ಪಾಕಿಸ್ತಾನದ ಸೈನಿಕರು ಪ್ರಯಾಣಿಸುತ್ತಿದ್ದ ಮಿಲಿಟರಿ ವಾಹನದ ಮೇಲೆ ಬಲೂಚಿ ಬಂಡುಕೋರರು ದಾಳಿ ನಡೆಸಿದ್ದು, 90 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ‘ಬಲೂಚ್ ಲಿಬರೇಶನ್ ಆರ್ಮಿ’ (ಬಿಎಲ್‌ಎ) ಹೇಳಿದೆ. ಆದರೆ, ದಾಳಿಯಲ್ಲಿ ಕೇವಲ 5 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಎಲ್‌ಎ – ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಒತ್ತಾಯಿಸುತ್ತಿರುವ ಪ್ರತ್ಯೇಕವಾಗಿ ಸಂಘಟನೆಯಾಗಿದೆ. ಪಾಕ್ ಬೆಂಗಾವಲು ಪಡೆಯ ಮೇಲೆ ತಾವೇ ದಾಳಿ ನಡೆಸಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ. “ಕೆಲವು ಗಂಟೆಗಳ ಹಿಂದೆ ಬಲೂಚಿಸ್ತಾನದ ನೋಶ್ಕಿಯ ಆರ್‌ಸಿಡಿ ಹೆದ್ದಾರಿಯಲ್ಲಿರುವ ರಕ್ಷನ್ ಮಿಲ್ ಬಳಿ ಪಾಕ್ ಪಡೆಯ ಮೇಲೆ ದಾಳಿ ನಡೆಸಿದ್ದೇವೆ. ಸೇನೆಯ ಎಂಟು ಬಸ್‌ಗಳ ಮೇಲೆ ದಾಳಿ ಮಾಡಿದ್ದು, ಒಂದು ಬಸ್ ಸಂಪೂರ್ಣವಾಗಿ ನಾಶವಾಗಿದೆ” ಎಂದು ಹೇಳಿದೆ.
ದಾಳಿಯನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಖಂಡಿಸಿದ್ದಾರೆ.