ಫ್ರೆಂಚ್ ಪ್ರಾಂತ್ಯದ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಾದ ವನವಾಟು, ಫಿಜಿ ಹಾಗೂ ನ್ಯೂ ಕ್ಯಾಲೆಡೋನಿಯಾಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ದ್ವೀಪ ರಾಷ್ಟ್ರದ ಬಂದರು ಪಟ್ಟಣವಾದ ಲೆನಾಕೆಲ್ ತೀರದಲ್ಲಿ 1.5 ಅಡಿಯಷ್ಟು ಅಲೆಗಳು ಮತ್ತು ಫಿಜಿ, ಕಿರಿಬಾಟಿ, ಪಪುವಾ ನ್ಯೂಗಿನಿಯಾ, ಗುವಾಮ್ ಮತ್ತು ಇತರ ಪೆಸಿಫಿಕ್ ದ್ವೀಪಗಳಿಗೆ ಸಣ್ಣ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹೇಳಿದೆ.
ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ವನವಾಟುವಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯು ಸೂಚನೆ ನೀಡಿದೆ. ರೇಡಿಯೋ ಸಂದೇಶಗಳನ್ನು ಆಲಿಸುವಂತೆ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಫಿಜಿಯ ನೈಋತ್ಯಕ್ಕೆ, ನ್ಯೂಜಿಲೆಂಡ್‌ನ ಉತ್ತರಕ್ಕೆ ಹಾಗೂ ಆಸ್ಟ್ರೇಲಿಯಾದ ಪೂರ್ವದಲ್ಲಿ 10 ಕಿಮೀ (6.21 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ (ಯುಎಸ್‌ಜಿಎಸ್) ಹೇಳಿದೆ. ಇದು ನ್ಯೂ ಕ್ಯಾಲೆಡೋನಿಯಾ, ಫಿಜಿ ಮತ್ತು ವನವಾಟು ಪ್ರದೇಶಗಳಿಗೆ ಸಂಭವನೀಯ ಸುನಾಮಿಯ ಎಚ್ಚರಿಕೆಯನ್ನು ಉಂಟುಮಾಡಿದೆ ಎಂದು ʻಯುಎಸ್ ಸುನಾಮಿ ಎಚ್ಚರಿಕೆ ಕೇಂದ್ರʼ ಹೇಳಿದೆ.
ವನವಾಟು, ಫಿಜಿ ಮತ್ತು ನ್ಯೂ ಕ್ಯಾಲೆಡೋನಿಯಾಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ‘ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯುಸಿ)’ ತಿಳಿಸಿದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತನ್ನ ಪೂರ್ವ ಕರಾವಳಿಯಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಅಪಾಯವಿದೆ ಎಂದು ಹೇಳಿದೆ.