ಚೀನಾದಲ್ಲಿ ಉದ್ಯೋಗಕ್ಕಾಗಿ ಪರದಾಡುತ್ತಿರುವ ಹೊಸ ಪದವೀಧರರಿಗೆ ಇದೀಗ ಕೃತಕ ಬುದ್ಧಿಮತ್ತೆ (AI) ಮತ್ತೊಂದು ದೊಡ್ಡ ಸವಾಲಾಗಿ ಎದುರಾಗಿದೆ. ಈಗಾಗಲೇ ಆರ್ಥಿಕ ಮಂದಗತಿ, ಉದ್ಯೋಗಗಳ ಕೊರತೆ ಹಾಗೂ ಹೆಚ್ಚುತ್ತಿರುವ ಸ್ಪರ್ಧೆಯಿಂದ ಸಂಕಷ್ಟದಲ್ಲಿರುವ ಯುವಕರಿಗೆ AI ಕಾರಣದಿಂದ ಆರಂಭಿಕ ಹಂತದ ಉದ್ಯೋಗಗಳೇ ಕಡಿಮೆಯಾಗುತ್ತಿರುವ ಆತಂಕ ಎದುರಾಗಿದೆ.
ಈ ವರ್ಷ ಚೀನಾದಲ್ಲಿ ಅಂದಾಜು 1.27 ಕೋಟಿ ಹೊಸ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಇದು ದೇಶದಲ್ಲಿ ಈವರೆಗೆ ದಾಖಲಾಗಿರುವ ಅತಿದೊಡ್ಡ ಪದವೀಧರರ ಬ್ಯಾಚ್ ಆಗಿದೆ. ಆದರೆ ಉದ್ಯೋಗಗಳ ಸಂಖ್ಯೆ ಅದೇ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಹೀಗಾಗಿ ಒಂದೆಡೆ ಉದ್ಯೋಗಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದರೆ, ಮತ್ತೊಂದೆಡೆ AI ಹಲವು ಕ್ಷೇತ್ರಗಳ ಕೆಲಸದ ಸ್ವರೂಪವನ್ನೇ ಬದಲಾಯಿಸುತ್ತಿದೆ.
ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 26 ವರ್ಷದ ಜಿನ್ ಶಾಂಗ್ಯು ಅವರ ಅನುಭವ ಇದಕ್ಕೆ ಉದಾಹರಣೆ. ಹಾಂಕಾಂಗ್‌ನ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅವರು ಹಾಂಕಾಂಗ್ ಹಾಗೂ ಚೀನಾದಲ್ಲಿ ಸುಮಾರು 150 ಇಂಟರ್ನ್‌ಶಿಪ್ ಮತ್ತು ಆರಂಭಿಕ ಹಂತದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬಹುತೇಕ ಕಡೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿಸಿಕೊಳ್ಳಲು ಸುಮಾರು 400 ಡಾಲರ್ ವೆಚ್ಚದ AI ಕೋರ್ಸ್ ಕೂಡ ಮಾಡಿದ್ದಾರೆ. ಆದರೂ ಅದರಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. AI ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗದ ಬೇಡಿಕೆ ಹೆಚ್ಚಾಗುತ್ತಿದ್ದರೆ, ಸಾಂಪ್ರದಾಯಿಕ ಉದ್ಯೋಗಗಳ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿರುವುದನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ನಗರ ಯೋಜನೆ ಕ್ಷೇತ್ರದಲ್ಲಿ ಹಿಂದೆ ಹಲವರು ಸೇರಿ ಮಾಡುತ್ತಿದ್ದ ವಿನ್ಯಾಸದ ಆರಂಭಿಕ ಹಂತದ ಕೆಲಸಗಳನ್ನು ಇದೀಗ ಕೆಲವೇ ಕ್ಲಿಕ್‌ಗಳಲ್ಲಿ AI ಮೂಲಕ ನಿರ್ವಹಿಸಬಹುದಾಗಿದೆ. ಇದರಿಂದ ಇಂಟರ್ನ್‌ಗಳು ಮತ್ತು ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಅನುಭವ ಗಳಿಸುವ ಅವಕಾಶಗಳೂ ಕಡಿಮೆಯಾಗುತ್ತಿವೆ. “ಹೊಸ ಪದವೀಧರರಾದ ನಾವು AI ಬದಲಾಯಿಸಬಹುದಾದವರೇ ಆಗಿದ್ದೇವೆ ಎಂಬ ಭಾವನೆ ಬರುತ್ತಿದೆ” ಎಂದು ಜಿನ್ ಹೇಳಿದ್ದಾರೆ. ಯಾವ ಭರವಸೆಯೂ ಕಾಣುತ್ತಿಲ್ಲ. ಹೀಗಾಗಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಕೂಡ ಕಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾದ 16ರಿಂದ 24 ವರ್ಷದ ನಗರ ಯುವಕರ ನಿರುದ್ಯೋಗ ಪ್ರಮಾಣ ಜುಲೈನಲ್ಲಿ ಶೇ.17.9ರಷ್ಟಿತ್ತು. ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಉತ್ತಮ ವೇತನದ ಉದ್ಯೋಗಗಳ ಸಂಖ್ಯೆ ಅದಕ್ಕೆ ತಕ್ಕಂತೆ ಹೆಚ್ಚಾಗಿಲ್ಲ.
