ನೇಪಾಳದಲ್ಲಿ ಆರು ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ವೊಂದು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
“ಮನಂಗ್ ಏರ್ ಸಂಸ್ಥೆಗೆ ಸೇರಿದ್ದ ಹೆಲಿಕಾಪ್ಟರ್ ಸೋಲುಖುಂಬುವಿನಿಂದ ಕಾಠ್ಮಂಡುವಿಗೆ ತೆರಳುತ್ತಿತ್ತು ಮತ್ತು ಬೆಳಗ್ಗೆ ಸುಮಾರು 10 ಗಂಟೆಗೆ ಕಂಟ್ರೋಲ್ ಟವರ್ನೊಂದಿಗೆ ಸಂಪರ್ಕ ಕಡಿತಗೊಂಡಿದೆ” ಎಂದು ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ಹೇಳಿಕೆ ನೀಡಿದ್ದಾರೆ.
ನೇಪಾಳದ ಸ್ಥಳೀಯ ಕಾಲಮಾನ 10:12ರ ಸುಮಾರಿಗೆ 9N-AMV ನೋಂದಣಿ ಸಂಖ್ಯೆ ಹೊಂದಿರುವ ಹೆಲಿಕಾಪ್ಟರ್, ರಾಡಾರ್ನಿಂದ ಸಂಪರ್ಕ ಕಡಿತಗೊಂಡಿದೆ.
ನಾಪತ್ತೆಯಾಗಿರುವ ಹೆಲಿಕಾಪ್ಟರ್ನಲ್ಲಿ ಕ್ಯಾಪ್ಟನ್ ಹಾಗೂ ಐವರು ವಿದೇಶಿ ಪ್ರಜೆಗಳು ಸೇರಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಹಿರಿಯ ಪೈಲಟ್ ಚೆಟ್ ಗುರುಂಗ್ ಅವರು ಇದರ ಕ್ಯಾಪ್ಟನ್ ಆಗಿದ್ದರು ಎಂದು ವರದಿಯಾಗಿದೆ.
ಹೆಲಿಕಾಪ್ಟರ್ನೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಪತ್ತೆಹಚ್ಚುವ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ ಎಂದು ನೇಪಾಳದ ಮಾಧ್ಯಮಗಳು ವರದಿ ಮಾಡಿದೆ.