ಆಫ್ರಿಕಾದ ಸಾಹಿತ್ಯ ದಿಗ್ಗಜ ಗೂಗಿ ವಾ ಥಿಯಾಂಗೋ ನಿಧನ

Date:

Advertisements
ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ, ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ.

ಕೀನ್ಯಾದ ಪ್ರಸಿದ್ಧ ಲೇಖಕ, ಆಫ್ರಿಕಾದ ಸಾಹಿತ್ಯ ದಿಗ್ಗಜ, ವಿಶೇಷವಾಗಿ ತಮ್ಮ ಸ್ಥಳೀಯ ಗಿಕುಯು ಭಾಷೆಯಲ್ಲಿ ಬರೆಯುತ್ತಿದ್ದ ಕೆಲವೇ ಲೇಖಕರಲ್ಲಿ ಒಬ್ಬರಾಗಿದ್ದ ಗೂಗಿ ವಾ ಥಿಯಾಂಗೋ ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ.

ಗೂಗಿ ವಾ ಥಿಯಾಂಗೋ ಅವರ ನಿಧನವನ್ನು ಅವರ ಮಗಳು ವಾಂಜಿಕು ವಾ ಥಿಯಾಂಗೋ, “ನಮ್ಮ ತಂದೆ ಗೂಗಿ ವಾ ಥಿಯಾಂಗೋ ಬುಧವಾರ ಬೆಳಗ್ಗೆ ನಿಧನರಾದರು ಎಂಬ ವಿಷಯವನ್ನು ದುಃಖಭರಿತ ಹೃದಯದಿಂದ ತಿಳಿಸುತ್ತಿದ್ದೇವೆ. ಅವರು ತಮ್ಮ ಸಮೃದ್ಧ ಜೀವನವನ್ನು ಜೀವಿಸಿ, ಅದ್ಭುತ ಹೋರಾಟ ನಡೆಸಿ ತೆರಳಿದ್ದಾರೆ” ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ದೃಢಪಡಿಸಿದ್ದಾರೆ.

ಅವರ ಮಗ ಮುಕೊಮಾ ವಾ ಥಿಯಾಂಗೋ ಕೂಡ ತಮ್ಮ X ಖಾತೆಯಲ್ಲಿ ”ಅವರು ನನ್ನ ತಂದೆಯಷ್ಟೆ ಅಲ್ಲ, ನನ್ನ ಬರಹಗಳ ಮೇಲೆಯೂ ಹೆಚ್ಚು ಪ್ರಭಾವ ಬೀರಿದ್ದಾರೆ. ಅವರು ಇಲ್ಲದ ನಾಳೆ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

Advertisements

1938ರ ಜನವರಿ 5ರಂದು ಕೀನ್ಯಾದ ಲಿಮುರು ಎಂಬಲ್ಲಿ ಜನಿಸಿದ ಥಿಯಾಂಗೋ, ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ಗೂಗಿ ಅವರ ತಂದೆಗೆ ನಾಲ್ಕು ಮಂದಿ ಪತ್ನಿಯರು. 28 ಮಂದಿ ಮಕ್ಕಳು. ಕಿಶೋರಾವಸ್ಥೆಯಲ್ಲಿದ್ದಾಗಲೇ ಮೌ ಮೌ ಹೋರಾಟದಲ್ಲಿ ಭಾಗಿಯಾಗಿದ್ದರು. ಗೂಗಿ ಸೇರಿದಂತೆ ಸಾವಿರಾರು ಜನರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ ಹಿಂಸೆ ನೀಡಿತು. ಈ ಹೋರಾಟವೇ ಅವರ ಮೊದಲ ಹೆಸರಾಂತ ಕಾದಂಬರಿ ‘ವೀಪ್‌ ನಾಟ್‌- ಚೈಲ್ಡ್’ಗೆ ಪ್ರೇರಣೆಯಾಯಿತು.

ಚಿನುವಾ ಅಚಿಬೆ ಅವರ ಸಾಹಿತ್ಯದಂತೆ ಇವರ ಕೃತಿಗಳನ್ನೂ ವಿವಿಧ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು ಕೆಲವು ಚಿಂತಕರು ಇವರ ಬಗೆಗೆ ಬರೆದಿದ್ದಾರೆ. ‘ವೀಪ್ ನಾಟ್- ಚೈಲ್ಡ್’, ‘ದಿ ರಿವರ್ ಬಿಟ್ವೀನ್’, ‘ಎ ಗ್ರೈನ್ ಆಫ್ ವೀಟ್’, ‘ಡೆವಿಲ್ ಆನ್ ದಿ ಕ್ರಾಸ್’, ‘ವಿಜರ್ಡ್ ಆಫ್ ದಿ ಕ್ರೊ’ ಇವರ ಪ್ರಮುಖ ಕಾದಂಬರಿಗಳು. ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಬಹು ಚರ್ಚಿತ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.

