ಅಮೆರಿಕಕ್ಕೆ ರಫ್ತು ಮಾಡಲಾಗುವ ಭಾರತೀಯ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಲಾಗಿದ್ದು, ಆಗಸ್ಟ್ 27ರಿಂದ ಜಾರಿಗೆ ಬರಲಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ನೂತನ ಸುಂಕವು ಮುಖ್ಯವಾಗಿ ಉಡುಪು, ಚರ್ಮ ಮತ್ತು ರತ್ನಗಳು ಮತ್ತು ಆಭರಣಗಳಂತಹ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಹೆಚ್ಚುವರಿ ಆಮದು ಸುಂಕಗಳು ಅಮೆರಿಕಕ್ಕೆ ಮಾಡುವ 86 ಬಿಲಿಯನ್ ಡಾಲರ್ ಭಾರತೀಯ ರಫ್ತಿನ ಅರ್ಧಕ್ಕಿಂತ ಹೆಚ್ಚು ರಫ್ತಿನ ಮೇಲೆ ಪ್ರಭಾವ ಬೀರುತ್ತವೆ. ಆದರೆ ಔಷಧಗಳು, ಎಲೆಕ್ಟ್ರಾನಿಕ್ಸ್ ಸೇರಿದಂತೆ ಉಳಿದ ವಸ್ತುಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಸುಂಕ ಪರಿಣಾಮ: ಸೌರಾಷ್ಟ್ರದಲ್ಲಿ ಉದ್ಯೋಗ ಕಳೆದುಕೊಂಡ ಲಕ್ಷಕ್ಕೂ ಹೆಚ್ಚು ವಜ್ರ ಕಾರ್ಮಿಕರು
“ಆಗಸ್ಟ್ 27ರಿಂದ ಅಥವಾ ನಂತರ ಬಳಕೆಗಾಗಿ ನಮೂದಿಸಲಾದ ಅಥವಾ ಬಳಕೆಗಾಗಿ ಗೋದಾಮಿನಿಂದ ಹೊರತೆಗೆಯಲಾದ ಭಾರತದ ಉತ್ಪನ್ನಗಳಿಗೆ ನೂತನ ಸುಂಕ ಅನ್ವಯವಾಗುತ್ತದೆ” ಎಂದು ಯುಎಸ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಯುಎಸ್ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಸುಂಕ ಜಾರಿಯಲ್ಲಿದೆ. ರಷ್ಯಾದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ ಕಾರಣಕ್ಕೆ ಇನ್ನೂ ಶೇಕಡ 25ರಷ್ಟು ಸುಂಕ ದಂಡವನ್ನು ಅಮೆರಿಕ ವಿಧಿಸಿದೆ.
ಈಗಾಗಲೇ ಬಾಂಗ್ಲಾದೇಶ, ವಿಯೆಟ್ನಾಂ, ಶ್ರೀಲಂಕಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾದಂತಹ ಪ್ರಮುಖ ದೇಶಗಳ ಸರಕುಗಳ ಮೇಲೆ ಕಡಿಮೆ ಸುಂಕ ಇರುವ ಕಾರಣದಿಂದಾಗಿ ಭಾರತೀಯ ಸರಕುಗಳು ಯುಎಸ್‌ನಲ್ಲಿ ಮಾರುಕಟ್ಟೆ ಕಳೆದುಕೊಳ್ಳುತ್ತದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಜುಲೈನಲ್ಲಿ ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು ಶೇ. 19.94ರಷ್ಟು ಏರಿಕೆಯಾಗಿ 8.01 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದರೆ, ಆಮದು ಶೇ. 13.78ರಷ್ಟು ಹೆಚ್ಚಾಗಿ ಈ ತಿಂಗಳಲ್ಲಿ ಸುಮಾರು 4.55 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಹಣಕಾಸು ವರ್ಷ 2025ರಲ್ಲಿ, ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು 87 ಬಿಲಿಯನ್ ಡಾಲರ್ ಆಗಿತ್ತು.
