ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಂಜಾಬ್‌ನ ಅಮೃತಸರ, ಪಠಾಣ್‌ಕೋಟ್ ಮತ್ತು ಫಿರೋಜ್‌ಪುರ ಸೇರಿದಂತೆ ಗಡಿ ಜಿಲ್ಲೆಗಳಾದ್ಯಂತ ಸಂಪೂರ್ಣ ಬ್ಲ್ಯಾಕೌಟ್ ಘೋಷಿಸಲಾಗಿದೆ. ಪರಿಣಾಮವಾಗಿ, ಅಲ್ಲಿನ ನಿವಾಸಿಗಳು ಆತಂಕ, ಭಯದ ನಡುವೆಯೇ ರಾತ್ರಿ ಕಳೆದಿದ್ದಾರೆ. ಗುರುವಾರದ ರಾತ್ರಿ ಉದ್ವಿಗ್ನ, ಕರಾಳ ರಾತ್ರಿಯಾಗಿ ಪರಿಣಮಿಸಿದೆ.
ಪಂಜಾಬ್ ಮತ್ತು ಹರಿಯಾಣದ ರಾಜಧಾನಿಯಾಗಿರುವ ಚಂಡೀಗಢದಲ್ಲಿ ಮಧ್ಯರಾತ್ರಿಯವರೆಗೆ ಸುಮಾರು ಎರಡು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿತ್ತು.
ರಕ್ಷಣಾ ಸಚಿವಾಲಯದ ಪ್ರಕಾರ, ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರ ಸೇರಿದಂತೆ ಅನೇಕ ಭಾರತೀಯ ನಗರಗಳಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ಪ್ರಾರಂಭಿಸಿತ್ತು. ಪಾಕ್ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ತ್ವರಿತವಾಗಿ ತಡೆದಿದ್ದು, ದಾಳಿಯನ್ನು ವಿಫಲಗೊಳಿಸಿವೆ.
ಶ್ರೀನಗರ, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಹಾಗೂ ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 15 ನಗರಗಳನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪಠಾಣ್‌ಕೋಟ್‌ನಲ್ಲಿ, ಗುರುವಾರ ರಾತ್ರಿ ಸ್ಫೋಟದಂತಹ ಶಬ್ದಗಳನ್ನು ಕೇಳಿದ್ದಾಗಿ ಕೆಲವು ನಿವಾಸಿಗಳು ಹೇಳಿಕೊಂಡಿದ್ದಾರೆ. ಆದರೆ, ಸೇನೆ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಪಠಾಣ್‌ಕೋಟ್‌ನಲ್ಲಿ ಗುರುವಾರ ರಾತ್ರಿ 8:30ರ ಸುಮಾರಿಗೆ ವಾಯುದಾಳಿ ಸೈರನ್‌ಗಳನ್ನು ಹೊರಡಿಸುವ ಮೂಲಕ, ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆಯ ಹೊತ್ತಿಗೆ ಪರಿಸ್ಥಿತಿ ಶಾಂತವಾಗಿದೆ ಎಂದು ವರದಿಯಾಗಿದೆ.
ಅಮೃತಸರ ಮತ್ತು ಫಿರೋಜ್‌ಪುರದಂತಹ ಇತರ ಗಡಿ ಜಿಲ್ಲೆಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಸಶಸ್ತ್ರ ಪಡೆಗಳ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನಡೆಸಿದ್ದರಿಂದ, ಆತಂಕವು ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಚಂಡೀಗಢದಲ್ಲಿ, ವಿದ್ಯುತ್ ಕಡಿತ ಮತ್ತು ಉದ್ವಿಗ್ನ ವಾತಾವರಣದ ಹೊರತಾಗಿಯೂ, ಶುಕ್ರವಾರ ದೈನಂದಿನ ಜೀವನವು ಸಾಮಾನ್ಯ ಸ್ಥಿತಿಗೆ ಮರಳಿದೆ. ಸ್ಥಳೀಯ ನಿವಾಸಿ ಬಲದೇವ್ ಚಂದ್, “ನಿನ್ನೆ ರಾತ್ರಿ ಕೆಲವು ಆತಂಕಕಾರಿ ಕ್ಷಣಗಳನ್ನು ಅನುಭವಿಸಿದೆವು. ಆದರೆ ನಮ್ಮ ಸೇನಾ ಪಡೆಗಳು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನಮಗೆ ಸುರಕ್ಷತೆಯ ಭರವಸೆಯನ್ನು ಮೂಡಿಸಿದೆ” ಎಂದು ಹೇಳಿದ್ದಾರೆ.
ಪ್ರಮುಖ ನಗರಗಳಲ್ಲಿ ವಿದ್ಯುತ್ ಕಡಿತದ ಜೊತೆಗೆ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಹರಿಯಾಣದ ರೂಪನಗರ, ಫಜಿಲ್ಕಾ, ಕಪುರ್ತಲಾ, ಲುಧಿಯಾನ, ಸಂಗ್ರೂರ್, ಬಟಿಂಡಾ, ಪಟಿಯಾಲ ಹಾಗೂ ಪಂಚಕುಲಗಳಲ್ಲಿಯೂ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಉದ್ವಿಗ್ನ ಪರಿಸ್ಥಿತಿಯ ಹಿನ್ನಲೆ, ಪಂಜಾಬ್‌ನಲ್ಲಿ ಮುಂದಿನ ಮೂರು ದಿನಗಳವರೆಗೆ ಎಲ್ಲ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಪಂಜಾಬ್ ಸರ್ಕಾರ ಆದೇಶಿಸಿದೆ. ಚಂಡೀಗಢದಲ್ಲಿಯೂ ಶನಿವಾರದವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.