930c8c20 3245 11ef bcc7 3d9fac1339e7
ಗೂಗಿ ವಾ ಥಿಯಾಂಗೋ

ಅವರನ್ನು ಪೂರ್ವ ಆಫ್ರಿಕಾದ ಪ್ರಮುಖ ಕಾದಂಬರಿಕಾರ ಎಂದು ಪರಿಗಣಿಸಲಾಗಿದೆ. ಅವರ ಜನಪ್ರಿಯ ‘ವೀಪ್ ನಾಟ್- ಚೈಲ್ಡ್’ (1964) ಪೂರ್ವ ಆಫ್ರಿಕನ್ ಒಬ್ಬರಿಂದ ಇಂಗ್ಲಿಷ್‌ನಲ್ಲಿ ಪ್ರಕಟವಾದ ಮೊದಲ ಪ್ರಮುಖ ಕಾದಂಬರಿ.

ಥಿಯಾಂಗೋ 1963ರಲ್ಲಿ ಉಗಾಂಡಾದ ಕಂಪಾಲಾದ ಮಕೆರೆರೆ ವಿಶ್ವವಿದ್ಯಾಲಯದಿಂದ ಮತ್ತು 1964ರಲ್ಲಿ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಲೀಡ್ಸ್‌ನಲ್ಲಿ ಪದವಿ ಪಡೆದ ಬಳಿಕ, ಅವರು ಕೀನ್ಯಾದ ನೈರೋಬಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಮತ್ತು ಅಮೆರಿಕದ ಇಲಿನಾಯ್ಸ್‌ನ ಇವಾನ್‌ಸ್ಟನ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1972ರಿಂದ 1977ರವರೆಗೆ ನೈರೋಬಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿ ಮತ್ತು ಸಾಹಿತ್ಯ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಥಿಯಾಂಗೋ ಅವರ ಬಹುತೇಕ ಬರವಣಿಗೆಗಳು ಆಫ್ರಿಕಾದ ವಸಾಹತುಶಾಹಿ ಇತಿಹಾಸದ ವಿಷಾದಕರ ಪರಂಪರೆಯ ಕುರಿತು ಗಂಭೀರವಾಗಿ ಚರ್ಚಿಸುತ್ತವೆ. ವರ್ಷಗಳ ಕಾಲ ನೊಬೆಲ್ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದ ಅವರು, 2010ರಲ್ಲಿ ಪೆರು ದೇಶದ ಮಾರಿಯೋ ವರ್ಗಾಸ್ ಯೋಸಾ ಪ್ರಶಸ್ತಿ ಪಡೆದಾಗ, ”ಮಾಡಿದ ತಯಾರಿಗಿಂತ ಬಹಳಷ್ಟು ದುಃಖಿತರಾಗಿದ್ದವರು ನನ್ನ ಮನೆಯ ಮುಂದೆ ನಿಂತ ಛಾಯಾಗ್ರಾಹಕರು!” ಎಂದು ಹಾಸ್ಯದಿಂದ ನುಡಿದಿದ್ದರು.

1977ರಲ್ಲಿ ತಮ್ಮ ನಾಲ್ಕನೇ ಕಾದಂಬರಿ ‘ಪೆಟಲ್ಸ್‌ ಆಫ್‌ ಬ್ಲಡ್’ ಮತ್ತು ‘ದಿ ಟ್ರಯಲ್‌ ಆಫ್‌ ಡೆಡಾನ್‌ ಕಿಮತಿ’ ಎಂಬ ನಾಟಕಗಳನ್ನು ಪ್ರಕಟಿಸಿದರು. ಅವರ ಮತ್ತೊಂದು ನಾಟಕ ‘ಐ ವಿಲ್‌ ಮ್ಯಾರಿ ವೆನ್‌ ಐ ವಾಂಟ್’ವನ್ನು ತಮ್ಮ ಭಾಷೆ ಗಿಕುಯುನಲ್ಲಿ ಬರೆದ ಕಾರಣ ಅವರನ್ನು ಬಂಧಿಸಿ ಕಠಿಣ ಭದ್ರತಾ ಜೈಲಿಗೆ ಕಳಿಸಲಾಯಿತು. ”ಇಂಗ್ಲಿಷ್‌ನಲ್ಲಿ ಬರೆದಾಗ ನನ್ನನ್ನು ಬಂಧಿಸಿಲ್ಲ, ಆದರೆ ನನ್ನ ಭಾಷೆಯಲ್ಲಿ ಬರೆದಾಗ ಬಂಧಿಸಿದರು” ಎಂದು ವಿಷಾದಿಸಿದ ಅವರು, ಮುಂದೆ ಗಿಕುಯು ಭಾಷೆಯಲ್ಲಿಯೇ ತಮ್ಮ ಬರವಣಿಗೆ ಮುಂದುವರೆಸಲು ನಿರ್ಧರಿಸಿದರು.

