ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ 5 ಅಂತಸ್ತಿನ ಕಟ್ಟಡವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಮಧ್ಯ ಜೋಹಾನ್ಸ್‌ಬರ್ಗ್‌ನ ಬಹುಮಹಡಿ ವಸತಿ ಕಟ್ಟಡದಲ್ಲಿ ಗುರುವಾರ(ಆಗಸ್ಟ್ 31) ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಇತ್ತೀಚಿನ ವರದಿಗಳಂತೆ 73 ಜನರು ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ತುರ್ತು ಸೇವೆಗಳ ನಿರ್ವಹಣಾ ಇಲಾಖೆ ತಿಳಿಸಿವೆ.
52ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆಯೆಂದು ತುರ್ತು ನಿರ್ವಾಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯನ್ನು ಬಹುಮಟ್ಟಿಗೆ ನಂದಿಸಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ. ಅಗ್ನಿಶಾಮಕ ದಳ ಹಾಗೂ ತುರ್ತು ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೆ.18ರಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆದ ಕೇಂದ್ರ
ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಕಟ್ಟಡದೊಳಗೆ ಇನ್ನಷ್ಟು ಮೃತದೇಹಗಳು ಸಿಲುಕಿರುವ ಸಾಧ್ಯತೆ ಇದೆ. ಇದು ಜೋಹಾನ್ಸ್‌ಬರ್ಗ್ ಕಳೆದ 20 ವರ್ಷದ ಅವಧಿಯಲ್ಲಿ ನಡೆದ ಅತಿದೊಡ್ಡ ದುರಂತವಾಗಿದೆ. ಬೆಂಕಿಗೆ ಕಾರಣ ಮತ್ತು ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ದುರಂತದಲ್ಲಿ 141 ಕುಟುಂಬಗಳು ಸಂತ್ರಸ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಟ್ಟಡದಲ್ಲಿ ಎಷ್ಟು ಜನರು ಇದ್ದರು ಎಂದು ತಕ್ಷಣವೇ ಹೇಳಲು ಸಾಧ್ಯವಿಲ್ಲ. ಅವರಲ್ಲಿ ಹಲವರು ವಿದೇಶಿ ಪ್ರಜೆಗಳು ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಳಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ನಿವಾಸಿಗಳು ಮಧ್ಯರಾತ್ರಿ ಬೆಂಕಿ ಕಾಯಿಸಿಕೊಳ್ಳುವಾಗ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.