ಪಾಕಿಸ್ತಾನದಿಂದ ಬಲೂಚಿಸ್ತಾನ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗಬೇಕೆಂದು ಬಂಡೆದ್ದಿರುವ ‘ಬಲೂಚಿಸ್ತಾನ ಲಿಬರೇಷನ್ ಆರ್ಮಿ’, ಇದೀಗ ಬಲೂಚಿಸ್ತಾನ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದೆ. ನಾನು ಪಾಕಿಸ್ತಾನದ ಭಾಗವಲ್ಲ, ನಮ್ಮದು ಸ್ವತಂತ್ರ ರಾಷ್ಟ್ರ ಎಂದು ಸಂಘಟನೆಯ ನಾಯಕ ಮೀರ್ ಯಾರ್ ಬಲೂಚ್ ಘೋಷಿಸಿದ್ದಾರೆ.
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕಗೊಳಿಸಬೇಕೆಂದು ಬಲೂಚಿ ಸಂಘಟನೆಯು ದಶಕಗಳಿಂದ ಹಿಂಸಾಚಾರ, ದಾಳಿ, ಪಾಕ್ ಸೇನೆಜೊತೆಗೆ ಸಂಘರ್ಷ ನಡೆಸುತ್ತಿತ್ತು. ಇದೀಗ, ತಮ್ಮದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ.
ಬಲೂಚಿ ಸ್ವತಂತ್ರ ರಾಷ್ಟ್ರವೆಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೀರ್ ಯಾರ್ ಬಲೂಚ್, “ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದಾದ್ಯಂತ ಬಲೂಚ್ ಜನರು ಬೀದಿಗಿಳಿದಿದ್ದಾರೆ. ಬಲೂಚಿಸ್ತಾನವು ಪಾಕಿಸ್ತಾನದ ಭಾಗವಲ್ಲ ಎಂದು ರಾಷ್ಟ್ರೀಯ ತೀರ್ಪು ನೀಡಿದ್ದಾರೆ. ಜಗತ್ತು ಇನ್ನು ಮೌನವಾಗಿರಬಾರದು” ಎಂದಿದ್ದಾರೆ.
ಇದೇ ವೇಳೆ ಭಾರತವನ್ನು ವಿನಂತಿಸಿರುವ ಅವರು, “ಭಾರತೀಯ ದೇಶಭಕ್ತ ಮಾಧ್ಯಮಗಳು, ಯೂಟ್ಯೂಬ್‌ಗಳು, ಭಾರತವನ್ನು ರಕ್ಷಿಸಲು ಹೋರಾಡುತ್ತಿರುವ ಎಲ್ಲ ಬುದ್ಧಿಜೀವಿಗಳು ಇನ್ನು ಮುಂದೆ ಬಲೂಚಿ ಜನರನ್ನು ‘ಪಾಕಿಸ್ತಾನದ ಸ್ವಂತ ಜನರು’ ಎಂದು ಪರಿಗಣಿಸಬೇಡಿ, ಕರೆಯಬೇಡಿ. ನಾವು ಪಾಕಿಸ್ತಾನಿಗಳಲ್ಲ, ನಾವು ಸ್ವತಂತ್ರ ಬಲೂಚಿಸ್ತಾನಿಗಳು” ಎಂದು ಹೇಳಿದ್ದಾರೆ.