ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಬೆಂಬಲ ಕೋರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿದ ನಂತರ ನಿರೀಕ್ಷಿಸಿದ ಫಲ ಸಿಗದೆ ವಾಪಸಾಗಿದ್ದ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ಇತರ ಪಾಶ್ಚಿಮಾತ್ಯ ನಾಯಕರನ್ನು ಭೇಟಿ ಮಾಡಿ ನೆರವು ಪಡೆದಿದ್ದಾರೆ.
ಕೀರ್ ಸ್ಟಾರ್ಮರ್ ಹಾಗೂ ಐರೋಪ್ಯ ದೇಶಗಳ ನಾಯಕರನ್ನು ಭೇಟಿ ಮಾಡಿದ ವ್ಲಾದಿಮಿರ್ ಝೆಲೆನ್ಸ್ಕಿ ಯುದ್ಧೋಪಕರಣಗಳು ಹಾಗೂ ಆರ್ಥಿಕ ಸಹಾಯ ಪಡೆಯುವ ಮಾತುಕತೆಗಳು ಯಶಸ್ವಿಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯುದ್ದೋಪಕರಣಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಅಮೆರಿಕ ನೀಡುವ ಭರವಸೆ ಕೊನೆಗೊಂಡ ನಂತರ ಜರ್ಮನಿ ಒಳಗೊಂಡ ಐರೋಪ್ಯ ದೇಶಗಳ ನಾಯಕರು 3.1 ಬಿಲಿಯನ್ ಡಾಲರ್ ನೆರವನ್ನು ಉಕ್ರೇನ್‌ಗೆ ನೀಡುವುದಾಗಿ ತಿಳಿಸಿವೆ.
ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿ ಮಾಡಿ ಸಹಾಯ ಹಸ್ತದ ಭರವಸೆಯ ಜೊತೆ ಯುದ್ಧವನ್ನು ನಿಲ್ಲಿಸಲು ರಷ್ಯಾವನ್ನು ಒತ್ತಾಯಿಸುವಂತೆ ಅಮೆರಿಕಕ್ಕೆ ಮನವರಿಕೆ ಮಾಡುವುದಾಗಿ ಐರೋಪ್ಯ ನಾಯಕರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ಪಾಕ್ ವಿರುದ್ಧದ ಒಂದು ಪಂದ್ಯ – ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳ ಕಿರೀಟ
ಮೂರು ವರ್ಷದಿಂದ ರಷ್ಯಾ ಉಕ್ರೇನ್ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದು, ಈ ಕಾರಣದಿಂದ ನಾವು ಮಹತ್ವದ ಘಟ್ಟದಲ್ಲಿದ್ದೇವೆ. ಹೀಗಾಗಿ ನಾವು ಉಕ್ರೇನ್‌ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವನ್ನು ದ್ವಿಗುಣಗೊಳಿಸುವ ಅಚಲ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಮ್ಮ ಒಕ್ಕೂಟದ ಸಹಭಾಗಿತ್ವದಲ್ಲಿ ಮಿತ್ರ ರಾಷ್ಟ್ರಕ್ಕೆ ಭದ್ರತಾ ಖಾತರಿಯನ್ನು ತೀವ್ರಗೊಳಿಸುವದರ ಜೊತೆ ಅಮೆರಿಕದೊಂದಿಗೆ ಮಾತುಕತೆಯನ್ನು ಮುಂದುವರೆಸುತ್ತೇವೆ ಎಂದು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರಧಾನಿಯೊಂದಿಗೆ ನಡೆದ ಸಭೆಯಲ್ಲಿ ಗಮನಾರ್ಹ ಬೆಳವಣಿಯ ನಂತರ ಇಂದು (ಮಾ.03)ಉಕ್ರೇನ್ ಪ್ರಧಾನಿ ವ್ಲಾದಿಮಿರ್ ಝೆಲೆನ್ಸ್ಕಿ ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ಅವರನ್ನು ಭೇಟಿ ಮಾಡಿ ನೆರವು ಕೋರಲಿದ್ದಾರೆ. ನಂತರ ಫ್ರೆಂಚ್ ಪ್ರಧಾನಿ ಇಮ್ಯಾನುವೆಲ್ ಮಾಕ್ರೋನ್, ಐರೋಪ್ಯ ಒಕ್ಕೂಟದ ನಾಯಕರು, ಜರ್ಮನಿ, ಡೆನ್ಮಾರ್ಕ್, ಹಾಲೆಂಡ್, ನಾರ್ವೆ, ಸ್ಪೇನ್, ಕೆನಡಾ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಶ್ವೇತಭವನದಲ್ಲಿ ನಡೆದ ಮಾತುಕತೆಯ ವೇಳೆ ಉಕ್ರೇನ್‌ನ ಯುದ್ಧತಂತ್ರ, ಅಮೆರಿಕದ ಮಿಲಿಟರಿ ನೆರವು ಮತ್ತು ಸಂಘರ್ಷ ಕೊನೆಗೊಳಿಸುವ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಉಭಯ ಗಣ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಚಕಮಕಿಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಕಟು ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್‌ಗೆ ಭವಿಷ್ಯದಲ್ಲಿ ಬೆಂಬಲ ಮುಂದುವರಿಸುವ ಸಂಬಂಧ ಉಭಯ ದೇಶಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ ಎಂದಿದ್ದರು.
