ಇರಾನ್‌ನೊಂದಿಗೆ ಅಮೆರಿಕ ಮಾಡಿಕೊಳ್ಳುವ ಯಾವುದೇ ಒಪ್ಪಂದವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಳ್ಳಲೇಬೇಕು. ಅವರಿಗೆ ಬೇರೆ ದಾರಿ ಇಲ್ಲ. ಇದರಲ್ಲಿ ‘ಅಂತಿಮ ನಿರ್ಧಾರ ನನ್ನದೇ’ ಆಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ನಡೆದಿದ್ದ ಕದನ ವಿರಾಮದ ನಂತರ, ಇದೇ ಮೊದಲ ಬಾರಿಗೆ ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಸಂಘರ್ಷ ತೀವ್ರಗೊಂಡಿದೆ. ಇದೇ ಸಮಯದಲ್ಲಿ ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಇಸ್ರೇಲ್ ಕುರಿತು ಮಾತನಾಡಿದ್ದಾರೆ. “ಅಂತಿಮ ತೀರ್ಮಾನಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಎಲ್ಲ ನಿರ್ಧಾರಗಳೂ ನನ್ನವೇ ಆಗಿರುತ್ತವೆ. ಅವರು (ಇಸ್ರೇಲ್) ಇಲ್ಲಿ ನಿರ್ಧಾರ ತೆಗೆದುಕೊಳ್ಳುವವರಲ್ಲ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಇರಾನ್ ನಡೆಸಿದ ಕ್ಷಿಪಣಿ ದಾಳಿಗಳು ಅಮೆರಿಕ ಮತ್ತು ಇರಾನ್ ನಡುವೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಪ್ಪಂದದ ಯಶಸ್ಸು ಅಥವಾ ವಿಫಲತೆ ಅದರ ಸ್ವಂತ ಗುಣಲಕ್ಷಣಗಳ ಮೇಲೆ ನಿರ್ಧಾರವಾಗುತ್ತದೆಯೇ ವಿನಃ ಇಂತಹ ಘಟನೆಗಳಿಂದಲ್ಲ” ಎಂದಿದ್ದಾರೆ. ಆದಾಗ್ಯೂ, ಒಪ್ಪಂದವು ಯಾವಾಗ ಪೂರ್ಣಗೊಳ್ಳಬಹುದು ಎಂಬ ಸಮಯದ ಮಿತಿಯ ಬಗ್ಗೆ ಅವರು ನಿಖರತೆ ವ್ಯಕ್ತಪಡಿಸಿಲ್ಲ.
ಫಾಕ್ಸ್ ನ್ಯೂಸ್ ಜೊತೆಗಿನ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಯಾವುದೇ ಮಿಲಿಟರಿ ದಾಳಿ ನಡೆಸದಂತೆ ನಾನು ನೆತನ್ಯಾಹು ಅವರಿಗೆ ತಿಳಿಸುತ್ತೇನೆ. ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುತ್ತೇನೆ” ಎಂದು ಹೇಳಿದ್ದಾರೆ.
“ಒಂದು ವೇಳೆ ಇರಾನ್ ಜೊತೆಗಿನ ಮಾತುಕತೆಗಳು ಯಶಸ್ವಿಯಾಗದಿದ್ದರೆ, ಮೊದಲನೆಯದಾಗಿ, ನಾವು ಈ ಹಿಂದೆ ಮಿಲಿಟರಿ ಕಾರ್ಯಾಚರಣೆ ನಡೆಸದೆ ಬಾಕಿ ಉಳಿಸಿಕೊಂಡಿರುವ ಇರಾನ್‌ನ ಉಳಿದ ಜಾಗಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಬಹುದು. ಅಥವಾ ಇರಾನ್ ಮೇಲಿನ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನವನ್ನು ಹಾಗೆಯೇ ಮುಂದುವರಿಸಬಹುದು” ಎಂದಿದ್ದಾರೆ.
ಲೆಬನಾನ್‌ನ ಬೈರೂತ್‌ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಇತ್ತೀಚೆಗೆ ದಾಳಿ ನಡೆಸಿತ್ತು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ತರಲು ಅಮೆರಿಕ ಪ್ರಯತ್ನಿಸುತ್ತಿದ್ದರೂ, ಇಸ್ರೇಲ್ ಬೈರೂತ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ತನ್ನ ದಾಳಿಯನ್ನು ಮುಂದುವರಿಸಿದೆ. ಅಮೆರಿಕದೊಂದಿಗೆ ಯಾವುದೇ ಒಪ್ಪಂದಕ್ಕೆ ಬರಬೇಕಾದರೆ ಇಸ್ರೇಲ್ ಕಾಯಂ ಕದನ ವಿರಾಮ ಘೋಷಿಸಬೇಕು ಎಂಬುದು ಇರಾನ್‌ನ ಶರತ್ತಾಗಿದೆ.




