ಫಿಲಿಪೈನ್ಸ್‌ನ ಮಧ್ಯ ಭಾಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ 69 ಮಂದಿ ಮೃತಪಟ್ಟು, 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 6.9 ರಿಕ್ಟರ್ ತೀವ್ರತೆಯ ಭೂಕಂಪನ ರಾತ್ರಿಯ 9:39ರ ಸಮಯದಲ್ಲಿ ಬೊಗೊ ದ್ವೀಪದ ಉತ್ತರದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಗರವು 90,000 ಜನಸಂಖ್ಯೆ ಹೊಂದಿದ್ದು, ಪ್ರವಾಸೋದ್ಯಮದಿಂದ ಹೆಚ್ಚು ಪ್ರಸಿದ್ಧಿ ಹೊಂದಿದೆ.
ಭೂಕಂಪನದ ಪರಿಣಾಮವಾಗಿ ಹಲವಾರು ಕಟ್ಟಡಗಳು ನೆಲಸಮವಾಗಿವೆ. ಬೊಗೊ ನಗರದಲ್ಲಿಯೇ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಅಪಾಯಕರ ಪ್ರದೇಶಗಳಲ್ಲಿ ಶೋಧ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ.
ಸೆನ್ ರೆಮಿಜಿಯೊ ಪಟ್ಟಣದಲ್ಲಿ ಆರು ಮಂದಿ ಮೃತಪಟ್ಟಿದ್ದು, ಮೂವರು ಕರಾವಳಿ ಭದ್ರತಾ ಸಿಬ್ಬಂದಿ, ಒಬ್ಬ ಅಗ್ನಿಶಾಮಕದಳದ ಸದಸ್ಯ ಹಾಗೂ ಒಂದು ಮಗು ಸೇರಿದ್ದಾರೆ ಎಂದು ಉಪ ನಗರಾಧ್ಯಕ್ಷ ಅಲ್ಫಿ ರೇನ್ಸ್ ತಿಳಿಸಿದ್ದಾರೆ.
ಈ ಭೂಕಂಪದಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಪಾಯದ ಮುನ್ಸೂಚನೆ ನೀಡಲಾಗಿತ್ತು. ಆದಾಗ್ಯೂ, ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರ ಸಂಸ್ಥೆ ನಂತರ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ಇದೇ ಸಂದರ್ಭದಲ್ಲಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲು ಅಗತ್ಯವಾಯಿತು. ದುರ್ಗಮ ಪ್ರದೇಶಗಳಲ್ಲಿ ಯಂತ್ರೋಪಕರಣಗಳ ನೆರವಿನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆದಿವೆ.
ಸಾವಿರಾರು ನಿವಾಸಿಗಳು ಭಯದಿಂದ ತಮ್ಮ ಮನೆಗಳಿಗೆ ಮರಳಲು ಹಿಂಜರಿಯುತ್ತಿದ್ದು, ರಾತ್ರಿಯಿಡೀ ತೆರೆದ ಹುಲ್ಲುಗಾವಲಿನಲ್ಲಿ ಕಳೆದಿದ್ದಾರೆ. ಸ್ಯಾನ್ ರೆಮಿಜಿಯೊದಲ್ಲಿ ನೀರಿನ ವ್ಯವಸ್ಥೆ ಹಾನಿಗೊಳಗಾಗಿದ್ದು, ನಮಗೆ ಆಹಾರ ಮತ್ತು ಶುದ್ಧ ಕುಡಿಯುವ ನೀರು ತುರ್ತಾಗಿ ಬೇಕಾಗಿದೆ,” ಎಂದು ಉಪಮೇಯರ್ ರೇನ್ಸ್ ಮನವಿ ಮಾಡಿದ್ದಾರೆ.
ಪೆಸಿಫಿಕ್ “ರಿಂಗ್ ಆಫ್ ಫೈರ್”ನಲ್ಲಿ(ಪೆಸಿಫಿಕ್ ಮಹಾಸಾಗರದ ಸುತ್ತಲಿರುವ ಜ್ವಾಲಾಮುಖಿ ಹಾಗೂ ಭೂಕಂಪಗಳು ಹೆಚ್ಚಾಗಿ ಸಂಭವಿಸುವ ಪ್ರದೇಶ) ಸ್ಥಿತವಾಗಿರುವ ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು-ಪೀಡಿತ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಆಗಾಗ್ಗೆ ಭೂಕಂಪ, ಜ್ವಾಲಾಮುಖಿ ಸ್ಫೋಟನಗಳು ಮತ್ತು ವರ್ಷಕ್ಕೆ ಸರಾಸರಿ 20 ಚಂಡಮಾರುತಗಳು ಮತ್ತು ಉಷ್ಣವಲಯದ ಬಿರುಗಾಳಿಗಳು ಸಂಭವಿಸುತ್ತವೆ.