ಪಶ್ಚಿಮ ಅಫ್ಘಾನಿಸ್ತಾನ ಪ್ರದೇಶದಲ್ಲಿಸಂಭವಿಸಿದ ಭೂಕಂಪದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆಯ ಪ್ರಮಾಣ 6.3 ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
6.3 ತೀವ್ರತೆಯ ಭೂಕಂಪದ ಕೇಂದ್ರಬಿಂದುವು ಅಫ್ಘಾನ್‌ನ ಅತಿದೊಡ್ಡ ನಗರವಾದ ಹೆರಾತ್‌ನ ವಾಯುವ್ಯದಲ್ಲಿರುವ 40 ಕಿಲೋಮೀಟರ್ ದೂರದಲ್ಲಿದೆ ಎಂದು ವಿಶ್ವಸಂಸ್ಥೆಯ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಅಮೆರಿಕ ಭೂಗರ್ಭ ಶಾಸ್ತ್ರ ಇಲಾಖೆಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಐದು ಬಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.3, 5.9 ಮತ್ತು 5.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿಸಿದೆ.
ದೇಶದ ವಿಪತ್ತು ಪ್ರಾಧಿಕಾರದ ವಕ್ತಾರ ಮೊಹಮ್ಮದ್ ಅಬ್ದುಲ್ಲಾ ಜಾನ್, ಹೆರಾತ್ ಪ್ರಾಂತ್ಯದ ಝೆಂಡಾ ಜಾನ್ ಜಿಲ್ಲೆಯ ನಾಲ್ಕು ಗ್ರಾಮಗಳು ಭೂಕಂಪಕ್ಕೆ ತುತ್ತಾಗಿವೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ – ಹಮಾಸ್ ಯುದ್ಧ| 500ಕ್ಕೂ ಹೆಚ್ಚು ಸಾವು; ನಗರ ತೊರೆಯುತ್ತಿರುವ ಸ್ಥಳೀಯರು
ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ, ಅಫ್ಘಾನಿಸ್ತಾನ ಭೂಕಂಪನದಲ್ಲಿ 465 ಮನೆಗಳು ನಾಶವಾಗಿದ್ದು ಕುಸಿದಿರುವ ಹಲವಾರು ಕಟ್ಟಡಗಳಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದಾರೆ. ಕಟ್ಟಡಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸ್ಥಳಾಂತರಿಸಲು ಝೆಂಡಾ ಜಾನ್ ಪ್ರದೇಶಕ್ಕೆ 12 ಆಂಬ್ಯುಲೆನ್ಸ್ ಕಾರುಗಳನ್ನು ಕಳುಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಫ್ಘಾನಿಸ್ತಾನ ವಿಭಾಗ ಹೇಳಿದೆ.
“ಭೂಕಂಪದಿಂದ ಸಾವುನೋವುಗಳು ವರದಿಯಾಗುತ್ತಲೇ ಇರುವುದರಿಂದ, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಮತ್ತು ಹೆಚ್ಚುವರಿ ಅಗತ್ಯಗಳನ್ನು ನಿರ್ಣಯಿಸಲು ತಂಡಗಳು ಆಸ್ಪತ್ರೆಗಳಲ್ಲಿ ಬೀಡುಬಿಟ್ಟಿವೆ” ಎಂದು ವಿಶ್ವಸಂಸ್ಥೆಯ ಏಜನ್ಸಿ ಟ್ವಿಟರ್‌ನಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಪ್ರಕಾರ, 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಭೂಕಂಪನದಿಂದ ತೊಂದರೆಯಾಗಿದೆ ಎಂದು ಅಂದಾಜಿಸಲಾಗಿದೆ.
ಮಹಲ್ ವಡಾಕಾವು ಹೆಚ್ಚು ಹಾನಿಗೊಳಗಾದ ಗ್ರಾಮವೆಂದು ತಿಳಿಯಲಾಗಿದೆ. ಹೆಚ್ಚುವರಿಯಾಗಿ, ಅಂದಾಜು 300 ಕುಟುಂಬಗಳನ್ನು ಹೆರಾತ್ ನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.