ಇದನ್ನು ಓದಿದ್ದೀರಾ?: ನೊಬೆಲ್ ಪುರಸ್ಕೃತ ಲ್ಯಾಟಿನ್ ಅಮೆರಿಕದ ಅಪ್ರತಿಮ ಬರಹಗಾರ ಯೋಸಾ

ಆಫ್ರಿಕನ್ ಭಾಷೆಯಲ್ಲಿ ಬರೆಯುವವರು ಎಂಬ ಕಾರಣಕ್ಕೆ ಕೀನ್ಯಾದಲ್ಲಿ ಅವರ ಬರಹಗಳನ್ನು ನಿಷಿದ್ಧ ಮಾಡಲಾಗುತ್ತಿತ್ತು. 2004ರಲ್ಲಿ ಅವರ ಪತ್ನಿ ಜೆರಿಯೊಂದಿಗೆ ಮೊತ್ತಮೊದಲಿಗೆ ಅವರು ನೈರೋಬಿಗೆ ವಾಪಸ್ಸಾದಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅವರನ್ನು ಬರಮಾಡಿಕೊಂಡರೂ, ನಂತರ ಅವರ ಫ್ಲಾಟ್‌ಗೆ ಬಂದ ದರೋಡೆಕೋರರು, ಅವರ ಪತ್ನಿಯ ಮೇಲೆ ಅತ್ಯಾಚಾರವೆಸಗಿ, ತೀವ್ರ ಹಿಂಸೆ ನೀಡಿದರು. ”ನಾವು ಬದುಕಿ ಹೊರಬರುವ ನಂಬಿಕೆ ನಮಗಿರಲಿಲ್ಲ” ಎಂದು ಥಿಯಾಂಗೋ ಆಘಾತದಿಂದ ವಿವರಿಸಿದ್ದರು.

2021ರಲ್ಲಿ, ಅವರ ಗಿಕುಯು ಭಾಷೆಯ ಪದ್ಯಕಾದಂಬರಿ ‘ದ ಪರ್ಫೆಕ್ಟ್‌ ನೈನ್’ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶಿತವಾಗುವ ಮೂಲಕ ಮೊದಲ ಆಫ್ರಿಕನ್ ಮೂಲ ಭಾಷೆಯ ಲೇಖಕರಾಗಿದ್ದರು. ತಮ್ಮದೇ ಕೃತಿಯನ್ನು ತಾವು ಭಾಷಾಂತರಿಸಿ ಪ್ರತಿಷ್ಠಿತ ನಾಮನಿರ್ದೇಶನ ಪಡೆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.

ಗೂಗಿಯವರಿಗೆ 1995ರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿತ್ತು. 2019ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಅವರು ಒಟ್ಟು 9 ಮಕ್ಕಳ ತಂದೆ. ಈ ಪೈಕಿ ಟೀ ವಾ ಥಿಯಾಂಗೋ, ಮುಕೊಮಾ ವಾ ಥಿಯಾಂಗೋ, ನ್ಡೂಕು ವಾ ಥಿಯಾಂಗೋ ಮತ್ತು ವಾಂಜಿಕು ವಾ ಥಿಯಾಂಗೋ ಅವರಂತೆಯೇ ಲೇಖಕರಾಗಿ ಹೆಸರು ಮಾಡಿರುವವರು.

2018ರಲ್ಲಿ, ಅವರು “ವಿರೋಧವೇ ಬದುಕುಳಿಯುವ ಶ್ರೇಷ್ಠ ಮಾರ್ಗ. ನ್ಯಾಯವಿಲ್ಲದ ಮೇಲೆ ‘ಇಲ್ಲ’ ಎನ್ನುವ ಸಾಹಸವೇ ಸಾಕು. ನಂಬಿಕೆಯಲ್ಲಿ ಬದ್ಧರಾಗಿದ್ದರೆ ಬದುಕಿ ಉಳಿಯುವುದು ಸಾಧ್ಯ” ಎಂದಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X