ಪ್ರಧಾನಿ ಮೋದಿ ಅವರ ಕಟ್ಟಾ ಅನುಯಾಯಿ, ವಿದೇಶದಲ್ಲಿ ಬಿಜೆಪಿ ಬೆಂಬಲಿಗರನ್ನೊಳಗೊಂಡ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆಯ ಸಂಸ್ಥಾಪಕ ಬಾಲೇಶ್ ಧನಖರ್ ಎಂಬಾತನಿಗೆ ಅತ್ಯಾಚಾರ ಮತ್ತು ಇತರ ಪ್ರಕರಣಗಳಲ್ಲಿ 40 ವರ್ಷ ಜೈಲು ಶಿಕ್ಷೆ ವಿಧಿಸಿ ಆಸ್ಟ್ರೇಲಿಯಾ ನ್ಯಾಯಾಲಯ ಆದೇಶಿಸಿದೆ.
ಆಸ್ಟ್ರೇಲಿಯಾದಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆ ಸ್ಥಾಪಕರಲ್ಲಿ ಒಬ್ಬನಾದ ಧನಖರ್ ಐವರು ಐದು ಕೊರಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ 13 ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅಲ್ಲದೆ, ಅತ್ಯಾಚಾರದ ಉದ್ದೇಶದಿಂದ ಮಾದಕ ವಸ್ತು ಸೇವಿಸುವಂತೆ ಬಲವಂತದ 6 ಪ್ರಕರಣಗಳು, ಸಮ್ಮತಿಯಿಲ್ಲದೆ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದ 17 ಪ್ರಕರಣಗಳು, ಅಸಭ್ಯ ವರ್ತನೆ ಮತ್ತು ಹಲ್ಲೆ ಸಂಬಂಧಿತ 3 ಪ್ರಕರಣಗಳು ಸೇರಿದಂತೆ ಒಟ್ಟು ಬರೋಬ್ಬರಿ 39 ಪ್ರಕರಣಗಳಲ್ಲಿ ಧನಖರ್ ಆರೋಪಿಯಾಗಿದ್ದಾರೆ.
39 ಪ್ರಕರಣಗಳಲ್ಲಿಯೂ ಆತ ಅಪರಾಧಿ ಎಂದು ಘೋಷಿಸಿರುವ ಸಿಡ್ನಿ ನ್ಯಾಯಾಲಯ, ಅಪರಾಧಿ ಧನಕರ್‌ಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣಗಳ ವಿಚಾರಣೆ ನಡೆಸಿದ್ದ ಸಿಡ್ನಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಕಿಂಗ್, “ಅಪರಾಧಿಯ ನಡವಳಿಕೆಯು ‘ಪೂರ್ವಯೋಜಿತ’ ಕೃತ್ಯವಾಗಿದೆ. ಆತ ತನ್ನ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳಲು ಮಹಿಳೆಯರೊಂದಿಗೆ ನಿರ್ದಯತೆಯಿಂದ ವರ್ತಿಸಿದ್ದಾನೆ. ದುರ್ಬಲ ಮಹಿಳೆಯರ ಮೇಲೆ ಎಸಗಿರುವ ಪರಭಕ್ಷಕ ಭೀಕರ ಕ್ರಮವಾಗಿದೆ” ಎಂದು ಹೇಳಿದ್ದಾರೆ.
ಸಿಡ್ನಿಯಲ್ಲಿ ವಾಸವಾಗಿದ್ದ ಧನಖರ್ ಕೊರಿಯನ್‌ನಿಂದ ಇಂಗ್ಲಿಷ್ ಭಾಷೆ ಅನುವಾದಕರ ಕೆಲಸಕ್ಕೆ ಉದ್ಯೋಗ ಜಾಹೀರಾತು ನೀಡಿದ್ದರು. ಜಾಹೀರಾತಿಗೆ ಪ್ರತಿಕ್ರಿಯಿಸಿದ್ದ ಕೊರಿಯನ್ ಮಹಿಳೆಯರನ್ನು ತಾನು ವಾಸವಾಗಿದ್ದ ಅಪಾರ್ಟ್‌ಮೆಂಟ್ ಬಳಿಯ ಹಿಲ್ಟನ್ ಹೋಟೆಲ್ ಬಾರ್‌ನಲ್ಲಿ ಭೇಟಿಯಾಗಿದ್ದರು. ಈ ವೇಳೆ, ಮಹಿಳೆಯರಿಗೆ ಮಾದಕ ದ್ರವ್ಯ ಕೊಟ್ಟು, ಅವರ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆ ವೇಳೆ ಆತನ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ವಿಡಿಯೋ ಪುರಾವೆಗಳು ದೊರೆತಿದ್ದವು ಎಂದು ವರದಿಯಾಗಿದೆ.
ಅಪರಾಧಿ ಧನಖರ್ ಬಿಜೆಪಿಯ ಕಟ್ಟಾ ಬೆಂಬಲಿಗನಾಗಿದ್ದಾನೆ. ಆತ ಭಾರತದ ಪ್ರಧಾನಿ ಮೋದಿ ಅವರಿಗೆ ನಿಕಟವರ್ತಿಯಾಗಿದ್ದಾನೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಗಮನಿಸಿವೆ. 2018ರಲ್ಲಿ ಆತ ಬಂಧನದವರೆಗೂ ಆಸ್ಟ್ರೇಲಿಯಾದಲ್ಲಿ ಬಿಜೆಪಿಯ ಪ್ರಚಾರಕನಾಗಿದ್ದ. ಬಿಜೆಪಿ ಪರವಾಗಿ ಆಸ್ಟ್ರೇಲಿಯಾದಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆಯನ್ನು ಸ್ಥಾಪಿಸಿದ್ದ. 2014ರಲ್ಲಿ ಸಿಡ್ನಿಗೆ ಮೋದಿ ಭೇಟಿ ನೀಡಿದ್ದಾಗ, ಅವರ ಸ್ವಾಗತ ಸಮಾರಂಭವನ್ನು ಆಯೋಜಿಸುವಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಪ್ರಮುಖ ಪಾತ್ರ ವಹಿಸಿತ್ತು. ಅದರಲ್ಲಿ, ಧನಖರ್ ಮೊದಲಿಗನಾಗಿದ್ದ. ಅಲ್ಲದೆ, ಆಸ್ಟ್ರೇಲಿಯಾದ ಹಿಂದು ಮಂಡಳಿಯ ವಕ್ತಾರನಾಗಿಯೂ ಕಾರ್ಯನಿರ್ವಹಿಸಿದ್ದ ಎಂದು 9ನ್ಯೂಸ್ ವರದಿ ಮಾಡಿದೆ.