ಪಾಕಿಸ್ತಾನದ ಲಾಹೋರ್ ನಗರದಲ್ಲಿ ಗುರುವಾರ ಬೆಳಿಗ್ಗೆ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ವಾಲ್ಟನ್ ರಸ್ತೆಯಲ್ಲಿರುವ ಮಿಲಿಟರಿ ವಿಮಾನ ನಿಲ್ದಾಣದ ಹೊರಗೆ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ನಂತರ ಸೈರನ್‌ಗಳು ಮೊಳಗಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಸ್ಥಳೀಯ ಭದ್ರತಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಪ್ರದೇಶವನ್ನು ಮುಚ್ಚಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ತರಬೇತಿ ಸಮಯದಲ್ಲಿ ಸ್ಫೋಟ ಸಂಭವಿಸಿದೆ.
ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಆವರಣದಲ್ಲಿ ನೆಲೆಗೊಂಡಿರುವ ಕಟ್ಟಡದಿಂದ ಕಪ್ಪು ಹೊಗೆ ಬರುತ್ತಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
ಮುನ್ನೆಚ್ಚರಿಕೆ ಕ್ರಮವಾಗಿ, ವಾಲ್ಟನ್ ರಸ್ತೆಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಈ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಗಡಿಯುದ್ದಕ್ಕೂ ನಿರಂತರ ಗುಂಡಿನ ಚಕಮಕಿ ನಡೆಯುತ್ತಿರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಕಥುವಾ ಹಾಗೂ ಜಮ್ಮುವಿನ ಆರ್‌ಎಸ್ ಪುರ ಪ್ರದೇಶದಲ್ಲಿ ಮುಂದಿನ 72 ಗಂಟೆಗಳ ಕಾಲ ಎಚ್ಚರಿಕೆ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಕರ್ನಾ ಪ್ರದೇಶದಲ್ಲಿ ಪಾಕಿಸ್ತಾನ ಗಡಿಯುದ್ದಕ್ಕೂ ಗುಂಡು ಹಾರಿಸಿದೆ. ‘ಆಪರೇಷನ್ ಸಿಂಧೂರ್’ ನಂತರ, ಪಾಕಿಸ್ತಾನವು ಎಲ್‌ಒಸಿ ಮೇಲೆ ಸತತ ಎರಡನೇ ದಿನ ಗುಂಡಿನ ದಾಳಿ ನಡೆಸಿದೆ.