ಸಿಖ್ ಪ್ರತ್ಯೇಕತಾವಾದಿ ಗುಂಪಾದ ಖಲಿಸ್ತಾನ್ ಬಗ್ಗೆ ವರದಿ ಮಾಡಿದ್ದಕ್ಕೆ, ತನ್ನ ವರದಿಯನ್ನು ಉಲ್ಲೇಖಿಸಿ, ಕೆಲಸದ ವೀಸಾವನ್ನು ವಿಸ್ತರಿಸಲು ಮೋದಿ ಸರ್ಕಾರ ನಿರಾಕರಿಸಿದ ನಂತರ, ನನ್ನನ್ನು ಭಾರತ ತೊರೆಯುವಂತೆ ಬಲವಂತಪಡಿಸಲಾಯಿತು. ಹಾಗಾಗಿ, ನಾನು ಭಾರತ ತೊರೆದಿದ್ದೇನೆ ಎಂದು ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಗಂಭೀರ ಆರೋಪ ಹೊರಿಸಿದ್ದಾರೆ.
ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ(ABC) ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವನಿ ಡಯಾಸ್, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ವರದಿ ಮಾಡಿದ್ದಕ್ಕೆ ಸರ್ಕಾರ ಆಕ್ಷೇಪಿಸಿದ ನಂತರ ಲೋಕಸಭೆ ಚುನಾವಣೆ ಪ್ರಾರಂಭವಾದ ಏಪ್ರಿಲ್ 19 ರಂದು ಭಾರತ ತೊರೆಯಬೇಕಾಯಿತು ಎಂದು ತಿಳಿಸಿದ್ದಾರೆ.
Last week, I had to leave India abruptly. The Modi Government told me my visa extension would be denied, saying my reporting “crossed a line”. After Australian Government intervention, I got a mere two-month extension …less than 24 hours before my flight. 1/2
— Avani Dias (@AvaniDias) April 22, 2024
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಕಳೆದ ವಾರ, ನಾನು ಹಠಾತ್ತನೆ ಭಾರತ ತೊರೆಯಬೇಕಾಯಿತು. ಮೋದಿ ಸರ್ಕಾರವು ನನ್ನ ವರದಿಯು ನಿಯಮ ಮೀರಿದೆ ಎಂದು ಹೇಳಿ ವೀಸಾ ವಿಸ್ತರಣೆ ನಿರಾಕರಿಸಿತ್ತು. ಹಾಗಾಗಿ, ಅವಧಿ ಮುಗಿದದ್ದಕ್ಕಾಗಿ ಭಾರತ ತೊರೆಯಬೇಕಾಯಿತು” ಎಂದು ಬರೆದುಕೊಂಡಿದ್ದಾರೆ.
“ಭಾರತೀಯ ಸಚಿವಾಲಯದ ನಿರ್ದೇಶನದ ಕಾರಣದಿಂದ ಚುನಾವಣಾ ಮಾನ್ಯತೆ ಬರುವುದಿಲ್ಲ ಎಂದು ತಿಳಿಸಲಾಯಿತು. ಮೋದಿ ಪ್ರಜಾಪ್ರಭುತ್ವ ತಾಯಿ ಎಂದು ಕರೆದಿದ್ದ ಮೊದಲ ಹಂತದ ಮತದಾನದಿಂದು ನಾನು ಭಾರತ ತೊರೆದಿದ್ದೇನೆ” ಎಂದು ಡಯಾಸ್ ಹೇಳಿದ್ದಾರೆ. ಅವನಿ ಡಯಾಸ್, ಎಬಿಸಿ ಸಂಸ್ಥೆಯ ಪರ ಭಾರತದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಿದ್ದರು.
ಆಸ್ಟ್ರೇಲಿಯನ್ ಸರ್ಕಾರದ ಮಧ್ಯಪ್ರವೇಶದ ನಂತರ ವೀಸಾವನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಯಿತು. ಇದನ್ನು ನನ್ನ ವಿಮಾನ ಪ್ರಯಾಣಕ್ಕೂ 24 ಗಂಟೆಗಳ ಮುನ್ನ ತಿಳಿಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಈ ನಿರ್ಧಾರವನ್ನು ಡಯಾಸ್‌ಗೆ ತಿಳಿಸಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಹೇಳಿದೆ.
ನಿಜ್ಜರ್ ಹತ್ಯೆಯ ಕುರಿತಾದ ತನ್ನ ಸುದ್ದಿ ಸರಣಿಗೆ ಭಾರತದಲ್ಲಿ ಯೂಟ್ಯೂಬ್ ಬ್ಲಾಕ್ ಮಾಡಿದೆ ಎಂದು ಎಬಿಸಿ ಹೇಳಿದೆ.
‘ತಪ್ಪುದಾರಿಗೆಳೆಯುವ ಮಾಹಿತಿ’ ಎಂದ ಕೇಂದ್ರ ಸರ್ಕಾರ!
ಅವನಿ ಡಯಾಸ್ ಅವರ ಹೇಳಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ಪತ್ರಕರ್ತೆ ಮಾಡಿರುವ ಆರೋಪವು ತಪ್ಪುದಾರಿಗೆಳೆಯುವಂಥದ್ದು ಹಾಗೂ ಚೇಷ್ಟೆಯದ್ದು’ ಎಂದಿದೆ.
Misleading: Sources As ABC Journalist Claims She Was Told To Leave Indiahttps://t.co/M0ukCjg7K4 pic.twitter.com/lLZ8A0r3U8
— NDTV (@ndtv) April 23, 2024
ಆಸ್ಟ್ರೇಲಿಯಾದ ಹಿರಿಯ ಪತ್ರಕರ್ತೆಗೆ ವೀಸಾವನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಲಾಗಿದೆ, ಅವರು ಲೋಕಸಭಾ ಚುನಾವಣೆಗಳ ಬಗ್ಗೆ ವರದಿ ಮಾಡಬಹುದು ಎಂದು ಅಧಿಕಾರಿಯೋರ್ವರ ಹೇಳಿಕೆ ಉಲ್ಲೇಖಿಸಿ, ಎನ್‌ಡಿಟಿವಿ ವರದಿ ಮಾಡಿದೆ.
