ಅಮೇರಿಕಾದ ಅಟ್ಲಾಂಟ ನಗರದ ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗ ಅನಿವಾಸಿ ಭಾರತೀಯರು ಭಾರತದಲ್ಲಿ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿ ಮೇ 20, 2023 ಶನಿವಾರದಂದು ಪ್ರದರ್ಶನ ನಡೆಸಿದರು.
ಭಾರತದ ಮೋದಿ ಸರಕಾರದ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನೀತಿಗಳು, ಪತ್ರಿಕಾ ಸ್ವಾತಂತ್ರ್ಯದ ದಮನ, ಮಹಿಳಾ ಕುಸ್ತಿ ಪಟುಗಳ ಮೇಲಿನ ಅತ್ಯಾಚಾರ ಹಾಗೂ ಧರ್ಮ ದ್ವೇಷದ ರಾಜಕಾರಣವನ್ನು ಅಮೇರಿಕಾದ ಸರಕಾರದ ಹಾಗೂ ಅಮೆರಿಕನ್ ಪ್ರಜೆಗಳ ಗಮನ ಸೆಳೆಯಲು ಈ ಪ್ರದರ್ಶನ ಮಾಡಲಾಯಿತು.
ಮಾರ್ಟಿನ್ ಲೂಥರ್ ಕಿಂಗ್ ಅವರ ಹೋರಾಟಕ್ಕೆ ಮಹಾತ್ಮ ಗಾಂಧಿಯವರೇ ಸ್ಪೂರ್ತಿ. ಆದ್ದರಿಂದ ಈ ಸ್ಮಾರಕ ವೀಕ್ಷಿಸಲು ಪ್ರಪಂಚದ ವಿವಿಧ ದೇಶಗಳಿಂದ ಬರುತ್ತಾರೆ. ಶನಿವಾರದ ರಜೆಯಾದ್ದರಿಂದ ಹಲವಾರು ಜನರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಆಸಕ್ತಿಯಿಂದ ಆಲಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದರಲ್ಲದೆ ಅಮೇರಿಕಾದ ಬೈಡನ್ ಸರಕಾರವು ಭಾರತದ ಮೋದಿ ಸರಕಾರದ ಈ ಜನವಿರೋಧಿ ಕ್ರಮಗಳ ಬಗ್ಗೆ ಗಟ್ಟಿ ನಿಲುವು ತೋರಬೇಕೆಂದು ಆಗ್ರಹಿಸಿದರು.

ಪ್ರದರ್ಶನ ಆಯೋಜನೆ ಮಾಡಿದ್ದ ದಿನೇಶ್ ಪಟೇಲ್ ಇನ್ನು ಮುಂದೆಯೂ ಸಹ ಅಟ್ಲಾಂಟ ನಗರದ ವಿವಿಧ ಭಾಗಗಳಲ್ಲಿ ಇಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ಹೇಳಿದರು. ದಿನೇಶ್ ಪಟೇಲ್ ಈ ಹಿಂದೆ ‘ಭಾರತ್ ಜೋಡೋ’ ಯಾತ್ರೆ ಬೆಂಬಲಿಸಿ ಸೆಪ್ಟೆಂಬರ್ 7, 2022 ರಿಂದ ಜನವರಿ 30, 2023 ರವರೆಗೆ ಅಮೇರಿಕಾದ ಕೊರೆಯುವ ಚಳಿಯಲ್ಲಿ ಸಂಪೂರ್ಣ ಬರಿಗಾಲಿನಲ್ಲಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿ ಪ್ರಸಿದ್ಧ ಪತ್ರಕರ್ತ ರವೀಶ್ ಕುಮಾರ್ ಅವರ ಗಮನ ಸೆಳೆದಿದ್ದರು.
ಭಾರತದಲ್ಲಿ ಮುಂಬರುವ ಚುನಾವಣೆಗಳಲ್ಲಿ ಜನರ ಮನಸ್ಸುಗಳನ್ನು ಜೋಡಿಸುವ, ಒಂದುಗೂಡಿಸುವ ಸರಕಾರದ ಅನಿವಾರ್ಯತೆ ಇದೆಯೆಂದು ಹೇಳಿದರು.
-ಶ್ರೇಯಸ್, ಅಟ್ಲಾಂಟ