ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಸೇನಾ ಮುಖ್ಯಸ್ಥ ವಾಕರ್ ಉಜ್ ಜಮಾನ್ ಹೇಳಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರ ಮಧ್ಯಾಹ್ನ 2:30 ರ ಸುಮಾರಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂಗಾಬಬಾನ್‌ನಿಂದ ಹೊರಟಿದ್ದಾರೆ. ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ‘ಸುರಕ್ಷಿತ ಸ್ಥಳ’ಕ್ಕೆ ತೆರಳಿದರು ಎಂದು ಬಾಂಗ್ಲಾದೇಶ ಮಾಧ್ಯಮ ವರದಿ ಮಾಡಿದೆ.
ಭಾರತಕ್ಕೆ ಶೇಖ್ ಹಸೀನಾ ಆಗಮಿಸಿದ್ದಾರೆ ಎಂದು ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಮಿಲಿಟರಿ ಆಡಳಿತ ಆರಂಭವಾಗಿದೆ.
Bangladesh Prime Minister Sheikh Hasina has resigned; interim government to take over, says Army chief Waker uz Zaman
— Press Trust of India (@PTI_News) August 5, 2024
ಇದನ್ನು ಓದಿದ್ದೀರಾ? ಬಾಂಗ್ಲಾದೇಶ | ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ; 100 ಮಂದಿ ಸಾವು
ಭಾನುವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಯು ಮತ್ತೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು ಭೀಕರ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾ ದೇಶದಾದ್ಯಂತ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಹೇರಲಾಗಿದೆ.
ಉದ್ಯೋಗ ಮೀಸಲಾತಿ ವಿಚಾರಕ್ಕೆ ಸಂಬಂಧಸಿದಂತೆ ಹಲವಾರು ದಿನಗಳಿಂದ ಬಾಂಗ್ಲಾದೇಶದಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಆಡಳಿತ ಪಕ್ಷದ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು, ಅಲ್ಲಲ್ಲಿ ಘರ್ಷಣೆ ನಡೆದಿದೆ.
ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 30ರಷ್ಟು ಮೀಸಲಿಡುವ ವ್ಯವಸ್ಥೆ ವಿರುದ್ಧ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದು, ಇತ್ತೀಚಿಗಷ್ಟೆ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ. ಅಂದಿನಿಂದ ಈವರೆಗೂ 11,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.