ಭಾರತ-ಪಾಕಿಸ್ತಾನ ಸಂಬಂಧಗಳ ನಡುವಿನ ಸಂಘರ್ಷದ ಮಧ್ಯೆ, ಕೆಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಯೂಟ್ಯೂಬ್ ಚಾನೆಲ್ ಗಳು ಭಾರತದಲ್ಲಿ ಮತ್ತೆ ವೀಕ್ಷಣೆಗೆ ಲಭ್ಯವಾಗಿವೆ. ಕ್ರಿಕೆಟಿಗರಾದ ಶೋಯೆಬ್ ಅಖ್ತರ್, ಬಾಸಿತ್ ಅಲಿ ಮತ್ತು ರಶೀದ್ ಲತೀಫ್ ಅವರ ಚಾನೆಲ್ ಗಳಿಗೆ ಮೂರು ತಿಂಗಳ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ, ಕೇಂದ್ರ ಸರ್ಕಾರ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಆ ಚಾನೆಲ್ ಗಳು ಸೇನೆ ಹಾಗೂ ದೇಶದ ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಮಾಹಿತಿ ಹರಡಿದ್ದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!
ಗೃಹ ಸಚಿವಾಲಯದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 16 ಯೂಟ್ಯೂಬ್ ಚಾನೆಲ್‌ಗಳು ಇನ್ನೂ ನಿರ್ಬಂಧಿಸಲಾಗಿದೆ. ಡಾನ್ ನ್ಯೂಸ್ (1.96 ಮಿಲಿಯನ್ ಫಾಲೋವರ್ಸ್), ಸಮಾ ಟಿವಿ (12.7 ಮಿಲಿಯನ್ ಫಾಲೋವರ್ಸ್), ARY ನ್ಯೂಸ್ (14.6 ಮಿಲಿಯನ್ ಫಾಲೋವರ್ಸ್), ಜಿಯೋ ನ್ಯೂಸ್ (18.1 ಮಿಲಿಯನ್ ಫಾಲೋವರ್ಸ್), ಬೋಲ್ ನ್ಯೂಸ್ (7.85 ಮಿಲಿಯನ್ ಫಾಲೋವರ್ಸ್) ಮತ್ತು ಇತರ 11 ಚಾನೆಲ್ ಗಳಿಗೆ ಇನ್ನೂ ನಿಷೇಧಿಸಲಾಗಿದೆ.
ಪಾಕಿಸ್ತಾನಿ ನಟಿಯರಾದ ಮಾವ್ರಾ ಹೊಕೇನ್ ಮತ್ತು ಸಬಾ ಕಮರ್ ಅವರ ಇನ್‌ಸ್ಟಾಗ್ರಾಂ ಖಾತೆಗಳು ಕೂಡಾ ಭಾರತದಲ್ಲಿ ಮತ್ತೆ ಲಭ್ಯವಾಗಿವೆ. ಮಂಗಳವಾರ, ಹಲವಾರು ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಪ್ರೊಫೈಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.ಈ ನಡುವೆ, ದಿಲ್ಜಿತ್ ದೋಸಾಂಜ್ ಅಭಿನಯದ ಸರ್‌ದಾರ್ ಜಿ 3 ಚಿತ್ರದ ಭಾಗವಾಗಿರುವ ಹನಿಯಾ ಆಮಿರ್ ಅವರ ಪ್ರೊಫೈಲ್ ಗೆ ನಿಷೇಧ ಮುಂದುವರಿದಿದೆ. ಸರ್‌ದಾರ್ ಜಿ 3 ಚಿತ್ರವು ಭಾರತದಲ್ಲಿ ಬಿಡುಗಡೆಯಾಗದಿದ್ದರೂ, ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ನಡುವೆ ನಿರ್ಬಂಧವನ್ನು ತೆರವುಗೊಳಿಸಿದ ಒಂದು ದಿನದ ಒಳಗಾಗಿ ಮತ್ತೆ ನಿರ್ಬಂಧ ವಿಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.