ಬ್ರಿಟನ್‌ನ 36 ವರ್ಷದ ಸಾಹಸಿ ಮಹಿಳೆ ಅಲಿಸಿಯಾ ಹೆಂಪಲ್‌ಮನ್-ಆಡಮ್ಸ್ ಅವರು ಹೈಡ್ರೋಜನ್ ಗ್ಯಾಸ್ ಬಲೂನ್ ಮೂಲಕ ಅಟ್ಲಾಂಟಿಕ್ ಸಾಗರವನ್ನು ಯಶಸ್ವಿಯಾಗಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದಿಂದ ಯುರೋಪ್‌ವರೆಗಿನ ಈ ನಾಲ್ಕು ದಿನಗಳ ಸುದೀರ್ಘ ಪ್ರಯಾಣದೊಂದಿಗೆ, ಈ ಸಾಹಸಮಯ ಸಾಧನೆ ಮಾಡಿದ ಮೊದಲ ಬ್ರಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸಹ-ಬಲೂನಿಸ್ಟ್‌ಗಳಾದ ಬರ್ಟ್ ಪ್ಯಾಡೆಲ್ಟ್ ಮತ್ತು ಪೀಟರ್ ಕ್ಯುನೊ ಅವರೊಡನೆ ಅಮೆರಿಕದ ಮೈನೆಯಿಂದ ಬುಧವಾರ ತಮ್ಮ ಪ್ರಯಾಣವನ್ನು ಆರಂಭಿಸಿದ ಅಲಿಸಿಯಾ, ಭಾನುವಾರ ಲಕ್ಸೆಂಬರ್ಗ್‌ನಲ್ಲಿ ಸುರಕ್ಷಿತವಾಗಿ ಇಳಿದರು. ಹೈಡ್ರೋಜನ್ ತುಂಬಿದ ಬಲೂನ್‌ಗೆ ನೇತುಹಾಕಲಾಗಿದ್ದ ತೆರೆದ ಬುಟ್ಟಿಯಲ್ಲಿ (ಓಪನ್ ಬಾಸ್ಕೆಟ್) ಕುಳಿತುಕೊಂಡೇ ಅವರು ಈ ಸಂಪೂರ್ಣ ಅಟ್ಲಾಂಟಿಕ್ ಸಾಗರವನ್ನು ದಾಟಿರುವುದು ಈ ಸಾಹಸದ ಪ್ರಮುಖ ವಿಶೇಷತೆಯಾಗಿದೆ.
ಈ ಹಾರಾಟದ ವೇಳೆ ಅವರು ಹವಾಮಾನದ ತೀವ್ರ ಸವಾಲುಗಳನ್ನು ಎದುರಿಸಬೇಕಾಯಿತು. ತಾಪಮಾನವು ಮೈನಸ್ 30 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಬಲವಾದ ಗಾಳಿ ಹಾಗೂ ಮಳೆಯ ಅಡ್ಡಿಯೂ ಇತ್ತು. ಆದರೂ ಅವರ ಬಲೂನ್ ಸುಮಾರು 25,000 ಅಡಿ ಎತ್ತರಕ್ಕೆ ಏರಿತು ಮತ್ತು ಗಂಟೆಗೆ ಗರಿಷ್ಠ 100 ಕಿಲೋಮೀಟರ್ ವೇಗದಲ್ಲಿ ಚಲಿಸಿತು. ವಾತಾವರಣದ ವೈಪರೀತ್ಯಗಳಿಂದಾಗಿ ಹಲವು ಬಾರಿ ತುರ್ತು ಭೂಸ್ಪರ್ಶದ ಆಲೋಚನೆಯೂ ಬಂದಿತ್ತು ಮತ್ತು ರಕ್ಷಣಾ ಪಡೆಗಳನ್ನು ಸಿದ್ಧವಾಗಿರುವಂತೆ ಸೂಚಿಸಲಾಗಿತ್ತು ಎಂದು ಅಲಿಸಿಯಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಫ್ರೆಂಚ್ ಓಪನ್ ಟೆನಿಸ್: ಅಲೆಕ್ಸಾಂಡರ್ ಜ಼್ವೆರೇವ್‌ಗೆ ಚೊಚ್ಚಲ ಗ್ರಾನ್‌ಸ್ಲಾಮ್ ಕಿರೀಟ
ಸಾಮಾನ್ಯ ಬಿಸಿ-ಗಾಳಿಯ (ಹಾಟ್-ಏರ್) ಬಲೂನ್‌ಗಳಿಗಿಂತ ಹೈಡ್ರೋಜನ್ ಬಲೂನ್‌ಗಳು ಭಿನ್ನವಾಗಿದ್ದು, ಗಾಳಿಗಿಂತ ಹಗುರವಾದ ಹೈಡ್ರೋಜನ್ ಅನಿಲವು ದೀರ್ಘಾವಧಿಯ ಹಾರಾಟಕ್ಕೆ ನೆರವಾಗುತ್ತದೆ. ಎತ್ತರವನ್ನು ನಿಯಂತ್ರಿಸಲು ಮರಳಿನ ಮೂಟೆಗಳನ್ನು ಬಳಸಲಾಗುತ್ತದೆ. ಈ ಹಿಂದೆಯೂ ದಾಖಲೆಗಳನ್ನು ಬರೆದಿರುವ ಅಲಿಸಿಯಾ, ತಮ್ಮ ಎಂಟನೇ ವಯಸ್ಸಿನಲ್ಲಿಯೇ ತಂದೆಯನ್ನು ಭೇಟಿಯಾಗಲು ಉತ್ತರ ಧ್ರುವವನ್ನು ತಲುಪಿದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಅಲಿಸಿಯಾ ಅವರ ಈ ಸಾಧನೆಗೆ ಒಂದು ಭಾವನಾತ್ಮಕ ಹಿನ್ನೆಲೆಯೂ ಇದೆ. ಅಟ್ಲಾಂಟಿಕ್ ಸಾಗರವನ್ನು ಎರಡು ಬಾರಿ ದಾಟಿದ್ದ ಅವರ ತಂದೆ, ಖ್ಯಾತ ಸಾಹಸಿ ಡೇವಿಡ್ ಹೆಂಪಲ್‌ಮನ್-ಆಡಮ್ಸ್ ಅವರು ಈ ಯಾನದಲ್ಲಿ ಮೊದಲು ಪಾಲ್ಗೊಳ್ಳಬೇಕಿತ್ತು. ಆದರೆ, ಅವರ ಜಾಗದಲ್ಲಿ ಕೊನೆಗೆ ಮಗಳು ಅಲಿಸಿಯಾ ತೆರಳಿದರು. ಲಕ್ಸೆಂಬರ್ಗ್‌ನಲ್ಲಿ ಯಶಸ್ವಿಯಾಗಿ ಮಗಳು ಬಂದಿಳಿಯುವಾಗ ಆಕೆಯನ್ನು ಸ್ವಾಗತಿಸಲು ಡೇವಿಡ್ ಅವರೂ ಉಪಸ್ಥಿತರಿದ್ದುದು ವಿಶೇಷವಾಗಿತ್ತು.





