ಅಪ್ರಾಪ್ತ ಬಾಲಕನೊಂದಿಗೆ ವಿವಾಹೇತರ ಒಪ್ಪಿತ ಲೈಂಗಿಕ ಸಂಬಂಧ ಬೆಳೆಸಿದ್ದು, ಆ ಸಂಬಂಧದಿಂದ ಗರ್ಭವತಿಯಾಗಿ, ಮಗುವಿಗೆ ಜನ್ಮ ನೀಡಿದ್ದ ಐಸ್‌ಲ್ಯಾಂಡ್ ಸಚಿವೆಯೊಬ್ಬರು ಇದೀಗ ರಾಜೀನಾಮೆ ನೀಡಿದ್ದಾರೆ.
ಐಸ್‌ಲ್ಯಾಂಡ್‌ನ ಮಕ್ಕಳ ಸಚಿವೆ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 30 ವರ್ಷಗಳ ಹಿಂದೆ ಬಾಲಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಮಗುವಿಗೆ ಜನ್ಮವನ್ನೂ ನೀಡಿದ್ದರು. ಆ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಗಳು ಭುಗಿದಿದ್ದವು. ಚರ್ಚೆ, ಟೀಕೆಗಳ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ವಿವಾದಗಳಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದಾರೆ.
ಪ್ರಸ್ತುತ 55 ವರ್ಷದ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ಅವರು ತಮ್ಮ 22 ವಯಸ್ಸಿನಲ್ಲಿ 15 ವರ್ಷದ ಬಾಲಕನೊಂದಿಗೆ ವಿವಾಹೇತರ ಒಪ್ಪಿತ ಸಂಬಂಧ ಹೊಂದಿದ್ದುದ್ದಾಗಿ ಹೇಳಿಕೊಂಡಿದ್ದಾರೆ. ಆ ಸಂಬಂಧದಿಂದಲೇ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ್ದಾಗಿಯೂ ಹೇಳಿಕೊಂಡಿದ್ದಾರೆ.
“ತಮಗೆ ಧಾರ್ಮಿಕ ಸಭೆಯೊಂದರಲ್ಲಿ ಬಾಲಕನ ಪರಿಚಯವಾಗಿತ್ತು. ಅಲ್ಲದೆ, ತಮ್ಮ ಕಷ್ಟದ ಸಮಯದಲ್ಲಿ ಬಾಲಕ ಮನೆಯಲ್ಲಿ ಆಶ್ರಯ ಪಡೆದಿದ್ದ. ಆ ಸಮಯದಲ್ಲಿ ಇಬ್ಬರೂ ಪರಸ್ಪರ ಆಕರ್ಷಿತರಾಗಿದ್ದವು. ಒಪ್ಪಿತ ಸಂಬಂಧದೊಂದಿಗೆ ಜೊತೆಗಿದ್ದೆವು. ನನ್ನ 23ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಅಸ್ತಿಲ್ಡರ್ ಲೋವಾ ಅವರು ತಮ್ಮ ಮಗನನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ನ್ಯಾಯ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಹೊರಟ್ಟಿ
ಐಸ್‌ಲ್ಯಾಂಡ್‌ನಲ್ಲಿ ಒಪ್ಪಿತ ಲೈಂಗಿಕ ಸಂಬಂಧದ ಕನಿಷ್ಠ ವಯಸ್ಸು 15 ವರ್ಷ ಎಂಬ ನಿರ್ಬಂಧವಿದೆ. ಒಂದು ವೇಳೆ, ಸಂಬಂಧ ಬೆಳೆಸುವವರಲ್ಲಿ ಹಿರಿಯರಾಗಿದ್ದವರು ಆ ಕಿರಿಯರಿಗೆ ಮಾರ್ಗದರ್ಶಕ, ಶಿಕ್ಷಕ, ಆರ್ಥಿಕವಾಗಿ ನೆರವುದಾತರಾಗಿದ್ದರೆ, ಅಂತಹವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಿರಿಯರೊಂದಿಗೆ ಸಂಬಂಧ ಹೊಂದುವುದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಅಂತಹ ಅಪರಾಧಗಳಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.