ಇಸ್ರೇಲ್ ವಿರೋಧಿ ಪ್ರತಿಭಟನೆ ವೇಳೆ ಗಾಜಾ ಯುದ್ಧದ ಬಗ್ಗೆ ನಾವು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದೇವೆಂದು ʼಫೋಟೊ ಜರ್ನಲಿಸ್ಟ್ʼ ಓರ್ವರು ಕೈಗೆ ಬೆಂಕಿ ಹಚ್ಚಿಕೊಂಡು ಪ್ರತಿಭಟಿಸಿದ ಘಟನೆ ಅಮೆರಿಕದ ಶ್ವೇತಭವನದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಫೋಟೊ ಜರ್ನಲಿಸ್ಟ್ ಸ್ಯಾಮ್ಯುಯೆಲ್ ಮೆನಾ ಜೂನಿಯರ್ ಕೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕೈಗಳನ್ನು ಮೆನಾ ಮೇಲಕ್ಕೆ ಹಿಡಿದುಕೊಂಡಿರುವುದು, ಬಟ್ಟೆಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುವುದು, ಅವರ ಕೈ ಮೇಲೆ ಇನ್ನೋರ್ವರು ನೀರನ್ನು ಸುರಿಯುತ್ತಿರುವುದು ಕಂಡು ಬಂದಿದೆ.
ಇಸ್ರೇಲ್ ವಿರೋಧಿ ಪ್ರತಿಭಟನೆಯ ವೇಳೆ ಮೆನಾ ಅವರು ತಮ್ಮ ಎಡಗೈಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ಮೆನಾ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಈ ಬಗ್ಗೆ ಮೇನಾ ತಮ್ಮ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದು, ಗಾಜಾ ಸಂಘರ್ಷಕ್ಕೆ ಸಂಬಂಧಿಸಿ ಮಾಧ್ಯಮದ ವಸ್ತುನಿಷ್ಠತೆಯನ್ನು ಪ್ರಶ್ನಿಸಿದ್ದಾರೆ. ತನ್ನ ಪೋಸ್ಟ್ ನಲ್ಲಿ ಅವರು ಯುದ್ಧ ಪೀಡಿತ ಮಕ್ಕಳಿಗೆ ಸಂದೇಶವನ್ನು ಬರೆದು ಸಂಘರ್ಷದಲ್ಲಿ ಕೈಕಾಲುಗಳನ್ನು ಕಳೆದುಕೊಂಡಿರುವ ಗಾಜಾದ 10,000 ಮಕ್ಕಳಿಗೆ ತಮ್ಮ ಎಡಗೈಯನ್ನು ಅರ್ಪಿಸುವುದಾಗಿ ಹೇಳಿದ್ದಾರೆ.
ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ವಾಲ್ಟರ್ ಕ್ರಾಂಕೈಟ್ ಸ್ಕೂಲ್ ಆಫ್ ಜರ್ನಲಿಸಂಲ್ಲಿ ಪದವಿ ಶಿಕ್ಷಣ ಮುಗಿಸಿರುವ ಪತ್ರಕರ್ತ ಸ್ಯಾಮ್ಯುಯೆಲ್ ಮೆನಾ ಜೂನಿಯರ್ ಪ್ರಸ್ತುತ ‘AZFamily’ ಮಾಧ್ಯಮದಲ್ಲಿ ಫೋಟೊ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.
