ ತಿಳಿಸಿದೆ.