ಕಳೆದ ಎರಡು ವಾರಗಳಿಂದ ತೀವ್ರ ಕುತೂಹಲ ಹಾಗೂ ತುರುಸಿನ ಪೈಪೋಟಿಗೆ ಸಾಕ್ಷಿಯಾಗಿದ್ದ, ಇತ್ತೀಚಿನ ವರ್ಷಗಳ ಅತ್ಯಂತ ರೋಚಕ ಪುರುಷರ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ರೋಮಾಂಚಕ ಅಂತ್ಯ ದೊರೆತಿದೆ. ಭಾನುವಾರ(ಜೂನ್ 7) ನಡೆದ ಐದು ಸೆಟ್‌ಗಳ ಅತ್ಯಂತ ರೋಚಕ ಫೈನಲ್ ಹಣಾಹಣಿಯಲ್ಲಿ, ಎರಡನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ಼್ವೆರೇವ್ ಅವರು ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಜಯ ಸಾಧಿಸುವ ಮೂಲಕ ತಮ್ಮ ವೃತ್ತಿಜೀವನದ ಚೊಚ್ಚಲ ಗ್ರಾನ್‌ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಸುದೀರ್ಘ ಹಾಗೂ ತೀವ್ರ ಕುತೂಹಲದಿಂದ ಕೂಡಿದ್ದ ಈ ಪಂದ್ಯದಲ್ಲಿ, ಜ್ವರೇವ್ ಅವರು 6-1, 4-6, 6-4, 6-7 (5), 6-1 ಅಂತರದಲ್ಲಿ (3-2 ಸೆಟ್‌ಗಳ ಅಂತರ) ಕೊಬೊಲ್ಲಿ ಅವರನ್ನು ಮಣಿಸಿದರು.
ಈ ಹಿಂದೆ ಜ಼್ವೆರೇವ್ ‘ಮಾಸ್ಟರ್ಸ್ 1000 ಟೂರ್ನಿ’ಗಳಲ್ಲಿ, ಎರಡು ಬಾರಿ ಎಟಿಪಿ ಫೈನಲ್ಸ್‌ನಲ್ಲಿ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ, ತಾವು ಆಡಿದ್ದ ಮೂರೂ ಪ್ರಮುಖ ಗ್ರಾನ್‌ಸ್ಲಾಮ್ ಫೈನಲ್‌ಗಳಲ್ಲಿ ಸೋಲನುಭವಿಸಿದ್ದರು. ಟೆನಿಸ್‌ನ ಅತಿ ದೊಡ್ಡ ಬಹುಮಾನವಾದ ಗ್ರಾನ್‌ಸ್ಲಾಮ್ ಮಾತ್ರ ಇದುವರೆಗೂ ಅವರಿಗೆ ಒಲಿದಿರಲಿಲ್ಲ.
ಅಗ್ರ ಶ್ರೇಯಾಂಕದ ಜಾನಿಕ್ ಸಿನ್ನರ್ ಮತ್ತು ನೊವಾಕ್ ಜೊಕೊವಿಚ್ ಸತತ ದಿನಗಳಲ್ಲಿ ಟೂರ್ನಿಯಿಂದ ಹೊರಬಿದ್ದ ನಂತರ, ಹಾಗೂ ಗಾಯದ ಕಾರಣ ಕಾರ್ಲೊಸ್ ಅಲ್ಕರಾಜ್ ಗೈರುಹಾಜರಾಗಿದ್ದರಿಂದ ಕಣದಲ್ಲಿ ಉಳಿದಿದ್ದ ಅತ್ಯುತ್ತಮ ಆಟಗಾರನೆಂದರೆ ಅದು ಜ಼್ವೆರೇವ್ ಮಾತ್ರ. ಅವರ ಹಾದಿಯಲ್ಲಿದ್ದ ಅಗ್ರ 25ರೊಳಗಿನ ಏಕೈಕ ಆಟಗಾರನೆಂದರೆ ವಿಶ್ವದ 14ನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲ್ಲಿ. ಹೀಗಾಗಿ ಜರ್ಮನ್ ಆಟಗಾರನ ಪಾಲಿಗೆ ಇದು ಕೈಚೆಲ್ಲಲಾಗದಂತಹ ಸುವರ್ಣಾವಕಾಶವಾಗಿತ್ತು.
