ಅಕ್ಕ ರಜತ ಮಹೋತ್ಸವ: ಫಿಲಿಡೆಲ್ಫಿಯಾದಲ್ಲಿ ಕನ್ನಡದ ಜಾತ್ರೆ

Date:


ಫಿಲಿಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮೆರಿಕದ ಕನ್ನಡಿಗರ ಬಹುನಿರೀಕ್ಷಿತ ಅಕ್ಕ (AKKA – Association of Kannada Kootas of America) ಸಂಸ್ಥೆಯ ರಜತ ಮಹೋತ್ಸವದ ಪ್ರಾರಂಭೋತ್ಸವ ಅದ್ದೂರಿಯಾಗಿ ನೆರವೇರಿತು.

ಅನಿವಾಸಿ ಕನ್ನಡಿಗರಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಕನ್ನಡದಲ್ಲಿ ವೈವಿಧ್ಯತೆ ಇದ್ದರೂ, ಇಲ್ಲಿ ಅವೆಲ್ಲವೂ ಒಂದಾಗಿ ಏಕತೆಯ ರೂಪ ತಳೆದಿದ್ದವು. ಹೀಗಾಗಿ ಇದು ಕೇವಲ ಒಂದು ಸಮ್ಮೇಳನವಲ್ಲ—ಅಮೆರಿಕದ ಕನ್ನಡಿಗರ ಜಾತ್ರೆ ಎಂಬ ಭಾವನೆ ಮೂಡಿಸಿತು.

ಐತಿಹಾಸಿಕ ಫಿಲಿಡೆಲ್ಫಿಯಾ ನಗರದಲ್ಲಿಯೇ ಅಮೆರಿಕದ ಸ್ವಾತಂತ್ರ್ಯ ಘೋಷಣೆಯಾಯಿತು. ಆ ಐತಿಹಾಸಿಕ ಘೋಷಣೆಯ ರೂವಾರಿಗಳ ಅದ್ಭುತ ಪ್ರತಿಮೆಗಳು ನಗರದ ಮಧ್ಯಭಾಗದಲ್ಲಿ ಅನಾವರಣಗೊಂಡು ಗತವೈಭವದ ಕಥೆಯನ್ನು ಹೇಳುತ್ತವೆ. ಈ ಪ್ರತಿಮೆಗಳ ಕೂಗಳತೆಯಲ್ಲೇ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಇದೆ.

ಇದೊಂದು ಅದ್ಭುತ ಕನ್ವೆನ್ಷನ್ ಸೆಂಟರ್. ಈ ಬೃಹತ್ ಕಟ್ಟಡದ ಒಟ್ಟು ವಿಸ್ತೀರ್ಣ ಸುಮಾರು 23 ಲಕ್ಷ ಚದರ ಅಡಿ. ಅಂದರೆ ಸುಮಾರು 53 ಎಕರೆ! ಇದರಲ್ಲಿರುವ ಸುಸಜ್ಜಿತ ಪ್ರದರ್ಶನ ಮಳಿಗೆಗಳ ವಿಸ್ತೀರ್ಣ ಸುಮಾರು 6.80 ಲಕ್ಷ ಚದರ ಅಡಿ—ಅಂದರೆ 15 ಎಕರೆಗೂ ಹೆಚ್ಚು.

82 ಸಭಾಂಗಣಗಳು, ಏಳು ಬೃಹತ್ ಪ್ರದರ್ಶನ ಹಾಲ್‌ಗಳು ಮಾತ್ರವಲ್ಲದೆ, ಏಕಕಾಲದಲ್ಲಿ ಐದು ಸಾವಿರ ಜನರು ಊಟ ಮಾಡಬಹುದಾದಷ್ಟು ವಿಶಾಲವಾದ ಗ್ರ್ಯಾಂಡ್ ಬಾಲ್‌ರೂಮ್ ಮತ್ತು ಟೆರೆಸ್ ಬಾಲ್‌ರೂಮ್‌ಗಳ ವಿಸ್ತಾರ ಮತ್ತು ವೈಭವ ಕನ್ನಡಿಗರ ಮನಸೂರೆಗೊಂಡವು.

