ಚಿಲಿ ದೇಶದ ವಾಲ್‌ಪರೈಸೊ ಪ್ರಾಂತ್ಯದ ಅರಣ್ಯದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಕನಿಷ್ಠ 46 ಮಂದಿ ಮೃತಪಟ್ಟು, ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.
ದೇಶದ ಕೇಂದ್ರ ಹಾಗೂ ಮಧ್ಯ ಭಾಗದ ವಾಲ್‌ಪರೈಸೊ ಪ್ರಾಂತ್ಯದ 92 ಅರಣ್ಯಗಳಲ್ಲಿ ಫೆ.03 ರಂದು ಉಂಟಾದ ಕಾಡ್ಗಿಚ್ಚಿನಿಂದ ಈ ಘಟನೆ ಸಂಭವಿಸಿದೆ ಎಂದು ಚಿಲಿಯ ಅಂತರಿಕ ಸಚಿವ ಕರೋಲಿನಾ ತೊಹಾ ತಿಳಿಸಿದ್ದಾರೆ.
ಕಾಡ್ಗಿಚ್ಚು ಜನನಿಬಿಡ ಸಮೀಪ ಆವರಿಸಿದ ಕಾರಣ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ವೇಳೆ ಕಾಡ್ಗಿಚ್ಚಿನ ಸಮೀಪವಿರುವ ಪ್ರದೇಶದಲ್ಲಿ ನೀವು ವಾಸವಿದ್ದರೆ ಮನೆಯನ್ನು ಖಾಲಿ ಮಾಡಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಬೆಂಕಿಯು ವೇಗವಾಗಿ ಆಗಮಿಸುತ್ತಿದೆ. ಹವಾಮಾನ ಪರಿಸ್ಥಿತಿಯಿಂದಾಗಿ ಬೆಂಕಿಯನ್ನು ನಂದಿಸಲು ಕಷ್ಟವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಭಯಾನಕವಾದ ಕಾಡ್ಗಿಚ್ಚು ಎಲ್ಲಡೆ ಆವರಿಸುತ್ತಿರುವ ಕಾರಣ ತಮ್ಮ ಮನೆಗಳನ್ನು ತೊರೆಯುವಂತೆ ಸಾವಿರಾರು ಮಂದಿ ವಾಸವಿರುವ ಪ್ರದೇಶಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
ಕಾಡ್ಗಿಚ್ಚಿನ ವಿಕೋಪದ ಬಗ್ಗೆ ರಾಷ್ಟ್ರೀಯ ವಾಹಿನಿಯಲ್ಲಿ ಮಾತನಾಡಿರುವ ಚಿಲಿ ಅಧ್ಯಕ್ಷ ಗಾರ್ಬಿಯಲ್ ಬೋರಿಕ್, ಬೆಂಕಿಯು ಮತ್ತಷ್ಟು ಆವರಿಸುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಗ್ನಿಶಾಮಕದಳದವರು ಕೂಡ ಬೆಂಕಿ ಹೊತ್ತಿಕೊಂಡಿರುವ ಪ್ರದೇಶಕ್ಕೆ ಆಗಮಿಸಲು ಕಷ್ಟಪಡುತ್ತಿದ್ದಾರೆ. ರಕ್ಷಣಾ ಕಾರ್ಯಕರ್ತರು ಆಗಮಿಸುವವರೆಗೂ ತಾಳ್ಮೆಯಿಂದ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕಾಡ್ಗಿಚ್ಚು 8 ಸಾವಿರ ಎಕ್ಟೇರ್ ಪ್ರದೇಶವಿರುವ ಕ್ಯೂಲ್‌ಪ್ಯೊ ಮತ್ತು ವಿಲ್ಲಾ ಅಲೆಮನಾ ಅರಣ್ಯಗಳನ್ನು ಭಸ್ಮ ಮಾಡಿದೆ. ಜನ ವಾಸಿಸುವ ಕೆಲವು ಕರಾವಳಿ ಪ್ರದೇಶಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಾಲ್‌ಪರೈಸೊ ಪ್ರಾಂತ್ಯದಲ್ಲಿ ಬೆಂಕಿಯನ್ನು ನಂದಿಸಿ ಸಾರ್ವಜನಿಕರನ್ನು ರಕ್ಷಿಸಲು 19 ಹೆಲಿಕಾಪ್ಟರ್‌ಗಳು ಹಾಗೂ 450ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಆಗಮಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಜನವರಿಯಲ್ಲಿ ಕೊಲಂಬಿಯಾದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 42 ಸಾವಿರ ಎಕರೆ ಪ್ರದೇಶದ ಅರಣ್ಯ ಭಸ್ಮಗೊಂಡಿತ್ತು.