ಕುವೈತ್ ಮಂಗಾಫ್ ಸಿಟಿಯಲ್ಲಿನ ವಸತಿ ಕಾರ್ಮಿಕರ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರತೀಯರು ಸೇರಿ 41ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅವಘಡದಲ್ಲಿ 10ಕ್ಕೂ ಹೆಚ್ಚು ಭಾರತೀಯರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಲ್ಲಿ ಕೇರಳದವರು ಹೆಚ್ಚಿನವರು ಎಂದು ಹೇಳಲಾಗಿದೆ.
ಕಟ್ಟಡಕ್ಕೆ ಬೆಂಕಿಯು ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಸಂಭವಿಸಿದ್ದು, ಗಾಯಗೊಂಡ 43 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಕುವೈತ್ ಆರೋಗ್ಯ ಇಲಾಖೆ ತಿಳಿಸಿದೆ.
ಘಟನೆ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, “ ಕುವೈತ್ ಸಿಟಿಯಲ್ಲಿ ಬೆಂಕಿಯುಂಟಾಗಿರುವ ಸುದ್ದಿಯಿಂದ ತುಂಬಾ ಆಘಾತವಾಗಿದೆ. ಇಲ್ಲಿಯವರೆಗೂ 40 ಮಂದಿ ಮೃತಪಟ್ಟಿದ್ದು, 50 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಮ್ಮ ರಾಯಭಾರಿ ಘಟನಾ ಸ್ಥಳಕ್ಕೆ ತೆರಳಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
“ದುರಂತಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ. ನಮ್ಮ ರಾಯಭಾರ ಕಚೇರಿ ಎಲ್ಲ ರೀತಿಯ ನೆರವನ್ನು ನೀಡಲಿದೆ” ಎಂದು ಜೈಶಂಕರ್ ಹೇಳಿದ್ದಾರೆ.
ಬೆಂಕಿ ಘಟನೆಯಲ್ಲಿ ಕೆಲವು ಭಾರತೀಯ ಕಾರ್ಮಿಕರು ಸಿಲುಕಿರುವ ಕಾರಣ ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದು, ಎಲ್ಲ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದೆ.
ಬೆಂಕಿ ಸಂಭವಿಸಿದ ಕಟ್ಟಡವನ್ನು ವಸತಿ ಕಾರ್ಮಿಕರಿಗೆ ಬಳಸಲಾಗುತ್ತಿತ್ತು. ಹಲವು ಕಾರ್ಮಿಕರು ಕಟ್ಟಡದಲ್ಲಿ ವಾಸಿಸುತ್ತಿದ್ದರು. ಇಲ್ಲಿಯವರೆಗೂ ಹತ್ತಾರು ಮಂದಿಯನ್ನು ರಕ್ಷಿಸಲಾಗಿದೆ. ದುರಂತವೆಂದರೆ ಹಲವು ಮಂದಿ ಹೆಚ್ಚು ಹೊಗೆ ಆವರಿಸಿದ ಪರಿಣಾಮ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
