ಸುಮಾರು 60 ವರ್ಷದ ಅರ್ಜೆಂಟೀನಾದ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಅವರು ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಬ್ಯೂನಸ್ ಐರಿಸ್ ಪ್ರಾಂತ್ಯದ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಉಳಿಸಿದ್ದಾರೆ ಈ 60ರ ಮಹಿಳೆ.
18 ರಿಂದ 73 ರವರೆಗಿನ 34 ಸುಂದರಿಯರ ನಡುವೆ ಈ ಸ್ಪರ್ಧೆ ನಡೆದಿದ್ದು ಇದರಲ್ಲಿ ಅಲೆಜಾಂಡ್ರಾ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಲೆಜಾಂಡ್ರಾ ರೋಡ್ರಿಗಸ್ ಯಾರು?
ವಕೀಲೆ ಮತ್ತು ಪತ್ರಕರ್ತೆಯಾಗಿರುವ ಅಲೆಜಾಂಡ್ರಾ ರೋಡ್ರಿಗಸ್ ಅವರು ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲೆಜಾಂಡ್ರಾ ಕಾನೂನು ಅಧ್ಯಯನ ಮಾಡಿದ್ದು ಆಸ್ಪತ್ರೆಯ ಕಾನೂನು ಸಲಹೆಗಾರರಾದರು.
ಇದನ್ನು ಓದಿದ್ದೀರಾ? ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್
ಈ ಹಿಂದೆ ಮಿಸ್ ಯೂನಿವರ್ಸ್ ಸ್ಪರ್ಧೆಯು 18 ಮತ್ತು 28 ವರ್ಷ ವಯಸ್ಸಿನ ಸ್ಪರ್ಧಿಗಳಿಗೆ ಅವಕಾಶ ನೀಡುತ್ತಿತ್ತು. 2024 ರಿಂದ, ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಸ್ಪರ್ಧಿಸಬಹುದು ಎಂದು ಮಿಸ್ ಯೂನಿವರ್ಸ್ ಸಂಸ್ಥೆಯು 2023ರಲ್ಲಿ ಘೋಷಿಸಿದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ತನ್ನ ಗೆಲುವಿನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಲೆಜಾಂಡ್ರಾ ರೋಡ್ರಿಗಸ್ ಅವರು, “ಸೌಂದರ್ಯ ಸ್ಪರ್ಧೆಗಳಲ್ಲಿ ಈ ಹೊಸ ಮಾದರಿಯನ್ನು ಪ್ರತಿನಿಧಿಸಲು ನಾನು ರೋಮಾಂಚನಗೊಂಡಿದ್ದೇನೆ. ಇದರಲ್ಲಿ ಮಹಿಳೆಯರು ಕೇವಲ ದೈಹಿಕ ಸೌಂದರ್ಯವಲ್ಲ ಮೌಲ್ಯದ ಹೊಸ ಇತಿಹಾಸ ಬರೆಯುತ್ತಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಈ ಪೀಳಿಗೆಯ ಮೊದಲಿಗಳು ನಾನು” ಎಂದು ಹೇಳಿದ್ದಾರೆ.
ಮಿಸ್ ಯೂನಿವರ್ಸ್ ಅರ್ಜೆಂಟೀನಾಗೆ ಮುಂಬರುವ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲು ಅವರು ತಯಾರಿ ನಡೆಸುತ್ತಿದ್ದಾರೆ. ಈವೆಂಟ್ ಅನ್ನು ಮೇ 2024 ಕ್ಕೆ ನಿಗದಿಪಡಿಸಲಾಗಿದೆ.