ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಇದಾದ ಎರಡು ವಾರಗಳ ನಂತರ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಈ ನಡುವೆ “ಭಾರತದ ವಿಮಾನಗಳನ್ನು ನಾವೂ ಹೊಡೆದುರುಳಿಸಿದ್ದೇವೆ” ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ವರದಿ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆಯು, “ನ್ಯಾಯ ದೊರಕಿತು. ಜೈ ಹಿಂದ್!” ಎಂದು ಹೇಳಿದೆ.
ಇದನ್ನು ಓದಿದ್ದೀರಾ? BREAKING NEWS : ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕ್ ಭಯೋತ್ಪಾದಕರ ನೆಲೆಗಳ ಮೇಲೆ ಭಾರತದಿಂದ ವಾಯು ದಾಳಿ
ಭಾರತ ದಾಳಿ ನಡೆಸಿದ ಕೂಡಲೇ ಪಾಕಿಸ್ತಾನದ ಮಿಲಿಟರಿ ವಕ್ತಾರರು ARY ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. “ದೇಶ ತಾನೇ ಆಯ್ಕೆ ಮಾಡಿದ ಸಮಯ ಮತ್ತು ಸ್ಥಳದಲ್ಲಿ ಇದಕ್ಕೆ ಪ್ರತಿಕ್ರಿಯಿಸುತ್ತದೆ” ಎಂದು ಹೇಳಿದ್ದಾರೆ. ಈ ಬಗ್ಗೆ ಮುಂಜಾನೆ 04:38ಕ್ಕೆ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದಾರೆ.
“ಭಾರತವು ಆರು ಸ್ಥಳಗಳನ್ನು ಗುರಿಯಾಗಿಸಿಕೊಂಡು ಒಟ್ಟು 24 ದಾಳಿಗಳನ್ನು ಮಾಡಿದೆ. ಇದರಲ್ಲಿ ಒಂದು ಮಗು ಸೇರಿದಂತೆ ಎಂಟು ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ. 35 ಜನರು ಗಾಯಗೊಂಡಿದ್ದಾರೆ. ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ, ನಾಲ್ಕು ಕ್ವಾರ್ಟರ್‌ಗಳು ಸಹ ನಾಶವಾಗಿವೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ವಾಯುಪಡೆಯು ಎರಡು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂದೂ ಡಿಜಿ ಐಎಸ್‌ಪಿಆರ್ ಚೌಧರಿ ಹೇಳಿಕೊಂಡಿದ್ದಾರೆ. ಭಟಿಂಡಾ ಮತ್ತು ಅಖ್ನೂರ್‌ನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.
ಪಾಕಿಸ್ತಾನದ ಮಾಧ್ಯಮ ಪಿಟಿವಿ ಮೂರು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಕಾಶ್ಮೀರದ ಪ್ಯಾಂಪೋರ್‌ನಲ್ಲಿ ಒಂದು ವಿಮಾನ ಅಪಘಾತಕ್ಕೀಡಾಗಿದೆ ಎಂಬ ವಿಡಿಯೋಗಳು ಹರಿದಾಡುತ್ತಿದೆ. ಆದರೆ ಅದು ಯಾವ ವಿಮಾನ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಅದೇ ರೀತಿ, ಜಮ್ಮು ಬಳಿಯ ಅಖ್ನೂರ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿರುವ ವರದಿಗಳಿವೆ. ಆದರೆ ಭಾರತೀಯ ರಕ್ಷಣಾ ಸಚಿವಾಲಯ ಇದನ್ನು ದೃಢೀಕರಿಸಿಲ್ಲ.