ಚೀನಾದ ಯುವಕರ ಉದ್ಯೋಗ ಸಮಸ್ಯೆಯನ್ನು AI ಸೃಷ್ಟಿಸಿಲ್ಲ. ಈಗಾಗಲೇ ಇದ್ದ ಉದ್ಯೋಗ ಕೊರತೆ ಹಾಗೂ ಆರ್ಥಿಕ ಮಂದಗತಿಯ ನಡುವೆ AI ಹೊಸ ಒತ್ತಡವನ್ನು ಸೇರಿಸುತ್ತಿದೆ ಎಂದು ವಿಕ್ಟೋರಿಯಾ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕ ಕ್ರಿಶ್ಚಿಯನ್ ಯಾವೊ ಹೇಳಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿರುವ ಪದವೀಧರರೂ ಇದೇ ರೀತಿಯ ಆತಂಕ ಎದುರಿಸುತ್ತಿದ್ದಾರೆ. ಆದರೆ ಚೀನಾದಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗಿದೆ. ಸರ್ಕಾರದ ಬೆಂಬಲ ಹಾಗೂ ಸಾರ್ವಜನಿಕ ಸ್ವೀಕಾರದಿಂದ ಚೀನಾದಲ್ಲಿ AI ಬಳಕೆ ವೇಗವಾಗಿ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಟೆಲಿವಿಷನ್ ಪ್ರಸಾರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜಿನ್ನಿಯಾ ಝೌ ಅವರ ಸಮಸ್ಯೆಯೂ ಇದೇ. ಕಳೆದ ಒಂದು ವರ್ಷದಲ್ಲಿ ಅವರು 2,800ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ 20ಕ್ಕಿಂತ ಕಡಿಮೆ ಸಂದರ್ಶನಗಳಿಗೆ ಮಾತ್ರ ಅವಕಾಶ ಸಿಕ್ಕಿದ್ದು, ಈವರೆಗೆ ಒಂದೇ ಒಂದು ಉದ್ಯೋಗದ ಆಫರ್ ಕೂಡ ಬಂದಿಲ್ಲ. ಆರಂಭದಲ್ಲಿ ತಮ್ಮ ಕೌಶಲ್ಯಕ್ಕೆ ಹೊಂದುವ ಉದ್ಯೋಗಗಳಿಗೆ ಮಾತ್ರ ಅರ್ಜಿ ಸಲ್ಲಿಸುತ್ತಿದ್ದ ಅವರು, ಈಗ ಯಾವುದೇ ಉದ್ಯೋಗ ಸಿಕ್ಕರೂ ಸಾಕು ಎಂಬ ಸ್ಥಿತಿಗೆ ಬಂದಿದ್ದಾರೆ. AI ಆಧಾರಿತ ನಾಟಕಗಳು ಮತ್ತು ಕಾರ್ಯಕ್ರಮಗಳ ನಿರ್ಮಾಣಕ್ಕೆ ಸಂಬಂಧಿಸಿದ ಉದ್ಯೋಗಗಳು ಹೆಚ್ಚಾಗುತ್ತಿರುವುದನ್ನು ಅವರು ಗಮನಿಸಿದ್ದಾರೆ. ಆದರೆ ವಿಶ್ವವಿದ್ಯಾಲಯದ ಶಿಕ್ಷಣವು AI ಬದಲಿಸುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಮ್ಮನ್ನು ಸಿದ್ಧಪಡಿಸಿಲ್ಲ ಎಂದು ಹೇಳಿದ್ದಾರೆ. ಉದ್ಯೋಗದಾತರು ಹೊಸಬರಿಗೆ ತರಬೇತಿ ನೀಡುವುದಕ್ಕಿಂತ ತಕ್ಷಣ ಕೆಲಸ ಆರಂಭಿಸಬಲ್ಲ ಅನುಭವಿಗಳನ್ನೇ ಬಯಸುತ್ತಿದ್ದಾರೆ ಎಂಬುದು ಅವರ ಅನುಭವ.
