ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಭೇಟಿಯ ಬೆನ್ನಲ್ಲೇ, ಅಮೆರಿಕದ ರಾಜಕೀಯ ವಲಯದಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ಆರ್‌ಎಸ್‌ಎಸ್ ಅಥವಾ ಅದರ ಅಂಗಸಂಸ್ಥೆಗಳ ನಂಟಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಯಾವುದೇ ರೀತಿಯ ರಾಜಕೀಯ ದೇಣಿಗೆಯನ್ನು (ಫಂಡ್ಸ್) ಸ್ವೀಕರಿಸದಿರಲು ಅಮೆರಿಕದ ಸುಮಾರು 90 ರಾಜಕಾರಣಿಗಳು ಅಧಿಕೃತವಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೆ, ರಾಜಕಾರಣಿಗಳ ಈ ದಿಢೀರ್ ನಿರ್ಧಾರಕ್ಕೆ ಅಮೆರಿಕದ ಪ್ರಮುಖ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಅಂಗವಾಗಿ ಆಗಸ್ಟ್ 29ರಂದು ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ‘ಯೂನಿವರ್ಸಲ್ ಒನೆನೆಸ್ ಸೆಲೆಬ್ರೇಷನ್’ ಸಮಾವೇಶ ಆಯೋಜಿಸಲಾಗಿತ್ತು. ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ (AHEAD) ವೇದಿಕೆ ಏರ್ಪಡಿಸಿದ್ದ ಈ ಸಮಾರಂಭದಲ್ಲಿ ಮೋಹನ್ ಭಾಗವತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವಿಶ್ವ ಏಕತೆ ಮತ್ತು ಸೌಹಾರ್ದತೆಯ ಕುರಿತು ಪ್ರಧಾನ ಭಾಷಣ ಮಾಡಿದ್ದರು.
ಭಾಗವತ್ ಅವರ ಈ ಭೇಟಿಯನ್ನು ವಿರೋಧಿಸಿ ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಆಕ್ಷನ್’ ಮತ್ತು ‘ಸೇಕ್ರೆಡ್ ಆಕ್ಟ್ಸ್’ (SACRED Acts) ಎಂಬ ಮಾನವ ಹಕ್ಕುಗಳ ವಕಾಲತ್ತು ಸಂಸ್ಥೆಗಳು ಆಗಸ್ಟ್ 31ರಂದು ಈ ಪ್ರತಿಜ್ಞಾ ಅಭಿಯಾನವನ್ನು ಪ್ರಕಟಿಸಿದವು. ಅಮೆರಿಕದ ಎಂಟು ರಾಜ್ಯಗಳ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಸಂಸದರು, ಶಾಸಕರು, ಸ್ಥಳೀಯ ಮೇಯರ್‌ಗಳು ಮತ್ತು ಚುನಾವಣಾ ಅಭ್ಯರ್ಥಿಗಳು ಸೇರಿದಂತೆ ಸುಮಾರು 90 ರಾಜಕೀಯ ನಾಯಕರು ಈ ಆರು ಪುಟಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ರಾಜಕೀಯ ಹಿಂಸಾಚಾರ ಮತ್ತು ಬೆದರಿಕೆಗಳನ್ನು ತಿರಸ್ಕರಿಸುವಂತೆ ಕರೆ ನೀಡಿರುವ ಈ ಒಪ್ಪಂದದಲ್ಲಿ, ಆರ್‌ಎಸ್‌ಎಸ್ ನಂಟಿರುವ ಮೂಲಗಳಿಂದ ಈ ಹಿಂದೆ ಪಡೆದಿರುವ ನಿಧಿಯನ್ನು ಹಿಂತಿರುಗಿಸಬೇಕು ಅಥವಾ ಪ್ರಜಾಪ್ರಭುತ್ವ ಪರ ಸಂಸ್ಥೆಗಳಿಗೆ ಮರುಹಂಚಿಕೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಈ ಕಾರ್ಯಕ್ರಮಕ್ಕೂ ಮುನ್ನವೇ, ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಮತ್ತು ನ್ಯೂಯಾರ್ಕ್‌ನ ಡೆಮಾಕ್ರಟ್ ನಾಯಕ ಜೊಹ್ರಾನ್ ಮಮ್ದಾನಿ ಕೂಡ ಭಾಗವತ್ ಅವರ ಸಮಾವೇಶವನ್ನು ವಿರೋಧಿಸಿದ್ದರು.