ಇವೆಲ್ಲ ಹಾಲ್‌ಗಳಿಗೆ ಕನ್ನಡದ ಕಣ್ಮಣಿಗಳ ಹೆಸರನ್ನಿಟ್ಟು ಕನ್ನಡದ ಕಂಪನ್ನು ಇನ್ನಷ್ಟು ವಿಸ್ತರಿಸಿದ್ದರು ಸಂಘಟಕರು. ಹೆಸರಾಂತ ಕನ್ನಡಿಗರ ಹೆಸರಿನಲ್ಲಿ ಒಟ್ಟು ಆರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಪುನೀತ್ ರಾಜಕುಮಾರ್ ಸಭಾಂಗಣ, ಸಾಲುಮರದ ತಿಮ್ಮಕ್ಕ ಸಭಾಂಗಣ, ಗಾನಕೋಗಿಲೆ ಎಸ್. ಜಾನಕಿ ಸಭಾಂಗಣ, ಶಂಕರನಾಗ್ ವೇದಿಕೆ ಹಾಗೂ ಎಸ್.ಎಲ್. ಭೈರಪ್ಪ ವೇದಿಕೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಕನ್ನಡದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ವೈವಿಧ್ಯಮಯ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ಭುವನೇಶ್ವರಿ ಪೂಜೆಯೊಂದಿಗೆ ಆರಂಭವಾಗಬೇಕಾಗಿದ್ದ ಸಮ್ಮೇಳನವು ಗಣಪತಿ ಮತ್ತು ಕೃಷ್ಣನ ಪೂಜೆಯೊಂದಿಗೆ ಆರಂಭಗೊಂಡಿತು. ಮೈಸೂರು ರಾಜಮನೆತನದ ಉತ್ತರಾಧಿಕಾರಿ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು.

ಬಸವರಾಜ ಹಿರೇಮಠ ಅವರ ಸಂಸ್ಕೃತ ಶ್ಲೋಕಗಳ ಪಠಣದೊಂದಿಗೆ ಗಣಪತಿಗೆ ಅಕ್ಷತೆ ಹಾಕಲಾಯಿತು. ಇದರೊಂದಿಗೆ ಅಕ್ಕ ರಜತ ಮಹೋತ್ಸವ ವಿಧಿವತ್ತಾಗಿ ಆರಂಭವಾಗಿದೆ ಎಂದು ಪುರೋಹಿತರು ಘೋಷಿಸಿದರು.

ಅಕ್ಕ ಸಂಸ್ಥೆಯ ಚೇರ್ಮನ್ ಅಮರನಾಥ ಗೌಡ ಅವರೊಂದಿಗೆ ಸಂಸ್ಥೆಯ ಪದಾಧಿಕಾರಿಗಳ ಸಾರಥ್ಯದಲ್ಲಿ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ದೊರೆಯಿತು. ಸಾವಿರಾರು ಮೈಲುಗಳಾಚೆ, ಅಮೆರಿಕದ ನೆಲದಲ್ಲಿ ಕನ್ನಡದ ಧ್ವಜ ಹಾರಿಸಲು ವಿಶ್ವದ ವಿವಿಧ ಭಾಗಗಳಿಂದ ಕನ್ನಡಿಗರು ಆಗಮಿಸಿದ್ದರು. ಹೀಗಾಗಿ ಇದು ಕೇವಲ ಅಮೆರಿಕದ ಅಕ್ಕ ಸಮ್ಮೇಳನವಾಗಿರದೆ, ವಿಶ್ವ ಕನ್ನಡಿಗರ ಸಮಾವೇಶದಂತೆಯೇ ಭಾಸವಾಯಿತು.