AI ಕೆಲವು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದರೂ, ಅವುಗಳಲ್ಲಿ ಬಹುತೇಕ ಅವಕಾಶಗಳು ಈಗಾಗಲೇ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಸಣ್ಣ ವರ್ಗದ ಅಭ್ಯರ್ಥಿಗಳಿಗೆ ಸಿಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಇದೇ ವೇಳೆ ಆಡಳಿತಾತ್ಮಕ ಕೆಲಸ, ಸಂಶೋಧನೆ, ಮೂಲಭೂತ ವಿಶ್ಲೇಷಣೆ ಹಾಗೂ ಕೋಡಿಂಗ್‌ನಂತಹ ಜೂನಿಯರ್ ವೈಟ್ ಕಾಲರ್ ಉದ್ಯೋಗಗಳು AI ಮೂಲಕ ಸ್ವಯಂಚಾಲಿತಗೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ಚೀನಾದಲ್ಲಿ ‘ಅರ್ಹತೆಗಳ ಪೈಪೋಟಿ’ ಕೂಡ ಆರಂಭವಾಗಿದೆ. ಹಿಂದೆ ಪದವಿ ಸಾಕಾಗುತ್ತಿದ್ದ ಕೆಲವು ಆರಂಭಿಕ ಹಂತದ ಉದ್ಯೋಗಗಳಿಗೂ ಈಗ ಸ್ನಾತಕೋತ್ತರ ಪದವಿ, ಕೆಲವೊಮ್ಮೆ ಪಿಎಚ್‌ಡಿ ಕೇಳಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ 25 ವರ್ಷದ ಲೂನಾ ವಾಂಗ್ ಸುಮಾರು 200 ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ಹಾಗೂ ಖರೀದಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿದ್ದಾರೆ. ಆದರೆ AI ತನ್ನ ವೃತ್ತಿಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಅವರಲ್ಲಿದೆ. ತಾನು ಅರ್ಜಿ ಸಲ್ಲಿಸುತ್ತಿರುವ ಕೆಲಸಗಳಿಗೆ ಮಾತುಕತೆ ಮತ್ತು ನೇರ ಮಾನವ ಸಂವಹನದ ಅಗತ್ಯವಿರುವುದರಿಂದ ಅವುಗಳನ್ನು ಸುಲಭವಾಗಿ AI ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ರೋಬೋಟ್‌ಗಳು ಮತ್ತು AI ಮಾಡಲು ಸಾಧ್ಯವಾಗದ ಕೌಶಲ್ಯಗಳನ್ನು ಹೊಂದಿದ್ದರೆ ಮಾತ್ರ ಉಳಿಯಲು ಸಾಧ್ಯ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಪ್ರಾಬಲ್ಯ; 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ AfDಗೆ ಗೆಲುವು
AI ಕ್ರಾಂತಿಯಿಂದ ಉದ್ಯೋಗಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಚೀನಾ ಸರ್ಕಾರವೂ ಕಳವಳಗೊಂಡಿದೆ. AI ಮೂಲಕ ವೆಚ್ಚ ಕಡಿಮೆಯಾಗುತ್ತಿದೆ ಎಂಬ ಕಾರಣ ನೀಡಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಹಲವು ನ್ಯಾಯಾಲಯದ ತೀರ್ಪುಗಳ ಮೂಲಕ ನೀಡಿದೆ. ಜನವರಿಯಲ್ಲಿ ಪ್ರಮುಖ ಕೈಗಾರಿಕೆಗಳಲ್ಲಿ ಉದ್ಯೋಗ ಬೆಂಬಲ ನೀಡುವ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. AI ಆಧಾರಿತ ಉದ್ಯೋಗ ಮಾರುಕಟ್ಟೆಗೆ ಕಾರ್ಮಿಕರು ಹೊಂದಿಕೊಳ್ಳಲು ಉದ್ಯೋಗದಾತರು ವೃತ್ತಿಪರ ತರಬೇತಿ ನೀಡುವಂತೆ ಪ್ರೋತ್ಸಾಹಿಸುವ ಪ್ರಸ್ತಾಪಗಳೂ ಬಂದಿವೆ. ಈವರೆಗೆ AI ಮತ್ತು ಆಟೊಮೇಷನ್‌ನ ಪರಿಣಾಮ ಉತ್ಪಾದನಾ ಕ್ಷೇತ್ರ ಮತ್ತು ಆಹಾರ ವಿತರಣಾ ಉದ್ಯೋಗಗಳಲ್ಲಿ ಹೆಚ್ಚು ಕಂಡುಬಂದಿದೆ. ಆದರೆ ಈಗ ಅದರ ಪರಿಣಾಮ ವೈಟ್‌ಕಾಲರ್ ಉದ್ಯೋಗಗಳ ಮೇಲೂ ಕಾಣಿಸಿಕೊಳ್ಳಲು ಆರಂಭಿಸಿದೆ.
ಈಗ ನಾವು ಒಂದು ದೊಡ್ಡ ಬದಲಾವಣೆಯ ಕಾಲಘಟ್ಟದಲ್ಲಿ ಸಾಗುತ್ತಿದ್ದೇವೆ. ಅಂತಹ ಸಮಯದಲ್ಲೇ ಬದುಕುತ್ತಿರುವುದು ನನ್ನ ದುರದೃಷ್ಟ ಎಂದು ನಗರ ಯೋಜನೆ ವಿದ್ಯಾರ್ಥಿನಿ ಜಿನ್ ಹೇಳಿರುವುದನ್ನೂ ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.