ಇದನ್ನು ಓದಿದ್ದೀರಾ? ಬಾಂಬ್, ಬೆದರಿಕೆಗಳಿಗೆ ಬಗ್ಗದ ಜ್ಞಾನದೀವಿಗೆ: ಬಡವರ ಪಾಲಿನ ಅಕ್ಷರ ಸಂತ ‘ಖಾನ್ ಸರ್’
ಗೆಲುವಿನ ಬಳಿಕ ತಮ್ಮ ತಂಡವನ್ನುದ್ದೇಶಿಸಿ ಮಾತನಾಡಿದ ಜ಼್ವೆರೇವ್, “ನಾವು ಗಾಯದ ಸಮಸ್ಯೆಗಳನ್ನು ಎದುರಿಸಿದ್ದೇವೆ. ಹೃದಯವಿದ್ರಾವಕ ಕ್ಷಣಗಳನ್ನು, ಸೋಲುಗಳನ್ನು ಕಂಡಿದ್ದೇವೆ. ಪ್ರಮುಖ ಹಂತಗಳಲ್ಲಿ ಸೋತವರಾಗಿದ್ದೇವೆ. ಆದರೆ ದಿನದಂತ್ಯಕ್ಕೆ, ನಾವೀಗ ಗ್ರಾನ್‌ಸ್ಲಾಮ್ ಚಾಂಪಿಯನ್‌ಗಳು, ಅದೇ ಅತಿ ಮುಖ್ಯವಾದದ್ದು,” ಎಂದು ಭಾವುಕರಾದರು.
ಕಳೆದ ವರ್ಷ ಅಲ್ಕರಾಜ್ ಮತ್ತು ಸಿನ್ನರ್ ನಡುವೆ ನಡೆದಿದ್ದ ಅಸಾಧಾರಣ ಫೈನಲ್‌ಗೆ ಹೋಲಿಸಿದರೆ, ಈ ಬಾರಿಯ ಫೈನಲ್‌ನಲ್ಲಿ ಉಭಯ ಆಟಗಾರರಲ್ಲೂ ತೀವ್ರ ಆತಂಕ ಎದ್ದು ಕಾಣುತ್ತಿತ್ತು. ಪಂದ್ಯದ ದ್ವಿತೀಯಾರ್ಧದುದ್ದಕ್ಕೂ ಜ್ವರೇವ್ ಅವರಲ್ಲಿ ಒತ್ತಡ ಹಾಗೂ ಅಸ್ವಸ್ಥತೆ ಮನೆಮಾಡಿತ್ತು. ಅವರ ಫೋರ್‌ಹ್ಯಾಂಡ್ ಹಾಗೂ ಎರಡನೇ ಸರ್ವ್‌ಗಳಲ್ಲಿನ ಸಮಸ್ಯೆಗಳು ಮತ್ತೆ ತಲೆದೋರಿದ್ದವು. ಗೆಲುವಿಗಾಗಿ ನಡೆಸಿದ ಭಾವನಾತ್ಮಕ ಹೋರಾಟದಿಂದಾಗಿ ಅವರು ಸ್ನಾಯು ಸೆಳೆತಕ್ಕೂ ತುತ್ತಾದರು. ಆದಾಗ್ಯೂ, ತಮ್ಮ ಮೊದಲ ಗ್ರಾನ್‌ಸ್ಲಾಮ್ ಫೈನಲ್ ಆಡುತ್ತಿದ್ದ ಕೊಬೊಲ್ಲಿ ಈ ಒತ್ತಡವನ್ನು ಇನ್ನಷ್ಟು ತೀವ್ರವಾಗಿ ಅನುಭವಿಸಿದರು. ಅಂತಿಮವಾಗಿ ಜ್ವರೇವ್ ತಮ್ಮ ಮೊದಲ ಸರ್ವ್ ಮತ್ತು ಅಪಾರ ಅನುಭವವನ್ನು ನೆಚ್ಚಿಕೊಂಡು ನಿರ್ಣಾಯಕ ಐದನೇ ಸೆಟ್‌ನಲ್ಲಿ ಜಯಶಾಲಿಯಾದರು.





