ಚೀನಾದ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಜಪಾನ್‌ನ ಟೋಕಿಯೊ ನರಿಟಾ ವಿಮಾನ ನಿಲ್ದಾಣದತ್ತ ಹೊರಟಿದ್ದ ಜಪಾನ್ ಏರ್‌ಲೈನ್ಸ್ ಬೋಯಿಂಗ್ 737 (ಫ್ಲೈಟ್ JL8696) ವಿಮಾನವು ತೀವ್ರ ತಾಂತ್ರಿಕ ದೋಷವನ್ನು ಎದುರಿಸಿ, 26,000 ಅಡಿ ಎತ್ತರದಿಂದ 10,500 ಅಡಿಗೆ ಒಮ್ಮೆಲೇ ಇಳಿದಿರುವ ಭಯಾನಕ ಘಟನೆ ಜೂನ್ 30ರಂದು ನಡೆದಿದೆ.
ವಿಮಾನವು ಜಪಾನ್ ಏರ್‌ಲೈನ್ಸ್ ಹಾಗೂ ಅದರ ಕಡಿಮೆ ವೆಚ್ಚದ ಅಂಗಸಂಸ್ಥೆ ‘ಸ್ಪ್ರಿಂಗ್ ಜಪಾನ್’ ನಡುವಿನ ಕೋಡ್‌ಶೇರ್ ಒಪ್ಪಂದದಡಿ ಕಾರ್ಯನಿರ್ವಹಿಸುತ್ತಿತ್ತು. ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಸ್ಥಳೀಯ ಸಮಯ ಸಂಜೆ 6:53ರ ಸುಮಾರಿಗೆ, ವಿಮಾನವು ಯಾನದ ಮಧ್ಯದಲ್ಲಿ ಹಠಾತ್ ತಾಂತ್ರಿಕ ದೋಷವನ್ನು ಎದುರಿಸಿತು. ಪರಿಣಾಮವಾಗಿ ಆಮ್ಲಜನಕ ಮಾಸ್ಕ್‌ಗಳನ್ನು ಬಿಡುಗಡೆ ಮಾಡಬೇಕಾಯಿತು.
ಒಮ್ಮಲೇ ನಡೆದ ಈ ಘಟನೆಯಿಂದ ಪ್ರಯಾಣಿಕರು ಭಯಬೀತರಾದರು. ಕೆಲವರು ನಿದ್ರೆಯಿಂದ ಎಚ್ಚರಗೊಂಡು ನಡುಗಿದರೆ, ಇತರರು ತಮ್ಮ ಪ್ರೀತಿಪಾತ್ರರಿಗೆ ವಿದಾಯ ಸಂದೇಶಗಳನ್ನು, ಬ್ಯಾಂಕ್ ಪಿನ್‌ಗಳು ಮತ್ತು ವಿಮಾ ಮಾಹಿತಿಯಂತಹ ವೈಯಕ್ತಿಕ ವಿವರಗಳನ್ನು ಕಳುಹಿಸಲು ಪ್ರಾರಂಭಿಸಿದರು. ಈ ಕುರಿತಂತೆ, ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದ, ಆಮ್ಲಜನಕ ಮಾಸ್ಕ್ ಧರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!
ಪೈಲಟ್ ತಕ್ಷಣ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ವಿಮಾನವನ್ನು ಒಸಾಕಾದ ಕನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸ್ಥಳೀಯ ಸಮಯ ರಾತ್ರಿ 8:50 ಕ್ಕೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಘಟನೆಯು ಇತ್ತೀಚೆಗೆ ಬೋಯಿಂಗ್ ವಿಮಾನಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಗೆ ಮತ್ತಷ್ಟು ತೀವ್ರತೆಯನ್ನು ನೀಡಿದೆ. ಕಳೆದ ತಿಂಗಳು ಅಹಮದಾಬಾದ್-ಲಂಡನ್ ಮಾರ್ಗದ ಬೋಯಿಂಗ್ ವಿಮಾನ ಅಪಘಾತದಲ್ಲಿ 270 ಮಂದಿ ಮೃತಪಟ್ಟಿದ್ದರು.
A #JapanAirlines #flight from #Shanghai to #Tokyo made an emergency landing at Kansai Airport last night after a cabin depressurization alert. The #Boeing 737-800, carrying 191 people, landed safely. No injuries reported. #China #Japan pic.twitter.com/wCneZ3nkk0
— Shanghai Daily (@shanghaidaily) July 1, 2025