ಅಮೆರಿಕದ ಬಲಪಂಥೀಯ ಯುವ ಚಿಂತಕ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಎಂದೇ ಗುರುತಿಸಿಕೊಂಡಿದ್ದ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಚಾರ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅವರ ಸಾವನ್ನು ಟ್ರಂಪ್ ದೃಢಪಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಉತಾಹ್‌ನ ಒರೆಮ್ ನಗರದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ‘ದಿ ಅಮೆರಿಕನ್ ಕಮ್‌ಬ್ಯಾಕ್’ ಕಾರ್ಯಕ್ರಮದಲ್ಲಿ ಚಾರ್ಲಿ ಭಾಗಿಯಾಗಿದ್ದರು. ಅವರನ್ನು ದುಷ್ಕರ್ಮಿಗಳು ಸುಮಾರು 100 ಮೀಟರ್ ಅಂತರದಿಂದ ಕತ್ತಿನ ಭಾಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆತ ಘಟನೆಯಲ್ಲಿ ಭಾಗಿಯಾಗಿಲ್ಲವೆಂದು ಬಿಡುಗಡೆ ಮಾಡಲಾಗಿದೆ.
ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, “ಈ ದೌರ್ಜನ್ಯ ಮತ್ತು ಇತರ ರಾಜಕೀಯ ಹಿಂಸಾಚಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ನನ್ನ ಆಡಳಿತವು ಪತ್ತೆ ಮಾಡಲಿದೆ. ಇಂತಹ ಕೃತ್ಯಗಳಿಗೆ ಹಣಕಾಸು ಒದಗಿಸುವ ಮತ್ತು ಬೆಂಬಲಿಸುವ ಸಂಸ್ಥೆಗಳನ್ನೂ ಹಿಡಿದು ಕ್ರಮ ಕೈಗೊಳ್ಳುತ್ತೇವೆ. ನ್ಯಾಯಾಧೀಶರು, ಕಾನೂನು ಜಾರಿ ಅಧಿಕಾರಿಗಳು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಪ್ರತಿಯೊಬ್ಬರ ಮೇಲೆ ದಾಳಿ ಮಾಡುವವರನ್ನೂ ಹಿಡಿಯುತ್ತೇವೆ” ಎಂದು ಹೇಳಿದ್ದಾರೆ.
ಚಾರ್ಲಿ ಕಿರ್ಕ್ ಅವರು ‘conservative organization’ ಎಂಬ ಸಂಘಟನೆಯನ್ನು ಕಟ್ಟಿದ್ದರು. ಬಲಪಂಥೀಯ ವಿಚಾರಗಳನ್ನು ಹರಡುತ್ತಿದ್ದರು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಭಾರೀ ಪ್ರಚಾರ ಮಾಡಿದ್ದರು. ಅವರು ಬುಧವಾರ, ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಭಾಗಿಯಾಗಿದ್ದರು. ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಅವರ ಕುತ್ತಿಗೆಯ ಭಾಗಕ್ಕೆ ಗುಂಡು ತಗುಲಿದ್ದರಿಂದ ತೀವ್ರವಾಗಿ ರಕ್ತ ಸೋರುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟರು.
ಆದರೆ, ಅವರ ಹತ್ಯೆಗೆ ಕಾರಣ ಏನೆಂಬುದು ಈವರೆಗೆ ತಿಳಿದು ಬಂದಿಲ್ಲ. ಹಂತಕರ ಪತ್ತೆಗಾಗಿ ಎಫ್‌ಬಿಐ ತೀವ್ರ ಕಾರ್ಯಾಚರಣೆ ಆರಂಭಿಸಿದೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅವರಲ್ಲಿ ಒಬ್ಬನನ್ನು ಬಿಡುಗಡೆ ಮಾಡಲಾಗಿದೆ. ಇನ್ನೋರ್ವ ಆರೋಪಿ ಪೊಲೀಸರ ವಶದಲ್ಲಿಯೇ ಇದ್ದಾರೆ. ಆದಾಗ್ಯೂ, ಆತನನ್ನು ಬಂಧಿಸಿಲ್ಲ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರು ತಿಳಿಸಿದ್ದಾರೆ.