ಪಾಕಿಸ್ತಾನದ ಲೂಚಿಸ್ತಾನ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ದಂಗೆಕೋರರು ಹೈಜಾಕ್ ಮಾಡಿದ್ದು, ಸದ್ಯ ಸುಮಾರು 150ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಹಾಗೆಯೇ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ದಂಗೆಕೋರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಂಡುಕೋರರೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಭದ್ರತಾ ಪಡೆಗಳು 155 ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ಸಮೀಪದ ಪಟ್ಟಣ ಮಾಚ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಲಾಗಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನ | ಬಂಡುಕೋರರಿಂದ ರೈಲು ‘ಹೈಜಾಕ್’; ಒತ್ತೆಯಾಳಾಗಿ 100 ಮಂದಿ ಸೆರೆ!
ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಬಂಡುಕೋರರು ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಗುಂಡಿನ ಚಕಮಕಿ ರಾತ್ರಿಯಿಡೀ ಮುಂದುವರೆದಿದೆ. ಸದ್ಯ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಎಷ್ಟು ಒತ್ತೆಯಾಳುಗಳು ಉಳಿದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪ್ರತ್ಯೇಕತಾವಾದಿ ಗುಂಪು ಬಿಎಲ್‌ಎ ಯಾವುದೇ ಒತ್ತೆಯಾಳುಗಳ ಸಾವುನೋವನ್ನು ನಿರಾಕರಿಸಿದ್ದಾರೆ. ಆದರೆ 30 ಯೋಧರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆದರೆ ಇದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಬಂಡುಕೋರರ ಗುಂಪೊಂದು ಕೆಲವು ಒತ್ತೆಯಾಳುಗಳನ್ನು ಪರ್ವತಗಳಿಗೆ ಕರೆದೊಯ್ದಿದ್ದು ಸದ್ಯ ಭದ್ರತಾ ಪಡೆಗಳು ಅವರನ್ನು ಬೆನ್ನಟ್ಟುತ್ತಿವೆ ಎಂದು ಹೇಳಲಾಗಿದೆ. ಇನ್ನು ಬಂಡುಕೋರರು ತಪ್ಪಿಸಿಕೊಳ್ಳಲು ಸಣ್ಣ ಗುಂಪುಗಳಾಗಿ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮಿಲಿಟರಿ ಪಡೆಗಳು ಸುರಂಗವನ್ನು ಸುತ್ತುವರೆದಿವೆ.
ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುವ ದಾರಿಯಲ್ಲಿ ಸಾಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಸುರಂಗವೊಂದರಲ್ಲಿ ಸಶಸ್ತ್ರ ದಾಳಿಕೋರರು ತಡೆದಿದ್ದಾರೆ. ರೈಲಿನ ಒಂಬತ್ತು ಬೋಗಿಗಳಲ್ಲಿ ಕನಿಷ್ಠ 400 ಪ್ರಯಾಣಿಕರಿದ್ದರು. ಒಂದು ತಿಂಗಳ ಕಾಲ ಈ ಮಾರ್ಗ ಮುಚ್ಚಲಾಗಿತ್ತು. ಆದರೆ ಇತ್ತೀಚೆಗೆ ಈ ರೈಲು ಮಾರ್ಗ ತೆರೆಯಲಾಗಿದೆ. ಇದೀಗ ಈ ಮಾರ್ಗದಲ್ಲಿಯೇ ರೈಲು ಹೈಜಾಕ್ ಆಗಿದೆ.
ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸುತ್ತಿರುವ ಪ್ರಬಲ ಪ್ರತ್ಯೇಕತಾವಾದಿ ಗುಂಪು ಬಿಎಲ್‌ಎ ಈ ಅಪಹರಣದ ಬಗ್ಗೆ ತಿಳಿಸಿದೆ. ಮೊದಲು ಹಳಿಗಳನ್ನು ಸ್ಫೋಟಿಸಿದ್ದು ಬಳಿಕ ಲೋಕೋಮೋಟಿವ್ ಚಾಲಕನನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.