ಪೂಜೆಯ ನಂತರ ಹೈ-ಟೀ ವ್ಯವಸ್ಥೆ ಇತ್ತು. ಸಂಜೆ ಏಳು ಗಂಟೆಗೆ ಆರಂಭವಾದ ಊಟದ ಹಾಲ್ ಹತ್ತು ಗಂಟೆಯವರೆಗೂ ತುಂಬಿ ತುಳುಕುತ್ತಿತ್ತು. ಪೂರಿ, ಪಲ್ಯ, ಅನ್ನ, ರಸಂ, ಬಜ್ಜಿ, ಬೊಂಡಾ ಮತ್ತು ಕಾಜು ಕತ್ಲಿಯ ಭೋಜನ ಭರ್ಜರಿಯಾಗಿತ್ತು.
ಸತಿಪತಿಗಳು ಒಬ್ಬರಿಗೊಬ್ಬರು ಜತೆಯಾಗಿ ಹೆಜ್ಜೆ ಹಾಕುತ್ತ ಒಳಬಂದು, ಒಬ್ಬರಿಗೊಬ್ಬರು ತುತ್ತು ನೀಡುತ್ತಿದ್ದುದು ಪ್ರೀತಿಯ ಹೊಳೆಯನ್ನು ಹರಿಸಿದಂತಿತ್ತು. ಪುಟ್ಟ ಪುಟ್ಟ ಮಕ್ಕಳ ಕಲರವ, ಯುವ ಜೋಡಿಗಳ ಮೇಳೈಸುವಿಕೆ, ಸೀರೆ-ವಡವೆಗಳ ಸಂಭ್ರಮ—ಇವೆಲ್ಲವೂ ಶ್ರೀಮಂತ ಮದುವೆಯೊಂದರ ನೆನಪನ್ನು ಮೂಡಿಸುತ್ತಿದ್ದವು.

ಪಕ್ಕದ ಹಾಲ್‌ನಲ್ಲಿ ಸಂಜೆ ಏಳು ಗಂಟೆಯಿಂದ ಭಕ್ತಿ ಸಂಗೀತದ ಅಲೆಗಳು ಕೇಳಿಬರುತ್ತಿದ್ದವು. ವಿದ್ವಾನ್ ವಿದ್ಯಾಭೂಷಣ ಮತ್ತು ವೇದಾ ವಿದ್ಯಾಭೂಷಣ ಅವರ ಸಂಗೀತ ಕಚೇರಿ ಕನ್ನಡಿಗರನ್ನು ಭಕ್ತಿರಸದಲ್ಲಿ ತೇಲಿಸಿತು.

ರಾತ್ರಿ 9 ಗಂಟೆಗೆ ವೆಂಡರ್ ಡಿನ್ನರ್ ಅಪ್ರಿಸಿಯೇಷನ್ ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ 9.30ಕ್ಕೆ ಪ್ರೈಮ್ ಟೈಮ್ ಇವೆಂಟ್‌ನಲ್ಲಿ ಡಾ. ಸುಚೇತನ ರಂಗಸ್ವಾಮಿ ಮತ್ತು ಸಿಂಚನ ದೀಕ್ಷಿತ್ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಫಿಲಿಡೆಲ್ಫಿಯಾದ ಈ ಮೊದಲ ದಿನವೇ ಅಕ್ಕ ರಜತ ಮಹೋತ್ಸವದ ಮುಂದಿನ ಎರಡು ದಿನಗಳ ಸಂಭ್ರಮಕ್ಕೆ ಮುನ್ನುಡಿ ಬರೆದಿತ್ತು. ಕನ್ನಡ ಎಲ್ಲೆಡೆ ಹರಡಬಹುದು, ಆದರೆ ಕನ್ನಡಿಗರು ಒಂದೆಡೆ ಸೇರಿದಾಗ ಅದು ಹಬ್ಬವಾಗುತ್ತದೆ; ಸಾವಿರಾರು ಮೈಲುಗಳಾಚೆ ಸೇರಿದಾಗ ಅದು ಜಾತ್ರೆಯಾಗುತ್ತದೆ.

ವರದಿ : ಜಿ ಬಿ ಪಾಟೀಲ, ಫಿಲಡೆಲ್ಫಿಯಾ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...