ಈ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಭಾರತೀಯ ಮೂಲದ ಪ್ರಮುಖ ಸಂಸದರಾದ ಪ್ರಮಿಳಾ ಜಯಪಾಲ್ ಮತ್ತು ರೋ ಖನ್ನಾ ಅವರಲ್ಲದೆ, ಸಂಸದೆ ರಾಬಿನ್ ಕೆಲ್ಲಿ ಹಾಗೂ ಮಿಚಿಗನ್‌ನ ಸೆನೆಟ್ ಅಭ್ಯರ್ಥಿ ಅಬ್ದುಲ್ ಎಲ್-ಸಯೇದ್ ಸೇರಿದ್ದಾರೆ. ಆರ್‌ಎಸ್‌ಎಸ್ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಬಲಪಂಥೀಯ ಸಂಘಟನೆಯಾಗಿದ್ದು, ಇಂತಹ ಸಂಘಟನೆಗಳ ನಿಧಿಯಿಂದ ಚುನಾಯಿತ ಪ್ರತಿನಿಧಿಗಳು ದೂರವಿರಬೇಕು ಎಂದು ಪ್ರಮಿಳಾ ಜಯಪಾಲ್ ಪ್ರತಿಪಾದಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಹಿನ್ನೆಲೆ ಹೊಂದಿರುವ ಆರ್‌ಎಸ್‌ಎಸ್ ಅಮೆರಿಕದ ಚುನಾವಣಾ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಅವಕಾಶ ನೀಡಬಾರದು ಎಂದು ಸಂಸದ ರೋ ಖನ್ನಾ ಹೇಳಿದ್ದಾರೆ. ಇದೇ ವೇಳೆ, ಆರ್‌ಎಸ್‌ಎಸ್ ನಂಟಿರುವ ವ್ಯಕ್ತಿಯೊಬ್ಬರಿಂದ ತಮಗೆ ಬಂದಿದ್ದ 6,600 ಡಾಲರ್ [ಅಂದಾಜು (₹5.50 ಲಕ್ಷ) ದೇಣಿಗೆಯನ್ನು ಬೇರೆಡೆಗೆ ದಾನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ರೋ ಖನ್ನಾ ಅವರು 2023ರಲ್ಲಿ ಹಿಂದೂ ಪರ ಮುಖಂಡರಿಂದ 1,10,000 ಡಾಲರ್ [ಅಂದಾಜು ₹91.50 ಲಕ್ಷ] ದೇಣಿಗೆ ಪಡೆದಿದ್ದರು ಎಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.
ರಾಜಕಾರಣಿಗಳ ಈ ನಿಲುವನ್ನು ‘ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿ’ (HAPAC) ತೀವ್ರವಾಗಿ ಖಂಡಿಸಿದೆ. ತೀವ್ರ ಎಡಪಂಥೀಯ ಗುಂಪುಗಳು ರಾಜಕಾರಣಿಗಳನ್ನು ದಾರಿ ತಪ್ಪಿಸಿ ಈ ನಿರ್ಧಾರಕ್ಕೆ ತಳ್ಳಿವೆ ಎಂದು ಆರೋಪಿಸಿರುವ ಸಮಿತಿಯು, ಇದು ಕೇವಲ ಹಿಂದೂ-ಅಮೆರಿಕನ್ ದಾನಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವ ಅನ್ಯಾಯದ ನಡೆಯಾಗಿದೆ ಎಂದಿದೆ. ಹಿಂದೂಗಳ ನಿಷ್ಠೆಯನ್ನು ಪ್ರಶ್ನಿಸುವ ಇಂತಹ ಧೋರಣೆಯು ಯಹೂದಿ ವಿರೋಧಿ ಪೂರ್ವಾಗ್ರಹವನ್ನು ಹೋಲುತ್ತಿದ್ದು, ಸಂಪೂರ್ಣ ತಾರತಮ್ಯದಿಂದ ಕೂಡಿದೆ ಎಂದು ಆಕ್ಷೇಪಿಸಿದೆ.





